ಪಕ್ಷೇತರರ ಉಳಿಸಿಕೊಂಡ ಕಾಂಗ್ರೆಸ್
Team Udayavani, Sep 16, 2018, 12:03 PM IST
ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ನಿರ್ಣಾಯಕವಾಗಿರುವ ಪಕ್ಷೇತರ ಸದಸ್ಯರನ್ನು ಸೆಳೆಯಲು ಬಿಜೆಪಿ ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಪಕ್ಷೇತರರನ್ನು ಮತ್ತೂಮ್ಮೆ ತನ್ನತ್ತ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದ್ದು, ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್-ಬಿಜೆಪಿ ಜಿದ್ದಿಗೆ ಬಿದ್ದಿವೆ.
ಅದಕ್ಕೆ ಪೂರವಾಗಿ ಶುಕ್ರವಾರ ಸಂಜೆ ಬಿಜೆಪಿಯ ಪ್ರಭಾವಿ ನಾಯಕರೊಬ್ಬರ ನಿವಾಸದಲ್ಲಿ ಪಕ್ಷೇತರರೊಂದಿಗೆ ಸಭೆ ನಡೆದಿದೆ. ಪಕ್ಷೇತರರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿ ಚುನಾವಣೆಗೆ ಗೈರಾಗಿಸುವ ಮೂಲಕ ಬಹುಮತ ಪಡೆಯುವುದು ಬಿಜೆಪಿ ಯೋಜನೆಯಾಗಿತ್ತು.
ಆದರೆ, ಏಳು ಪಕ್ಷೇತರ ಕಾರ್ಪೊರೇಟರ್‌ಗಳು ತಮ್ಮಲ್ಲಿ ಒಬ್ಬರಿಗೆ ಉಪ ಮೇಯರ್, ಉಳಿದವರಿಗೆ ನಗರ ಯೋಜನಾ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿ ಪ್ರಮುಖ ಸ್ಥಾಯಿ ಸಮಿತಿ ನೀಡಬೇಕೆಂಬ ಬೇಡಿಕೆಯನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದು, ಬಿಜೆಪಿ ನಾಯಕರಿಂದ ಅದಕ್ಕೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಎಚ್ಚೆತ್ತ ಮಾಜಿ ಸಚಿವ: ಪಕ್ಷೇತರರೊಂದಿಗೆ ಬಿಜೆಪಿ ನಾಯಕರು ಸಭೆ ನಡೆಸಿರುವ ವಿಷಯ ತಿಳಿದ ಕೂಡಲೇ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಶನಿವಾರ ಬೆಳಗ್ಗೆಯೇ ಪಕ್ಷೇತರರನ್ನು ತಮ್ಮ ಮನೆಗೆ ಕರೆಸಿಕೊಂಡು ಸಭೆ ನಡೆಸಿದ್ದಾರೆ. ರಾಮಲಿಂಗಾ ರೆಡ್ಡಿಯವರ ಮುಂದೆ ಪಕ್ಷೇತರ ಸದಸ್ಯರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಆ ಪೈಕಿ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ. ಇದರಿಂದ ಬಿಜೆಪಿ ತೀವ್ರ ಮುಖಭಂಗವಾದಂತಾಗಿದೆ.
ಬಿಜೆಪಿಗೆ ಮ್ಯಾಜಿಕ್ ನಂಬರ್ ಕಷ್ಟ!: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಒಟ್ಟು 259 ಮಂದಿ ಮತದಾರರಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು 130 ಸರಳ ಬಹುಮತವಾಗಿದೆ. ಪಾಲಿಕೆ ಸದಸ್ಯರು, ಶಾಸಕರು, ಸಂದರು ಸೇರಿ ಒಟ್ಟು 123 ಸದಸ್ಯ ಬಲವನ್ನು ಬಿಜೆಪಿ ಹೊಂದಿದ್ದು, 7 ಸದಸ್ಯರ ಕೊರತೆಯಿದೆ.
