ಮಹಾದೇವನಿಗೆ ಭಕ್ತಿ ಸಮರ್ಪಣೆ
Team Udayavani, Feb 14, 2018, 11:05 AM IST
ಬೆಂಗಳೂರು: ರುದ್ರಾಭಿಷೇಕ, ಬಿಲ್ವಾರ್ಚನೆ, ಹೂವಿನ ಅಲಂಕಾರ, ವಿಶೇಷ ಪೂಜೆ, ಉಪವಾಸ, ವ್ರತ ಮತ್ತು ಜಾಗರಣೆಯೊಂದಿಗೆ ಪರಶಿವನ ಆರಾಧನೆಯಲ್ಲಿ ನಗರದ ಜನತೆ ಭಕ್ತಿ ಆಚರಣೆಯಲ್ಲಿ ಮಿಂದೆದ್ದರು. ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ, ಆರತಿ ನಿರಂತವಾಗಿ ನಡೆದಿತ್ತು. ಜಾಗರಣೆ ಹಿನ್ನೆಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಹಮ್ಮಿಕೊಂಡಿದ್ದ ನಗೆಹಬ್ಬ, ಹಾಸ್ಯಲಾಸ್ಯ, ಹರಿಕಥೆ, ಭಜನೆ, ಸಂಕೀರ್ತನೆ, ನಾಟಕ, ನೃತ್ಯ ಪ್ರದರ್ಶನ ಹೀಗೆ ನಾನಾ ರೀತಿಯ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿಯಿಡೀ ನಡೆಯಿತು.
ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಜ್ರಾಲಂಕಾರ ಮತ್ತು ಮಹಾಭಿಷೇಕ ಮಾಡಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ನೂಕುನುಗ್ಗಲು ತಡೆಯಲು ಭಕ್ತರಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಹಳೇ ವಿಮಾನ ನಿಲ್ದಾಣ ರಸ್ತೆಯ ಕೆಂಪ್‌ಫೋರ್ಟ್ ಬಳಿಯ 65 ಅಡಿ ಶಿವನಿಗೆ ಶಿವರಾತ್ರಿ ಪೂಜೆ ಜೋರಾಗಿತ್ತು. ಭಕ್ತರಿಗೆ ಬೆಳಗ್ಗೆಯಿಂದಲೇ ದರ್ಶನ ವ್ಯವಸ್ಥೆ ಮಾಡಿಕೊಡಲಾಗಿತ್ತು. ಶಿವನ ವಿಗ್ರಹದ ಎದರು ನಿಂತು ಫೋಟೋ, ಸೆಲ್ಫಿ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಬ್ರಹ್ಮರಥೋತ್ಸವ ನಡೆದಿದ್ದು, ಬೆಳಗ್ಗೆಯಿಂದ ನಡುರಾತ್ರಿಯ ತನಕ ಭಕ್ತ ಸಮೂಹ ದೊಡ್ಡ ಸಂಖ್ಯೆಯಲ್ಲಿ ಸೇರಿತ್ತು. ಮಂಗಳವಾರ ಮುಂಜಾನೆ 3 ಗಂಟೆಯಿಂದಲೇ ದೇವರಿಗೆ ವಿವಿಧ ಅಭಿಷೇಕ ಮಾಡಲಾಗಿತ್ತು. ಶಿವಲಿಂಗವನ್ನು ಬೆಳ್ಳಿಕವಚದಿಂದ ಅಲಂಕರಿಸಲಾಗಿದ್ದು, ಶಿವಲಿಂಗದ ಮೇಲೆ ಬಟ್ಟಲನ್ನು ಅಳವಡಿಸಿ ನಿರಂತರವಾಗಿ ನೀರು ತೊಟ್ಟಿಕ್ಕುವಂತೆ ಮಾಡಿರುವುದು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮುಜರಾಯಿ ಇಲಾಖೆ ಹಾಗೂ ಕಾಡುಮಲ್ಲೇಶ್ವರ ಗೆಳೆಯರ ಬಳಗದಿಂದ ಗಿರಿಜಾ ಕಲ್ಯಾಣೋತ್ಸವ ಹಾಗೂ ಹೋಮ ನಡೆಯಿತು.
ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಕುಮಟಾದಿಂದ 300 ಕೆ.ಜಿ.ಅಡಿಕೆ ತರಿಸಿ ನಾಲ್ಕು ಕಂಬಗಳಿಗೆ ಕಟ್ಟಲಾಗಿತ್ತು. ಚಾವಣಿಯಲ್ಲಿ ಮುಸುಕಿನ ಜೋಳ, ಕಿತ್ತಳೆ, ಎಳನೀರು, ಮರಸೇಬು, ಸೇಬು ಸೇರಿ ಹಲವು ಹೂ ಹಣ್ಣುಗಳಿಂದ ಪ್ರಾಂಗಣವನ್ನು ಅಲಂಕರಿಸಲಾಗಿತ್ತು. ಚಾಮರಾಜಪೇಟೆ ಮೂರನೇ ಮುಖ್ಯರಸ್ತೆಯಲ್ಲಿರುವ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಪಂಚಾಮೃತ, ರುದ್ರಾಭಿಷೇಕ ನಡೆದಿತ್ತು. ಕೋಟೆ ಜಲಕಂಠೇಶ್ವರ ದೇವಸ್ಥಾನದಲ್ಲಿ ಸುಪ್ರಭಾತ ಸೇವೆ, ಪುಷ್ಪಲಂಕಾರ, ರುದ್ರಾಭಿಷೇಕ, ಮಹಾ ಮಂಗಳಾರತಿ, ಮಹಾಪ್ರದೋಷ, ನಂದೀಶ್ವರಸ್ವಾಮಿಗೆ ಮಸ್ತಕಾಭಿಷೇಕ ಹೀಗೆ ದಿನಪೂರ್ತಿ ವಿಶೇಷ ಪೂಜೆ, ಅಭಿಷೇಕ ನಡೆಯಿತು.
ಹೊಸಕೆರೆ ಹಳ್ಳಿಯ ಉಮಾಮಹೇಶ್ವರಿ ದೇವಸ್ಥಾನ, ಮೈಸೂರು ರಸ್ತೆಯ ಪಂಚಲಿಂಗ ಮಲೈಮಹದೇಶ್ವರ ದೇವಸ್ಥಾನ, ಪುಟ್ಟೇನಹಳ್ಳಿಯ ನಂಜುಡೇಶ್ವರ ಸ್ವಾಮಿ ದೇವಸ್ಥಾನ, ರಾಜಗೋಪಾಲ್ ನಗರದ ನಾಗಲಿಂಗೇಶ್ವರ ದೇವಾಲಯ, ಚನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿರುವ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ಬನಶಂಕರಿ ಎರಡನೇ ಹಂತದ ಧರ್ಮಗಿರಿ ಮಂಜುನಾಥ, ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯ, ಶೇಷಾದ್ರಿಪುರದ ಕಾಶಿ ವಿಶ್ವೇಶ್ವರ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ನಾಗರಬಾವಿಯ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯ, ಕೆಂಗೇರಿ-ಉತ್ತರಹಳ್ಳಿ ರಸ್ತೆಯ ಶ್ರೀ ದ್ವಾದಶಿ ಜ್ಯೋತಿರ್ಲಿಂಗ ದೇವಸ್ಥಾನ… ಹೀಗೆ ನಗರದ ಶಿವಾಲಯಗಳಲ್ಲಿ ಬೆಳಗ್ಗೆಯಿಂದ ಆರಂಭವಾದ ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ, ನಾನಾ ಪೂಜೆ ಇಡೀ ದಿನ ನಡೆದಿತ್ತು. ದರ್ಶನಕ್ಕೆ ಬಂದಿರುವ ಭಕ್ತರಿಗೆ ಪ್ರಸಾದ ವಿತರಣೆಯೂ ನಡೆಯಿತು.
