ಪಾಲಿಕೆಯಲ್ಲಿ ಏಕವಚನ ಹಾರಾಟ!
Team Udayavani, Mar 1, 2017, 12:04 PM IST
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕಪ್ಪ ಸಂದಾಯ ಕುರಿತ ಡೈರಿ ಮತ್ತು ಸಿಡಿ ವಿಚಾರ ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ತೀವ್ರ ಗದ್ದಲಕ್ಕೆ ಕಾರಣವಾಯಿತು. ಈ ಗದ್ದಲದ ನಡುವೆಯೇ ಕಾಂಗ್ರೆಸ್ ಸದಸ್ಯರೊಬ್ಬರು ಬಿಜೆಪಿ ನಾಯಕರನ್ನು ಏಕವಚನದಲ್ಲಿ ಸಂಬೋಧಿಸಿದರು ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾಂಗಣದಲ್ಲೇ ಪ್ರತಿಭಟನೆ ನಡೆಸಿದರು.
ಹೀಗಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ, ನೂಕಾಟ, ತಳ್ಳಾಟವೂ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ಸೇರಿ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿ ಅವರನ್ನು ಗಾಲಿಕುರ್ಚಿಯಲ್ಲಿ ಆ್ಯಂಬುಲೆನ್ಸ್‌ಗೆ ಕರೆದೊಯ್ದು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಪ್ರಹಸವೂ ನಡೆಯಿತು. ಹೀಗಾಗಿ ಪಾಲಿಕೆ ಸಭಾಂಗಣ ಮತ್ತೂಂದು ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಉಮೇಶ್ ಶೆಟ್ಟಿಯಿಂದ ಆರಂಭವಾಯಿತು ಜಗಳ: ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಮಾತನಾಡಿ, ರಾಜರಾಜೇಶ್ವರಿನಗರದಲ್ಲಿ 30 ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಇಲ್ಲದಿದ್ದರೂ ಅಧಿಕಾರಿಗಳು “ಎ’ ಖಾತೆ ಮಾಡಿಕೊಟ್ಟಿದ್ದಾರೆ. ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ರಾಜಣ್ಣ ಎಲ್ಲದಕ್ಕೂ ರಾಜರಾಜೇಶ್ವರಿ ನಗರ ಎನ್ನುತ್ತೀರಲ್ಲಾ ಬೇರೆ ವಲಯಗಳಲ್ಲಿ ಇಂತಹ ಅಕ್ರಮಗಳು ನಡೆದಿಲ್ಲವೆ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್‌ನ ಮತ್ತೂಬ್ಬ ಸದಸ್ಯ ವೆಂಕಟೇಶ್ ದನಿಗೂಡಿಸಿ, “ಯಾವ್ಯಾವ ವಲಯದಲ್ಲಿ ಏನೇನಾಗಿದೆ ಎಂಬ ಮಾಹಿತಿ ನನ್ನ ಬಳಿ ಇದೆ,” ಎಂದು “ಸಿಡಿ’ಯೊಂದನ್ನು ಪ್ರದರ್ಶಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಖಾಲಿ ಸಿಡಿ ತೋರಿಸುವುದಲ್ಲ, ಸಿಡಿಯಲ್ಲಿ ಏನಿದೆ ಬಹಿರಂಗಪಡಿಸಿ ಎಂದು ಛೇಡಿಸಿದರು.
ಇದಕ್ಕೆ ಸಿಟ್ಟಿಗೆದ್ದ ವೆಂಕಟೇಶ್, ನಿಮ್ಮ ಯಡಿಯೂರಪ್ಪ ಯಾವುದೋ ಡೈರಿಯನ್ನು ತಾವೇ ಬರೆದುಕೊಂಡು ನಮ್ಮ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡಲಿಲ್ಲವಾ? ಎಂದು ಕೆಣಕಿದರು. ಇದರಿಂದ ಕೆರಳಿದ ಪದ್ಮನಾಭರೆಡ್ಡಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಯಡಿಯೂರಪ್ಪ ಅವರ ಬಗ್ಗೆ ಏಕವಚನ ಪ್ರಯೋಗ ಮಾಡಿದ ವೆಂಕಟೇಶ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಕೂಡಲೇ ಮಧ್ಯಪ್ರವೇಶಿಸಿದ ಮೇಯರ್ ಜಿ. ಪದ್ಮಾವತಿ ಸಭೆಗೆ ಸಂಬಂಧವಿಲ್ಲದ ವಿಷಯ ಪ್ರಸ್ತಾಪ ಮಾಡಬಾರದು. ಎಲ್ಲ ಸದಸ್ಯರು ತಮ್ಮ ಸ್ಥಳಗಳಿಗೆ ಹೋಗಿ ಕುಳಿತು ಸಭೆ ನಡೆಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡಿದರೂ ಉಭಯ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಪ್ರತಿಭಟನೆ ಮುಂದುವರೆದೇ ಇತ್ತು. ಹೀಗಾಗಿ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ನಂತರವೂ ಬಿಜೆಪಿ ಸದಸ್ಯರು ವೆಂಕಟೇಶ್ ವಿರುದ್ಧ ಪ್ರತಿಭಟನೆ ಮುಂದುವರೆಸಿದರು. ಆದರೆ, ಮೇಯರ್ ಅವರು ವೆಂಕಟೇಶ್ ಯಾವುದೇ ಅಸಂವಿಧಾನಿಕ ಪದ ಪ್ರಯೋಗ ಮಾಡಿಲ್ಲ. ಯಾರೂ ಯಾರನ್ನೂ ಕ್ಷಮೆ ಕೇಳುವ ಪ್ರಶ್ನೆ ಇಲ್ಲ ಎಂದರು. ಪರಿಸ್ಥಿತಿ ತಿಳಿಗೊಳ್ಳುವ ಲಕ್ಷಣ ಕಾಣದಿದ್ದರಿಂದ ಮತ್ತೆ ಸಭೆಯನ್ನು 10 ನಿಮಿಷ ಮುಂದೂಡಲಾಯಿತು.
