ಹಣಕ್ಕಾಗಿ ಉಸಿರುಗಟ್ಟಿಸಿ ಅವಿವಾಹಿತ ಮಹಿಳೆಯ ಹತ್ಯೆ: ಪರಿಚಯಸ್ಥರಿಂದಲೇ ಕೃತ್ಯ
Team Udayavani, Apr 13, 2022, 2:41 PM IST
ಬೆಂಗಳೂರು: ಅವಿವಾಹಿತ ಮಹಿಳೆಯನ್ನು ಮೂವರು ಪರಿಚಯಸ್ಥರೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಲ್ಲೇಶ್ವರಂ ನಿವಾಸಿ ಸುನೀತಾ ರಾಮಪ್ರಸಾದ್ (55) ಕೊಲೆ ಯಾದ ಮಹಿಳೆ. ಈ ಸಂಬಂಧ ಗೋವಿಂದಪುರ ನಿವಾಸಿಗಳಾದ ಇಮ್ರಾನ್ (32) ಮತ್ತು ವೆಂಕಟೇಶ್ (30) ಎಂಬುವವರನ್ನು ಬಂಧಿಸಲಾಗಿದೆ. ಮತ್ತೂಬ್ಬ ಪ್ರಮುಖ ಆರೋಪಿ ಕಿರಣ್ (25) ಎಂಬಾತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಕಿರಣ್ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದಾನೆ. ಈತನ ಪತ್ನಿ ಶಿಕ್ಷಕಿಯಾಗಿದ್ದು, ವರ್ತೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಒಂದನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದಾರೆ. ಇಮ್ರಾನ್ ಆಟೋ ಚಾಲಕನಾಗಿದ್ದು, ವೆಂಕಟೇಶ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಈ ಹಿಂದೆ ಕಿರಣ್ ಕೂಡ ಗೋವಿಂದಪುರದಲ್ಲಿ ವಾಸವಾಗಿದ್ದರಿಂದ ಮೂವರು ಪರಿಚಯಸ್ಥರಾಗಿದ್ದಾರೆ. ಸುನೀತಾ ರಾಮ್‌ಪ್ರಸಾದ್ ಅವಿವಾಹಿತರಾಗಿದ್ದು, ಅವರ ಸಹೋದರರು ವಿದೇಶದಲ್ಲಿದ್ದು, ತಂದೆ ಮೈಸೂರಿನಲ್ಲಿದ್ದಾರೆ.
ಹೀಗಾಗಿ ಮಲ್ಲೇಶ್ವರಂನಲ್ಲಿ ಸಂಬಂಧಿಯೊಬ್ಬರ ಜತೆ ವಾಸವಾಗಿದ್ದರು. ಸಣ್ಣ-ಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಈ ಮಧ್ಯೆ ಕಿರಣ್ ಪರಿಚಯವಾಗಿದೆ. ಅಲ್ಲದೆ, ಸುನೀತಾಗೆ ನಡೆಯಲು ಕಷ್ಟವಾಗುತ್ತಿದ್ದರಿಂದ ಎಲ್ಲಿಗಾದರೂ ಹೋಗಬೇಕಾದರೆ ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಸಹಾಯ ಪಡೆದುಕೊಳ್ಳುತ್ತಿದ್ದರು. ಸುನೀತಾ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರಿಂದ ಹೆಚ್ಚಿನ ಹಣ ಇರಬಹುದೆಂದು ಆರೋಪಿಗಳು ತಿಳಿದುಕೊಂಡು ಕೊಲೆಗೈದಿದ್ದಾರೆ ಎಂಬ ಅನುಮಾನವಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಂಚು ರೂಪಿಸಿ ಕರೆದೊಯ್ದು ಕೊಲೆ : ಸುನೀತಾ ಬಳಿ ಹೆಚ್ಚು ಹಣವಿರಬಹುದು ಎಂದು ಭಾವಿಸಿದ್ದ ಆರೋಪಿಗಳು ಮೊದಲೇ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕಿರಣ್, ತಾನೂ ವಾಸವಾಗಿರುವ ಅಪಾರ್ಟ್‌ಮೆಂಟ್ ಮಾಲೀಕರಿಗೆ ನಾಲ್ಕನೇ ಮಹಡಿ ಯಲ್ಲಿ ಖಾಲಿ ಇರುವ ಮನೆಗೆ ತಮ್ಮ ಪರಿಚಯಸ್ಥರೊಬ್ಬರು ಬಾಡಿಗೆಗೆ ಬರುತ್ತಾರೆ ಎಂದು ನಾಲ್ಕು ದಿನಗಳ ಹಿಂದೆಯೇ ಕೀ ಪಡೆದುಕೊಂಡಿದ್ದ. ಏ.1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನೀತಾರನ್ನು ಮೂವರು ಆರೋಪಿಗಳು ನಾಲ್ಕನೇ ಮಹಡಿಯ ಮನೆಗೆ ಕರೆದೊಯ್ದಿದ್ದಾರೆ. ತಡರಾತ್ರಿ 1.30ರ ಸುಮಾರಿಗೆ ಮನೆಯಿಂದ ಮೂವರು ಹೊರಗಡೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಲ್ವರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಆಗಿರುವ ಸಾಧ್ಯತೆಯಿದೆ. ಅದು ವಿಕೋಪಕ್ಕೆ ಹೋದಾಗ ಮಹಿಳೆಯ ಬಾಯಿ ಮತ್ತು ಮೂಗಿಗೆ ಬಟ್ಟೆ ತೂರುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ.
