ಪ್ಲೀಸ್ ಡಾಕ್ಟರ್, ನಮ್ಮನ್ನೂ ಪರೀಕ್ಷಿಸಿ…
Team Udayavani, Mar 14, 2020, 10:44 AM IST
ಬೆಂಗಳೂರು: “ಚೀನಾದವರು ನನ್ನ ಆಟೋದಲ್ಲಿ ಪ್ರಯಾಣಿಸಿದ್ದರು ಅಂದಿನಿಂದ ಜ್ವರ ಬಂದಿದೆ… ನಾನು ಏರ್‌ಪೋರ್ಟ್ ಕ್ಯಾಬ್ ಡ್ರೈವರ್, ಜ್ವರ ಬಂದಿದೆ… ನಾವು ಉತ್ತರ ಭಾರತ ಪ್ರವಾಸ ಮಾಡಿ ಬಂದಿದ್ದೇವೆ, ಕೆಮ್ಮು ನೆಗಡಿ ಬಂದಿದೆ… ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿಗಳು ಹೆಚ್ಚಿದ್ದು, ನನ್ನ ಮಗಳಿಗೆ ವಾರದಿಂದ ಜ್ವರ ಬರುತ್ತಾ ಇದೆ… ಜ್ವರ ವಾರವಾದರು ಕಡಿಮೆಯಾಗುತ್ತಿಲ್ಲ… “ಪ್ಲೀಸ್ ಡಾಕ್ಟರ್ ನಮ್ಮನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ…’ ಇದು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಕೊರೊನಾ ವಾರ್ಡ್ ಬಳಿ ಕಂಡು ಬಂದ ದೃಶ್ಯ.
ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಕುರಿತು ಮಾಹಿತಿ ಕೊರತೆಯಿಂದ ಇತ್ತೀಚೆಗೆ ವಿದೇಶಿ ಪ್ರವಾಸದ ಹಿನ್ನೆಲೆ ಇಲ್ಲದಿದ್ದರೂ, ಕೊರೊನಾ ಸೋಂಕಿತರ ನೇರ ಸಂಪರ್ಕವಾಗಿರದಿದ್ದರೂ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡರೇ ನಮಗೂ ಸೋಂಕು ತಗುಲಿರಬಹುದು ಭಯದಿಂದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯ ಕೊರೊನಾ ಸೋಂಕಿತರ ಆರೈಕೆ ಕೇಂದ್ರಕ್ಕೆ ನೇರವಾಗಿ ಧಾವಿಸುತ್ತಿದ್ದಾರೆ. ಅಲ್ಲದೇ ನಮಗೂ ಕೊರೊನಾ ಸೋಂಕು ಪರೀಕ್ಷೆ ಮಾಡಿ ಎಂದು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ. ಈ ರೀತಿ ಆತಂಕಕ್ಕೆ ಒಳಗಾಗಿ ಬಂದ ರೋಗಿಗಳಿಗೆ ಮನವರಿಕೆ ಮಾಡುವುದೇ ಆಸ್ಪತ್ರೆಯ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.