ಶಿವರಾತ್ರಿ ಜಾಗರಣೆ
ಶಿವರಾತ್ರಿಯ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯ ತನಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನಡೆದರೆ, ಸಂಜೆಯ ಜಾಗರಣೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಯಾಗಲಿವೆ. ಮಲ್ಲೇಶ್ವರ ಸಾಂಸ್ಕೃತಿಕ ಸಂಘ ಹಾಗೂ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಫೌಂಡೇಷನ್ ವತಿಯಿಂದ ಮಲ್ಲೇಶ್ವರ ಆಟದ ಮೈದಾನದ ಎದುರಿನ ಸರ್ಕಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಶಿರಾತ್ರಿ ಉತ್ಸವದಲ್ಲಿ ಕಲಾವಿದೆ ಯು.ದಿಯಾರಿಂದ ಭರಟನಾಟ್ಯ, ಸಂಗೀತ ರಂಜನಿ ತಂಡದಿಂದ ಗಾಯನ, ನಗೆಬುಗ್ಗೆ, ಮಾತಾಡುವ ಗೊಂಬೆ, ಹಾಸ್ಯಲಾಸ್ಯ, ಜಾದು ಹಾಗೂ ಕರಾಟೆ ಪ್ರದರ್ಶನ ಆಕರ್ಷಣೆ ಎನಿಸಿತ್ತು.
ಶೇಷಾದ್ರಿಪುರದ ಸಿರೂರು ಪಾರ್ಕ್‌ನಲ್ಲಿ ಜಾಣಜಾಣೆಯರ ನಗೆಜಾಗರಣೆ ಕಾರ್ಯಕ್ರಮದಲ್ಲಿ ಡಾ. ಗುರುರಾಜ್ ಕರ್ಜಗಿ, ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ಅವರಿಂದ ಯಾರು ಹಿತವರು ನಿಮಗೆ ಈ ಮೂವರೊಳಗೆ, ವೃತ್ತಿಯಲ್ಲಿ ಹಾಸ್ಯ, ಮಿಮಿಕ್ರಿ ದಯಾನಂದ ಲೋಕ, ಪ್ರಭಾತ್ ಕಲಾವಿದರಿಂದ ನಾಟಕ ಹೀಗೆ ರಾತ್ರಿಪೂರ್ತಿ ಕಾರ್ಯಕ್ರಮ ನಡೆಯಿತು.
ಗಂಗಾಜಲ ವಿತರಣೆ
ಮಹಾ ಶಿವರಾತ್ರಿಯಂದು ಬನಶಂಕರಿ 2ನೇ ಹಂತದ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ಹರಿದ್ವಾರದಿಂದ ತಂದಿದ್ದ ಗಂಗಾಜಲವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕುಟುಂಬದವರು, ಜೆಡಿಎಸ್ ಮುಖಂಡ ಕೆ.ಗೋಪಾಲ್ ಭಕ್ತರಿಗೆ ವಿತರಿಸಿದರು. ಬೆಳಗ್ಗೆ 6ಕ್ಕೆ ಪೂಜೆ ಮಾಡುವ ಮೂಲಕ ವಿತರಣೆ ಚಾಲನೆ ನೀಡಲಾಗಿತ್ತು. 20 ಸಾವಿರ ಲೀಟರ್ ಗಂಗಾಜಲವನ್ನು
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಪುರಾತನ ಶಿವ ದೇವಾಲಯದಿಂದ ವಿತರಿಸಲಾಗಿದೆ. ರಾಜ್ಯಾದ್ಯಂತ ದೇಗುಲಗಳಿಗೆ ಬೆಂಗಳೂರಿನಿಂದ ಗಂಗಾಜಲವನ್ನು ವಿತರಣೆ ಮಾಡಿದ್ದು, ಬೆಂಗಳೂರಿನ ಬಹುತೇಕ ಶಿವ ದೇವಾಲಯಗಳಲ್ಲಿ ದೇವರಿಗೆ ಗಂಗೆಯಿಂದಲೇ ಪ್ರತ್ಯಕ್ಷ ಅಭಿಷೇಕ ನಡೆದಿದ್ದು, ಶಿವ ಪೂಜೆಗಾಗಿ ಬಹಳ ಮಂದಿಗೆ ಗಂಗಾಜಲವನ್ನು ವಿತರಣೆ ಮಾಡಲಾಗಿದೆ.
