ಪರಿಷತ್ ಚುನಾವಣೆ:ಆಪರೇಷನ್ ಅಂತ್ಯ
Team Udayavani, Sep 25, 2018, 6:00 AM IST
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿಜೆಪಿ ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದೆ. ಕಾಂಗ್ರೆಸ್‌ನಿಂದ ನಸೀರ್ ಅಹಮದ್, ಎಂ.ಸಿ.ವೇಣುಗೋಪಾಲ್, ಜೆಡಿಎಸ್‌ನಿಂದ ರಮೇಶ್‌ಗೌಡ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆ ಖಚಿತವಾಗಿದೆ.
ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಇಪ್ಪತ್ತು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರವನ್ನೇ ಕೆಡವಲು ಕಾರ್ಯತಂತ್ರ ರೂಪಿಸಿದ್ದ ಬಿಜೆಪಿ ಅದು ವಿಫಲವಾದ ನಂತರ ಎಂಟು ಶಾಸಕರನ್ನಾದರೂ ಸೆಳೆದು ವಿಧಾನಪರಿಷತ್‌ನ ಮೂರೂ ಸ್ಥಾನ ಗೆಲ್ಲಲು ಆಪರೇಷನ್ ಎಂಎಲ್‌ಸಿ ಕಾರ್ಯಾಚರಣೆಯೂ ಕೈಗೂಡದಂತಾಗಿದೆ.
ಸಂಖ್ಯಾಬಲ ಇಲ್ಲದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮುಖಭಂಗ ಅನುಭವಿಸುವುದಕ್ಕಿಂತ ಸುಮ್ಮನಿರುವುದು ಸೂಕ್ತ ಎಂದು ಬಿಜೆಪಿ ಹೈಕಮಾಂಡ್ ಸಹ ಸೂಚನೆ ನೀಡಿದ್ದರಿಂದ ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದೆ.
ಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್, ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ವಾರದಿಂದ ತಂತ್ರಗಾರಿಕೆ ಮಾಡಿತ್ತಾದರೂ, ಕೆಲವು ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿ ಸೇರಲು ಹಿಂದೇಟು ಹಾಕಿ ದ್ದ ರಿಂದ ಶಸ್ತ್ರತ್ಯಾಗ ಮಾಡಿತು ಎನ್ನಲಾಗಿದೆ.
ಇದು ಒಂದು ರೀತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಸಿ.ಪಿ.ಯೋಗೇಶ್ವರ್ ಅವರನ್ನು ವಿಧಾನಪರಿಷತ್‌ಗೆ ಕಳುಹಿಸುವ ಹಠತೊಟ್ಟಿದ್ದ ಯಡಿಯೂರಪ್ಪ ಖುದ್ದು ಹಲವಾರು ಶಾಸಕರನ್ನು ಸಂಪರ್ಕಿಸಿ ಒಪ್ಪಿಸಿದ್ದರು. ಆದರೆ, ಬಿಜೆಪಿಯಲ್ಲೇ ಕೆಲವರು ಈ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದರು.
ಯೋಗೇಶ್ವರ್ ನಂಬಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿದ್ದರಿಂದ ಪಕ್ಷ ಮುಜುಗರ ಅನುಭವಿಸಬೇಕಾಯಿತು. ಇದೀಗ ಮತ್ತೆ ಅವರನ್ನೇ ಸ್ಪರ್ಧೆಗಿಳಿಸಿ ಶಾಸಕರ ಖರೀದಿಗೆ ಮುಂದಾದರೆ ಮತ್ತಷ್ಟು ಸಂಕಷ್ಟ ಎದುರಾಗಬಹುದು. ಕಾಂಗ್ರೆಸ್-ಜೆಡಿಎಸ್‌ನವರು ಬಿಜೆಪಿ ಶಾಸಕರನ್ನೇ ಸೆಳೆಯಬಹುದು ಎಂದು ಕೇಂದ್ರದ ನಾಯಕರಿಗೆ ತಿಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಹಾಕದಂತೆ ಕೊನೇ ಕ್ಷಣದಲ್ಲಿ ಸೂಚನೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ಒಗ್ಗಟ್ಟು ಪ್ರದರ್ಶನ: ಕಾಂಗ್ರೆಸ್‌ನ ನಸೀರ್ ಅಹಮದ್ ಹಾಗೂ ವೇಣುಗೋಪಾಲ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್, ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಸೇರಿ ಹಲವರು ನಾಯಕರು ಉಪಸ್ಥಿತರಿದ್ದರು. ಒಗ್ಗಟ್ಟು ಪ್ರದರ್ಶಿಸಿದರು. ಜೆಡಿಎಸ್ ಅಭ್ಯರ್ಥಿ ರಮೇಶ್‌ಗೌಡ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್, ಪರಿಷತ್ ಸದಸ್ಯರಾದ ಟಿ.ಎ.ಶರವಣ, ನಾರಾಯಣಸ್ವಾಮಿ, ಕೋನರೆಡ್ಡಿ ಉಪಸ್ಥಿತರಿದ್ದರು.
