ಕದ್ದಾಲಿಕೆ ಸತ್ಯಶೋಧನೆಗೆ ಡಿಜಿಪಿ ದತ್ತಾ ಆದೇಶ
Team Udayavani, Jun 7, 2017, 1:32 PM IST
ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ನಡೆದಿದ್ದ ಕಾವೇರಿ ಗಲಭೆ ಸಂದರ್ಭದಲ್ಲಿ ತಮ್ಮ ಹಾಗೂ ಕೆಲ ಕನ್ನಡ ಪರ ಸಂಘಟನೆಗಳ ನಡುವೆ ನಡೆದಿದ್ದ ಫೋನ್ ಸಂಭಾಷಣೆಯನ್ನು ಡಿಸಿಪಿ ಅಜಯ್ ಹಿಲೋರಿ ಕದ್ದಾಲಿಸಿ ಬಹಿರಂಗ ಪಡಿಸಿದ್ದಾರೆ ಎಂದು ಕೆಎಸ್‌ಆರ್‌ಪಿ ಐಜಿಪಿ ಕೆಎಸ್‌ಆರ್ ಚರಣ್ ರೆಡ್ಡಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ಅವರಿಗೆ ವರದಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯ ಶೋಧನಾ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಡಿಜಿ ಆರ್.ಕೆ.ದತ್ತಾ ಸೂಚಿಸಿದ್ದು, ಐಜಿಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ತನಿಖೆಯ ಹೊಣೆಗಾರಿಕೆ ನೀಡಲಾಗಿದೆ.
ಏನಿದು ಪ್ರಕರಣ?: 2016ರ ಸೆಪ್ಟಂಬರ್ 9ರಂದು ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಹೀಗಾಗಿ ಪಶ್ಚಿಮ ವಲಯ ಡಿಸಿಪಿ ಅಜಯ್ ಹಿಲೋರಿ ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡ ಪ್ರಕಾಶ್ ಸೇರಿದಂತೆ ಕೆಲ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಬಂಧಿಸಿದ್ದರು.
ಬಳಿಕ ನಗರಾದ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‌ರೆಡ್ಡಿ ಅವರಿಗೆ ಕರೆ ಮಾಡಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ಪ್ರತಿಭಟನೆ ಶಾಂತಿಯುತವಾಗಿ ನಡೆದಿರುವುದರಿಂದ ಪ್ರಕಾಶ್ ಹಾಗೂ ಇತರರನ್ನು ಬಿಡುವಂತೆ ಮನವಿ ಮಾಡಿದ್ದರು. ಹೀಗಾಗಿ ಡಿಸಿಪಿ ಅಜಯ್ ಹಿಲೋರಿಗೆ ಕರೆ ಮಾಡಿದ್ದ ಚರಣ್ ರೆಡ್ಡಿ ಎಲ್ಲರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದರು.
ಅದರಂತೆ, ಸೆ. 11ರಂದು ಕನ್ನಡ ಪ್ರಕಾಶ್ ಅವರನ್ನು ಬಿಡುಗಡೆ ಮಾಡಲಾಯಿತು. ಇದಾದ ಎರಡು ದಿನಗಳ ಬಳಿಕ ಮೈಸೂರು ರಸ್ತೆಯಲ್ಲಿ ಹೋರಾಟ ಹಿಂಸೆಗೆ ತಿರುಗಿ ಕೆಲ ಸಾವು-ನೋವಿನ ಘಟನೆಗಳು ನಡೆದವು. ಇದರಿಂದ ಅಸಮಾಧಾನಗೊಂಡಿದ್ದ ಚರಣ್‌ರೆಡ್ಡಿ, ಡಿಸಿಪಿ ಅಜಯ್ ಹಿಲೋರಿ ಅವರಿಗೆ ಕರೆ ಮಾಡಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಸೂಚಿಸಿದ್ದರು.
ಗೌಪ್ಯತೆ ಕಾಪಾಡದ ಅಜಯ್ ಹಿಲೋರಿ: ಹೋರಾಟಗಳು, ತೀವ್ರ ರೀತಿಯ ಪ್ರತಿಭಟನೆಗಳು ನಡೆಯುವಂಥ ಸಂದರ್ಭದಲ್ಲಿ ಹೋರಾಟಗಾರರು, ಮುಖಂಡರ ಫೋನ್‌ಗಳನ್ನು ಟ್ರ್ಯಾಪ್ ಮಾಡುವುದು ಸಾಮಾನ್ಯ. ಅದರಂತೆ ಡಿಸಿಪಿ ಅಜಯ್ ಹಿಲೋರಿ ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತು ಕನ್ನಡ ಪ್ರಕಾಶ್ ಅವರ ಫೋನ್‌ಗಳನ್ನು ಟ್ರ್ಯಾಪ್ ಮಾಡಿಸಿದ್ದರು. ಇದೇ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‌ರೆಡ್ಡಿ ಅವರ ಜತೆಗಿನ ಸಂಭಾಷಣೆಯೂ ಟ್ರ್ಯಾಪ್ ಆಗಿತ್ತು.
ಈ ವಿಚಾರ ಚರಣ್‌ರೆಡ್ಡಿ ಅವರಿಗೆ ಗೊತ್ತಿತ್ತು. ಆದರೂ ಪ್ರತಿಭಟನೆ ವೇಳೆ ಇಂತಹ ಪ್ರಕ್ರಿಯೆ ಸಾಮಾನ್ಯ ಎಂದು ಸುಮ್ಮನಿದ್ದರು. ಟ್ರ್ಯಾಪ್ ಮಾಡಲಾದ ಆಡಿಯೋವನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವಂತಿಲ್ಲ. ಆದರೆ ಡಿಸಿಪಿ ಅಜಯ್ ಹಿಲೋರಿ ತಮ್ಮ ಇತರೆ ಸಹೋದ್ಯೋಗಿಗಳು ಮತ್ತು ಕೆಲ ಆಪ್ತ ವ್ಯಕ್ತಿಗಳಿಗೆ ಬಹಿರಂಗ ಪಡಿಸಿದ್ದಾರೆ ಎಂದು ಚರಣ್‌ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.
ಕಾವೇರಿ ಗಲಾಟೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡಿಸಿಪಿ ಅಜಯ್ ಹಿಲೋರಿ ವಿಫಲರಾಗಿದ್ದಾರೆ ಎಂದು ಸಿಎಆರ್ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲು ಚರಣ್ ರೆಡ್ಡಿ ಮತ್ತು ಕನ್ನಡ ಪರ ಸಂಘಟನೆ ಮುಖಂಡರ ನಡುವಿನ ಫೋನ್ ಸಂಭಾಷಣೆಯನ್ನು ಚಿಕ್ಕಪೇಟೆ, ಕೆಂಗೇರಿ ಮತ್ತು ವಿಜಯನಗರ ಉಪವಿಭಾಗದ ಎಸಿಪಿಗಳಿಗೆ ಹಾಗೂ ಕಾಟನ್‌ಪೇಟೆ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಕೆಂಗೇರಿ ಮತ್ತು ಕಾಮಾಕ್ಷಿಪಾಳ್ಯ ಠಾಣೆಯ ಇನ್‌ಸ್ಪೆಕ್ಟರ್‌ಗಳ ಮೊಬೈಲ್‌ಗೆ ವಾಟ್ಸಾಪ್ ಮೂಲಕ ರವಾನೆ ಮಾಡಿದ್ದರು.
ವರ್ಗಾವಣೆ ಆಗಿದ್ದರೂ ಸೆ.16 ರಂದು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಗೆ ಬಂದ ಅಜಯ್ ಹಿಲೋರಿ, ಸಂಪೂರ್ಣ ಮಾತುಕತೆಯ ಸಂಭಾಷಣೆಯನ್ನು ಪೆನ್ ಡ್ರೈವ್‌ನಲ್ಲಿ ಹಾಕಿಕೊಡಲು ಠಾಣೆಯ ಫೋನ್ ಇನ್‌ಟೆರ್‌ಸೆಪ್ಷನ್‌ನ ಮುಖ್ಯಪೇದೆ ಜನಾರ್ದನ್‌ಗೆ ಸೂಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜನಾರ್ದನ್‌ಗೆ ಅಜಯ್ ಹಿಲೋರಿ ಎಚ್ಚರಿಕೆ ನೀಡಿ ಪೆನ್‌ಡ್ರೈವ್‌ನಲ್ಲಿ ಸಂಭಾಷಣೆಯನ್ನು ಹಾಕಿಸಿಕೊಂಡು ಹೋಗಿದ್ದರು. ಇದೇ ವೇಳೆ ಅಂದು ಅಧಿಕಾರ ಸ್ವೀಕರಿಸಲು ಬೆಳಗ್ಗೆ 9 ಗಂಟೆ ಸುಮಾರಿಗೆ ಎಂ.ಎನ್.ಅನುಚೇತ್ ಅವರು ಕಚೇರಿಗೆ ಬಂದಿದ್ದರು.
