ವಾಹನಗಳಿಗೆ ಕ್ರಾಸಿಂಗ್ ಬ್ರೇಕ್!
Team Udayavani, Nov 2, 2019, 9:00 AM IST
ಬೆಂಗಳೂರು: ಬಾಣಸವಾಡಿ-ಹೆಬ್ಟಾಳ ನಡುವೆ ರೈಲ್ವೆ ಮಾರ್ಗವೊಂದು ಹಾದುಹೋಗಿದೆ. ಈ ಮಾರ್ಗ ದಲ್ಲೇ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ವೀರಣ್ಣನಪಾಳ್ಯ ಬಳಿ ಲೆವೆಲ್ ಕ್ರಾಸಿಂಗ್ ಇದೆ. ಇಲ್ಲಿ ಪ್ರತಿ ಗಂಟೆಗೆ ಸರಾಸರಿ 18ರಿಂದ 20 ಸಾವಿರ ವಾಹನ ಗಳು ಸಂಚರಿಸುತ್ತವೆ. ಪೀಕ್ ಅವರ್‌ನಲ್ಲಿ ದಟ್ಟಣೆ ದುಪ್ಪಟ್ಟು ಆಗುತ್ತದೆ. ಒಮ್ಮೆ ಗೇಟ್ ಹಾಕಿದರೆ, ರೈಲಿನ ಲ್ಲಿರುವ ಪ್ರಯಾಣಿಕರಿಗಿಂತ ಹೆಚ್ಚು ವಾಹನ ಸವಾರರು ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ!
-ಇದು ಒಂದು ಸ್ಯಾಂಪಲ್ ಅಷ್ಟೇ. ಇಂತಹ 30ಕ್ಕೂ ಹೆಚ್ಚು ಕ್ರಾಸಿಂಗ್‌ಗಳು ನಗರದಲ್ಲಿವೆ. ಈ ಪೈಕಿ 20 ಲೆವೆಲ್ ಕ್ರಾಸಿಂಗ್‌ಗಳಲ್ಲಿ ದಿನಕ್ಕೆ ಲಕ್ಷಕ್ಕಿಂತ ಹೆಚ್ಚು ವಾಹನಗಳು ಸಂಚರಿಸುತ್ತವೆ. ರೈಲ್ವೆಗೆ ದಾರಿ ಮಾಡಿ ಕೊಡಲು ಅವರೆಲ್ಲಾ ನಿತ್ಯ ಹೀಗೆ ಬಿಸಿಲು ಅಥವಾ ಮಳೆಯಲ್ಲಿ ಹಿಂಸೆ ಅನುಭವಿಸುವುದು ಸಾಮಾನ್ಯವಾಗಿದೆ. ಆದ್ದರಿಂದ ಈ ಸವಾರರಿಗೆ ನಗರದ ಸಂಚಾರ ದಟ್ಟಣೆಗಿಂತ ಲೆವೆಲ್ ಕ್ರಾಸಿಂಗ್‌ಗಳು ನಿದ್ದೆಗೆಡಿಸಿವೆ. ನಗರದ ಎತ್ತರಿಸಿದ ಸೇತುವೆಗಳು, ಅಂಡರ್‌ಪಾಸ್ ಗಳು, ಐಟಿ-ಬಿಟಿ ಕಾರಿಡಾರ್‌ಗಳು, ಅಪಾರ್ಟ್ ಮೆಂಟ್‌ಗಳು ಹೆಚ್ಚಿರುವ ರಸ್ತೆಗಳು ಮಾತ್ರವಲ್ಲ; ರೈಲ್ವೆ ಕ್ರಾಸಿಂಗ್‌ಗಳು ಕೂಡ ವಾಹನಗಳ ಓಟಕ್ಕೆ ಬ್ರೇಕ್ ಹಾಕುತ್ತಿವೆ. ಇದು ಸಂಚಾರದಟ್ಟಣೆಗೆ ಕೊಡುಗೆ ನೀಡುತ್ತಿದ್ದು, ನಿತ್ಯ ಸವಾರರಿಗೆ ತಲೆನೋವಾಗಿ ಪರಿಣಮಿಸಿವೆ. ಇದರಿಂದ ಪ್ರಯಾಣಿಕರ ಸಮಯ ವ್ಯಯದ ಜತೆಗೆ ಬಿಎಂಟಿಸಿ ಬಸ್‌ಗಳ ಟ್ರಿಪ್‌ಗ್ಳ ಮೇಲೂ ಪರೋಕ್ಷ ವಾಗಿ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿಕ್ರಾಸಿಂಗ್‌ಗಳ ತೆರವು ಕಾರ್ಯ ಆದ್ಯತೆ ಮೇರೆಗೆ ಆಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಕನಿಷ್ಠ ಲಕ್ಷ; ಗರಿಷ್ಠ 4 ಲಕ್ಷ ವಾಹನಗಳು!: ಸ್ವತಃ ನೈರುತ್ಯ ರೈಲ್ವೆ ನಡೆಸಿದ ಸಮೀಕ್ಷೆ ಪ್ರಕಾರ 20ಕ್ಕೂ ಕನಿಷ್ಠ 1 ಲಕ್ಷದಿಂದ ಗರಿಷ್ಠ 4 ಲಕ್ಷ ವಾಹನಗಳು ಸಂಚರಿಸುವ ಲೆವೆಲ್ ಕ್ರಾಸಿಂಗ್‌ಗಳು 20 ಇವೆ. ಅದರಲ್ಲಿ ಬಾಣಸ ವಾಡಿ-ಹೆಬ್ಟಾಳ, ಯಶವಂತಪುರ-ಹೆಬ್ಟಾಳ, ನಾಯಂಡಹಳ್ಳಿ-ಕೆಂಗೇರಿ, ಚಿಕ್ಕಬಾಣಾವರ- ಗೊಲ್ಲಹಳ್ಳಿ, ಕೆಂಗೇರಿ-ಹೆಜ್ಜಾಲ ಪ್ರಮುಖವಾದವು. ದಿನದಲ್ಲಿ ಲಕ್ಷಕ್ಕೂ ಹೆಚ್ಚು ಟಿವಿಯು ವಾಹನಗಳ ಸಂಚಾರ ಇರುವ ಲೆವೆಲ್ ಕ್ರಾಸಿಂಗ್‌ಗಳನ್ನು ಆದ್ಯತೆ ಮೇರೆಗೆ ತೆರವುಗೊಳಿಸಬೇಕು.
