ನಾನೇ “ರಾಜ್ಯ’ ಕುಮಾರ
Team Udayavani, May 24, 2018, 6:15 AM IST
ಬೆಂಗಳೂರು: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿ ಜನತಾ ದರ್ಶನ,ಗ್ರಾಮ ವಾಸ್ತವ್ಯದ ಮೂಲಕ ಜನಪ್ರಿಯತೆ ಪಡೆದಿದ್ದ ಎಚ್.ಡಿ.ಕುಮಾರಸ್ವಾಮಿ, ಎರಡನೇ ಬಾರಿಗೆ ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
2006ರ ಫೆ.6ರಂದು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ 2007 ಅ.9ರವರೆಗೆ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಸಾರಾಯಿ ಹಾಗೂ ಲಾಟರಿ ನಿಷೇಧದಂತಹ ಮಹತ್ವದ ತೀರ್ಮಾನ ಕೈಗೊಂಡಿದ್ದ ಕುಮಾರಸ್ವಾಮಿ, ಒಂದು ರೀತಿಯಲ್ಲಿ “ಅದೃಷ್ಟವಂತ’.
ರಾಜಕೀಯವಾಗಿ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗದಿದ್ದರೂ ಸೀಮಿತ ಶಕ್ತಿಯಲ್ಲೇ ಕೆಲವು ಸಂದರ್ಭಗಳಲ್ಲಿ “ಕಿಂಗ್ ಮೇಕರ್’ ಆಗಿ ಶಕ್ತಿ ಪ್ರದರ್ಶಿಸಿದ್ದ ಜೆಡಿಎಸ್, ಇದೀಗ ತಾನೇ ಕಿಂಗ್ ಆಗಿರುವುದು.
ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಗಾದಿವರೆಗೂ ಕರೆ ತಂದಿರುವುದು ರಾಜ್ಯ ರಾಜಕೀಯದ ಇತಿಹಾಸದಲ್ಲೂ ಅಚ್ಚರಿಯೇ ಸರಿ.
ತಂದೆ ಎಚ್.ಡಿ.ದೇವೇಗೌಡರಿಗೂ ಅದೃಷ್ಟ ಕೈ ಹಿಡಿದು ಪ್ರಧಾನಿ ಪಟ್ಟ ದೊರೆತಂತೆಯೇ ಪುತ್ರ ಕುಮಾರ ಸ್ವಾಮಿಗೂ 2 ಬಾರಿ ಅದೃಷ್ಟ ಮನೆ ಬಾಗಿಲಿಗೆ ಬಂದು ಸಿಎಂ ಪದವಿ ಒಲಿದಿದೆ. ಮೊದಲ ಬಾರಿಯೂ ಸಿಎಂ ಪದವಿ ಅವರನ್ನು ಹುಡುಕಿಕೊಂಡು ಬಂದಿತ್ತು. 2ನೇ ಬಾರಿಯೂ ಅದೃಷ್ಟವೇ ಅವರ ಕೈ ಹಿಡಿದಿದೆ. ಬಿಜೆಪಿ ನೆರವಿನಿಂದ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು, ಇದೀಗ 2ನೇ ಬಾರಿ ಕಾಂಗ್ರೆಸ್ ನೆರವಿನಿಂದ ರಾಜ್ಯದ 25ನೇ ಮುಖ್ಯಮಂತ್ರಿಯಾಗಿದ್ದಾರೆ.