ಕಾಶೀಶ್ವರನಿಗೆ ವಾರ್ಷಿಕೋತ್ಸವ
ಕೆ.ಆರ್.ಪುರ: ಬೆಂಗಳೂರು ಪೂರ್ವ ತಾಲೂಕಿನ ರಾಮಮೂರ್ತಿನಗರ ಸಮೀಪದ ಹೊರಮಾವು ಗ್ರಾಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕಾಶೀಶ್ವರ ಮಂದಿರದಲ್ಲಿ ವಿಜೃಂಭಿಣಿಯಾಗಿ ಆಚರಣೆ ಮಾಡಲಾಯಿತು. ಮಹಾಶಿವರಾತ್ರಿ ಪ್ರಯುಕ್ತ ಕಾಶೀಶ್ವರ ಮಂದಿರದಲ್ಲಿ 9ನೇ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು, 51 ದೇವರುಗಳ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರು ದರ್ಶನ ಮಾಡಲು ಅನುವು ಮಾಡಲಾಗಿತ್ತು. ಹೊರಮಾವು ಗ್ರಾಮದ ಸುತ್ತಮುತ್ತಲಿನ ಕಲ್ಕೆರೆ, ರಾಮಮೂರ್ತಿನಗರ, ಜಯಂತಿನಗರ, ಅಕ್ಷಯನಗರ, ಬಂಜಾರು ಬಡವಾಣೆ ಸೇರಿದಂತೆ ನಾನಾ ಬಡವಾಣೆಯ ಭಕ್ತರು 51 ದೇವಾನು ದೇವತೆಗಳ ದರುಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ವಿಶಿಷ್ಟ ಪೂಜಾ ಕೈಂಕರ್ಯ ಹೋಮ ಹವನಗಳು ನಡೆದವು.
ಜ್ಯೋತಿರ್ಲಿಂಗ ದರ್ಶನ ಭಾಗ್ಯ
ಕೆಂಗೇರಿ: ಉತ್ತರಹಳ್ಳಿ ರಸ್ತೆಯ ಓಂಕಾರ ಆಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಕ್ತಾದಿಗಳಿಗೆ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದ್ವಾದಶ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಿ ಎಲ್ಲಾ ಭಕ್ತರಿಗೂ ದರ್ಶನ ಭಾಗ್ಯ ದೊರಕಿಸಿಕೊಡುವ ಮೂಲಕ ನಮ್ಮ ಗುರುಗಳ ಕನಸನ್ನು ನನಸಾಗಿಸಲಾಗಿದ್ದು ಇಂದು ಮಹಾಶಿವರಾತ್ರಿಯಂದು ಎಲ್ಲರಿಗೂ ದರ್ಶನ ಭಾಗ್ಯ ಕಲ್ಪಿಸಲಾಗಿದೆ ಎಂದು ಓಂಕಾರಾಶ್ರಮದ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ ತಿಳಿಸಿದರು. ಇದೇ ವೇಳೆ ಶಿವಪಾರ್ವತಿ ಕಲ್ಯಾಣೋತ್ಸವದ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಓಂಕಾರ ಆಶ್ರಮದ ಶ್ರೀಮದುಸೂಧನಾನಂದಪುರಿ ಸ್ವಾಮೀಜಿ ಗೋಪೂಜೆ, ಅಶ್ವಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಹದೇಶ್ವರನಿಗೆ ನಮಿಸಿದ ಸಿಎಂ ಚಾಮರಾಪೇಟೆಯ ಮಲೆಮಹದೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ದರ್ಶನ ಪಡೆದರು. ಮಂಗಳವಾರ ಸಂಜೆ 5.45ರ ಸುಮಾರಿಗೆ ದೇವಾಲಯಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಸರತಿ ಸಾಲಿನಲ್ಲಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಹಬ್ಬದ ಶುಭಾಶಯ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಜಮೀರ್ ಅಹಮದ್ ಸ್ಥಳೀಯ ಮುಖಂಡರು ಜತೆಗಿದ್ದರು.
ಶಿವರಾತ್ರಿ ಅಂಗವಾಗಿ ದೇವಾಲಯದ ಸುತ್ತಲೂ ಜಾತ್ರೆಯ ಸಂಭ್ರಮ ಕಳೆಕಟ್ಟಿತ್ತು. ಭಸ್ಮಾಲಂಕೃತಗೊಂಡ ಶಿವನನ್ನು ಕಣ್ತುಂಬಿಕೊಳ್ಳಲು ಮುಂಜಾನೆ 6ರಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತಾದಿಗಳ ಶಿವಸ್ಮರಣೆ , ಭಜನಾ ಹಾಗೂ ಧಾರ್ಮಿಕ ಕಾರ್ಯಕ್ರಮದ ಮೂಲಕ ಜಾಗರಣೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.