ಅಲ್ಲಿ ರೈಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆಗಳನ್ನು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರವು 50:50 ಅನುದಾನದಲ್ಲಿ ನಿರ್ಮಾಣ ಕಾರ್ಯ ಕೈಗೆತ್ತಿಕೊ ಳ್ಳಬೇಕು. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ಉಪನಗರ ರೈಲು ಹೋರಾಟಗಾರ ಸಂಜೀವ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸುತ್ತಾರೆ. ಲೆವೆಲ್ ಕ್ರಾಸಿಂಗ್ ಇಲ್ಲದೆ, ದಿನದ 24 ಗಂಟೆಯೂ ಸಂಚಾರಕ್ಕೆ ಮುಕ್ತವಾಗಿದ್ದರೆ ಅಂತಹ ಮಾರ್ಗಗಳಲ್ಲಿ ಹೆಚ್ಚು ರೈಲು ಕಾರ್ಯಾಚರಣೆ ಮಾಡಬಹುದು. ಆದರೆ, ವಾಹನ ದಟ್ಟಣೆ ಹೆಚ್ಚಾಗುವುದರಿಂದ ಕ್ರಾಸಿಂಗ್‌ಗಳಲ್ಲಿ ಪೀಕ್ ಅವರ್‌ನಲ್ಲಿ ವಾಹನಗಳ ಸಂಚಾರಕ್ಕೂ ಅವಕಾಶ ಮಾಡಿಕೊಡಬೇಕಾಗುತ್ತದೆ.
ಆಗ ಹೊಸ ರೈಲುಗಳನ್ನು ಪರಿಚಯಿಸಲು ಇಲಾಖೆ ಹಿಂದೇಟು ಹಾಕುತ್ತದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ. ಬಿಬಿಎಂಪಿ, ಬಿಡಿಎ, ನಗರ ಜಿಲ್ಲಾಧಿಕಾರಿ ಕಚೇರಿ ಯಿಂದ ಭೂಸ್ವಾಧೀನ, ಹಸ್ತಾಂತರ, ಹಣ ಠೇವಣಿ ಸೇರಿದಂತೆ ಹಲವು ಕಾರಣಗಳಿಂದಾಗಿ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಮತ್ತು ಕೆಳ ಸೇತುವೆ (ಆರ್ ಯುಬಿ) ನಿರ್ಮಾಣ ಕಾಮಗಾರಿ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ. ಈಚೆಗೆ ಮೂಲಸೌಕರ್ಯ ಇಲಾಖೆ ನಡೆಸಿದ ಸಭೆಯಲ್ಲಿ ಒಂಬತ್ತು ಆರ್‌ಒಬಿ/ ಆರ್ ಯುಬಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಅಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಬೇಸರ ವ್ಯಕ್ತವಾಗಿದ್ದಾಗಿ ಮೂಲಗಳು ತಿಳಿಸಿವೆ.
ಚರ್ಚಿತ ವಿಷಯಗಳು: ಬಾಣಸವಾಡಿ-ಹೆಬ್ಟಾಳ ನಡುವಿನ ಲೆವೆಲ್ ಕ್ರಾಸಿಂಗ್ ಬಳಿ ಮೆಟ್ರೋ ಮಾರ್ಗವೂ ಹಾದುಹೋಗಿದೆ. ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವು ಸವಾಲಾಗಿದೆ ಎಂದು ಬಿಬಿಎಂಪಿ ಹಾಗೂ ರೈಲ್ವೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಮೆಟ್ರೋ ಎತ್ತರಿಸಿದ ಮಾರ್ಗದಲ್ಲೇ ಆರ್‌ಒಬಿ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ಅಧಿಕಾರಿಗಳೊಂದಿಗೆ ಶೀಘ್ರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಒಟ್ಟಾರೆ 25 ಲೆವೆಲ್ ಕ್ರಾಸಿಂಗ್‌ಗಳ ತೆರವುಗೊಳಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 13 ತೆರವುಗೊಂಡಿವೆ. ಉಳಿದವು ವಿವಿಧ ಹಂತದಲ್ಲಿವೆ. ಇವುಗಳಲ್ಲಿ ನಗರದಲ್ಲಿನ ಲೆವೆಲ್ ಕ್ರಾಸಿಂಗ್‌ಗಳೂ ಸೇರಿವೆ. ಬರುವ ವರ್ಷ ಕೂಡ ಹೆಚ್ಚು-ಕಡಿಮೆ ಇದೇ ಗುರಿ ಹೊಂದಿದ್ದೇವೆ. –ಅಶೋಕ್ ಕುಮಾರ್ ವರ್ಮ, ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕರು
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.