ಪ್ರಕೃತಿ ಮಡಿಲಲ್ಲಿ ಪುಸ್ತಕ ಪ್ರೇಮಿಗಳ ಕ್ರಾಂತಿ
ವಾರಾಂತ್ಯದಲ್ಲಿ ಸಾವಿರಕ್ಕೂ ಅಧಿಕ ಪುಸ್ತಕ ಓದುವರು ಭೇಟಿ
Team Udayavani, Jun 18, 2023, 1:41 PM IST
ಬೆಂಗಳೂರು: ಪರಿಸರ ಪ್ರೇಮಿಗಳು, ವಾಯು ವಿಹಾರಿಗಳು, ಸೈಕ್ಲಿಂಗ್, ಸ್ಕೇಟಿಂಗ್, ಜಾಗಿಂಗ್ ಮಾಡುವವರು, ಪ್ರೇಮಿಗಳು, ಶ್ವಾನ ಪ್ರಿಯರು, ವ್ಯಾಯಾಮ ಅಥವಾ ಯೋಗ ಮಾಡಲು ಉದ್ಯಾನವನಗಳಿಗೆ ಬರುವುದು ಸರ್ವೇ ಸಾಮಾನ್ಯ. ಆದರೆ, ಈಗ ಕೆಲವು ಉದ್ಯಾನಗಳು ಪ್ರೇಮಿಗಳು ಮಾತ್ರವಲ್ಲ “ಪುಸ್ತಕ ಪ್ರೇಮಿ’ ಗಳನ್ನು ಆಕರ್ಷಿಸುತ್ತಿವೆ.
ಹೌದು! ಅದೇನಂತಿರಾ, ಉದ್ಯಾನವನದಲ್ಲಿ ಓದುವವರ ಸಂಖ್ಯೆ ಇಬ್ಬರಿಂದ ಪ್ರಾರಂಭವಾಗಿ ಇದೀಗ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಆಗಮಿಸುತ್ತಿದ್ದಾರೆ. ಉದ್ಯಾನ ನಗರಿಯ ಪ್ರಮುಖ ಉದ್ಯಾನಗಳಾದ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಯಲಹಂಕ, ಎಚ್‌ಎಸ್‌ಆರ್, ವೈಟ್ ಫೀಲ್ಡ್‌ನಲ್ಲಿ ಪ್ರತಿ ಶನಿವಾರ ಅಥವಾ ಭಾನುವಾರದಂದು ಉದ್ಯಾನವನಗಳಲ್ಲಿ ವಿಶೇಷ ವಾತಾವರಣ ರೂಪುಗೊಳ್ಳುತ್ತಿದೆ.
ಎಲ್ಲೆಂದರ ಪ್ರೇಮಿಗಳಿಂದ ತುಂಬಿರುತ್ತಿದ್ದ ಕಬ್ಬನ್ ಪಾರ್ಕ್‌ನಲ್ಲಿ ಪ್ರತಿ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಹಚ್ಚಹಸಿರಿನ ಹುಲ್ಲಿನ ಹಾಸಿಗೆ, ಮರಗಳ ಬುಡಗಳಲ್ಲಿ ಕೂತು ತನ್ನಿಚ್ಛೆಯ ಪುಸ್ತಕಗಳನ್ನು ಓದುತ್ತಿರುವ ನೂರಾರು ಪುಸ್ತಕ ಪ್ರಿಯರನ್ನು, ಗಿಡ-ಮರಗಳನ್ನು ಬಿಡಿಸಿ ಬಣ್ಣ ಹಚ್ಚುವವರನ್ನು ಕಾಣಬಹುದಾಗಿದೆ. ಇಲ್ಲಿ ಯಾವುದೇ ವಯೋಮಿತಿ ಇಲ್ಲದಿದ್ದರೂ, ಹೆಚ್ಚಿನ ಓದುಗರು ಯುವಜನತೆಯೇ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಕಬ್ಬನ್ ರೀಡ್ಸ್.
