ಡಿ.5ರಂದು ಉಪಮೇಯರ್ ಆಯ್ಕೆ
Team Udayavani, Nov 23, 2018, 11:30 AM IST
ಬೆಂಗಳೂರು: ಬಿಬಿಎಂಪಿ ಉಪಮೇಯರ್ ಹಾಗೂ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು, ಡಿ.5ರಂದು ಬೆಳಗ್ಗೆ 11.30ಕ್ಕೆ ಚುನಾವಣೆ ನಡೆಯಲಿದೆ. ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಹಾಗೂ ಕಳೆದ ಒಂದು ತಿಂಗಳಿಂದ ವಿಳಂಬವಾಗುತ್ತಿದ್ದ 12 ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣಾ ಸಭೆ ಡಿ.5ರಂದು ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಅದರಂತೆ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರಂತೆ ಒಟ್ಟು 132 ಸದಸ್ಯರ ಆಯ್ಕೆ ನಡೆಯಲಿದೆ. ಈಗಾಗಲೇ ಮೇಯರ್ ಸ್ಥಾನ ಮೈತ್ರಿ ಪಾಲಾಗಿರುವುದರಿಂದ ಸ್ಥಾಯಿ ಸಮಿತಿ ಚುನಾವಣೆ ವೇಳೆ ಸ್ಪರ್ಧೆ ಏರ್ಪಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಒಂದು ಸ್ಥಾಯಿ ಸಮಿತಿಯ 11 ಸದಸ್ಯರ ಪೈಕಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ 6 ಸದಸ್ಯರು ಹಾಗೂ ಬಿಜೆಪಿಯ 5 ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಚುನಾವಣೆ ಮುಗಿದ ಬಳಿಕ ಮೇಯರ್ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಸಮಿತಿಗೆ ಆಯ್ಕೆಯಾಗಿರುವ ಸದಸ್ಯರೇ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
ಮತದಾರರ ಸಂಖ್ಯೆ ಹೆಚ್ಚಳ: ಬಿಬಿಎಂಪಿ ವತಿಯಿಂದ ಪ್ರಾದೇಶಿಕ ಆಯುಕ್ತರಿಗೆ 260 ಮತದಾರರ ಪಟ್ಟಿಯನ್ನು ಸಲ್ಲಿಸಿದ್ದು, ಮ್ಯಾಜಿಕ್ ಸಂಖ್ಯೆ 131 ಆಗಿದೆ. ಕಳೆದ ಸೆಪ್ಟೆಂಬರ್ ತಿಂಗಳ ಮೇಯರ್ ಚುನಾವಣೆ ವೇಳೆ ಒಟ್ಟು ಮತದಾರರ ಸಂಖ್ಯೆ 259 ಆಗಿದ್ದರೆ, ಮ್ಯಾಜಿಕ್ ಸಂಖ್ಯೆ 130 ಆಗಿತ್ತು.
ಆದರೆ, ಕೇಂದ್ರ ಸಚಿವ ಅನಂತಕುಮಾರ್, ಉಪಮೇಯರ್ ರಮೀಳಾ ಉಮಾಶಂಕರ್ ನಿಧನರಾಗಿದ್ದು, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಬಳ್ಳಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರೊಂದಿಗೆ ವಿಧಾನಪರಿಷತ್‌ಗೆ ಹೊಸದಾಗಿ ಆಯ್ಕೆಯಾದ ಯು.ಬಿ.ವೆಂಕಟೇಶ್, ವೇಣುಗೋಪಾಲ್, ರಮೇಶ್‌ಗೌಡ ಹಾಗೂ ನಸೀರ್ ಅಹಮದ್ ಅವರ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ.
ಕಣದಿಂದ ಹಿಂದೆ ಸರಿಯುವುದೇ ಬಿಜೆಪಿ?: ಸೆಪ್ಟಂಬರ್ ತಿಂಗಳಲ್ಲಿ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ವೇಳೆ ಆಪರೇಷನ್ ಕಮಲ ಮಾಡಲು ಹೋಗಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಆ ಹಿನ್ನೆಲೆಯಲ್ಲಿ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಅಗತ್ಯ ಮತಗಳು ಇಲ್ಲದಿರುವುದರಿಂದ ಮತ್ತೂಮ್ಮೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಕಾರಣ ಕಣದಿಂದ ದೂರ ಉಳಿಯಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಉಪಮೇಯರ್ ಸಹ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಸ್ಥಾಯಿ ಸಮಿತಿಗೆ ಹೆಚ್ಚಿದ ಪೈಪೋಟಿ: ಸ್ಥಾಯಿ ಸಮಿತಿ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿ ಸ್ಥಾಯಿ ಸಮಿತಿ ಪಡೆಯಲು ಪೈಪೋಟಿ ಶುರುವಾಗಿದೆ. ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಸೌಮ್ಯಾ ಶಿವಕುಮಾರ್, ಲಾವಣ್ಯಾ ಗಣೇಶ ರೆಡ್ಡಿ, ಲತಾಕುವರ್ ಸೇರಿದಂತೆ ಹಲವರು ಸ್ಥಾಯಿ ಸಮಿತಿ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದರೊಂದಿಗೆ ಹಗದೂರು ವಾರ್ಡ್‌ನ ಉದಯಕುಮಾರ್, ಲಕ್ಷ್ಮೀದೇವಿನಗರದ ವೇಲು ನಾಯ್ಕರ್, ಮಹಾಲಕ್ಷ್ಮೀ ಬಡಾವಣೆಯ ಕೇಶವಮೂರ್ತಿ ಸೇರಿ ಹಲವರು ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಉಳಿದಂತೆ ಜೆಡಿಎಸ್ ಸದಸ್ಯರು ಉಪಮೇಯರ್ ಸ್ಥಾನ ಸಿಗದಿದ್ದರೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನಾದರೂ ಕೊಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪಕ್ಷೇತರ 7 ಸದಸ್ಯರ ಪೈಕಿ ನಾಲ್ವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಗಲಿದ್ದು, ಪ್ರಮುಖವಾಗಿ ಲಕ್ಷ್ಮೀನಾರಾಯಣ್, ಮುಜಾಹಿದ್ ಪಾಷ, ಆನಂದ್, ಚಂದ್ರಪ್ಪ ರೆಡ್ಡಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತು ಕಾಂಗ್ರೆಸ್‌ನಲ್ಲಿ ಮಾತುಕತೆ ನಡೆದಿದೆ.
ತಲಾ 4 ಸ್ಥಾಯಿ ಸಮಿತಿಗಳು: 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ 4 ಸ್ಥಾಯಿ ಸಮಿತಿ ಹಂಚಿಕೊಳ್ಳಲಿದ್ದಾರೆ. ಇನ್ನು ಕಳೆದ ಬಾರಿ ಜೆಡಿಎಸ್‌ಗೆ ನೀಡಲಾಗಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಈ ಬಾರಿ ಕಾಂಗ್ರೆಸ್ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಉಪಮೇಯರ್‌ಗೆ ಲಾಬಿ ಶುರು: ರಮೀಳಾ ಉಮಾಶಂಕರ್ ಅವರ ನಿಧನದಿಂದಾಗಿ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ಲಾಬಿ ಶುರುವಾಗಿದೆ. ಜೆಡಿಎಸ್ ಸದಸ್ಯರಾದ ನೇತ್ರಾ ನಾರಾಯಣ್, ರಾಜಶೇಖರ್, ಭದ್ರೇಗೌಡ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.