ಬಿಜೆಪಿ ಸದಸ್ಯರೆಲ್ಲರೂ ರಾಜೀನಾಮೆ ಕೊಡ್ತಾರೆ
ನಮ್ಮ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಏಕವಚನ ಪದ ಪ್ರಯೋಗ ಮಾಡಿರುವ ಸದಸ್ಯ ವೆಂಕಟೇಶ್ ಅವರನ್ನು ಅಮಾನತು ಮಾಡುವವರೆಗೆ ಯಾವುದೇ ಕಾರಣಕ್ಕೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ. ಬಿಜೆಪಿ ಸದಸ್ಯರ ಅಕ್ರಮ ಕುರಿತ ಸಿಡಿ ಬಹಿರಂಗಪಡಿಸಲಿ. ಅದು ನಿಜವಾಗಿದ್ದರೆ ಆ ಕ್ಷಣವೇ ನಮ್ಮ ಪಕ್ಷದ ಎಲ್ಲ ಸದಸ್ಯರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಹೇಳಿದರು.
“ನಮ್ಮಮ್ಮನಾಣೆ’ ಏಕವಚನ ಬಳಸಿಲ್ಲ
ಮೇಯರ್ ಅವರು ವೆಂಕಟೇಶ್‌ರಿಂದ ಸ್ಪಷ್ಟನೆ ಕೊಡಿಸಲು ಮುಂದಾದರು. ಆಗ ವೆಂಕಟೇಶ್ “ಬಿಜೆಪಿಯ ಅಣ್ಣ ತಮ್ಮಂದಿರೇ ಮಾತನಾಡಲು ಅವಕಾಶ ಮಾಡಿಕೊಡಿ, “ನಮ್ಮಮ್ಮನಾಣೆ’ಗೂ ಯಡಿಯೂರಪ್ಪ ಅವರ ವಿಚಾರದಲ್ಲಿ ಏಕವಚನ ಪ್ರಯೋಗ ಮಾಡಿಲ್ಲ. ನನ್ನ ಮಾತಿನ ಬಗ್ಗೆ ಸಣ್ಣ ಸ್ಪಷ್ಟನೆ ನೀಡುತ್ತೇನೆ ಕೇಳಿ’ ಎಂದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ವೆಂಕಟೇಶ್‌ರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟಿಸಿದರು.
ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಗದ್ದಲದ ಮಧ್ಯೆಯೇ ಆಡಳಿತ ಪಕ್ಷದಿಂದ ಹಲವು ವಿಷಯಗಳನ್ನು ಮಂಡಿಸಿ ಅನುಮೋದನೆ ಪಡೆಯುವ ಪ್ರಯತ್ನ ನಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ನಾಯಕರ ಬಳಿ ಇದ್ದ ವಿಷಯಸೂಚಿ ಪ್ರತಿಯನ್ನು ಕಸಿದುಕೊಳ್ಳಲು ಯತ್ನಿಸಿದರು.
ಖಾತೆ ಮಾಡಿಕೊಡಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಆಗದ ನಿವೇಶನ, ಕಟ್ಟಡಗಳಿಗೆ ಖಾತೆ ಮಾಡಿಕೊಡುವಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒತ್ತಾಯ ಕೇಳಿಬಂದಿತು. ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, “”ಭೂ ಪರಿವರ್ತನೆಯಾಗದ ನಿವೇಶನ ಮತ್ತು ಕಟ್ಟಡಗಳಿಗೆ ಖಾತೆ ಮಾಡಿಕೊಡುವುದನ್ನು 2008ರಿಂದ ಸ್ಥಗಿತಗೊಳಿಸಲಾಗಿದೆ.
