ಕ್ರೈಂ ಸಿಟಿ ಭಾಗ್ಯವೇ ಸಿಎಂ ಸಾಧನೆ
Team Udayavani, Jan 23, 2018, 11:59 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕ್ರೈಂ ಸಿಟಿ ಭಾಗ್ಯ ನೀಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಬೆದರಿಕೆ ಮೂಲಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನೇ ಕೆಡಿಸಿರುವ ಈ ಸರ್ಕಾರದಿಂದಾಗಿ ಇಡೀ ಪೊಲೀಸ್ ಇಲಾಖೆ ಮಲಗಿ, ರೌಡಿಗಳು ನಗರವನ್ನು ಆಳುವಂತಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿ. ಅನೇಕ ಕಡೆ ಅಧಿಕಾರಿಗಳು ಸೇರಿದಂತೆ ಪೊಲೀಸರ ಮೇಲೆ ರೌಡಿಗಳು, ಗಾಂಜಾ ಸೇವಿಸಿದವರು ಹಲ್ಲೆ, ದಾಳಿ ನಡೆಸಿದ್ದಾರೆ. ಎಸಿಪಿಯೊಬ್ಬರ ಮನೆಗೆ ಕಳ್ಳನೊಬ್ಬ ಹಾಡಹಗಲೇ ನುಗ್ಗಿ ಅವರ ಪತ್ನಿಯ ಸರ ಅಪಹರಿಸಿದ್ದಾನೆ.
ಹಿಂದೆ ಕಾಡುಗಳ್ಳ ವೀರಪ್ಪನ್ ಅರಣ್ಯದಲ್ಲಿ ಪೊಲೀಸರಿಂದ ಗನ್ ಕಿತ್ತುಕೊಂಡು ಹೋಗುತ್ತಿದ್ದರೆ ಈಗ ನಗರದಲ್ಲೇ ರೌಡಿಗಳು ಪೊಲೀಸರ ಗನ್ ಕಿತ್ತುಕೊಂಡು ಹೋಗುವಂತಾಗಿದೆ. ಇದರಿಂದಾಗಿ ಬೆಂಗಳೂರಿನ ಜನ ಪೊಲೀಸರ ರಕ್ಷಣೆಯಲ್ಲಿದ್ದಾರೋ? ಗೂಂಡಾಗಳೇ ಬೆಂಗಳೂರಿನ ಆಡಳಿತ ನಡೆಸುತ್ತಿದ್ದಾರೋ ಎಂಬುದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮನೆಯೊಂದು ಮೂರು ಬಾಗಿಲು: ಹಿಂದೆ ಪೊಲೀಸ್ ಇಲಾಖೆಯಲ್ಲಿ ಹೀಗಿರಲಿಲ್ಲ. ಕೆಂಪಯ್ಯ ಅವರು ಗೃಹ ಸಚಿವರ ಸಲಹೆಗಾರರಾಗಿ ಬಂದ ಮೇಲೆ ಈ ರೀತಿ ಆಗುತ್ತಿದೆ. ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಗೃಹ ಸಚಿವರ ಸಲಹೆಗಾರರ ಕೈಯ್ಯಲ್ಲಿ ಸಿಲುಕಿ ಪೊಲೀಸ್ ಇಲಾಖೆ ಎಂಬುದು ಮನೆಯೊಂದು ಮೂರು ಬಾಗಿಲಾಗಿದ್ದು, ಯಾವುದೇ ಬಾಗಿಲಲ್ಲಿ ಬೇಕಾದರೂ ಕಳ್ಳ ಓಡಿಹೋಗಬಹುದು ಎನ್ನುವಂತಾಗಿದೆ.
ತಮ್ಮ ಮಾತು ಕೇಳದ ಪೊಲೀಸ್ ಅಧಿಕಾರಿಗಳನ್ನು ಮೂರೇ ತಿಂಗಳಲ್ಲಿ ವರ್ಗಾವಣೆ ಮಾಡುತ್ತಾರೆ. ಇದರಿಂದಾಗಿ ಪೊಲೀಸರ ನೈತಿಕ ಸ್ಥೈರ್ಯ ಕುಸಿದು ಅವರು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಬೆಂಗಳೂರು ಕ್ರೈಂ ಸಿಟಿಯಾಗಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಅಧಿಕಾರಿಗಳು ಸಾಕಷ್ಟಿದ್ದಾರೆ. ಆದರೆ, ಅವರಿಗೆ ಕಾನೂನು ಸುವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಲು ಬಿಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರ ಸಲಹೆಗಾರರು ಸೇರಿ ರಾಜಕೀಯ ಕೆಲಸಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದವರನ್ನು ಬಗ್ಗುಬಡಿಯಲು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸುಳಿವೇನಾಯಿತು: ಡಾ.ಎಂ.ಎಂ.ಕಲಬುರ್ಗಿ ಹತ್ಯೆಯಾಗಿ ವರ್ಷಗಳು ಕಳೆದವು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ತಿಂಗಳುಗಳು ಕಳೆದವು. ಗೌರಿ ಲಂಕೇಶ್ ಹತ್ಯೆಯಾದ ಮಾರನೇ ದಿನವೇ ಗೃಹ ಸಚಿವರು ಪತ್ರಿಕಾಗೋಷ್ಠಿ ಕರೆದು ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರ ಬಂಧಿಸಲಾಗುವುದು ಎಂದು ಹೇಳಿದ್ದರು.
ನಂತರ ಅನೇಕ ಬಾರಿ ಇದೇ ಮಾತನ್ನು ಪುನರಾವರ್ತಿಸಿದ್ದರು. ಗೃಹ ಸಚಿವರಿಗೆ ಸಿಕ್ಕಿರುವ ಸುಳಿವೇನು? ಆರೋಪಿಗಳನ್ನು ಯಾವಾಗ ಬಂದಿಸುತ್ತೀರಿ ಎಂಬುದನ್ನು ಇನ್ನಾದರೂ ಅವರು ಬಹಿರಂಗಪಡಿಸಲಿ ಎಂದು ಶಾಸಕ ಅಶೋಕ್ ಒತ್ತಾಯಿಸಿದರು.
ಎಸಿಪಿ ಮನೆಯಲ್ಲಿ ಅವರ ಪತ್ನಿಯ ಸರ ಅಪಹರಣವಾಗುತ್ತಿದೆ. ಸಂಕ್ರಾಂತಿಯಂದು ಒಂದೇ ದಿನ ಐದು ಕಡೆ ಸರಗಳ್ಳತನ ನಡೆದಿದೆ. ಇದರಿಂದ ಹೆಣ್ಣುಮಕ್ಕಳು, ಮಹಿಳೆಯರು ಬೆಳಗ್ಗೆ ರಂಗೋಲಿ ಹಾಕಲು ಹೊರಗೆ ಬರಲು ಹೆದರುವಂತಾಗಿದೆ. ಆದ್ದರಿಂದ ಇನ್ನುಮುಂದೆ ಹೆಣ್ಣುಮಕ್ಕಳು ಬೆಳಗ್ಗೆ ರಂಗೋಲಿ ಹಾಕಲು ಅಥವಾ ಹೊಸ್ತಿಲು ಪೂಜೆ ಮಾಡಲು ಮನೆಯಿಂದ ಹೊರಗೆ ಬರುವ ಮುನ್ನ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್‌ರೂಂಗೆ ಕರೆ ಮಾಡಿ ಮನೆಯಿಂದ ಹೊರಬರುತ್ತಿದ್ದೇನೆ ಎಂದು ಹೇಳಿ. ಇಲ್ಲದಿದ್ದರೆ ಕಷ್ಟ.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.