ಏನಿದು ಕಬ್ಬನ್ ರೀಡ್ಸ್: ಸ್ವ ಉದ್ಯೋಗಿ ಹರ್ಷ ಸ್ನೇಹಾಂಶು ಮತ್ತು ಶ್ರುತಿ ಷಾ ಎಂಬುವವರು ಪ್ರತಿ ವಾರಾಂತ್ಯದಲ್ಲಿ ಸೈಕ್ಲಿಂಗ್ ಮಾಡಲು ಇಂದಿರಾನಗರದಿಂದ ಕಬ್ಬನ್ ಪಾರ್ಕ್‌ಗೆ ಬರುತ್ತಿದ್ದ ಅವರಿಗೆ ಪುಸ್ತಕ ಓದುವ ಹವ್ಯಾಸವಿದ್ದು, ಇದು ವೀಕೆಂಡ್ ಪ್ಲ್ರಾನ್ ಆಗಿ ಮುಂದುವರಿಯಿತು. ಒಂದು ದಿನ ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಪುಸ್ತಕ ಓದುವುದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದರು. ಮುಂದಿನ ವಾರಕ್ಕೆ ಅವರ ಸ್ನೇಹಿತರಿಬ್ಬರು ಸೇರ್ಪಡೆಯಾದರು. ಇದು ಹೀಗೆ ಬೆಳೆಯುತ್ತಾ ಪ್ರತಿ ವಾರ ಮೂರ್ನಾಲ್ಕು ಜನ ಹೆಚ್ಚಾಗುತ್ತಿದ್ದರು. ಆಗ ಕಬ್ಬನ್ ರೀಡ್ಸ್ ಎಂಬ ಇನ್‌ಸ್ಟಾಗ್ರಾಂ ಪೇಜ್ ಹುಟ್ಟಿಕೊಂಡಿತು. ಇದು ಹವ್ಯಾಸಿ ಓದುಗರಿಗೆ ಒಂದು ಉತ್ತಮ ವೇದಿಕೆಯಾಗಿ ಬೆಳೆಯಿತು. ಈ ವರ್ಷದ ಜನವರಿ 7ರಂದು ಪ್ರಾರಂಭವಾದ ಕಬ್ಬನ್ ರೀಡ್ಸ್ ದಿನ ಕಳೆದಂತೆ ಹೆಚ್ಚು ಹೆಚ್ಚು ಓದುಗರನ್ನು ಸೆಳೆಯಲು ಪ್ರಾರಂಭಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕ ಓದುವವರು, ಚಿತ್ರ ಬಿಡಿಸುವುದು ಹೀಗೆ ನಾನಾ ರೀತಿಯ ರೀಲ್ಸ್ ಮತ್ತು ಸ್ಟೋರಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಜೂ.17ರಂದು ಕಬ್ಬನ್‌ಪಾರ್ಕ್‌ನಲ್ಲಿ ನಡೆದ 23ನೇ ಸೆಷನ್‌ನಲ್ಲಿ ಸುಮಾರು 600ಕ್ಕೂ ಹೆಚ್ಚು ಪುಸ್ತಕ ಓದುಗರು ಬಂದು ಪ್ರಕೃತಿ ಮಡಿಲಲ್ಲಿ ಮೌನವಾಗಿ ಏಕಾಗ್ರತೆಯಿಂದ ಓದುತ್ತಾ ಖುಷಿ ಪಟ್ಟರು. ಇಲ್ಲಿ ಕೇವಲ ಪುಸ್ತಕಗಳು ಮಾತ್ರವಲ್ಲ, ಲ್ಯಾಪ್ ಟಾಪ್, ಟ್ಯಾಬ್, ಇ-ಪುಸ್ತಕ, ಸ್ಮಾರ್ಟ್‌ಪೋನ್ ಮುಂತಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಓದಬಹುದಾಗಿದೆ. ಓದುವುದರ ಜತೆಗೆ ಇನ್ನೂ ಕೆಲವರು ನಿಸರ್ಗದ ಸೌಂದರ್ಯವನ್ನು ಬಣ್ಣಗಳ ಮೂಲಕ ಚಿತ್ರಿಸುತ್ತಾರೆ. ಕಥೆ-ಕವನಗಳನ್ನು ರಚಿಸುತ್ತಾರೆ. ಹೀಗೆ ನಿಶ್ಶಬ್ದತೆಯನ್ನು ಕಾಪಾಡುತ್ತಾ, ನಗರದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಉದ್ದೇಶ ಎಂದು ಹರ್ಷ ತಿಳಿಸುತ್ತಾರೆ.