13 ವರ್ಷದ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಅವರು, 2008, 2013 ಹಾಗೂ 2018ರಲ್ಲಿ ಮೂರು ಚುನಾವಣೆಗಳನ್ನು ಹಾಗೂ ಎರಡು ಲೋಕಸಭೆ ಚುನಾವಣೆಗಳನ್ನು ತಮ್ಮ ನಾಯಕತ್ವದಲ್ಲಿ ಎದುರಿಸಿದರು. ಸ್ವಂತ ಶಕ್ತಿಯ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವ ಅವರ ಕನಸು ನನಸಾಗಲಿಲ್ಲ. ಪಕ್ಷ ಸಂಘಟನೆ ಮುಂದುವರಿಸಿದ್ದರ ಫಲವಾಗಿ ಹತ್ತು ಮಂದಿ ಶಾಸಕರು ಬಿಟ್ಟು ಹೋದರೂ ಧೃತಿಗೆಡದೆ ಮತ್ತೆ 38 ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
78 ಸ್ಥಾನ ಗಳಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾದರೂ ಅತಂತ್ರ ಪರಿಸ್ಥಿತಿ ಹಿನ್ನೆಲೆಯಲ್ಲಿ
ಜೆಡಿಎಸ್‌ಗೆ ಸರ್ಕಾರ ರಚನೆಗೆ ಬೇಷರತ್ ಬೆಂಬಲ ನೀಡಿದೆ. ಇದು ರಾಷ್ಟ್ರ ರಾಜಕಾರಣದಲ್ಲೂ ಒಂದು ಹೊಸ ಬೆಳವಣಿಗೆ ಎಂದು ಹೇಳಬಹುದು.
ಪಾಲಿಕೆಯಲ್ಲಿ ಗುತ್ತಿಗೆದಾರರಾಗಿದ್ದರು: ತಂದೆ ರಾಜಕೀಯದಲ್ಲಿದ್ದರೂ ಪಾಲಿಕೆಯಲ್ಲಿ ಗುತ್ತಿಗೆದಾರರಾಗಿದ್ದ ಕುಮಾರಸ್ವಾಮಿ, ನಂತರ ಸಿನಿಮಾ ವಿತರಕರು, ನಿರ್ಮಾಪಕರು ಆಗಿದ್ದರು. 1996ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಎದುರಾಗಿದ್ದ ಕನಕಪುರ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ, 1998ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2004ರಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, 2005ರಲ್ಲಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಅದೇ ವರ್ಷ ಪಕ್ಷದ ಅಧ್ಯಕ್ಷರೂ ಆದರು. 2006ರಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದಾಗ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
2008ರಲ್ಲಿ ಮತ್ತೆ ರಾಮನಗರ ವಿಧಾನಸಭೆ ಕ್ಷೇತ್ರದಿಂದ, 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.ನಂತರ, ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ 2013ರಲ್ಲಿ ರಾಮನಗರದಿಂದ ಪುನರಾಯ್ಕೆಯಾದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕೆಲ ಸಮಯ ಪ್ರತಿಪಕ್ಷದ ನಾಯಕರಾಗಿದ್ದರು. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ರಾಜ್ಯ ವಿಧಾನಸಭೆ ಚುನಾವಣೆಗೆ 2 ವರ್ಷಗಳ ಹಿಂದೆಯೇ ತಯಾರಿ ಆರಂಭಿಸಿ ಬೇರೆ ಪಕ್ಷಗಳಿಗಿಂತ ಮುಂಚೆಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ನಿರಂತರ ಪ್ರವಾಸ ನಡೆಸಿದರು.
ಸಿಎಂ ಮುಂದಿವೆ ಹಲವು ಸವಾಲುಗಳು
ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ಮುಖ್ಯ ಮಂತ್ರಿಯಾಗಿರುವ ಕುಮಾರಸ್ವಾಮಿಯವರ ಮುಂದೆ ಸಾಕಷ್ಟು ಸವಾಲುಗಳು ಇವೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆಶಾದಾಯಕವಲ್ಲದ ಸ್ಥಿತಿಯಲ್ಲಿ, ರಾಜ್ಯದ ಸಾಲ 2 ಲಕ್ಷ ಕೋಟಿ ರೂ. ದಾಟಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.