ನಿತ್ಯ 50ಕ್ಕೂ ಹೆಚ್ಚು ಮಂದಿ: ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬಹುತೇಕರಿಗೆ ಮಾಹಿತಿ ಇದೆ. ಮಾರ್ಚ್ 1 ರಿಂದ ಈಚೆಗೆ ರಾಜ್ಯದಲ್ಲಿ ಕೊರೊನ ಆತಂಕ ಹೆಚ್ಚಾಗಿದ್ದು, ಅಂದಿನಿಂದ ಆಸ್ಪತ್ರೆಯ ಸೋಂಕು ಚಿಕಿತ್ಸಾ ಕೇಂದ್ರಕ್ಕೆ ನಿತ್ಯ 50ಕ್ಕೂ ಹೆಚ್ಚು ಮಂದಿ ಯಾವುದೇ ವಿದೇಶ ಪ್ರವಾಸ ಹಿನ್ನೆಲೆ ಇಲ್ಲದಿದ್ದರೂ ಕೇವಲ ಆತಂಕದಿಂದ ಬರುತ್ತಿದ್ದಾರೆ. ಅದರಲ್ಲೂ ಕಳೆದ ಮೂರ್‍ನಾಲ್ಕು ದಿನದಿಂದ ಆತಂಕಕ್ಕೊಳಗಾಗಿ ಬರುರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಯಾರ್ಯಾರು ಬರುತ್ತಿದ್ದಾರೆ?: ಹೆಚ್ಚು ಜ್ವರ ಹೊಂದಿದವರು, ವಿದೇಶಿಗರು ಜತೆ ಓಡಾಟ ನಡೆಸಿದವರ,. ವಿದೇಶಿಗರೊಂದಿಗೆ ವ್ಯವಹಾರ ನಡೆಸಿದವರು, ವಿಮಾನ ನಿಲ್ದಾಣದ ಕ್ಯಾಬ್ ಚಾಲಕರು, ಆಟೋ ಚಾಲಕರು, ಐಟಿ ಬಿಟಿ ಕಂಪನಿಯಲ್ಲಿ ಉದ್ಯೋಗಿಗಳು, ಉತ್ತರ ಭಾರತ, ಈಶಾನ್ಯ ಭಾರತ, ಕೇರಳ ಪ್ರವಾಸ ಹೋದವರು, ವಿದೇಶಿ ಪ್ರವಾಸ ಮಾಡಿಕೊಂಡು ಬಂದ ವ್ಯಕ್ತಿಯ ನೆರೆಹೊರೆಯವರು, ಇಂಟರ್‌ನ್ಯಾಷನಲ್ ಶಾಲೆಗಳ ಮಕ್ಕಳು ಪೋಷಕರು, ಮೂರ್‍ನಾಲ್ಕು ತಿಂಗಳ ಹಿಂದೆ ವಿದೇಶ ಪ್ರವಾಸ ಕೈಗೊಂಡವರು ರಾಜೀವ್‌ಗಾಂಧಿ ಆಸ್ಪತ್ರೆಯ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಬಂದು ರಕ್ತ ಪರೀಕ್ಷೆ ಮಾಡಿ, ಗಂಟಲು ದ್ರಾವಣ ಪರೀಕ್ಷೆ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳಿಂದಲೇಪರೀಕ್ಷೆಗೆ ಸೂಚನೆ : ಖಾಸಗಿ ಆಸ್ಪತ್ರೆಗಳ ವೈದ್ಯರೇ ಕೊರೊನಾ ಪರೀಕ್ಷೆಗೆ ಸೂಚಿಸು ತ್ತಿದ್ದಾರೆ. ಆತಂಕಕ್ಕೆ ಒಳಗಾಗಿ ಬರುತ್ತಿರುವವರ ಪೈಕಿ ಅನೇಕರು ತಮ್ಮ ಬಳಿ ಖಾಸಗಿ ಆಸ್ಪತ್ರೆ ವೈದ್ಯರು ಕೊರೊನಾ ಪರೀಕ್ಷೆಗೆ ಸೂಚಿಸಿರುವ ದಾಖಲೆ ಇಟ್ಟುಕೊಂಡು ಬರುತ್ತಿದ್ದಾರೆ. ಬಹುತೇಕರಿಗೆ ವಿದೇಶಿ ಪ್ರವಾಸ ಹಿನ್ನೆಲೆ ಇಲ್ಲರುವುದೇ ಇಲ್ಲ. ಆದರೂ ಖಾಸಗಿ ಆಸ್ಪತ್ರೆ ವೈದ್ಯರು ಕೊರೊನಾ ಪರೀಕ್ಷೆಗೆ ಅನಗತ್ಯವಾಗಿ ಸೂಚಿಸುತ್ತಿದ್ದಾರೆ. ಇದಕ್ಕೆ ಖಾಸಗಿ ಆಸ್ಪತ್ರೆ ವೈದ್ಯರಿಗೆ ಕೊರೊನಾ ಬಗ್ಗೆ ಸ್ಪಷ್ಟ ಮಾಹಿತಿ ಕೊರತೆ ಎನ್ನಲಾಗುತ್ತಿದೆ.
