ದಿಲ್-ದೌಲತ್ತಿನ ಹೋರಾಟ
Team Udayavani, May 26, 2018, 11:52 AM IST
ಬೆಂಗಳೂರು: “ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ದಿಲ್, ದೌಲತ್ತಿನ ವಿರುದ್ಧದ ಹೋರಾಟ ನಡೆದಿದೆ,’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು. ಶಾಸಕರಾಗಿದ್ದ ಬಿಜೆಪಿಯ ಬಿ.ಎನ್.ವಿಜಯಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದ ಮತದಾನ ಮುಂದೂಡಿಕೆಯಾಗಿ, ಜೂ.11ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದಿ. ವಿಜಯ್‌ಕುಮಾರ್ ಅವರ ಸಹೋದರ ಬಿ.ಎನ್.ಪ್ರಹ್ಲಾದ್ ಬಾಬು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅನಂತ ಕುಮಾರ್, ವಿಜಯಕುಮಾರ್ ಅವರು ತಮ್ಮ ಹೃದಯವನ್ನು ಜಯನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದರು. ಆದರೆ ಈಗ ದಾದಾಗಿರಿ, ಗೂಂಡಾಗಿರಿ ನಡೆಸಲು ಅವಕಾಶ ಪಡೆಯಲು ಕಾಂಗ್ರೆಸ್ ಹೊಂಚು ಹಾಕುತ್ತಿದೆ. ದಾದಾಗಿರಿ, ಡಾನ್‌ಗಿರಿ ಬೇಕಾಗಿಲ್ಲ. ಇದರ ವಿರುದ್ಧ ಪಕ್ಷ ಹೋರಾಟ ನಡೆಸಲಿದೆ ಎಂದು ಹೇಳಿದರು.
ಜಯನಗರ 4ನೇ ಬ್ಲಾಕ್‌ನಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪ್ರಹ್ಲಾದ್ ಬಾಬು ಅವರು ಬೆಳಗ್ಗೆ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಇತರರು ಪಾಲ್ಗೊಂಡಿದ್ದರು. ನಂತರ ಅವರು ಜಯನಗರ ವಾಣಿಜ್ಯ ಸಂಕೀರ್ಣದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಅನಂತಕುಮಾರ್, ಪಾಲಿಕೆ ಸದಸ್ಯ ಗೋವಿಂದನಾಯ್ಡು, ಮಾಜಿ ಪಾಲಿಕೆ ಸದಸ್ಯ ಸಿ.ಕೆ.ರಾಮಮೂರ್ತಿ ಇತರರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅನಂತ ಕುಮಾರ್, ಜಯನಗರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಎನ್.ವಿಜಯಕುಮಾರ್ ಅವರು ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರ ಸಹಯೋಗದಲ್ಲಿ ಒಳ್ಳೆಯ ಕೆಲಸ ಮಾಡಿದ್ದು, ಜಯನಗರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವಾಗಿಸಿದ್ದಾರೆ. ಇದನ್ನು ಜನರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯನ್ನು ಆಶೀರ್ವದಿಸುವ ಮೂಲಕ ವಿಜಯಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಟಿಕೆಟ್ ಕೈ ತಪ್ಪಿರುವುದಕ್ಕೆ ಹಾಲಿ, ಮಾಜಿ ಕಾರ್ಪೊರೇಟರ್‌ಗಳು ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಜಯಕುಮಾರ್ ಅವರು ಕ್ಷೇತ್ರದ ಬಿಜೆಪಿಯ ಪಾಲಿಕೆ ಸದಸ್ಯರನ್ನು ಸಮರ್ಥ ನಾಯಕರನ್ನಾಗಿ ರೂಪಿಸಿದ್ದಾರೆ. ಯಾರು ಬೇಕಾದರೂ ಅಭ್ಯರ್ಥಿಗಳಾಗಿ ಸ್ಪರ್ಧಿಸುವಷ್ಟರ ಮಟ್ಟಿಗೆ ಸಮರ್ಥರಿದ್ದಾರೆ. ಆದರೆ ಪಕ್ಷದ ಕೇಂದ್ರ, ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದು ಅಂತಿಮವಾಗಿ ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ಒಮ್ಮತದ ಆಯ್ಕೆಯಾಗಿದ್ದು, ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಮಾತನಾಡಿ, ಮತದಾನಕ್ಕೆ 15 ದಿನ ಬಾಕಿ ಇರುವಾಗಲೇ ಸಹೋದರ ವಿಜಯಕುಮಾರ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅದರಂತೆ ಈಗಲೂ ಪಾಲಿಕೆ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ ಎಲ್ಲರೂ ಒಟ್ಟಿಗೇ ಇದ್ದೇವೆ. ಸಣ್ಣ ಪುಟ್ಟ ಗೊಂದಲಗಳನ್ನು ಸರಿಪಡಿಸಿಕೊಂಡಿದ್ದೇವೆ. ಇಂದಿನಿಂದಲೇ ಪ್ರಚಾರ ಆರಂಭಿಸುತ್ತೇವೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಸೇರಿದಂತೆ ಐದು ಮಂದಿಯಷ್ಟೇ ಚುನಾವಣಾಧಿಕಾರಿ ಕಚೇರಿಗೆ ಹೋಗಲು ಅವಕಾಶವಿರುವುದರಿಂದ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಕಚೇರಿಯ ಹೊರಗೇ ಇದ್ದರು. ಸುಮಾರು 20 ನಿಮಿಷಕ್ಕೂ ಹೆಚ್ಚು ಹೊತ್ತು ವಾಣಿಜ್ಯ ಸಂಕೀರ್ಣದ ಹೊರ ಆವರಣದಲ್ಲಿ ನಿಂತಿದ್ದರು.
