ಜಯ ಕಸಿಯಲು ದಾಳ
Team Udayavani, Apr 30, 2018, 12:30 PM IST
ಬೆಂಗಳೂರು: ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ಹುಟ್ಟಿಕೊಂಡ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯ. ಕೇವಲ ವಿಧಾನಸಭೆ ಚುನಾವಣೆ ಮಾತ್ರವಲ್ಲ, ಬಿಬಿಎಂಪಿ ಚುನಾವಣೆಯಲ್ಲೂ ಇಲ್ಲಿ ಬಿಜೆಪಿಯೇ ಸಂಪೂರ್ಣ ಮೇಲುಗೈ ಸಾಧಿಸಿದೆ. ಹೀಗಾಗಿ ಈ ಬಾರಿ ಬಿಜೆಪಿ ಕೋಟೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಯತ್ನ ನಡೆಸಿವೆ.
ಬೇಗೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ನಂತರ ಬೊಮ್ಮನಹಳ್ಳಿ ನಗರಸಭೆ ಸದಸ್ಯನಾಗಿ ತಳಮಟ್ಟದಿಂದ ಮೇಲೆ ಬಂದು 2008ರಲ್ಲಿ ವಿಧಾನಸಭೆ ಮೆಟ್ಟಿಲೇರಿರುವ ಬಿಜೆಪಿಯ ಎಂ.ಸತೀಶ್ ರೆಡ್ಡಿ ಹ್ಯಾಟ್ರಿಕ್ ಸಾಧನೆಯತ್ತ ಕಣ್ಣಿಟ್ಟಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸಾಕಷ್ಟು ಹೆಣಗಾಟ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಸುಮಾರು 4.05 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ಹೊರ ರಾಜ್ಯಗಳಿಂದ ವಲಸೆ ಬಂದಿರುವ ಮತದಾರರೇ ಹೆಚ್ಚು. ರೆಡ್ಡಿ ಮತ್ತು ಒಕ್ಕಲಿಗರು ಸೇರಿ 85 ಸಾವಿರಕ್ಕೂ ಹೆಚ್ಚು ಮತದಾರರು ಇರುವುದರಿಂದ ಪ್ರಮುಖ ಮೂರೂ ಪಕ್ಷಗಳು ಈ ಸಮುದಾಯದ ಅಭ್ಯರ್ಥಿಗಳಿಗೇ ಮಣೆ ಹಾಕಿವೆ.
ನಿರೀಕ್ಷೆಯಂತೆ ಬಿಜೆಪಿಯಿಂದ ಸತೀಶ್ ರೆಡ್ಡಿ ಮತ್ತೆ ಸ್ಪರ್ಧಿಸುತ್ತಿದರೆ, ಕಾಂಗ್ರೆಸ್ ಕೂಡ ಇದೇ ಸಮುದಾಯದ ಸುಷ್ಮಾ ರಾಜಗೋಪಾಲ ರೆಡ್ಡಿ ಅವರನ್ನು ಕಣಕ್ಕಿಳಿಸಿ ಮಹಿಳಾ ಮತದಾರರ ಒಲವು ಗಳಿಸುವ ಪ್ರಯತ್ನ ಮಾಡಿದೆ. ಜೆಡಿಎಸ್ ಕೊನೇ ಕ್ಷಣದಲ್ಲಿ ಟಿ.ಆರ್.ಪ್ರಸಾದ್ ಗೌಡ ಅವರಿಗೆ ಟಿಕೆಟ್ ನೀಡಿದೆ.
ಇವರಲ್ಲದೆ, ಶಿವಸೇನೆ, ಆಲ್ ಇಂಡಿಯಾ ಮಹಿಳಾ ಎಂಪವರ್‌ವೆುಂಟ್ ಪಾರ್ಟಿ, ಪ್ರಜಾ ಪರಿವರ್ತನಾ ಪಾರ್ಟಿ, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಜೈ ಭಾರತ್ ಜನಸೇನಾ ಪಾರ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿಸದಸರೂ ಸ್ಪರ್ಧೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆಯೇ ಇರಲಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಭ್ಯರ್ಥಿಗಳು ಹೊಸಬರಾಗಿರುವುದರಿಂದ ಬಿಜೆಪಿಯ ಸತೀಶ್ ರೆಡ್ಡಿಗೆ ಪ್ರಬಲ ಪೈಪೋಟಿ ನೀಡಲು ಹರಸಾಹಸ ಮಾಡಬೇಕಾಗಬಹುದು.