ಆತಂಕಕ್ಕೆ ಒಳಗಾದವರನ್ನು ನಿಭಾಯಿಸುವುದೇ ಸವಾಲು : ಸೋಂಕು ತಗುಲಿರುವ ಯಾವುದೇ ಸಾಧ್ಯತೆಗಳು ಇಲ್ಲದಿದ್ದರೂ ಆತಂಕಕ್ಕೆ ಒಳಗಾಗಿ ಬರುವವರಿಗೆ ತಿಳಿ ಹೇಳುವುದೇ ಆಸ್ಪತ್ರೆಯ ಕೊರೊನಾ ಚಿಕಿತ್ಸಾ ಕೇಂದ್ರದ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಸಿಬ್ಬಂದಿಯೊಬ್ಬರು ಹೇಳುವಂತೆ, “ಬಂದ ಅನೇಕರು ಕೊರೊನಾ ಸೋಂಕಿನ ಬಗ್ಗೆ ಸಾಮಾನ್ಯ ಜ್ಞಾನವನ್ನು, ಸೋಂಕು ಪರೀಕ್ಷೆಯ ನಿಯಮಗಳೇನು, ಯಾರಿಗೆ ಮಾತ್ರ ಮಾಡಬೇಕು ಎಂಬುದನ್ನು ಅರಿತಿರುವುದಿಲ್ಲ. ಇಲ್ಲಿ ಶಂಕಿತರ ಪರೀಕ್ಷೆ ಮಾಡುತ್ತಿರುವುದನ್ನು ನೋಡಿ ನಮಗೂ ಮಾಡಬೇಕು ಎಂದು ಒತ್ತಾಯ ಮಾಡುತ್ತಾರೆ. ಮಾಹಿತಿ ನೀಡಿದರು ಕೇಳುವುದಿಲ್ಲ. ಜೋರಾಗಿ ಕೂಗಾಡುವುದು, ವಾಗ್ವಾದ ಮಾಡುತ್ತಾರೆ. ಸೋಂಕಿತರ ಆರೈಕೆ, ಶಂಕಿತರ ಪರೀಕ್ಷೆಗಿಂತ ಆಂತಕಕ್ಕೆ ಒಳಗಾಗಿ ಬರುವವರನ್ನು ಸಮಾಧಾನ ಪಡೆಸುವುದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಜೀವದ ಜತೆ ಆಟ ಬೇಡ ಎಂದೆಲ್ಲಾ ಮಾತಾಡುತ್ತಾರೆ : ಜ್ವರ ಲಕ್ಷಣಗಳಿದ್ದು ಭೀತಿಯಿಂದ ಬರುವವರ ಪೈಕಿ ಅನೇಕರು ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡುವಂತೆ ಒತ್ತಾಯಿಸುತ್ತಾರೆ. ರೋಗಿಯ ಹಿನ್ನೆಲೆ ವಿಚಾರಿಸಿ ಇದು ಕೊರೊನಾ ಅಲ್ಲ, ಪರೀಕ್ಷೆ ಮಾಡಲಾಗುವುದಿಲ್ಲ, ಹೊರರೋಗಿಗಳ ಘಟಕಕ್ಕೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರೆ ಅನೇಕರು ” ಜೀವದ ಪ್ರಶ್ನೆ, ಜೀವದ ಜತೆ ಆಟವಾಡಬೇಡಿ’ ಎಂಬೆಲ್ಲಾ ಮಾತುಗಳನ್ನಾಡುತ್ತಾರೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
ವಾರ್ಡ್‌ಗೆ ನೇರ ಪ್ರವೇಶ : ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ಹಿಂಬದಿಯಲ್ಲಿರುವ ಪ್ರತ್ಯೇಕ ವಾರ್ಡ್‌ಗಳಲ್ಲಿಯೇ ಶಂಕಿತರ ಪರೀಕ್ಷೆ ಹಾಗೂ ಸೋಂಕಿತರ ಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ, ಈ ವಾರ್ಡ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿಲ್ಲ. ಯಾರು ಬೇಕಾದರೂ ನೇರವಾಗಿ ಹೋಗಬಹುದು. ಯಾವುದೇ ವಿಚಾರಣೆ, ಭದ್ರತಾ ವ್ಯವಸ್ಥೆ ತಪಾಸಣೆ ಸೂಕ್ತವಾಗಿ ಜಾರಿಯಾಗಿಲ್ಲ. ಹೀಗಾಗಿ, ವಿಚಾರಣೆ ಮಾಡುವವರೂ ನೇರವಾಗಿ ಕೊರೊನಾ ಸೋಂಕಿತರಿರುವ ವಾರ್ಡ್ ಬಳಿಕೆ ಬರುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಆಸ್ಪತ್ರೆ ಆವರಣದಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು : ಭೀತಿಯಿಂದ ರಕ್ತ ಪರೀಕ್ಷೆಗೆ ಬರುವವರಿಗೆ ಮಾಹಿತಿ ನೀಡಿ, ಸಲಹೆ ಸೂಚನೆ ನೀಡಲು ರಾಜೀವ್‌ಗಾಂಧಿ ಆಸ್ಪತ್ರೆಯ ಮುಂಭಾಗವೇ ಮಾಹಿತಿ ಕೇಂದ್ರವನ್ನು ತೆರೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ. “ಕೊರೊನಾ ಎಂದ ಕೂಡಲೇ ನೇರವಾಗಿ ವಾರ್ಡ್‌ಗೆ ತೆರಳುವ ಬದಲು ಮಾಹಿತಿ ಘಟಕದಲ್ಲಿ ಮಾಹಿತಿ ಪಡೆದು ಮುಂದುವರೆಯಲು ಸಹಾಯಕವಾಗುತ್ತದೆ’ ಎಂದು ರೋಗಿ ಸಂಬಂಧಿಯೊಬ್ಬರು ತಿಳಿಸಿದರು.
ಅನಗತ್ಯ ಪರೀಕ್ಷೆಗೆ ಸೂಚಿಸಿದರೆ ಕ್ರಮ : ರೋಗಿಯ ಹಿನ್ನೆಲೆ ತಿಳಿದುಕೊಳ್ಳದೆ, ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇಲ್ಲದಿದ್ದರೂ ಅನಗತ್ಯವಾಗಿ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡುವ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರು, ಸಿಬ್ಬಂದಿಗೆ ಶನಿವಾರ, ಭಾನುವಾರದ ರಜೆ ರದ್ದು : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಸಾರ್ವತ್ರಿಕ ರಜಾ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಬೇಕು ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಕೊರೊನಾ ವೈರಾಣು ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯಲ್ಲಿ ಅನೇಕ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈದ್ಯರಿಗೆ ಮಾ.14 ಮತ್ತು 15ರಂದು ಸಾರ್ವತ್ರಿಕ ರಜೆ ರದ್ದುಗೊಳಿಸಲಾಗಿದ್ದು, ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.
ಕೊರೊನಾ ವೈರಾಣು ನಿಯಂತ್ರಣಕ್ಕೆ ಬರುವವರೆಗೆ ಮುಂಬರುವ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು ಪಾಲಿಕೆಯ ಎಲ್ಲಾ ಹೆರಿಗೆ ಆಸ್ಪತ್ರೆಗಳು, ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಕಚೇರಿ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲಾ ಕಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದೆ.
