ಕಾಂಗ್ರೆಸ್ ಹಗರಣ ದಿನಕ್ಕೊಂದರಂತೆ ಬಯಲು
Team Udayavani, Oct 23, 2017, 6:15 AM IST
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನ. 2ರಿಂದ ಬಿಜೆಪಿ ಹಮ್ಮಿಕೊಂಡಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ವೇಳೆ ದಿನಕ್ಕೊಂದರಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣಗಳನ್ನು ಬಯಲಿಗೆಳೆಯಲಾಗುವುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿದ್ದಾರೆ.
ಯಾತ್ರೆ ಆರಂಭವಾಗುವ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ ಭಾನುವಾರ ಸಿದ್ಧತೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 75 ದಿನ ನಡೆಯುವ ಯಾತ್ರೆಯಲ್ಲಿ ಪ್ರತಿನಿತ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಆ ಪಕ್ಷದ ವರಿಷ್ಠರಿಗೆ ಸವಾಲು ಹಾಕುವ ಕೆಲಸ ಮಾಡಲಾಗುತ್ತದೆ. ಆ ಮೂಲಕ ನವ ಕರ್ನಾಟಕ ನಿರ್ಮಾಣವಾಗಬೇಕಾದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಆಗಬೇಕು ಎಂಬ ಸಂದೇಶವನ್ನು ರಾಜ್ಯಾದ್ಯಂತ ಸಾರುತ್ತೇವೆ ಎಂದು ತಿಳಿಸಿದರು.
ಇಂದು ನಡೆದ ಭೂಮಿ ಪೂಜೆ ಸಾಮಾನ್ಯ ಭೂಮಿಪೂಜೆಯಲ್ಲ ಮತ್ತು ನ. 2ರಂದು ನಡೆಯುವ ಯಾತ್ರೆಯ ಉದ್ಘಾಟನಾ ಸಭೆ ಇತರೆ ಬಹಿರಂಗ ಸಭೆಗಳಂತೆ ಇರುವುದಿಲ್ಲ. ಇದು ನವ ಕರ್ನಾಟಕ ನಿರ್ಮಾಣದ ಭೂಮಿಪೂಜೆ ಮತ್ತು ಕರ್ನಾಟಕ ಮುಕ್ತ ಕಾಂಗ್ರೆಸ್ ನಿರ್ಮಾಣದ ಸಭೆಯಾಗುತ್ತದೆ. ದೇಶದ ಇತಿಹಾಸದಲ್ಲಿ ಇದುವರೆಗೆ ನಡೆಯದೇ ಇರುವ ಯಾತ್ರೆಯ ಮೂಲಕ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಮತ್ತು ರಾಜಕೀಯದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ವಾತಾವರಣವನ್ನು ಈಗಲೇ ಸೃಷ್ಟಿ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಪ್ರತಿನಿತ್ಯ ಒಬ್ಬ ರಾಷ್ಟ್ರೀಯ ನಾಯಕ
ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಯಾತ್ರೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಯಾತ್ರೆಯಲ್ಲಿ ಪ್ರತಿನಿತ್ಯ ಒಬ್ಬ ಪಕ್ಷದ ರಾಷ್ಟ್ರೀಯ ನಾಯಕ ಅಥವಾ ಕೇಂದ್ರ ಸಚಿವ ಇಲ್ಲವೇ ಇತರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿ ಅಥವಾ ಪ್ರತಿಪಕ್ಷ ನಾಯಕ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರೈತರ ಆತ್ಮಹತ್ಯೆ ತಡೆಗಟ್ಟುವುದು ಮಾತ್ರವಲ್ಲ, ಅವರಲ್ಲಿ ಸುರಕ್ಷಿತ ಭಾವನೆ ಮೂಡಿಸುವುದು, ಅವರನ್ನು ಸಶಕ್ತರನ್ನಾಗಿ ಮಾಡುವುದು, ಯುವ ಸಮುದಾಯಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ರಾಜಕಾರಣವನ್ನು ಒದಗಿಸಿ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ಜಾರಿಯಾಗಿ ಅದರ ಫಲ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂಬುದೇ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಉದ್ದೇಶ ಎಂದರು.