ಸಮರ್ಥ ಅಭ್ಯರ್ಥಿಗಳೇ ಇಲ್ಲ: ಬಿಜೆಪಿಗೆ ಪೈಪೋಟಿ ನೀಡುವಂತಹ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆ ಕ್ಷಣದವರೆಗೆ ಪ್ರಯತ್ನಿಸಿವೆ. ಕಾಂಗ್ರೆಸ್‌ನಿಂದ ಕವಿತಾ ರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರಾದರೂ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಮತ್ತು ಅವರ ಮಧ್ಯೆ ಹೊಂದಾಣಿಕೆ ಮಾಡುವುದು ಕಷ್ಟಸಾಧ್ಯವಾಗಿದ್ದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಷ್ಮಾ ರಾಜಗೋಪಾಲ್ ರೆಡ್ಡಿ ಅವರನ್ನು ಕಣಕ್ಕಿಳಿಸಿರುವುದು ಸ್ಥಳೀಯ ಆಕಾಂಕ್ಷಿಗಳಲ್ಲಿ ಬೇಸರ ತರಿಸಿದೆ.
ಹೀಗಾಗಿ ಅವರು ಅಭ್ಯರ್ಥಿ ಪರ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಇನ್ನು ಜೆಡಿಎಸ್ ಕೆಂಗೇರಿ ಒಕ್ಕಲಿಗರ ಮಹಾ ಸಂಸ್ಥಾನಮಠದ ಚಂದ್ರಶೇಖರನಾಥ ಸ್ವಾಮೀಜಿ, ಚಿತ್ರ ನಿರ್ಮಾಪಕ ಕೆ.ಮಂಜು ಅವರನ್ನು ಕಣಕ್ಕಿಳಿಸಲು ಪ್ರಯತ್ನಪಟ್ಟು ಅದು ವಿಫಲವಾಗಿ ಅಂತಿಮವಾಗಿ ಟಿ.ಆರ್.ಪ್ರಸಾದ್ ಗೌಡ ಅವರನ್ನು ಕಣಕ್ಕಿಳಿಸಿದೆ. ಈ ಗೊಂದಲದಿಂದಾಗಿ ಜೆಡಿಎಸ್ ಕೂಡ ಅಲ್ಲಿ ಪ್ರಬಲ ಪೈಪೋಟಿ ನೀಡುವುದು ಕಷ್ಟಸಾಧ್ಯ.
ಮೇಲಾಗಿ ಕ್ಷೇತ್ರ ವ್ಯಾಪ್ತಿಗೆ ಬರುವ ಎಂಟು ಬಿಬಿಎಂಪಿ ವಾರ್ಡ್‌ಗಳ ಪೈಕಿ ಎಲ್ಲಾ ಕಡೆ ಬಿಜೆಪಿ ಕಾರ್ಪೊರೇಟರ್‌ಗಳೇ ಇರುವುದು ಪಕ್ಷದ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್. ಮೇಲಾಗಿ ಬಿಜೆಪಿ ಗಳಿಸಿದ ಮತಗಳ ಸಂಖ್ಯೆ 2008ಕ್ಕಿಂತ 20013ರಲ್ಲಿ ಹೆಚ್ಚಾಗಿದ್ದು, ಈ ಬಾರಿಯೂ ಅದೇ ಅಂತರದ ಜಯದ ನಿರೀಕ್ಷೆಯನ್ನು ಪಕ್ಷ ಹೊಂದಿದೆ. ಆದರೆ, ಮಹಿಳಾ ಅಭ್ಯರ್ಥಿಯಿಂದಾಗಿ ತೀವ್ರ ಸ್ಪರ್ಧೆ ನೀಡಲಿದ್ದು, ಗೆದ್ದರೂ ಆಶ್ಚರ್ಯವಲ್ಲ ಎಂಬುದು ಕಾಂಗ್ರೆಸ್ ಅಬಿಪ್ರಾಯ.
* ಎಂ.ಪ್ರದೀಪ್‌ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.