ಇದನ್ನೂ ಓದಿ:ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಕೆ.ಎಸ್.ಈಶ್ವರಪ್ಪ
ಬಳಿಕ ಮೂವರು ನಾಪತ್ತೆಯಾಗಿದ್ದರು. ಏ.5ರಂದು ಅಕ್ಕ-ಪಕ್ಕದ ನಿವಾಸಿಗಳಿಗೆ ಕೊಳೆತ ವಾಸನೆ ಬರುತ್ತಿದ್ದು, ಅಪಾರ್ಟ್‌ಮೆಂಟ್ ಮಾಲೀಕರಿಗೆ ದೂರು ನೀಡಿದ್ದರು. ಮನೆ ಕೀ ಕಿರಣ್ ಬಳಿಯಿದ್ದರಿಂದ ಆತನ ಮನೆಗೆ ಬಂದಾಗ ಆರೋಪಿ ಇರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವರ್ತೂರು ಠಾಣೆ ಪೊಲೀಸರು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ, ಮಧ್ಯದ ಕೋಣೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸುನೀತಾ ಶವಪತ್ತೆಯಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ಹಾಗೂ ಸ್ಥಳದಲ್ಲಿದ್ದ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಮೂಲಕ ಸುನೀತಾ ಎಂಬುದು ಖಾತ್ರಿಯಾಗಿದ್ದು, ಅವರ ಸಂಬಂಧಿಕರನ್ನು ಕರೆಸಿಕೊಂಡು ದೃಢಿಕರಿಸಿಕೊಳ್ಳಲಾಗಿದೆ.
ಬಳಿಕ ಪ್ರಕರಣ ದಾಖಲಿಸಿಕೊಂಡು ಸುನೀತಾರ ಮೊಬೈಲ್ ನೆಟ್‌ವರ್ಕ್ ಮತ್ತು ಮೊಬೈಲ್ ಸಿಡಿಆರ್ ಹಾಗೂ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾ ಆಧರಿಸಿ ವೆಂಕಟೇಶ್ ಮತ್ತು ಇಮ್ರಾನ್ ಬಂಧಿಸಲಾಗಿದೆ. ಕಿರಣ್ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಣೆಯಾದ ಬಗ್ಗೆ ಪ್ರಕರಣ ದಾಖಲು : ಮಾ.31ರಂದು ಸಂಜೆ ವ್ಯವಹಾರ ಸಂಬಂಧ ಮೀಟಿಂಗ್ ಇದೆ ಎಂದು ಮನೆಯಿಂದ ಹೋದ ಸುನೀತಾ ಏ.1ರ ರಾತ್ರಿ 10 ಗಂಟೆಯಾದರು ಮನೆಗೆ ಬಂದಿರಲಿಲ್ಲ. ಹೀಗಾಗಿ ಇಡೀ ಕುಟುಂಬ ಸಂಬಂಧಿಕರು, ಸ್ನೇಹಿತರ ಮನೆಗೆ ಸೇರಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸಿಕ್ಕಿಲ್ಲ. ಈ ಸಂಬಂಧ ಏ.4ರಂದು ಅವರ ಚಿಕ್ಕಪ್ಪ ಬಿ.ಎನ್.ಬಾಲಾಜಿ ಎಂಬವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.