ಜೆಡಿಎಸ್ ಪ್ರಣಾಳಿಕೆಯಲ್ಲಿ ಸುಮಾರು 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ 6 ಸಾವಿರ ರೂ.ಮಾಸಾಶನ,ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆ ವೆಚ್ಚ ಮಾಸಿಕ 2 ಸಾವಿರ ರೂ.ನೀಡುವುದಾಗಿ ಪ್ರಕಟಿಸಿದ್ದರು. ಇದರ ಜತೆಗೆ, ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಕಾರ್ಯಕ್ರಮಗಳನ್ನೂ ನಿಲ್ಲಿಸುವುದು ಕಷ್ಟ. ಕಾಂಗ್ರೆಸ್ ಕಾರ್ಯಕ್ರಮಗಳನ್ನೂ ಮೊಟಕುಗೊಳಿಸದೆ ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸುವ ಯೋಜನೆಗಳಿಗೂ ಆದ್ಯತೆ ನೀಡುವುದು ಹರಸಾಹಸವೇ ಸರಿ. ಇವೆಲ್ಲದರ ನಡುವೆ ಸಮನ್ವಯ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೇಗೆ ಮುನ್ನಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಜನತಾದರ್ಶನ, ಗ್ರಾಮವಾಸ್ತವ್ಯ ತಂದುಕೊಟ್ಟಿತ್ತು ಜನಪ್ರಿಯತೆ
20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಅವರಿಗೆ ಅತ್ಯಂತ ಜನಪ್ರಿಯತೆ ತಂದು ಕೊಟ್ಟಿದ್ದು
ಈ ಎರಡೂ ಕಾರ್ಯಕ್ರಮಗಳು. ಒಮ್ಮೊಮ್ಮೆ ರಾತ್ರಿ 12 ಗಂಟೆವರೆಗೂ ಜನತಾದರ್ಶನ ನಡೆದದ್ದೂ ಉಂಟು. ಜನತಾದರ್ಶನ ನಡೆಯುತ್ತಿದೆ ಎಂದರೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ತುಂಬಿ ತುಳುಕಿರುತ್ತಿತ್ತು. ಗ್ರಾಮ ವಾಸ್ತವ್ಯಕ್ಕಾಗಿ ಹೋಗುವ ಗ್ರಾಮಗಳಲ್ಲಿ ನಸುಕಿನವರೆಗೂ ಕುಂದುಕೊರತೆ ಆಲಿಸಿದ್ದೂ ಇದೆ. ಬಡವರ ಪಾಲಿಗೆ ಕಂಟಕವಾಗಿದ್ದ ಲಾಟರಿ ಹಾಗೂ ಸಾರಾಯಿ ನಿಷೇಧ ಮಾಡುವ ಮೂಲಕ ಅತಿ ದೊಡ್ಡ ತೀರ್ಮಾನ ಕೈಗೊಂಡಿದ್ದರು.
ಎಚ್.ಡಿ.ಕುಮಾರಸ್ವಾಮಿ
– ಹುಟ್ಟಿದ್ದು: 1959 (ವಯಸ್ಸು 59)
– ಸ್ಥಳ: ಹರದನಹಳ್ಳಿ, ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕು
– ತಂದೆ-ತಾಯಿ: ಎಚ್.ಡಿ.ದೇವೇಗೌಡ, ಚೆನ್ನಮ್ಮ
– ಪತ್ನಿ: ಅನಿತಾ ಕುಮಾರಸ್ವಾಮಿ
– ಪುತ್ರ: ನಿಖೀಲ್ ಕುಮಾರಸ್ವಾಮಿ
– ಸಹೋದರರು: ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರೇವಣ್ಣ, ಎಚ್.ಡಿ.ರಮೇಶ್
– ಸಹೋದರಿಯರು: ಎಚ್.ಡಿ. ಅನುಸೂಯ, ಎಚ್.ಡಿ.ಶೈಲಜ.
– ಪಕ್ಷ: ಜಾತ್ಯತೀತ ಜನತಾದಳ
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Chikkamagaluru: ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ…
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.