ಸಾರಿಗೆ ಇಲಾಖೆ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ
Team Udayavani, Jan 10, 2018, 12:02 PM IST
ಬೆಂಗಳೂರು: ವಾಹನ ಚಾಲಕರು ಇನ್ಮುಂದೆ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ವಾಹನ ಅರ್ಹತಾ ಪತ್ರಗಳನ್ನೆಲ್ಲಾ ತೆಗೆದುಕೊಂಡು ಹೋಗಬೇಕಿಲ್ಲ. ಪೊಲೀಸರು ತಡೆದರೆ, ಮೊಬೈಲ್‌ನಲ್ಲೇ ಅಗತ್ಯ ದಾಖಲೆಗಳನ್ನು ತೋರಿಸಿ ಹೋಗಬಹುದು!
ಸಾರಿಗೆ ಇಲಾಖೆಯು ಈ ಎಲ್ಲ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿದೆ. ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸಿ, ವಿತರಿಸುವ ಮತ್ತು ದೃಢೀಕರಿಸುವ “ಡಿಜಿ ಲಾಕರ್’ ಪರಿಚಯಿಸುತ್ತಿದೆ.
ಈ ವ್ಯವಸ್ಥೆಯು ದಾಖಲೆ ಪತ್ರಗಳನ್ನು ಸದಾ ಕೊಂಡೊಯ್ಯುವ ಸಮಸ್ಯೆ ದೂರ ಮಾಡುವುದರ ಜತೆಗೆ ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು. ಶೀಘ್ರದಲ್ಲೇ ಇದಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ನಿಟ್ಟಿನಲ್ಲಿ ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಮಾರ್ಪಾಡು ಮಾಡಲು ಸಾಧ್ಯವೇ ಎಂಬುದರ ಬಗ್ಗೆ “ಇ-ಆಡಳಿತ’ ಇಲಾಖೆಯೊಂದಿಗೆ ಚರ್ಚಿಸಲಾಗಿದ್ದು, ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ಇದರಿಂದ ಡಿಜಿ ಲಾಕರ್‌ನಲ್ಲಿ ಸಂಗ್ರಹಿಸಿಟ್ಟ ದಾಖಲೆಗಳು ಅಧಿಕೃತವಾಗಲಿವೆ ಎಂದರು.
ಡಿಜಿ ಲಾಕರ್ ಬಳಕೆ ಹೀಗೆ: ಯಾವುದೇ ವ್ಯಕ್ತಿಯು ಛಜಿಜಜಿlಟckಛಿr.ಜಟv.ಜಿnಗೆ ಹೋಗಿ ಸೈನ್‌ಅಪ್ ಆಗಬೇಕು. ಅಲ್ಲಿ ಡಿಜಿಟಲ್ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಂಡು, ನೋಡಬಹುದು ಮತ್ತು ಆನ್‌ಲೈನ್ ಮೂಲಕ ಹಂಚಿಕೊಳ್ಳಬಹುದು.
ಹೀಗೆ ಸ್ವಯಂ ಅಪ್‌ಲೋಡ್ ಮಾಡುವ ದಾಖಲೆಗಳಿಗೆ ಬಳಕೆದಾರರು ಡಿಜಿಟಲ್ ಸಹಿ (ಇ-ಸೈನ್) ಮಾಡಬೇಕು. ಇದು ಒಂದು ರೀತಿಯ ದೃಢೀಕರಣ ಇದ್ದಂತೆ. ಇದು ನಕಲು ಮಾಡುವುದನ್ನು ತಡೆಯುತ್ತದೆ. ಕಾಗದರಹಿತ ಆಡಳಿತ ಪರಿಕಲ್ಪನೆಯಲ್ಲಿ ಕೇಂದ್ರ ಸರ್ಕಾರ ಈ ಸೇವೆ ಜಾರಿಗೆ ತಂದಿದೆ.
ವಾಹನ ನೋಂದಣಿ, ಅರ್ಹತಾ ಪತ್ರ ಸೇರಿ ಮತ್ತಿತರ ದಾಖಲೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಗೆ ಪರಿವರ್ತಿಸುವ “ವಾಹನ-4′ ವ್ಯವಸ್ಥೆಯನ್ನು ಈಗಾಗಲೇ ಪ್ರಾಯೋಗಿಕವಾಗಿ ರಾಮನಗರದಲ್ಲಿ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ 63 ಆರ್‌ಟಿಒಗಳಿಗೆ ವಿಸ್ತರಿಸಲಾಗುವುದು.
