ದೇಸಿ-ವಿದೇಶಿ ಸಂಸ್ಕೃತಿಯ ಅಬ್ಬರದ ಹಬ್ಬ
Team Udayavani, Aug 21, 2017, 11:28 AM IST
ಬೆಂಗಳೂರು: ಅದೊಂದು ವಿಶಿಷ್ಟ ಹಬ್ಬ. ಆ ಹಬ್ಬದಲ್ಲಿ ಒಂದೆಡೆ ಡೊಳ್ಳುಕುಣಿತ, ಯಕ್ಷಗಾನ, ಹೆಜ್ಜೆಮೇಳದಂತಹ ನಾಡಿನ ಸಂಸ್ಕೃತಿಯ ಅನಾವರಣ. ಮತ್ತೂಂದೆಡೆ ಕಿವಿಗಡಚಿಕ್ಕುವ ಪಾಶ್ಚಿಮಾತ್ಯ ಸಂಗೀತ, ಜಗ್ಲರ್‌ಗಳ ಕಲಾಪ್ರದರ್ಶನ, ಫಾಸ್ಟ್‌ಫುಡ್‌ನಂತಹ ವಿದೇಶಿ ಸಂಸ್ಕೃತಿಗೂ ಅದು ವೇದಿಕೆಯಾಗಿತ್ತು. ಇವುಗಳ ನಡುವೆ ಪರಿಸರ ಜಾಗೃತಿಯ ಪಾಠ-ಪ್ರವಚನ ಕೇಳಿಬರುತ್ತಿತ್ತು.
ಹೆಸರೇ ಸೂಚಿಸುವಂತೆ ಅದು “ನಮ್ಮ ಬೆಂಗಳೂರು ಹಬ್ಬ’. ಕೆರೆ ಸೇರಿದಂತೆ ಪರಿಸರದ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರವಾಸೋದ್ಯಮ ಇಲಾಖೆಯು ಫೇಸ್-1 ಈವೆಂಟ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈ ಹಬ್ಬಕ್ಕೆ ನಗರದ ನಾನಾ ಭಾಗಗಳಿಂದ ಜನಸಾಗರವೇ ಹರಿದುಬಂದಿತು. ಇದೆಲ್ಲದರಿಂದ ಅಕ್ಷರಶಃ ಜಾತ್ರೆ ಸ್ವರೂಪ ಪಡೆದುಕೊಂಡಿತ್ತು.
ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ ಮೊದಲ ಹಬ್ಬ ಇದಾಗಿದ್ದು, ಇಲ್ಲಿ ಪರಿಸರ ಜಾಗೃತಿ ಜತೆಗೆ ನಾಡಿನ ಸಂಸ್ಕೃತಿಗೆ ವೇದಿಕೆ ಕಲ್ಪಿಸಲಾಗಿತ್ತು. ಆ ಮೂಲಕ ನಗರದ ಜನರಿಗೆ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು. ಒಂದೊಂದು ಕಲಾ ಪ್ರದರ್ಶನಗಳಿಗೂ ಕೆರೆ ಅಂಗಳದಲ್ಲಿ ವೇದಿಕೆ ಕಲ್ಪಿಸಲಾಗಿತ್ತು.
ಕೆರೆಗೆ ಹೊಂದಿಕೊಂಡ ಕಲ್ಯಾಣಿ ದಂಡೆಯಲ್ಲಿ ಡೊಳ್ಳುಕುಣಿತ, ಮತ್ತೂಂದು ಮೂಲೆಯಲ್ಲಿ ಯಕ್ಷಗಾನ, ಪಕ್ಕದ ವೇದಿಕೆಯಲ್ಲಿ ಕರಾಟೆ ಪ್ರದರ್ಶನ, ವಿವಿಧ ತಂಡಗಳಿಂದ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತ ಪ್ರದರ್ಶನಗಳು ನಡೆಯುತ್ತಿದ್ದವು. ಹಬ್ಬಕ್ಕೆ ಆಗಮಿಸಿದ ಜನ, ಆಯಾ ವೇದಿಕೆಗಳ ಮುಂದೆ ಕೆಲಹೊತ್ತು ನಿಂತು ಸಂಭ್ರಮಿಸುತ್ತಿದ್ದುದು ಸಾಮಾನ್ಯವಾಗಿತ್ತು.