ಆದರೆ, ಅಜಯ್ ಹಿಲೋರಿ ಕಚೇರಿಯಲ್ಲಿ ಸ್ವಲ್ಪ ಕೆಲಸಗಳಿದ್ದು, ಮುಗಿಸಿಕೊಂಡು, ಬಳಿಕ ಅಧಿಕಾರ ಹಸ್ತಾಂತರಿಸುತ್ತೇನೆಂದು ಕೇಳಿಕೊಂಡಿದ್ದರು ಎನ್ನಲಾಗಿದೆ. ಈ ಮಧ್ಯೆ ಸೆ.20ರಂದು ಮಾಧ್ಯಮವೊಂದರಲ್ಲಿ ಅಜಯ್ ಹಿಲೋರಿ ಪೆನ್‌ಡ್ರೈವ್ ಮೂಲಕ ಆಡಿಯೋ ಪಡೆದುಕೊಂಡಿದ್ದಾರೆ ಎಂದು ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಐಜಿಪಿ ಚರಣ್‌ರೆಡ್ಡಿ ಡಿಸಿಪಿ ಅನುಚೇತ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದರು. ಆಂತರಿಕವಾಗಿ ವಿಚಾರಣೆ ನಡೆಸಿದ ಅನುಚೇತ್, ಅಜಯ್ ಹಿಲೋರಿ ಅವರು ಜನಾರ್ದನ್ ಅವರಿಂದ ಆಡಿಯೋ ಪಡೆದುಕೊಂಡಿರುವ ಬಗ್ಗೆ ಚರಣ್‌ರೆಡ್ಡಿ ಅವರಿಗೆ ವರದಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಡಿಜಿಪಿ ಆದೇಶ: ಫೋನ್ ಸಂಭಾಷಣೆ ಸೋರಿಕೆ ಬಗ್ಗೆ ಚರಣ್‌ರೆಡ್ಡಿ ಅವರು ಅಂದಿನ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರಿಗೆ ವರದಿ ನೀಡಿದ್ದು, ಕರ್ತವ್ಯಲೋಪ ಎಸಗಿರುವ ಅಜಯ್ ಹಿಲೋರಿ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ದೂರಿನ ಪ್ರತಿಯನ್ನು ಅಂದಿನ ಡಿಜಿ ಓಂಪ್ರಕಾಶ್ ಅವರಿಗೆ ವರ್ಗಾಯಿಸಲಾಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿರಲಿಲ್ಲ.
ನಂತರ ಡಿಜಿ ಆರ್.ಕೆ.ದತ್ತಾ ಅವರಿಗೂ ಚರಣ್‌ರೆಡ್ಡಿ ದೂರು ನೀಡಿದ್ದರು. ಈ ಸಂಬಂಧ ಡಿಜಿ ಅವರು ಮೂರು ಬಾರಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದರು. ಯಾವುದಕ್ಕೂ ಆಯುಕ್ತರು ಪ್ರತಿಕ್ರಿಯಿಸಿರಲಿಲ್ಲ. ಈಗ ಪ್ರಕರಣ ಬಹಿರಂಗವಾದ ಕೂಡಲೇ ಆಯುಕ್ತರನ್ನು ಕಚೇರಿಗೆ ಕರೆಸಿಕೊಂಡಿದ್ದ ಡಿಜಿಪಿ ಆರ್.ಕೆ.ದತ್ತ ಸತ್ಯ ಶೋಧನಾ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಕಾವೇರಿ ಗಲಾಟೆ ಸಂಬಂಧ ಐಜಿಪಿ ಚರಣ್ ರೆಡ್ಡಿ ಅವರು ಡಿಸಿಪಿ ಅಜಯ್ ಹಿಲೋರಿ ಅವರ ನಡವಳಿಕೆ ಬಗ್ಗೆ ಡಿಜಿ ಆರ್.ಕೆ.ದತ್ತಾ ಅವರಿಗೆ ವರದಿ ನೀಡಿದ್ದರು. ಇದರ ಸತ್ಯ ಶೋಧನಾ ತನಿಖೆ ನಡೆಸುವಂತೆ ಡಿಜಿಪಿ ಆದೇಶಿಸಿದ್ದಾರೆ. ಅದರಂತೆ ಚರಣ್‌ರೆಡ್ಡಿ ಅವರು ದೂರಿನಲ್ಲಿ ಹೇಳಿರುವ ಅಂಶಗಳ ಬಗ್ಗೆ ತನಿಖೆ ನಡೆಸಲು ಐಜಿಪಿ ದರ್ಜೆಯ ಅಧಿಕಾರಿಯೊಬ್ಬರಿಗೆ ಸೂಚಿಸಲಾಗಿದೆ. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆ ಅಧಿಕಾರಿಯ ಬಗ್ಗೆ ಕಾನೂನು ಕ್ರಮಕೈಗೊಳ್ಳಲಿದ್ದಾರೆ.
-ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.