ಪ್ರಾಣಿಗಳಿಗೂ ಡಯಾಗ್ನಸ್ಟಿಕ್ ಸೆಂಟರ್
Team Udayavani, Nov 18, 2018, 12:26 PM IST
ಬೆಂಗಳೂರು: ಸಾಮಾನ್ಯವಾಗಿ ಮನುಷ್ಯರಲ್ಲಿ ಕಂಡುಬರುತ್ತಿರುವ ವಿವಿಧ ರೀತಿಯ ಕಾಯಿಲೆಗಳ ಸುಲಭ ಪತ್ತೆಗಾಗಿ ಇಂದು ಗಲ್ಲಿಗೊಂದು ಡಯಾಗ್ನಸ್ಟಿಕ್ ಸೆಂಟರ್‌ಗಳು ತಲೆಯೆತ್ತಿವೆ. ಆದರೆ, ಈಗ ಪ್ರಾಣಿಗಳಿಗಾಗಿಯೂ ಪ್ರತ್ಯೇಕ ಡಯಾಗ್ನಸ್ಟಿಕ್ ಪ್ರಯೋಗಾಲಯ ಬಂದಿದೆ!
ಸಂಜಯನಗರದ ಗೆದ್ದಲಹಳ್ಳಿಯಲ್ಲಿ ರಾಜ್ಯದ ಮೊದಲ ಪ್ರಾಣಿಗಳ ಡಯಾಗ್ನಸ್ಟಿಕ್ ಸೆಂಟರ್ ತಲೆಯೆತ್ತಿದೆ. ಇದರ ಹೆಸರು ರೋಹನ್ ವೆಟರ್ನರಿ ಡಯಾನಗ್ನಸ್ಟಿಕ್ ಲ್ಯಾಬ್. ಈ ಪ್ರಯೋಗಾಲಯದಲ್ಲಿ ಮನುಷ್ಯರಂತೆಯೇ ಪ್ರಾಣಿಗಳ ಕಿಡ್ನಿ, ಯಕೃತ್, ಗರ್ಭಕೋಶ, ಬಯಾಪ್ಸಿ, ಥೈರಾಯ್ಡ, ಚರ್ಮರೋಗದಂತಹ ಹತ್ತಾರು ಪ್ರಕಾರದ ರೋಗಗಳ ಪತ್ತೆ ಮಾಡಲಾಗುತ್ತದೆ.
ಡಯಾಗ್ನಸ್ಟಿಕ್ ಶುಲ್ಕ ಕನಿಷ್ಠ 150ರಿಂದ 1,500 ರೂ. ಆಗಿದೆ. ಕಳೆದ ಒಂದು ವರ್ಷದಿಂದ ಇದು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದರ ಮಳಿಗೆಯನ್ನು ಕೃಷಿ ಮೇಳದಲ್ಲಿ ಕಾಣಬಹುದು. ನಾಯಿ, ಬೆಕ್ಕು, ಹಸು, ಮೇಕೆ, ಕುರಿ ಸೇರಿದಂತೆ ಎಲ್ಲ ಪ್ರಕಾರದ ಸಾಕುಪ್ರಾಣಿಗಳಲ್ಲಿ ಕಂಡುಬರುವ ಹತ್ತಾರು ರೋಗಗಳ ಪತ್ತೆ ಮಾಡುವ ವ್ಯವಸ್ಥೆ ಇಲ್ಲಿದೆ. ಪರೀಕ್ಷೆಗೆ ಪ್ರಾಣಿಗಳನ್ನು ತರಬೇಕಿಲ್ಲ. ವೈದ್ಯರ ಸೂಚನೆಯಂತೆ ರಕ್ತ ಅಥವಾ ಮೂತ್ರದ ಮಾದರಿ ತಂದರೆ ಸಾಕು.
ಹೀಗೆ ನಿತ್ಯ 20ಕ್ಕೂ ಹೆಚ್ಚು ಪ್ರಾಣಿಗಳ ರಕ್ತ ಅಥವಾ ಮೂತ್ರದ ಮಾದರಿಗಳು ಪರೀಕ್ಷೆಗಾಗಿ ಈ ಪ್ರಯೋಗಾಲಯಕ್ಕೆ ಬರುತ್ತಿವೆ. ಇದರಲ್ಲಿ ಬೆಂಗಳೂರಿನಿಂದಲೇ ಹೆಚ್ಚಿದ್ದು, ಮೈಸೂರು ಮತ್ತು ಶಿವಮೊಗ್ಗದಿಂದಲೂ ಮಾದರಿಗಳನ್ನು ನಮ್ಮಲ್ಲಿ ಕಳುಹಿಸಲಾಗುತ್ತದೆ ಎಂದು ಪ್ರಯೋಗಾಲಯದ ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದ ಮೋನಿಷಾ ಮಾಹಿತಿ ನೀಡಿದರು.