ದೇಶೀಯ ಕಲಾ ಪ್ರದರ್ಶನಕ್ಕೆ ಹೆಚ್ಚು ಬೇಡಿಕೆ ಇತ್ತು. ಯಕ್ಷಗಾನ, ಡೊಳ್ಳುಕುಣಿತವನ್ನು ಅರ್ಧಗಂಟೆಗೂ ಹೆಚ್ಚು ಹೊತ್ತು ನಿಂತು ಮಕ್ಕಳೊಂದಿಗೆ ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡುಬಂತು. ನಂತರ ಈ ಕಲಾತಂಡಗಳೊಂದಿಗೆ ಸೆಲ್ಫಿà ತೆಗೆದುಕೊಂಡು ಸಂಭ್ರಮಿಸುತ್ತಿದ್ದರು.
ಮತ್ತೂಂದು ಬದಿಯಲ್ಲಿ ಚಿತ್ರಕಲಾವಿದರಿಗೆ ಕಲಾಪ್ರದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ನಿಸರ್ಗ, ಪ್ರಾಣಿ-ಪಕ್ಷಿ, ಮಾಡರ್ನ್ ಆರ್ಟ್, ಫ್ಯಾಷನ್ ಡಿಸೈನಿಂಗ್ ಸೇರಿದಂತೆ ವಿವಿಧ ಪ್ರಕಾರದ ಕಲೆಗಳು ಅಲ್ಲಿ ಅನಾವರಣಗೊಂಡಿದ್ದವು. ನೂರಾರು ರೂಪಾಯಿ ಸುರಿದ ಜನ ವಿಶಿಷ್ಟ ಪೇಟಿಂಗ್‌ಗಳನ್ನು ಖರೀದಿಸಿದರು.
ಕೆರೆಯ ಇನ್ನೊಂದು ಭಾಗದಲ್ಲಿ ಬಿಬಿಎಂಪಿಯಿಂದ ಕಸ ಬೇರ್ಪಡಿಸಿ ವಿಲೇವಾರಿ ಮಾಡುವ ಬಗ್ಗೆ ಜಾಗೃತಿ, ಕಸದಿಂದ ರಸ ತೆಗೆದಯುವ ವಿಧಾನಗಳು, ರೂಬೆಲ್ಲಾ, ಕ್ಷಯರೋಗ, ಡೇಂ ಮತ್ತಿತರ ಕಾಯಿಲೆಗಳಿಗೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ಈ ಮಧ್ಯೆ ಸದ್ಗುರು ಜಗ್ಗಿವಾಸುದೇವ ಅನುಯಾಯಿಗಳಿಂದ “ರ್ಯಾಲಿ ಫಾರ್ ರಿವರ್’ ಅಭಿಯಾನ ಕೂಡ ನಡೆಯಿತು.
ರ್ಯಾಲಿಗೆ ಕೈಜೋಡಿಸುವಂತೆ ಜನರಿಗೆ ಮನವಿ ಮಾಡಲಾಯಿತು. ಇನ್ನು “ಕಿಡ್ಸ್ ಅಡ್ಡ’ದಲ್ಲಿ ಮಕ್ಕಳಿಗಾಗಿ ವಿವಿಧ ಕ್ರೀಡೆಗಳು ಅಲ್ಲಿದ್ದವು. ಆದರೆ, ಇವೆಲ್ಲವುಗಳಿಗಿಂತ ಹೆಚ್ಚಾಗಿ ಜನ, ಕೆರೆಗೆ ಹೊಂದಿಕೊಂಡ ರಸ್ತೆಯುದ್ದಕ್ಕೂ ತಲೆಯೆತ್ತಿದ ಮಳಿಗೆಗಳಿಗೆ ಮುಗಿಬಿದ್ದಿದ್ದರು. ಬಾಯಲ್ಲಿ ನೀರೂರಿಸುವ ಖಾದ್ಯ, ಫ್ಯಾಶನ್ ಬಟ್ಟೆಗಳು ಮತ್ತಿತರ ಹತ್ತಾರು ಆಕರ್ಷಕ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಇಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ವೇದಿಕೆ ಕಲ್ಪಿಸಲಾಗಿತ್ತು.