ಅದೇ ರೀತಿ, ಸಾರಥಿ-4 (ಚಾಲನಾ ಪರವಾನಗಿ ಸೇವೆಗೆ) ಈಗಾಗಲೇ ನಗರದ ಹತ್ತು ಆರ್‌ಟಿಒಗಳಲ್ಲಿ ಪರಿಚಯಿಸಲಾಗಿದೆ. ಉಳಿದ ಆರ್‌ಟಿಒಗಳಲ್ಲೂ ಈ ಸೇವೆ ವಿಸ್ತರಣೆ ಆಗಲಿದೆ ಎಂದು ಹೇಳಿದರು. -ಚ್ಚುವರಿ ಆಯುಕ್ತ (ಆಡಳಿತ) ನರೇಂದ್ರ ಹೋಳ್ಕರ್, ಜಂಟಿ ಆಯುಕ್ತ (ನಗರ) ಜ್ಞಾನೇಂದ್ರಕುಮಾರ್ ಇತರರು ಇದ್ದರು.
ಮತ್ತೆ ಬರಲಿದೆ ಬೈಕ್ ಟ್ಯಾಕ್ಸಿ?: ತಾತ್ಕಾಲಿಕವಾಗಿ ತಡೆಹಿಡಿದಿದ್ದ ಬೈಕ್ ಟ್ಯಾಕ್ಸಿ ಸೇವೆಗೆ ಸರ್ಕಾರ ಮರುಚಾಲನೆ ನೀಡಲು ಚಿಂತನೆ ನಡೆಸಿದೆ. ಬೈಕ್ ಸೇವೆಗೆ ಅನುಮತಿ ನೀಡುವ ಸಲುವಾಗಿ ಬಿಎಂಆರ್‌ಸಿ ಮತ್ತು ಬಿಎಂಟಿಸಿ ಅಧಿಕಾರಿಗಳೊಂದಿಗೆ ಸಾರಿಗೆ ಇಲಾಖೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ.
ಇದರಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ ದೇಶದ ಜೈಪುರ, ಚಂಡಿಗಢ, ಗುರ್‌ಗಾಂವ್, ಗೋವಾ ಸೇರಿ ಹಲವು ಕಡೆ ಈ ಸೇವೆ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲೂ ಇದನ್ನು ಯಾಕೆ ಪರಿಚಯಿಸಬಾರದು ಎಂಬ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ದಯಾನಂದ ಪ್ರತಿಯಿಸಿದರು.
ಸದ್ದುಮಾಡುವ ವಾಹನಗಳ ಸದ್ದಡಗಲಿದೆ: ಮದ್ಯಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ನಡೆಸುವ ಕಾರ್ಯಾಚರಣೆಯಂತೆಯೇ ಇನ್ಮುಂದೆ ವಾಹನಗಳ ಸೈಲನ್ಸರ್ ಮಾರ್ಪಡಿಸಿ, ಶಬ್ದಮಾಲಿನ್ಯ ಉಂಟುಮಾಡುವ ವಾಹನಗಳ ನೋಂದಣಿ ಪತ್ರ ಅಮಾನತುಗೊಳಿಸಲಾಗುವುದು.
ಅಪಘಾತ ಇಳಿಮುಖ?: ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಅಪಘಾತಗಳ ಪ್ರಮಾಣ ಶೇ.9.7 ಇಳಿಮುಖವಾಗಿದೆ. ರಾಜ್ಯದಲ್ಲಿ 2016ರಲ್ಲಿ 44,403 ಅಪಘಾತಗಳು ಸಂಭವಿಸಿ, ಅದರಲ್ಲಿ 11,133 ಮಂದಿ ಮೃತಪಟ್ಟಿದ್ದರು. 2017ರಲ್ಲಿ ಅಪಘಾತಗಳ ಸಂಖ್ಯೆ 31,658 ಆಗಿದ್ದು, 7,640 ಮಂದಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.