ಶಿಕ್ಷಣ ಖಾಸಗೀಕರಣದಿಂದ ಭಾಷೆಗೆ ಹಾನಿ
Team Udayavani, May 10, 2017, 11:33 AM IST
ಬೆಂಗಳೂರು: ಶಿಕ್ಷಣದ ಖಾಸಗೀಕರಣವೇ ಪ್ರಾದೇಶಿಕ ಭಾಷೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಕನ್ನಡ ಅಭಿವೃದ್ ಪ್ರಾಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಕರ್ನಾಟಕ ಕಾರ್ಮಿಕ ಲೋಕ ಆಯೋಜಿಸಿದ್ದ ಪರಿಷ್ಕೃತ ಸರೋಜಿನಿ ಮಹಿಷಿ ವರದಿ ವಿಶೇಷ ಉಪನ್ಯಾಸ, ರಾಷ್ಟ್ರೀಯ ಜಲ ಚೌಕಟ್ಟು ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರವನ್ನು ಇದೇ ರೀತಿ ಖಾಸಗೀಕರಣಗೊಳಿಸುತ್ತಾ ಹೋದರೆ, ಮುಂದೊಂದು ದಿನ ಆಡಳಿತ ಹಾಗೂ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆ ಮರೆಯಾಗಲಿದೆ. ಆದ್ದರಿಂದ ಸರ್ಕಾರಗಳು ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡುವ ಮೂಲಕ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು. ತಮಿಳುನಾಡು ಹಾಗೂ ಕರ್ನಾಟಕ ಎರಡೂ ಸರ್ಕಾರಗಳು ತ್ರಿಭಾಷಾ ನೀತಿ ಇಟ್ಟುಕೊಂಡಿವೆ.
ಆದರೆ, ತಮಿಳುನಾಡು ಸರ್ಕಾರ ತ್ರಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಯಾವುದೇ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಿಗೆ ಹೋದರೂ ಅಲ್ಲಿಯ ಫಲಕಗಳಲ್ಲಿ ಇಂಗ್ಲಿಷ್, ಹಿಂದಿ ಕಾಣಬಹುದು. ಆದರೆ, ಕನ್ನಡವನ್ನು ಕಾಣಲು ಸಾಧ್ಯವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಗಳು ಮೊದಲಿನಿಂದಲೂ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದು, ಇದರಿಂದ ರಾಜ್ಯದಲ್ಲಿ ಕನ್ನಡವೂ ಜೀವಂತವಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡಮಿ ಮಾಜಿ ಅಧ್ಯಕ್ಷ ಡಾ.ಗೊ.ರು. ಚನ್ನಬಸಪ್ಪ ಮಾತನಾಡಿ, ಸರೋಜಿನಿ ಮಹಿಷಿ ವರದಿಯನ್ನು ಮುಂದಿನ ವಿಧಾನಸಭಾ ಅವೇಶನದಲ್ಲಿ ಶಾಸನವನ್ನಾಗಿ ರೂಪಿಸದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕು ಎಂದು ಮೂವತ್ತು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೆ, ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ವರದಿಯನ್ನು ಜಾರಿಗೆ ತರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರೋಜಿನಿ ಮಹಿಷಿ ಪರಿಷ್ಕರಣಾ ವರದಿ ಅನುಷ್ಠಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ ಮಾತನಾಡಿದರು. ಇದೇ ವೇಳೆ ಡಾ.ಹಾಲೊಡ್ಡೇರಿ ಸುಧೀಂದ್ರ, ರಾಮನ್‌ಥಳಿ ಸುಧಾಕರನ್, ಮಮತಾ ಪೂಜಾರಿ, ಎ.ತಿಮ್ಮಯ್ಯ, ಎನ್.ಎಂ.ಕುಂಜಪ್ಪ, ಕೆ.ಜೆ.ಶಂಕರಪ್ಪ ಅವರಿಗೆ ಕಾರ್ಮಿಕ ಲೋಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ಕಾರ್ಮಿಕ ಲೋಕ ಪತ್ರಿಕೆ ಗೌರವ ಸಂಪಾದಕ ರಾ.ನಂ.ಚಂದ್ರಶೇಖರ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.