ಪಂಚಮಸಾಲಿಗೆ ಹೆಚ್ಚು ಟಿಕೆಟ್ ನೀಡಲು ಆಗ್ರಹ
Team Udayavani, Mar 9, 2018, 6:15 AM IST
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಪಡೆಯಲು ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುವ ಕುರಿತು ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿ ಉತ್ತರ ಕರ್ನಾಟಕದ ಪಂಚಮಸಾಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿನಯ್ ಕುಲಕರ್ಣಿ, ಲಿಂಗಾಯತ ಸಮುದಾಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ರಾಜಕೀಯವಾಗಿ ಪ್ರಭಾವಿಗಳಾಗಿರುವ ಪಂಚಮಸಾಲಿ ಸಮುದಾಯದ ಮುಖಂಡರಿಗೆ ಹೆಚ್ಚಿನ ಟಿಕೆಟ್ ಕೊಡಿಸಲು ಪ್ರತ್ಯೇಕ ಸಭೆ
ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
99 ಉಪ ಜಾತಿಗಳನ್ನು ಹೊಂದಿರುವ ಲಿಂಗಾಯತ ಸಮುದಾಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚಮಸಾಲಿ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ಆ ಕ್ಷೇತ್ರಗಳಲ್ಲಿ ಅದೇ ಸಮಾಜದವರಿಗೆ ಟಿಕೆಟ್ ಪಡೆದು ಗೆಲ್ಲಿಸಿಕೊಂಡು ಬರಲು ಪ್ರಯತ್ನಿಸಬೇಕೆಂಬ ಚರ್ಚೆ ಸಭೆಯಲ್ಲಿ ನಡೆದಿದೆ ಎನ್ನಲಾಗಿದೆ.
ಸಭೆಯ ನಂತರ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಲಿಂಗಾಯತ ಸಮುದಾಯಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಟಿಕೆಟ್ ನೀಡಬೇಕು. ಹಳೇ ಮೈಸೂರು ಭಾಗದಲ್ಲಿ 135 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಮೂವರು ಲಿಂಗಾಯತ ಶಾಸಕರಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿಯೂ 25 ಲಕ್ಷ ಲಿಂಗಾಯತ ಸಮುದಾಯದವರಿದ್ದು, ಯಾವ ಪಕ್ಷದಿಂದಲೂ ಲಿಂಗಾಯತರಿಗೆ ಟಿಕೆಟ್ ನೀಡುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ
ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತ್ಯೇಕ ಧರ್ಮ ಶಿಫಾರಸು ಮಾಡದಿದ್ದರೆ ಹೋರಾಟ: ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದಿದ್ದರೆ ಮತ್ತೆ ಹೋರಾಟ ಆರಂಭಿಸುವುದಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಈಗಾಗಲೇ ತಜ್ಞರ ಸಮಿತಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿದೆ. ಜೊತೆಗೆ ರಾಜ್ಯ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಬೇಕು ಹಾಗೂ
ಪ್ರತ್ಯೇಕ ಧರ್ಮಕ್ಕೆ ಕೇಂದ್ರ ಸರ್ಕಾರಕ್ಕೆ ಆದಷ್ಟು ಬೇಗ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ಬಸನಗೌಡ ಪಾಟೀಲ್‌ಗೆ ಕಾಂಗ್ರೆಸ್ ಆಹ್ವಾನ
ಪಂಚಮಸಾಲಿ ಸಮಾಜ ಮುಖಂಡರ ಸಭೆಗೆ ವಿಧಾನ ಪರಿಷತ್ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್ ಕೂಡ ಹಾಜರಾಗಿದ್ದರು. ಬಿಜೆಪಿ ಸೇರಿ ವಿಜಯಪುರದಿಂದ ಸ್ಪರ್ಧಿಸಲು ತಿರ್ಮಾನಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ಬೆಂಬಲ ಪಡೆಯಲು ಸಭೆಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ಯತ್ನಾಳ್‌ಗೆ ಕಾಂಗ್ರೆಸ್ ಸೇರಿಕೊಳ್ಳುವಂತೆ ಸಚಿವ ವಿನಯ್ ಕುಲಕರ್ಣಿ ಇದೇ ವೇಳೆ ಆಹ್ವಾನ ನೀಡಿದ್ದಾರೆ. ಆದರೆ, ಅವರ ಆಹ್ವಾನವನ್ನು ಬಸನಗೌಡ ಪಾಟೀಲ್ ನಯವಾಗಿ ತಳ್ಳಿ ಹಾಕಿದ್ದಾರೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.