ಏನು ಉಪಯೋಗ?: ಪ್ರಾಣಿಗಳಂತೂ ಮಾತನಾಡುವುದಿಲ್ಲ. ಆದ್ದರಿಂದ ಪ್ರಸ್ತುತ ಅವುಗಳ ವರ್ತನೆ ಮೇಲೆಯೇ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆದರೆ, ಹೀಗೆ ಅಂದಾಜಿನ ಮೇಲೆ ಕೊಡುವ ಚಿಕಿತ್ಸೆ ನಿಖರವಾಗಿರುವುದಿಲ್ಲ. ಹಾಗಾಗಿ, ಅದರ ಪರಿಣಾಮ ಕೂಡ ತಡವಾಗುತ್ತದೆ. ಡಯಾಗ್ನಸ್ಟಿಕ್ ಪ್ರಯೋಗಾಲಯದಲ್ಲಿ ಈ ಸಮಸ್ಯೆ ಇರುವುದಿಲ್ಲ. ಯಾವ ಕಾಯಿಲೆ ಎಂದು ಸ್ಪಷ್ಟವಾಗುತ್ತದೆ.
ಅದಕ್ಕೆ ಅನುಗುಣವಾಗಿ ಚಿಕಿತ್ಸೆ ದೊರೆಯುತ್ತದೆ. ಇದರಿಂದ ತ್ವರಿತವಾಗಿ ಗುಣಮುಖವಾಗಲು ಸಾಧ್ಯವಾಗುತ್ತದೆ. ಸುಮಾರು 50ರಿಂದ 60 ಪಶುವೈದ್ಯರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅವರೆಲ್ಲಾ ತಮ್ಮಲ್ಲಿಗೆ ಕರೆತರುವ ಪ್ರಾಣಿಗಳ ಡಯಾಗ್ನಸ್ಟಿಕ್‌ಗಾಗಿ ಸೂಚಿಸುತ್ತಿದ್ದಾರೆ ಎಂದು ಬ್ಯುಸಿನೆಸ್ ಡೆವಲಪ್‌ಮೆಂಟ್ ವಿಭಾಗದ ರಂಜನ್ ಯು. ನಾಯ್ಕ ಹೇಳಿದರು.
ಪ್ರಸ್ತುತ ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳಿಗಾಗಿ ಡಯಾಗ್ನಸ್ಟಿಕ್ ಸೆಂಟರ್ ಇದೆ. ಉಳಿದೆಡೆ ಮಾಹಿತಿ ಇಲ್ಲ. ಕರ್ನಾಟಕದಲ್ಲಿ ಮಾತ್ರ ಇದೇ ಮೊದಲ ಪ್ರಯೋಗಾಲಯ. ನಾಯಿ, ಬೆಕ್ಕಿನ ಮಾದರಿಗಳು ಹೆಚ್ಚಿವೆ. ಹಸು, ಕೋಳಿ, ಕುರಿ, ಮೇಕೆಗಳ ಮಾದರಿಗಳು ತುಂಬಾ ಅಪರೂಪ. ಈ ನಿಟ್ಟಿನಲ್ಲಿ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡುವ ಅವಶ್ಯಕತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟರು.
ಹೆಬ್ಟಾಳದ ಪಶುವೈದ್ಯಕೀಯ ಮಹಾವಿದ್ಯಾಲಯ ಈ ಪ್ರಯೋಗಾಲಯಕ್ಕೆ ಸಹಕಾರ ನೀಡಿದೆ ಎಂದ ಅವರು, ಸದ್ಯ ನಿರ್ದಿಷ್ಟ ಕಾಯಿಲೆಗಳ ಪತ್ತೆ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಅನುಭವಿ ಪಶುವೈದ್ಯರು ಮತ್ತು ರೋಗಶಾಸ್ತ್ರಜ್ಞರಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಗುಣಮಟ್ಟ ಮತ್ತು ನಿಖರತೆ ಹಾಗೂ ಪರೀಕ್ಷಾ ಫಲಿತಾಂಶಗಳ ಕ್ಷಿಪ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಮಾಹಿತಿಗೆ ಮೊ: 94808 80922 ಸಂಪರ್ಕಿಸಬಹುದು.
ಯಾವ್ಯವಾ ಪರೀಕ್ಷೆ?: ಸೈಟೋಲಜಿ, ಹಿಮೋಗ್ರಾಮ್, ಸೀರಮ್ ಜೀವರಸಾಯನಶಾಸ್ತ್ರ, ಎಂಡೋಕ್ರೈನೋಲಜಿ, ಇಮ್ಮುನೋಸಿಸ್, ಯೂರಿನ್ ಅನಾಲಿಸಿಸ್, ಅಲರ್ಜಿ ಪ್ಯಾನಲ್, ಮಾಲಿಕ್ಯುಲರ್ ಡಯಾಗ್ನಸ್ಟಿಕ್, ಅಡ್ವಾನ್ಸ್ಡ್ ಮೂತ್ರಪಿಂಡ, ಯಕೃತ್, ಬ್ಯಾಕ್ಟೀರಿಯಾಶಾಸ್ತ್ರ ಇತ್ಯಾದಿ.
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.