ಗಾಂಜಾ ಮಾರಾಟಗಾರರ ಬಂಧನ
Team Udayavani, Aug 30, 2018, 12:35 PM IST
ಬೆಂಗಳೂರು: ಸೇಬು ಸರಬರಾಜು ಮಾಡುವ ಥರ್ಮಾಕೋಲ್ ಬಾಕ್ಸ್‌ಗಳಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಅವಲಹಳ್ಳಿ ನಿವಾಸಿ ಚಿನೆಡು ಆನ್‌ರಾ (27) ಹಾಗೂ ಕೇರಳ ಮೂಲದ ಕೋಡಿಗೆಹಳ್ಳಿ ನಿವಾಸಿ ನಿದೀಶ್ (29) ಬಂಧಿತರು. ಆರೋಪಿಗಳಿಂದ 12 ಕೆ.ಜಿ.ಗಾಂಜಾ ಮತ್ತು 1.8 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ವ್ಯವಹಾರಿಕ ವೀಸಾದಡಿ ಬೆಂಗಳೂರಿಗೆ ಬಂದಿರುವ ಚಿನೆಡು ಆನ್‌ರಾ ಅವಲಹಳ್ಳಿಯಲ್ಲಿ ವಾಸವಾಗಿದ್ದ. ಕೇರಳ ಮೂಲದ ನಿದೀಶ್ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ಎರಡು ವರ್ಷಗಳಿಂದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆಯೇ ಇಬ್ಬರಿಗೂ ಪರಿಚಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಕೆಲ ಸಿಬ್ಬಂದಿ ಗ್ರಾಹಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಈ ವೇಳೆ ಆಂಧ್ರ ಹಾಗೂ ಒಡಿಶಾದಿಂದ ಗಾಂಜಾ ತರುತ್ತಿದ್ದ ವ್ಯಕ್ತಿಗಳನ್ನು ನದೀಶ್ ಪರಿಚಯಿಸಿಕೊಂಡಿದ್ದ. ಜತೆಗೆ ಮಾದಕ ವ್ಯಸನಿಯಾಗಿದ್ದ ನಿದೀಶ್, ನೈಜೀರಿಯಾ ಪ್ರಜೆ ಚಿನೆಡು ಬಳಿ ಎಂಡಿಎಂಎ ಮಾದಕ ವಸ್ತು ಖರೀದಿಸುತ್ತಿದ್ದ.
ಬಳಿಕ ಇಬ್ಬರು ಅಧಿಕ ಹಣ ಸಂಪಾದಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು. ಅದರಂತೆ ಚಿನೆಡು ದುಬೈನಿಂದ ಎಂಡಿಎಂಎ ತರಿಸುತ್ತಿದ್ದು, ನದೀಶ್ ಆಂಧ್ರಪ್ರದೇಶದಿಂದ ಗಾಂಜಾ ತರಿಸುತ್ತಿದ್ದ. ನಂತರ ಇಬ್ಬರು ನಗರದ ಇತರೆ ಪೆಡ್ಲರ್‌ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಸೇಬಿನ ಬಾಕ್ಸ್‌ನಲ್ಲಿ ಗಾಂಜಾ: ಒಂದೂವರೆ ವರ್ಷದಿಂದ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿರುವ ಆರೋಪಿಗಳು ಕಾಡುಗೋಡಿ ಸುತ್ತಮುತ್ತಿನ ಪ್ರದೇಶಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು.
ಬಳಿಕ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ಸೇಬು ಸರಬರಾಜು ಮಾಡುವ ಥರ್ಮಕೋಲ್ ಬಾಕ್ಸ್‌ಗಳಲ್ಲಿ ಸೇಬುಗಳ ಟ್ರೈಗಳ ಮಧ್ಯೆ ಗಾಂಜಾ ಹಾಗೂ ಎಂಡಿಎಂಎ ಇಟ್ಟು ಪೂರೈಕೆಗೆ ಸಿದ್ಧತೆ ನಡೆಸಿದ್ದರು. ಇದರಿಂದ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ವಾಸನೆ ಕೂಡ ಬರುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಿ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.