ಮಾಲ್, ಚಿತ್ರ ಮಂದಿರಗಳು 1 ವಾರ ಬಂದ್ : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಮತ್ತು ಸಿಕೊರೊನಾ ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು, ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಪಿಂಗ್ ಮಾಲ್‌ಗಳು, ಚಲನಚಿತ್ರ ಮಂದಿರಗಳು, ಉಪನ್ಯಾಸ ಕಾರ್ಯಕ್ರಮಗಳನ್ನು ಮಾ.14ರಿಂದ 21ರವರೆಗೆ ಬಂದ್ ಮಾಡಲು ಪಾಲಿಕೆ ಆದೇಶ ಹೊರಡಿಸಿದೆ. ಒಂದು ವಾರದ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿಯೂ ತಿಳಿಸಲಾಗಿದ್ದು, ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು, ಉಪನ್ಯಾಸ ಕಾರ್ಯಕ್ರಮ, ಮಾಲ್, ಚಲನಚಿತ್ರ ಮಂದಿರಗಳು, ಪಬ್ ಮತ್ತು ನೈಟ್ ಕ್ಲಬ್‌ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಗುಂಪಾಗಿ ಸೇರುವಂತಿಲ್ಲ, ಕ್ರೀಡಾ ಕಾರ್ಯಕ್ರಮ, ಮದುವೆ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಒಂದು ವಾರ ನಡೆಸುವಂತಿಲ್ಲ. ದೇವರ ಜಾತ್ರೆ, ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೂ ನಿಷೇಧ ಹೇರಲಾಗಿದೆ. ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಗಿದ್ದು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಬಹುಮುಖ್ಯ ಪರೀಕ್ಷೆಗಳನ್ನು ಮಾತ್ರ ಯಥಾಸ್ಥಿತಿಯಂತೆ ನಡೆಯಲಿವೆ ಎಂದು ತಿಳಿಸಲಾಗಿದೆ.
ರಾಯಭಾರಿಗಳ ಜತೆ ಸಭೆ : ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ವಿವಿಧ ದೇಶಗಳ ರಾಯಭಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಲಾಗಿದೆ. ಈ ವೇಳೆ, ಅನಗತ್ಯವಾಗಿ ವಿದೇಶ ಪ್ರವಾಸ ಮಾಡುವುದನ್ನು ತಡೆದು, ರೋಗ ಹರಡುವುದನ್ನು ನಿಯಂತ್ರಿಸಲು ಸಹಕರಿಸುವಂತೆ ಕೋರಲಾಯಿತು. ಜತೆಗೆ, ರಾಜ್ಯದಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳು ಹಾಗೂ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾ ಲಯದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಯಭಾರಿಗಳಿಗೆ ಸೂಚಿಸಲಾಗಿದೆ.
ನಾಳೆಯ ಉದ್ಯೋಗ ಮೇಳ ಮುಂದಕ್ಕೆ : ಮಾ.15ರಂದು ನಡೆಯಬೇಕಾಗಿದ್ದ “ಬೃಹತ್ ಉದ್ಯೋಗ ಮೇಳ’ವನ್ನು ಕರೊನಾ ವೈರೆಸ್ ಆಂತಕದ ಹಿನ್ನೆಲೆಯಲ್ಲಿ ಬಿಜೆಪಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರಕೋಷ್ಠ ಮುಂದೂಡಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ.ವಿ.ರಾಜೇಂದ್ರ ಕುಮಾರ್, ನಂದಿನಿ ಬಡಾವಣೆಯ ಎಸ್.ಜಿ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮೇಳ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಸದಾನಂದ ಗೌಡ ಸೇರಿ ಹಲವು ಮುಖಂಡರು ಭಾಗವಹಿಸಲಿದ್ದರು. ಕೇಂದ್ರ ಸಚಿವರ ಮನವಿ ಮೇರೆಗೆ ಮೇಳವನ್ನು ಮುಂದೂಡಲಾಗಿದೆ ಎಂದರು.
ಹಿಂದೂ ಮಹಾಸಭಾ ಕಾರ್ಯಕ್ರಮ ಮುಂದಕ್ಕೆ : ಅಖೀಲ ಭಾರತ ಹಿಂದೂ ಮಹಾಸಭಾ-ಕರ್ನಾಟಕ, ಮಾ.15ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಮುಂದೂಡಿದೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಎಲ್.ಕೆ. ಸುವರ್ಣ, ಸಚಿವರಾದ ಎಸ್.ಸುರೇಶ್ ಕುಮಾರ್, ಗೋಪಾಲಯ್ಯ, ಭೈರತಿ ಬಸವರಾಜ್ ಸೇರಿದಂತೆ ಹಲವು ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದರೆ ಕೊರೊನಾ ಆಂತಕದ ಹಿನ್ನೆಲೆಯಲ್ಲಿ ಈ ಸಮಾರಂಭವನ್ನು ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನಡೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.