ಆದರೂ, ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಖಾತೆ ಮಾಡಿಕೊಡುವ ಬದಲು ಎಲ್ಲ ವಾರ್ಡುಗಳಲ್ಲೂ ಈ ಪ್ರಕ್ರಿಯೆಯನ್ನು ಅಧಿಕೃತಗೊಳಿಸಬೇಕು,” ಎಂದು ಒತ್ತಾಯಿಸಿದರು. ಆಯುಕ್ತ ಮಂಜುನಾಥ್ ಪ್ರಸಾದ್, ತೆರಿಗೆ ಮತ್ತು ಆರ್ಥಿಕ ಸಮಿತಿಯಲ್ಲಿ ಭಾಗವಹಿಸಿ ಮುಂದಿನ ಸಭೆಯಲ್ಲಿ ಈ ವಿಷಯ ತರಲಾಗುವುದು ಎಂದು ಭರವಸೆ ನೀಡಿದರು.
ಬೆಂಗ್ಳೂರಿಗೆ 16ನೇ ಸ್ಥಾನ
ಬೆಂಗಳೂರು: ಉತ್ತಮ ನಗರಾಡಳಿತ ರೂಪಿಸುವಲ್ಲಿ ಬೆಂಗಳೂರು ನಗರವು ದೇಶದಲ್ಲೇ 16ನೇ ಸ್ಥಾನಕ್ಕೆ ಕುಸಿದಿದೆ ಎಂದು ಪ್ರತಿಷ್ಠಿತ ಜನಾಗ್ರಹ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ. ಸಂಸ್ಥೆಯ 2016ನೇ ಸಾಲಿನ ಭಾರತೀಯ ನಗರ ವ್ಯವಸ್ಥೆ ಸಮೀಕ್ಷೆಯಲ್ಲಿ ಒಟ್ಟು 21 ನಗರಗಳಲ್ಲಿನ ನಗರಾಡಳಿತದ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 2015ರಲ್ಲಿ ನಡೆಸಿದ್ದ ಈ ಸಮೀಕ್ಷೆಯಲ್ಲಿ ಬೆಂಗಳೂರು 12ನೇ ಸ್ಥಾನದಲ್ಲಿತ್ತು.
ಈ ಬಾರಿಯ ಸಮೀಕ್ಷೆಯಲ್ಲಿ ಕೇರಳದ ರಾಜಧಾನಿ ತಿರುವನಂತಪುರ ಮೊದಲ ಸ್ಥಾನದಲ್ಲಿದ್ದರೆ, ಪುಣೆ 2 ಮತ್ತು ಕೊಲ್ಕೊತ್ತಾ 3ನೇ ಸ್ಥಾನವನ್ನು ಪಡೆದುಕೊಂಡಿದೆ. ನಗರ ಯೋಜನೆ ರೂಪಿಸುವುದು, ಸಂಪನ್ಮೂಲ ಕ್ರೋಡೀಕರಣ, ಆಡಳಿತದಲ್ಲಿ ಪಾರದರ್ಶಕತೆ, ಬದ್ಧತೆ, ನಗರ ಯೋಜನೆ ಕಾಯ್ದೆಯಲ್ಲಿ ಸುಧಾರಣೆ ತರುವಲ್ಲಿ ಬೆಂಗಳೂರು ನಿರೀಕ್ಷಿತ ಗುರಿ ಮುಟ್ಟಿಲ್ಲ ಎಂಬುದಾಗಿ ಜನಾಗ್ರಹ ನಗರ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಕಲ್ಯಾಣ ಕಾರ್ಯಕ್ರಮಕ್ಕೆ 30 ದಿನಗಳ ಗಡುವು
ಬೆಂಗಳೂರು: ಪಾಲಿಕೆಯ ಎಲ್ಲಾ ವಲಯಗಳ ಜಂಟಿ ಆಯುಕ್ತರು ಮುಂದಿನ 30 ದಿನಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು ಎಂದು ಮೇಯರ್ ಜಿ. ಪದ್ಮಾವತಿ ಗಡುವು ನೀಡಿದ್ದಾರೆ.
30 ದಿನಗಳಲ್ಲಿ ಬಾಕಿ ಇರುವ ಕಲ್ಯಾಣ ಕಾರ್ಯಕ್ರಮಗಳ ಕೆಲಸ ಪೂರ್ಣಗೊಳ್ಳದಿದ್ದರೆ ಜಂಟಿ ಆಯುಕ್ತರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಆದೇಶಿಸಿದ್ದಾರೆ. ಮಾಜಿ ಮೇಯರ್ ಶಾಂತಕುಮಾರಿ ಅವರು ಮಂಗಳವಾರ ಈ ಕುರತ ಪ್ರಶ್ನೆಯೊಂದನ್ನು ಪಾಲಿಕೆಯ ಸಾಮಾನ್ಯ ಸಭೆಯ ಮುಂದಿಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.