ಇದೇ ರೀತಿ ಲಾಲ್‌ಬಾಗ್ ರೀಡ್ಸ್, ಎಚ್‌ಎಸ್ ಆರ್ ರೀಡ್ಸ್, ವೈಟ್ ಫೀಲ್ಡ್ ರೀಡ್ಸ್, ಯಲಹಂಕ ರೀಡ್ಸ್, ಭಾರತೀಯ ಸಿಟಿ ರೀಡ್ಸ್ ಎಂದು ನಗರದಲ್ಲಿ ಮಾತ್ರವಲ್ಲದೇ, ಪುಣೆ ರೀಡ್ಸ್, ಜುಹು ರೀಡ್ಸ್, ಕೊಲ್ಕತ್ತಾ ರೀಡ್ಸ್, ಹೈದರಾಬಾದ್ ರೀಡ್ಸ್ ಸೇರಿಂದತೆ ಮಲೇಷಿಯಾದಲ್ಲಿ ಕೌಲಾಲಂಪುರ್ ರೀಡ್ಸ್ ಹಾಗೂ ಲಂಡನ್‌ನಲ್ಲಿ ರೀಜೆಂಟ್ ರೀಡ್ಸ್ ಪ್ರಾರಂಭಿಸಿದ್ದು ಸಾವಿರಾರು ಸಂಖ್ಯೆಯ ಓದುಗರನ್ನು ಒಗ್ಗೂಡಿಸಿರುವುದು ಸಂತೋಷ ಕೊಟ್ಟಿದೆ ಎಂದು ಹೇಳುತ್ತಾ, ಮುಂದಿನ ವಾರದಿಂದ ಬೆಂಗಳೂರಿನ ಸ್ಯಾಂಕಿಟ್ಯಾಂಕಿ ಯಲ್ಲಿಯೂ ಓದುಗರನ್ನು ಒಗ್ಗೂಡಿಸಲಾಗುತ್ತದೆ ಎಂದು ತಿಳಿಸುತ್ತಾರೆ.
ಕಬ್ಬನ್ ರೀಡ್ಸ್‌ಗೆ ಪ್ರಧಾನಿ ಪ್ರಶಂಸೆ: ಪ್ರಶಾಂತತೆಯ ಓದುಗರ ಸಮುದಾಯ ಕಬ್ಬನ್ ರೀಡ್ಸ್ ಪ್ರತಿ ಶನಿವಾರ ಕಬ್ಬನ್ ಪಾರ್ಕ್ ನಲ್ಲಿ ಸೇರುತ್ತಾರೆ. ಪ್ರಕೃತಿಯ ಮಡಿಲಲ್ಲಿ ಸಾಹಿತ್ಯದ ಮಾಂತ್ರಿಕತೆಗೆ ಒಳಗಾಗುತ್ತಿದ್ದಾರೆ. ಇದೊಂದು ಜಾಗತಿಕ ಓದುವ ಅಲೆಯನ್ನು ಹುಟ್ಟುಹಾಕಿದೆ ಎಂದು ಸಂಸದ ಪಿ.ಸಿ.ಮೋಹನ್ ಟ್ವೀಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕಬ್ಬನ್ ರೀಡ್ಸ್‌ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ನನಗೆ ಚಿತ್ರ ಬಿಡಿಸುವುದು ಎಂದರೆ ತುಂಬಾ ಇಷ್ಟ. ಸಾಮಾಜಿಕ ಜಾಲತಾಣದಲ್ಲಿ ಕಬ್ಬನ್ ರೀಡ್ಸ್ ಪುಟದಲ್ಲಿ ಹಾಕಿದ್ದ ಪೋಸ್ಟ್‌ಗಳು ಇಷ್ಟವಾಗಿ, ಗೂಗಲ್ ಮ್ಯಾಪ್ ಸಹಾಯದಿಂದ ಮಾರತ್ತಹಳ್ಳಿಯಿಂದ ಕಬ್ಬನ್ ಪಾರ್ಕ್‌ಗೆ ಬಂದು, ಓದುವುದರ ಜತೆಗೆ ಇಲ್ಲಿನ ಸುಂದರವಾದ ಗಿಡ-ಮರಗಳ ಚಿತ್ರಗಳನ್ನು ಬಿಡಿಸುವುದು ನನಗೆ ಸಂತೋಷವಾಗಿದೆ. ●ಶುಭಂ (ಚಿತ್ರಕಲೆಗಾರ)
