ವಾರದಲ್ಲಿ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ಸಾಧ್ಯತೆ
Team Udayavani, Jul 9, 2018, 6:50 AM IST
ಬೆಂಗಳೂರು: ವಿಧಾನಪರಿಷತ್‌ನಲ್ಲಿ ಹಂಗಾಮಿ ಸಭಾಪತಿ ಮುಂದುವರಿಕೆಗೆ ಆಕ್ಷೇಪ ವ್ಯಕ್ತವಾಗಿರುವುದರಿಂದ ಈ ವಾರದೊಳಗೆ ಸಭಾಪತಿ ಸ್ಥಾನದ ಆಯ್ಕೆಗೆ ಚುನಾವಣೆ ನಿಗದಿಯಾಗುವ ಸಾಧ್ಯತೆಯಿದೆ.
ಸಭಾಪತಿ ಸ್ಥಾನಕ್ಕಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಉಂಟಾಗಿದೆ.
ಪರಿಷತ್‌ನ 75 ಸ್ಥಾನಗಳಲ್ಲಿ ನಮ್ಮ ಸಂಖ್ಯಾಬಲ 35 ಇರುವುದರಿಂದ ಸಭಾಪತಿ ಸ್ಥಾನ ನಮಗೆ ಬೇಕೆಂದು ಕಾಂಗ್ರೆಸ್ ಪಟ್ಟುಹಿಡಿದಿದೆ. ಜೆಡಿಎಸ್ 14 ಸ್ಥಾನ ಹೊಂದಿದೆ, ಹೀಗಾಗಿ ಉಪ ಸಭಾಪತಿ ಸ್ಥಾನ ಪಡೆದುಕೊಳ್ಳಲಿ ಎಂಬ ವಾದ ಮುಂದಿಟ್ಟಿದೆ.
ಆದರೆ, ಸಮ್ಮಿಶ್ರ ಸರ್ಕಾರ ಇರುವುದರಿಂದ ಸಂಖ್ಯಾಬಲ ಮುಖ್ಯವಲ್ಲ.ಮೈತ್ರಿ ಧರ್ಮ ಪಾಲನೆಯಾಗಬೇಕು. ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪೀಕರ್ ಸ್ಥಾನ ಬಿಟ್ಟುಕೊಡಲಾಗಿದೆ. ಹೀಗಾಗಿ, ಪರಿಷತ್‌ನಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡಲೇಬೇಕೆಂದು ಜೆಡಿಎಸ್ ಹಠ ಹಿಡಿದಿದೆ.
ಜೆಡಿಎಸ್‌ಗೆ ಸಭಾಪತಿ ಸ್ಥಾನ ದೊರೆತರೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಆ ಹುದ್ದೆಗೆ ಆಯ್ಕೆಯಾಗಲಿದ್ದಾರೆ. ಆದರೆ, ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಪರಿಷತ್‌ನ ಹಿರಿಯ ಸದಸ್ಯರಲ್ಲಿ ಒಬ್ಬರಿಗೆ ಸಭಾಪತಿ ಸ್ಥಾನ ನೀಡಿ ಸಮಾಧಾನಪಡಿಸುವ ಉದ್ದೇಶ ಕಾಂಗ್ರೆಸ್‌ನದು.
ಎಸ್.ಆರ್.ಪಾಟೀಲ್, ವಿ.ಎಸ್.ಉಗ್ರಪ್ಪ, ಪ್ರತಾಪಚಂದ್ರ ಶೆಟ್ಟಿ ಅವರಲ್ಲಿ ಒಬ್ಬರಿಗೆ ಸಭಾಪತಿ ಹುದ್ದೆ ನೀಡಲು ಚಿಂತನೆ ನಡೆದಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾಗಲೂ ಸಭಾಪತಿ ಸ್ಥಾನ ಕಾಂಗ್ರೆಸ್ ಇಟ್ಟುಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರದಲ್ಲಿ ಜೆಡಿಎಸ್ ಜತೆ ಚರ್ಚಿಸಿ ಸೌಹಾರ್ದಯುತವಾಗಿಯೇ ಬಗೆಹರಿಸಿಕೊಳ್ಳಿ ಎಂದು ಅವರು ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.
ಹೀಗಾಗಿ, ಅಂತಿಮವಾಗಿ ಯಾರಿಗೆ ಸಭಾಪತಿ ಸ್ಥಾನ ಒಲಿಯಲಿದೆ ಎಂಬುದು ಕಾದು ನೋಡಬೇಕಾಗಿದೆ. ಈ ಮಧ್ಯೆ ಜೆಡಿಎಸ್ ವರಿಷ್ಠ ದೇವೇಗೌಡರು ಭಾನುವಾರ ರಾತ್ರಿ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಮನೆಗೆ ಕರೆಸಿಕೊಂಡು ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.