ಹಬ್ಬದ ಉತ್ಸಾಹಕ್ಕೆ ಮಳೆ ಅಡ್ಡಿ
ನಮ್ಮ ಬೆಂಗಳೂರು ಹಬ್ಬದ ಉತ್ಸಾಹಕ್ಕೆ ಮಳೆ ಕೆಲಹೊತ್ತು ತಣ್ಣೀರೆರಚಿತು. ಮಧ್ಯಾಹ್ನ ಶುರುವಾದ ಮಳೆ ಸುಮಾರು ಒಂದು ತಾಸು ಜಿಟಿಜಿಟಿಯಾಗಿ ಹನಿಯಿತು. ಇದರಿಂದ ಹಬ್ಬಕ್ಕೆ ಬರುವವರು ಹಿಂದೇಟು ಹಾಕಿದರು. ಇನ್ನು ಹಬ್ಬಕ್ಕೆ ಬಂದವರು ಮಳೆಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಿಂತಿರುಗಿದರು. ಹಾಗಾಗಿ, ನಿರೀಕ್ಷಿತ ಮಟ್ಟದಲ್ಲಿ ಜನ ಬರಲಿಲ್ಲ ಎಂದು ಆಯೋಜಕರು ತಿಳಿಸಿದರು. ಸಂಜೆ ನಡೆದ ಲೇಸರ್ ಶೋ ಆಕರ್ಷಕವಾಗಿತ್ತು. ಕೆರೆಯ ನೀರಿನಲ್ಲಿ ಲೇಸರ್‌ಗಳು ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸಿ, ಜನರ ಮೆಚ್ಚುಗೆಗೆ ಪಾತ್ರವಾದವು.
ನಗರದ ವಿವಿಧೆಡೆ ಬೆಂಗಳೂರು ಹಬ್ಬ
ಸ್ಯಾಂಕಿ ಕೆರೆ ಮಾದರಿಯಲ್ಲಿ ನಗರದ ವಿವಿಧೆಡೆ “ನಮ್ಮ ಬೆಂಗಳೂರು ಹಬ್ಬ’ಗಳನ್ನು ನಡೆಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ಸ್ವತಃ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಈ ವಿಷಯ ತಿಳಿಸಿದರು. ಭಾನುವಾರ ಸ್ಯಾಂಕಿ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಹಬ್ಬದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇದೊಂದು ಹಸಿರು ಹಬ್ಬ. ಕೆರೆ ಸೇರಿದಂತೆ ಹಸಿರು ಉಳಿಸುವುದರ ಜತೆಗೆ ನಾಡಿನ ಸಂಸ್ಕೃತಿಯನ್ನು ಪರಿಚಯಿಸಲು ವೇದಿಕೆಯೂ ಆಗಿದೆ. ಒಂದು ವೇಳೆ ಸ್ಥಳೀಯ ಸಮುದಾಯಗಳು, ಸಂಘ-ಸಂಸ್ಥೆಗಳು ಸಹಕಾರ ನೀಡುವುದಾದರೆ, ಸ್ಯಾಂಕಿ ಕೆರೆ ಮಾದರಿಯಲ್ಲಿ ರಾಚೇನಹಳ್ಳಿ ಕೆರೆ, ಕಬ್ಬನ್ ಉದ್ಯಾನ, ಸ್ವಾತಂತ್ರ್ಯ ಉದ್ಯಾನ, ಲಾಲ್‌ಬಾಗ್‌ಗಳಲ್ಲೂ “ನಮ್ಮ ಬೆಂಗಳೂರು ಹಬ್ಬ’ ಮಾಡುವ ಆಲೋಚನೆ ಇದೆ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎನ್.ಎ. ಹ್ಯಾರೀಸ್ ಮತ್ತಿತರರು ಭೇಟಿ ನೀಡಿದರು.
ನಗರದ ಜನರನ್ನು ಉತ್ಸವ ರೂಪದಲ್ಲಿ ಒಂದೆಡೆ ಸೇರಿಸುವುದು ಉತ್ತಮ ಪ್ರಯತ್ನ. ಆದರೆ ಇನ್ನಷ್ಟು ಪ್ರಚಾರ ಸಿಕ್ಕಿದ್ದರೆ ಹೆಚ್ಚು ಜನ ಸೇರುತ್ತಿದ್ದರು. ಇದೇ ರೀತಿ ಬೇರೆ ಬೇರೆ ಕಡೆಗಳಲ್ಲೂ “ಹಬ್ಬ’ ಆಯೋಜಿಸಲು ಅವಕಾಶ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವ ಅಗತ್ಯವಿದೆ.