ಸಂಧಾನ ಯಶಸ್ವಿ; ಅತೃಪ್ತರು ಹಾಜರ್!
ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಕ್ಷೇತ್ರದ ಕೆಲ ಹಾಲಿ, ಮಾಜಿ ಪಾಲಿಕೆ ಸದಸ್ಯರೊಂದಿಗೆ ಬಿಜೆಪಿ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ತಕ್ಕ ಮಟ್ಟಿಗೆ ನಿವಾರಣೆಯಾದಂತಾಗಿದೆ. ಆದರೆ ಬಿಜೆಪಿ ಕಾರ್ಪೊರೇಟರ್ ಎನ್.ನಾಗರಾಜ್ ಪಕ್ಷದ ಚಟುವಟಿಕೆಯಿಂದ ಈಗಲೂ ದೂರ ಉಳಿದಿದ್ದಾರೆ.
ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಿದರೆ ಎಲ್ಲರೂ ಸಂಘಟಿತರಾಗಿ ಗೆಲುವಿಗೆ ಶ್ರಮಿಸುವುದಾಗಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯ ಎನ್.ನಾಗರಾಜ್, ಮಾಜಿ ಸದಸ್ಯರಾದ ಸಿ.ಕೆ.ರಾಮಮೂರ್ತಿ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು. ಇದಕ್ಕೆ ಮಾಜಿ ಕಾರ್ಪೊರೇಟರ್ ಬಿ.ಸೋಮಶೇಖರ್ ಬೆಂಬಲಿಸಿದ್ದರು. ಆದರೆ ಪಕ್ಷ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿದ್ದರಿಂದ ಇವರೆಲ್ಲ ಅಸಮಾಧಾನಗೊಂಡಿದ್ದರು.
ಬುಧವಾರ, ಗುರುವಾರ ಪಕ್ಷದವರ ಸಂಪರ್ಕಕ್ಕೂ ಸಿಗದೆ, ಪಕ್ಷದ ಚಟುವಟಿಕೆಗಳಲ್ಲೂ ಪಾಲ್ಗೊಳ್ಳದೆ ತಟಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಅನಂತ ಕುಮಾರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನಿವಾಸದಲ್ಲಿ ನಡೆಸಿದ ಸಂಧಾನ ಯಶಸ್ವಿಯಾಯಿತು.
ಚುನಾವಣೆ ಸಮೀಪದಲ್ಲಿರುವ ಸಂದರ್ಭದಲ್ಲಿ ತಟಸ್ಥರಾಗಿ ಉಳಿದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಅಭ್ಯರ್ಥಿ ಆಯ್ಕೆ ವೇಳೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗದೆ ಲೋಪವಾಗಿರಬಹುದು. ಅದನ್ನೆಲ್ಲಾ ಮರೆತು ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮುಖಂಡರು ಸೂಚಿಸಿದ್ದು, ಇದಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಕೆ.ನಟರಾಜ್, ಮೂವರು ಆಕಾಂಕ್ಷಿಗಳಿಗೂ ಟಿಕೆಟ್ ತಪ್ಪಿದ್ದರಿಂದ ಬೇಸರವಾಗಿತ್ತು. ಸಭೆಯಲ್ಲಿ ನಾಯಕರು ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇವೆ. ಈಗಿನಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ಮುಂದುವರಿದ ಅಸಮಾಧಾನ
ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಬೈರಸಂದ್ರ ವಾರ್ಡ್‌ನ ಎನ್.ನಾಗರಾಜ್ ಶುಕ್ರವಾರದ ಸಭೆಯಲ್ಲೂ ಪಾಲ್ಗೊಳ್ಳಲಿಲ್ಲ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ನಾಗರಾಜ್, ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿಯೇತರ ಮತಗಳನ್ನು ಸೆಳೆದಿದ್ದೇನೆ. ಬೈರಸಂದ್ರ ವಾರ್ಡ್‌ನಲ್ಲಿ ಮುಸ್ಲಿಂ ಬಾಂಧವರೂ ಬಿಜೆಪಿಗೆ ಮತ ಹಾಕುವಷ್ಟರ ಮಟ್ಟಿಗೆ ಸಂಘಟನೆ ಮಾಡಿದ್ದೇನೆ.
ನನಗಲ್ಲದಿದ್ದರೂ, ನಟರಾಜ್, ರಾಮಮೂರ್ತಿ ಪೈಕಿ ಯಾರಿಗೇ ಟಿಕೆಟ್ ನೀಡಿದ್ದರೂ ಸಂತೋಷವಾಗುತ್ತಿತ್ತು. ಇಲ್ಲವೇ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದರೂ ಶ್ರಮಿಸುತ್ತಿದ್ದೆವು. ಆದರೆ ಒಂದು ದಿನವೂ ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್ ನೀಡಿರುವುದು ಬೇಸರ ತಂದಿದೆ. ಭಾನುವಾರ ನನ್ನ ನಿಲುವು ಪ್ರಕಟಿಸಲಿದ್ದೇನೆ,’ ಎಂದು ಹೇಳಿದ್ದಾರೆ.
19 ಮಂದಿ ಕಣದಲ್ಲಿ
ಈಗಾಗಲೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೌಮ್ಯರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 19 ಮಂದಿ ಕಣದಲ್ಲಿದ್ದಾರೆ. ವಿಜಯಕುಮಾರ್ ಅವರ ನಿಧನ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ನಾಮಪತ್ರ ಸಲ್ಲಿಸಲು ಅವಕಾಶವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.