ಬಿಜೆಪಿಯು ಭವಿಷ್ಯ ಮತ್ತು ಯುವಕರನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಬೈಕ್ ರ್ಯಾಲಿ ಮೂಲಕ ಯಾತ್ರೆಗೆ ಬರುವವರೆಲ್ಲರೂ 35 ವರ್ಷದೊಳಗಿನವರೇ ಆಗಿರುತ್ತಾರೆ ಎಂದ ಮುರಳೀಧರರಾವ್, ಬೈಕ್ ರ್ಯಾಲಿಯಲ್ಲಿ ಬರುವವರು ವಾಪಸ್ ತೆರಳುವಾಗ ಬಿಜೆಪಿ ಅಧಿಕಾರಕ್ಕೆ ಬಂದರೆ ನವ ಕರ್ನಾಟಕ ನಿರ್ಮಾಣ ಹೇಗೆ ಆಗುತ್ತದೆ ಎಂಬ ಸಂದೇಶವನ್ನು ಕೊಂಡೊಯ್ದು ಅದನ್ನು ಜನರಿಗೆ ತಲುಪಿಸಲಿದ್ದಾರೆ ಎಂದರು.
ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್.ಅಶೋಕ್ ಮಾತನಾಡಿ, ಪರಿವರ್ತನಾ ಯಾತ್ರೆ 2018ರ ವಿಧಾನಸಭಾ ಚುನಾವಣೆಯ ಪೂರ್ವತಯಾರಿ ಆಗಿದ್ದು, ಈ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲಾಗುವುದು. ಜತೆಗೆ ಕಾಂಗ್ರೆಸ್ ಮುಕ್ತ ಕರ್ನಾಟಕದ ಸಂದೇಶ ರವಾನಿಸುವ ಮೂಲಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ವೇದಿಕೆ ಸೃಷ್ಟಿಸಲಾಗುವುದು ಎಂದರು.
ಯಾತ್ರೆ ಉದ್ಘಾಟನೆ ಸಿದ್ಧತೆಗೆ ಭೂಮಿಪೂಜೆ
ನವ ಕರ್ನಾಟಕ ನಿರ್ಮಾಣದ ಘೋಷಣೆಯೊಂದಿಗೆ ಅ. 2ರಿಂದ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರಥಯಾತ್ರೆಯ ಉದ್ಘಾಟನಾ ಸಮಾರಂಭಕ್ಕಾಗಿ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪರಿವರ್ತನಾ ಯಾತ್ರೆ ಬೆಂಗಳೂರು ಕಾರ್ಯಕ್ರಮದ ಉಸ್ತುವಾರಿಯೂ ಆಗಿರುವ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್.ಅಶೋಕ್, ಯಾತ್ರೆಯ ಸಂಚಾಲಕಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಶಾಸಕರಾದ ವೈ.ಎ.ನಾರಾ.ಣಸ್ವಾಮಿ, ಎಸ್.ಆರ್.ವಿಶ್ವನಾಥ್, ಮುನಿರಾಜು, ವಿ.ಸೋಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು. ಅದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತದೆ. ಅದೇ ರೀತಿ ರಾಜ್ಯದ ಅರ್ಧ ಭಾಗದ 27 ಸಾವಿರ ಬೂತ್‌ಗಳಿಂದ ಪ್ರತಿ ಬೂತ್‌ನಿಂದ ಮೂರು ಬೈಕ್‌ಗಳಲ್ಲಿ ತಲಾ ಆರು ಮಂದಿ ಆಗಮಿಸುವರು.
ಇದರೊಂದಿಗೆ ಇತರೆ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸುತ್ತಿದ್ದು, ಒಟ್ಟಾರೆ ಮೂರು ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯೊಂದಿಕೆ ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಭೂಮಿ ಪೂಜೆಯೊಂದಿಗೆ ಆರಂಭವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಮಹಿಳೆಯರಿಗೆ ಸುರಕ್ಷತೆ, ಎಲ್ಲರಿಗೂ ಸ್ವಾತಂತ್ರÂ ಕಲ್ಪಿಸುವ ಮತ್ತು ಮೂಲಭೂತವಾದಕ್ಕೆ ಅವಕಾಶ ಇಲ್ಲದ ನವ ಕರ್ನಾಟಕ ನಿರ್ಮಾಣ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಗುರಿ ಎಂದು ಹೇಳಿದರು.
ಲಾಂಛನ ಬಿಡುಗಡೆ ಇಂದು
ಬೆಂಗಳೂರು: ಬಿಜೆಪಿ ನ. 2ರಿಂದ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆಯ ಲಾಂಛನ ಮತ್ತು ಯಾತ್ರೆಯ ಮಾರ್ಗಸೂಚಿ ಸೋಮವಾರ ಬಿಡುಗಡೆಯಾಗಲಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಯಾತ್ರೆಯ ಲಾಂಛನವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅನಾವರಣಗೊಳಿಸುವರು. ಇದೇ ವೇಳೆ ಯಾತ್ರೆಯ ಮಾರ್ಗಸೂಚಿಯನ್ನು ಅದರ ಸಂಚಾಲಕರೂ ಆಗಿರುವ ಶೋಭಾ ಕರಂದ್ಲಾಜೆ ಬಿಡುಗಡೆ ಮಾಡುವರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.