ಪಕ್ಷೇತರ ಪೈಕಿ ಒಬ್ಬರು ಈಗಾಗಲೇ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಕಾಂಗ್ರೆಸ್ ಕಡೆಗೆ ಬಂದಿದ್ದು, ಏಳುಮಲೈ ಹಾಗೂ ಮುಜಾಹಿದ್ ಬಿಜೆಪಿ ಬೆಂಬಲ ನೀಡುವುದಿಲ್ಲ ಎನ್ನಲಾಗಿದೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೇವಲ 2 ಮತಗಳ ಕೊರತೆಯಿದ್ದು, ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ ಸುಲಭವಾಗಿ ಅಧಿಕಾರ ಹಿಡಿಯಬಹುದಾಗಿದೆ. ಹೀಗಾಗಿ ಬಿಜೆಪಿಗೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದು ಸುಲಭವಾಗಿಲ್ಲ.
ಪಕ್ಷೇತರರ ಜತೆ ಕಾಂಗ್ರೆಸ್ ನಾಯಕರ ಸಭೆ: ಬಿಬಿಎಂಪಿಯಲ್ಲಿ ಅಧಿಕಾರ ಮುಂದುವರಿಸಲು ಪಕ್ಷೇತರ ಸದಸ್ಯರ ಬೆಂಬಲ ಅಗತ್ಯವಿರುವುದರಿಂದ ಬಿಜೆಪಿ ನಾಯಕರು ಪಕ್ಷೇತರ ಸದಸ್ಯರ ಜತೆ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರೂ ಶನಿವಾರ ಪಕ್ಷೇತರ ಕಾರ್ಪೊರೇಟರ್‌ಗಳೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ ಅವರು ಪಕ್ಷೇತರ ಸದಸ್ಯರ ಜತೆ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿ ಮನವೊಲಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದರ ಜತೆಗೆ ಬಿಬಿಎಂಪಿಯಲ್ಲೂ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತಿದ್ದು, ಆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಶುಕ್ರವಾರ ತಡ ರಾತ್ರಿ ಪಕ್ಷೇತರ ಸದಸ್ಯರೊಂದಿಗೆ ಸಭೆ ನಡೆಸಿ ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದರು.
ಈ ಬೆಳವಣಿಗೆಯಿಂದ ಎಚ್ಚೆತ್ತ ಕಾಂಗ್ರೆಸ್ ನಾಯಕರು ಶನಿವಾರ ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಎಂಟು ಜನರಲ್ಲಿ ಇಬ್ಬರು ಪಕ್ಷೇತರ ಸದಸ್ಯರು ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದೆ. ಏಳುಮಲೈ, ಆನಂದ, ಚಂದ್ರಪ್ಪ ರೆಡ್ಡಿ, ರಮೇಶ್, ಗಾಯತ್ರಿ ಹಾಗೂ ಲಕ್ಷ್ಮೀ ನಾರಾಯಣ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಮಮತಾ ಶರವಣ ಹಾಗೂ ಮುಜಾಯಿದ್ ಪಾಷಾ ಗೈರು ಹಾಜರಾಗಿದ್ದರು.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಅವರನ್ನು ಈ ಸಭೆಯಿಂದ ದೂರ ಇಡುವ ಮೂಲಕ ನಗರ ಶಾಸಕರು ತಾವು ಬಯಸಿದವರನ್ನು ಬಿಬಿಎಂಪಿ ಮೇಯರ್ ಮಾಡಲು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಪಕ್ಷೇತರ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಮೂರು ವರ್ಷ ಅವರು ನಮ್ಮೊಂದಿಗೆ ಇದ್ದಾರೆ. ಮುಂದೆಯೂ ನಮ್ಮ ಜೊತೆಯೇ ಇರುತ್ತಾರೆ ಎಂದು ಹೇಳಿದರು.
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.