ಕಬ್ಬನ್ ರೀಡ್ಸ್ ಪ್ರಾರಂಭವಾದ ಕೆಲವು ವಾರಗಳಲ್ಲಿ ನಾನು ಪುಸ್ತಕಗಳನ್ನು ಓದಲು ಬಂದೆ. ನಂತರ ದಿನಗಳಲ್ಲಿ ನನ್ನ ಸ್ನೇಹಿತರು ಪುಸ್ತಕ ಓದಲು ನಾವು ಬರಬಹುದೇ ಎಂದು ಕೇಳಿದರು. ಈಗ 10 ಜನರ ನಮ್ಮ ತಂಡವೊಂದು ಪ್ರತಿ ಶನಿವಾರ ಕಬ್ಬನ್ ಪಾರ್ಕಿಗೆ ಬಂದು ವಿವಿಧ ಪುಸ್ತಕಗಳನ್ನು ಓದುತ್ತಿದ್ದೇವೆ. ● ಸೌಂದರ್ಯ (ವಿದ್ಯಾರ್ಥಿ)
ಇನ್‌ಸ್ಟಾಗ್ರಾಂನಲ್ಲಿ ಕಬ್ಬನ್ ರೀಡ್ಸ್ ಎಂಬ ಪೇಜ್ ನೋಡಿಕೊಂಡು ಜಯನಗರದಿಂದ ಸೈಕಲ್‌ನಲ್ಲಿ ಕಬ್ಬನ್‌ಪಾರ್ಕ್‌ಗೆ ಓದಲು ಬಂದಿದ್ದೇನೆ. ಹೀಗೆ ಪ್ರಕೃತಿ ಮಡಿಲಲ್ಲಿ ಓದಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತು. ತಣ್ಣನೆಯ ವಾತಾವರಣದಲ್ಲಿ ಹಸಿರಿನ ಮಧ್ಯೆ ಕೂತು ಓದುವುದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮುಂದಿನ ದಿನಗಳಲ್ಲಿ ಬಿಡುವಿನ ಪ್ರತಿ ಶನಿವಾರ ಬಂದು ಓದುತ್ತೇನೆ. ●ಅಮೃತ್ ರಾಯಲು(ಪುಸ್ತಕ ಪ್ರೇಮಿ)
ನಾವು ಯಾವುದೇ ಉದ್ಯಮ ಅಥವಾ ಲಾಭದಾಯಕದ ಉದ್ದೇಶದಿಂದ ಕಬ್ಬನ್ ರೀಡ್ಸ್ ಪ್ರಾರಂಭಿಸಿಲ್ಲ. ಓದುಗರ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಮುಖ್ಯ ಗುರಿ. ನಗರಾದ್ಯಂತ ಓದುಗರಿಂದ ಉತ್ತಮ ಪ್ರತಿಕ್ರಿಯೆ ಜತೆಗೆ ನಮ್ಮ ಈ ಕೆಲಸಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಪ್ರಶಂಸಿಸಿರುವುದು ನಮಗೆ ಮತ್ತಷ್ಟು ಉತ್ಸಾಹ ತಂದಿದೆ. ●ಹರ್ಷ ಸ್ನೇಹಾಂಶು (ಕಬ್ಬನ್ ರೀಡ್ಸ್ ಅಡ್ಮಿನ್)
-ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.