ಸಾಂಸ್ಕೃತಿಕ ನೀತಿ ವರದಿ ಒಕ್ಕೊರಲ ಆಗ್ರಹ
Team Udayavani, Jul 30, 2019, 3:05 AM IST
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ ಇತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ವಲಯದಲ್ಲೀಗ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ಹಿಂದೆ ಸಿದ್ದರಾಮಯ್ಯ ಸರ್ಕಾರಕ್ಕೆ ನೀಡಿದ್ದ “ಸಾಂಸ್ಕೃತಿಕ ನೀತಿ’ ವರದಿಯ ಸಂಪೂರ್ಣ ಜಾರಿಗಾಗಿ ದೊಡ್ಡ ಕೂಗು ಕೇಳಿಬಂದಿದೆ.
ಸಾಮಾನ್ಯವಾಗಿ ಸರ್ಕಾರಗಳು ಬದಲಾದೊಡನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ 13 ಅಕಾಡೆಮಿ ಮತ್ತು 3 ಪ್ರಾಧಿಕಾರದ ಅಧ್ಯಕ್ಷರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವಧಿ (3 ವರ್ಷ) ಪೂರ್ಣಗೊಳ್ಳುವ ಮೊದಲೇ ರಾಜೀನಾಮೆ ನೀಡುವ ಪ್ರಸಂಗ ಎದುರಾಗುತ್ತದೆ. ಹೀಗಾಗಿ ಸಾಂಸ್ಕೃತಿಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸಂಬಂಧ ಆಯಾ ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರು ಹಾಕಿಕೊಂಡಿರುವ ಯೋಜನೆಗಳು ಪೂರ್ಣಗೊಳ್ಳದೆ ಅವಸಾನದ ಹಾದಿ ಹಿಡಿಯುತ್ತವೆ.
ಈ ಎಲ್ಲಾ ಅಂಶಗಳನ್ನು ಮನಗಂಡು ಮುಂದೆ ಇಂತಹ ವಿಪ್ಲವಗಳು ಕಾಣಿಸಿಕೊಳ್ಳದಿರಲಿ ಎಂಬ ದೃಷ್ಟಿಯಿಂದ ಸರ್ಕಾರವೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ “ಸಾಂಸ್ಕೃತಿಕ ನೀತಿ ‘ ಶಿಫಾರಸು ಸಮಿತಿ ನೇಮಕ ಮಾಡಿತ್ತು. ಆ ಸಮಿತಿ 2014ರ ಜೂನ್ 25 ರಂದು ಈ ಸಂಬಂಧದ ವರದಿಯೊಂದನ್ನು ಸರ್ಕಾರಕ್ಕೆ ನೀಡಿತ್ತು.
ಕುಲಪತಿಗಳ ರೀತಿಯಲ್ಲಿ ಆಯ್ಕೆ ಇರಲಿ: ಈ ವರದಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಬಲೀಕರಣದ ಬಗ್ಗೆ ಹಲವು ರೀತಿಯ ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕುಲಪತಿಗಳನ್ನು ಆಯ್ಕೆ ರೀತಿಯಲ್ಲೇ ಒಂದು ಶೋಧನಾ ಸಮಿತಿ ರಚನೆ ಮಾಡಿ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರನ್ನು ಆಯ್ಕೆ ಮಾಡಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, “ನಾನು ಎರಡು ರೀತಿಯ ಸಲಹೆ ನೀಡಿದ್ದೆ. ಇದರಲ್ಲಿ ಕುಲಪತಿಗಳ ರೀತಿಯಲ್ಲಿ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಹಾಗೂ 3 ವರ್ಷಗಳ ಅಧಿಕಾರ ಅವಧಿ ಮುಗಿದ ನಂತರ ಹೊಸ ಅಧ್ಯಕ್ಷರು ನೇಮಕವಾಗುವ ವರೆಗೂ ಹಾಲಿ ಅಧ್ಯಕ್ಷರು ಮುಂದುವರಿಯುವ ಅವಕಾಶ ಇದರಲ್ಲಿ ಸೇರಿತ್ತು. ಆದರೆ, ಸರ್ಕಾರ ಇದರಲ್ಲಿ ಹೊಸ ಅಧ್ಯಕ್ಷರು ನೇಮಕವಾಗುವವರೆಗೂ ಹಾಲಿ ಅಧ್ಯಕ್ಷರು ಮುಂದುವರಿಯಬೇಕು ಎಂಬುವುದನ್ನು ಮಾತ್ರ ಅಂಗೀಕರಿಸಿದೆ ಎಂದರು.
ಪಕ್ಷಗಳು ಸಿದ್ಧಾಂತಗಳ ಕೇಂದ್ರಗಳಲ್ಲ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಅಕಾಡೆಮಿ ಮತ್ತು ಪ್ರಾಧಿಕಾರಗಳು ಸಾಂಸ್ಕೃತಿಕ ಸಂರಕ್ಷಣಾ ಕೇಂದ್ರಗಳೇ ಹೊರತು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತತ್ವ ಸಿದ್ಧಾಂತಗಳ ಪಾಲನೆ ಕೇಂದ್ರಗಳಲ್ಲ ಎಂಬ ಮಾತುಗಳು ಸಾಂಸ್ಕೃತಿಕ ವಲಯದಿಂದ ಕೇಳಿ ಬರುತ್ತಿವೆ.
ಕೋರ್ಟ್‌ನಲ್ಲಿ ತೀರ್ಮಾನ ಆಗುವುದಿಲ್ಲ: ನ್ಯಾಯಾಲಯದಲ್ಲಿ ಇದೆಲ್ಲ ತೀರ್ಮಾನವಾಗುವುದಿಲ್ಲ. ಸರ್ಕಾರದ ಆದೇಶ ಮೂರು ವರ್ಷ ಅಥವಾ ಮುಂದಿನ ಆದೇಶದವರೆಗೂ ಅಂತಿದೆ. ಸರ್ಕಾರ ಇಷ್ಟಪಟ್ಟರೆ 3 ವರ್ಷದಿಂದ ನಾಲ್ಕೈದು ವರ್ಷದ ವರೆಗೂ ಮುಂದುವರಿಯಬಹುದು. ಒಂದೇ ವರ್ಷಕ್ಕೆ ಬಿಟ್ಟು ಹೋಗು ಎಂದು ಹೇಳಬಹುದು. ಸರ್ಕಾರ ಆದೇಶವನ್ನು ಒಪ್ಪಿಯೇ ಅಧಿಕಾರ ವಹಿಸಿಕೊಂಡಿರುವ ಕಾರಣ ಏನು ಮಾಡಲಾಗದು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
ನಾಡಿನ ಸಾಂಸ್ಕೃತಿಕ ಲೋಕವನ್ನು ಯಾವ ರೀತಿಯಲ್ಲಿ ನೋಡಬೇಕು ಎಂಬುವುದೇ ನಮ್ಮನ್ನಾಳುವ ಸರ್ಕಾರಗಳಿಗೆ ಗೊತ್ತಿಲ್ಲ. ಆ ಹಿನ್ನೆಲೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರು ನೀಡಿರುವ ವರದಿ ಜಾರಿಯ ಅಗತ್ಯವಿದೆ.
-ಪ್ರೊ.ಎಂ.ಎ.ಹೆಗಡೆ, ನಾಟಕ ಅಕಾಡೆಮಿ ಅಧ್ಯಕ್ಷರು
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.