-ಸಂತೋಷ್, ಬಿಟಿಎಂ ಲೇಔಟ್ ನಿವಾಸಿ
ನಮ್ಮ ನಾಡಿನ ಕಲೆ-ಸಂಸ್ಕೃತಿ ಇಲ್ಲಿ ಅನಾವರಣಗೊಂಡಿದೆ. ಮುಂದಿನ ಹಬ್ಬಗಳಲ್ಲಿ ಇನ್ನಷ್ಟು ಕಲಾಪ್ರಕಾರಗಳನ್ನು ಪರಿಚಯಿಸಬೇಕು. ಇಲ್ಲಿಗೆ ಭೇಟಿ ನೀಡುವುದೇ ಖುಷಿಯ ವಿಚಾರ. ಅದರಲ್ಲೂ ಹಬ್ಬದ ವಾತಾವರಣ ಸೃಷ್ಟಿಸಿರುವುದು ತುಂಬಾ ಖುಷಿ ಕೊಡುತ್ತಿದೆ.
-ರೋಹಿತ್, ಜಾಲಹಳ್ಳಿ ನಿವಾಸಿ
ನಾನು ನಗರದಲ್ಲಿ ಇಂತಹ ಹಬ್ಬದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಗೊಂದಲ-ಗೋಜಲು ಇಲ್ಲ. ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಕಲೆ-ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಸಂಗತಿ. ಆದರೆ, ಈ ಹಬ್ಬ ಎರಡು ದಿನ ನಡೆಯಬೇಕು.
-ಸಂಧ್ಯಾ, ವಿಜಯನಗರ ನಿವಾಸಿ
ವಾರದಲ್ಲಿ ಎರಡು-ಮೂರು ಬಾರಿ ಸ್ಯಾಂಕಿ ಕೆರೆಗೆ ಬರುತ್ತೇನೆ. ಆದರೆ, ಭಾನುವಾರದ ಭೇಟಿ ತುಂಬಾ ವಿಶಿಷ್ಟ. ಆಧುನಿಕ ಜಾತ್ರೆ ಅಥವಾ ಸಂತೆಯಂತೆ ಗೋಚರಿಸುತ್ತಿದೆ. ನಗರದ ಬೇರೆ ಬೇರೆ ಕಡೆಗಳಲ್ಲೂ ಈ ಹಬ್ಬ ನಡೆಯಬೇಕು. ವಾರಾಂತ್ಯದ ಎರಡು ದಿನಗಳು ನಡೆದರೆ ಉತ್ತಮ.
-ಸ್ವಾತಿ, ಮಲ್ಲೇಶ್ವರ ನಿವಾಸಿ
ಹಬ್ಬದಲ್ಲಿ ಭಾಗವಹಿಸಿದ್ದು ಇದೇ ಮೊದಲು. ಸಾಕಷ್ಟು ಪ್ರಕಾರದ ಮಳಿಗೆಗಳಲ್ಲಿನ ವಿವಿಧ ವಸ್ತುಗಳ ದರ ಕೂಡ ದುಬಾರಿಯಾಗಿಲ್ಲ. ಆದರೆ, ಜನರ ಭಾಗವಹಿಸುವಿಕೆ ಕಾರ್ಯಕ್ರಮಗಳೂ ನಡೆಯಬೇಕು. ಕೇವಲ ನೋಡಿ ಹೋಗುವಂತಾಗಬಾರದು. ಪುಸ್ತಕಗಳ ಅಂಗಡಿಗಳು ಇಲ್ಲ.
-ಪ್ರಿಯಾಂಕಾ ಮಲ್ಲೇಶ್, ಕೋರಮಂಗಲ ನಿವಾಸಿ
ಕೆರೆಗಳ ಸಂರಕ್ಷಣೆ ಸೇರಿದಂತೆ ಪರಿಸರ ರಕ್ಷಣೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳು ಈ ಹಬ್ಬದಲ್ಲಿವೆ. ಪರಿಸರ ಸ್ನೇಹಿ ಗಣೇಶನ ತಯಾರಿಕೆ, ತ್ಯಾಜ್ಯ ಮರುಬಳಕೆ ಪ್ರಾತ್ಯಕ್ಷಿಕೆ, ಕುಂಬಾರಿಕೆ ಬಗ್ಗೆ ತರಬೇತಿ, ಪರಿಸರ ಕುರಿತ ವಿಚಾರ ಸಂಕಿರಣಗಳೂ ಇವೆ. ಮುಂದಿನ ದಿನಗಳಲ್ಲಿ ರಾಚೇನಹಳ್ಳಿ ಕೆರೆಯಲ್ಲಿ ಈ ರೀತಿಯ ಹಬ್ಬ ಆಚರಿಸುವ ಚಿಂತನೆ ಇದೆ.
-ಡಾ.ಎನ್. ಮಂಜುಳಾ, ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.