ಪರಿಷತ್ ಅಭ್ಯರ್ಥಿ : ಜೆಡಿಎಸ್‌ನಲ್ಲಿ ಗೊಂದಲ
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್‌ನಲ್ಲಿ ಅಂತಿಮ ಕ್ಷಣದವರೆಗೂ ಗೊಂದಲ ಮುಂದುವರಿದಿತ್ತು.
ರಮೇಶ್‌ಬಾಬು, ಕೋನರೆಡ್ಡಿ, ಅಮರನಾಥ್. ರಮೇಶ್‌ಗೌಡ ಆಕಾಂಕ್ಷಿಗಳಾಗಿದ್ದರು. ಸೋಮವಾರ ಬೆಳಗ್ಗೆ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಿ ರಮೇಶ್‌ಗೌಡ ಹೆಸರು ಅಂತಿಮಗೊಳಿಸಲಾಯಿತು. ಅವರು ದಾಖಲೆ ಸಿದ್ಧಪಡಿಸಿಕೊಂಡು ನಾಮಪತ್ರ ಸಲ್ಲಿಸಲು ವಿಧಾನಸೌಧಕ್ಕೆ ಬಂದಾಗ ಇತ್ತ ಮಾಜಿ ಶಾಸಕ ಕೋನರೆಡ್ಡಿ ಸಹ ಕುಮಾರಸ್ವಾಮಿ ಹೇಳಿದ್ದಾರೆ ಎಂದು ನಾಮಪತ್ರ ಸಲ್ಲಿಸಲು ಮುಂದಾದರು. ಆದರೆ, ಬಿ ಫಾರಂ ರಮೇಶ್‌ಗೌಡ ಅವರಿಗೆ ನೀಡಿದ್ದರಿಂದ ಕೋನರೆಡ್ಡಿ ಹಿಂದಕ್ಕೆ ಸರಿಯಬೇಕಾಯಿತು. ದೇವೇಗೌಡರ ಕುಟುಂಬ ಸದಸ್ಯರ ಒತ್ತಡದಿಂದ ರಮೇಶ್‌ಗೌಡ ಅವರಿಗೆ ಕೊನೇ ಕ್ಷಣದಲ್ಲಿ ಬಿ ಫಾರಂ ನೀಡಲಾಯಿತು. ಪರಿಷತ್ ಆಕಾಂಕ್ಷಿಗಳಾಗಿದ್ದವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಹೂರ್ತ ಕಾದ ಎಂಸಿವಿ
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ನಸೀರ್ ಅಹಮದ್ ಬೆಳಗ್ಗೆಯೇ ವಿಧಾನಸೌಧಕ್ಕೆ ಆಗಮಿಸಿ ಸೂಚಕರು-ಅನುಮೋದಕರ ಸಹಿ ಪಡೆದು ನಾಮಪತ್ರ ಸಲ್ಲಿಸಲು ಸಜ್ಜಾದರು. ಮತ್ತೂಬ್ಬ ಅಭ್ಯರ್ಥಿ ಎಂ.ಸಿ.ವೇಣುಗೋಪಾಲ್ ಅವರು ಶುಭ ಮಹೂರ್ತಕ್ಕೆ ಕಾದು ಕುಳಿತು ಸ್ವಲ್ಪ ಹೊತ್ತಿನ ಬಳಿಕ ಆಗಮಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿಗಳು ದಾಖಲಾತಿ ಸಿದ್ಧಪಡಿಸಿಕೊಂಡು ಬರಲಿದ್ದಾರೆ ಎಂದು ಮಧ್ಯಾಹ್ನ 2.30 ರವರೆಗೂ ಹೇಳಲಾಗುತ್ತಿದ್ದಾರೂ ಅಂತಿಮವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಲಾಯಿತು. ಮೂಲಗಳ ಪ್ರಕಾರ ವಿಧಾನಸೌಧದವರೆಗೂ ನಾಮಪತ್ರ ಸಲ್ಲಿಕೆಗೆ ಬಂದಿದ್ದ ಬಿಜೆಪಿ ಅಭ್ಯರ್ಥಿಗಳು ಪಕ್ಷದ ನಾಯಕರ ದಿಢೀರ್ ಸೂಚನೆ ಮೇರೆಗೆ ವಾಪಸ್ಸಾದರು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.