ಕೊರೊನಾ ಆತಂಕ: ಸಭೆ, ಸಮಾರಂಭಗಳ ಮೇಲೂ ನಿಗಾ
Team Udayavani, Mar 5, 2020, 3:10 AM IST
ಬೆಂಗಳೂರು: ಕೊರೊನಾ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುವ ಸಭೆ ಸಮಾರಂಭಗಳನ್ನು ಪರಿಶೀಲಿಸಿ ಅನುಮತಿ ನೀಡುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಕುರಿತು ಬುಧವಾರ ಆರೋಗ್ಯಾಧಿ ಕಾರಿ ಗಳೊಂದಿಗೆ ಸಭೆ ನಡೆಸಿದರು. ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು ಇಲ್ಲಿಯವರೆಗೆ ನಗರದಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಸೋಂಕಿತರ ಪತ್ತೆ ಹಚ್ಚುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬಿಬಿಎಂಪಿಯ ವೈದ್ಯರಿಗೆ ತರಬೇತಿ ನೀಡಿದ್ದಾರೆ ಎಂದು ಆಯುಕ್ತರಿಗೆ ಮಾಹಿತಿ ನೀಡಿದರು.
ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಮಾತ ನಾಡಿ, ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ.ಹೀಗಾಗಿ, ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಭೆ ಸಮಾ ರಂಭಗಳಿಗೆ ಅನುಮತಿ ನೀಡುವ ಮುನ್ನ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುಖ್ಯಆರೋಗ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ತಂಡ ರಚಿಸಿ ಕೊರೊನಾ ವೈರಸ್ ಬಗ್ಗೆ ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಮುಂಜಾಗೃತಾ ಕಾರ್ಯ ಕ್ರಮ ಕೈಗೊಳ್ಳುವುದರ ಜತೆಗೆ ಪಾಲಿಕೆಯ ಎಲ್ಲ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಾಮಗ್ರಿ ಶೇಖರಿಸಿಕೊಳ್ಳು ವಂತೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಒಂದು ವೇಳೆ ಕೊರೊನಾ ವೈರಸ್ ಕಂಡು ಬಂದರೆ, ಆ ಪ್ರದೇಶದ ಸುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ವೈರಸ್ ಸೋಂಕು ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. 3 ಕಿ.ಮೀ ಜೊತೆಗೆ ಬಫರ್‌ಜೋನ್ ಬರುವ 5 ಕಿ.ಮೀ ಸೇರಿದಂತೆ ಒಟ್ಟು 8 ಕಿ.ಮೀ ಪ್ರದೇಶದ ಎಲ್ಲ ಕಡೆ ತಪಾಸಣೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ. ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತಿದಿನ ಮಾಹಿತಿ ಪಡೆದು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಆರೋಗ್ಯಾಧಿಕಾರಿ ಡಾ. ವಿಜಯೇಂದ್ರ, ಮುಖ್ಯಆರೋಗ್ಯಾಧಿ ಕಾರಿ (ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ನೋಡೆಲ್‌ಅಧಿಕಾರಿ ಡಾ.ಪ್ರಕಾಶ್ ಮತ್ತಿತರರು ಹಾಜರಿದ್ದರು.
ಆರೋಗ್ಯಾಧಿಕಾರಿಗಳಿಗೆ ರಜೆ ಇಲ್ಲ: ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ರವಿ ಕುಮಾರ್ ಸುರಪುರ ಮಾತನಾಡಿ, ಕೊರೊನಾ ವೈರಸ್ ಸಮಸ್ಯೆ ಪರಿಹಾರವಾಗುವವರೆಗೆ ಬಿಬಿಎಂಪಿಯ ಯಾವುದೇ ಆರೋಗ್ಯಾಧಿಕಾರಿ ರಜೆ ನೀಡಲು ಸಾಧ್ಯವಿಲ್ಲ.
ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲೂ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ಈಗಾಗಲೇ ಹೆಲ್ಪ್ ಡೆಸ್ಕ್ಗಳನ್ನು ಆರಂಭಿಸಲಾಗಿದ್ದು, ಪಾಲಿಕೆಯ ಆಸ್ಪತ್ರೆಗಳ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ವೈರಸ್ ರೋಗ ಲಕ್ಷಣಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಮಾಸ್ಕ್ ಹಾಗೂ ಪಿಪಿಇ ಕಿಟ್‌ಗಳನ್ನು ಖರೀದಿಸಿ ದಾಸ್ತಾನು ಮಾಡಲು ಸೂಚನೆ ನೀಡಲಾಗಿದೆ ಎಂದರು.
ಸರ್ಕಾರದ ಸೂಚನೆಯಂತೆ ಕೊರೊನಾ ವೈರಸ್ ಬಗ್ಗೆ ನಿಗವಹಿಸಲು ಪಾಲಿಕೆಯ 4 ಎಪಿಡೆಮಾಲಜಿಸ್ಟ್ ಮತ್ತು ಪಾಲಿಕೆಯ 4 ವೈದ್ಯರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕಿತ ಪ್ರಯಾಣಿಕರ ತಪಾಸಣೆಗೆ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಆರೋಗ್ಯಕಲ್ಯಾಣ ಇಲಾಖೆ ವತಿಯಿಂದ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿ, ಬಿಎಂಸಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಲ್ಯಾಬ್ ಆರಂಭಿಸಲಾಗಿದೆ. ಕೊರೊನಾ ವೈರಸ್ ಪ್ರಕರಣ ಕಂಡು ಬಂದರೆ, ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.
ಸೇನಾಧಿಕಾರಿಗಳ ಜತೆ ಮಾತುಕತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿಗಳು ನಗರದಲ್ಲಿರುವ ಭಾರತೀಯ ಸೇನಾ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಒಂದು ವೇಳೆ ಸೋಂಕು, ಸೋಂಕಿತ ಸಂಖ್ಯೆ ಹೆಚ್ಚಳವಾದರೆ ಸೇನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಆತಂಕದ ವಾತಾವರಣ: ರಾಜಧಾನಿಯಲ್ಲಿ ಐಟಿ-ಬಿಟಿ ಸಂಸ್ಥೆಗಳು ಹೆಚ್ಚಿರುವ ಹೆಬ್ಟಾಳ, ಎಲೆಕ್ಟ್ರಾನಿಕ್ ಸಿಟಿ, ಮಾರತ್‌ಹಳ್ಳಿ, ವೈಟ್‌ಫೀಲ್ಡ್ ಸೇರಿದಂತೆ ಇತರ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಓಡಾಡುವವರ ಸಂಖ್ಯೆ ಹೆಚ್ಚಾಗಿತ್ತು. ಕೆಲ ಕಡೆ ಕಂಪನಿಗಳೇ ಉದ್ಯೋಗಿಗಳಿಗೆ ಮಾಸ್ಕ್ ವಿತರಿಸುತ್ತಿದೆ. ಮೆಟ್ರೋ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಮುಖಕ್ಕೆ ಮಾಸ್ಕ್ ಧರಿಸುತ್ತಿರುವುದು ಕಂಡು ಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.