ವಲಸಿಗರ ತೆರವು ಹೆಸರಲ್ಲಿ ಜೋಪಡಿಗಳ ನೆಲಸಮ
Team Udayavani, Jan 23, 2020, 3:06 AM IST
ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಲ್ಲಿ ನಗರದ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ ಹಾಗೂ ಬೆಳ್ಳಂದೂರಿನ ಹಲವು ಪ್ರದೇಶಗಳಲ್ಲಿ ಜೋಪಡಿಗಳನ್ನು ಯಾವ ಕಾನೂನಿನಡಿ, ಯಾವ ಅಧಿಕಾರ ಬಳಸಿ ನೆಲಸಮ ಮಾಡಲಾಗಿದೆ ಎಂಬ ಬಗ್ಗೆ ಪ್ರಮಾಣಪತ್ರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು “ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ’ (ಪಿಯುಸಿಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಕೆಲಕಾಲ ವಾದ ಆದಲಿಸಿದ ನ್ಯಾಯಪೀಠ, ವಿವಾದಿತ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವರು ಅಕ್ರಮ ವಲಸಿಗರು ಎಂದು ಹೇಗೆ ನಿರ್ಧರಿ ಸಲಾಯಿತು. ಇದಕ್ಕೆ ಮೂಲ ಯಾವುದು, ಅದಕ್ಕಿರುವ ಸಾಕ್ಷಿ-ದಾಖಲೆಗಳೇನು, ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು, ನೋಟಿಸ್ ಕೊಟ್ಟವರು ಯಾರು? ಯಾವ ಕಾಯ್ದೆಯಡಿ ಅಧಿಕಾರ ಚಲಾಯಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂಬ ವಿವರಣೆಯನ್ನೊಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶನ ನೀಡಿತು.
ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಹಾಗೂ ಮಾರತ್ತಹಳ್ಳಿ ಠಾಣಾ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಮುಂದಿನ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.
ನೆಲಸಮಗೊಳಿಸಲಾದ ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದವರು ಅಕ್ರಮ ಬಾಂಗ್ಲಾ ವಲಸಿಗರು ಅಲ್ಲ. ಅವರೆಲ್ಲರೂ ರಾಯಚೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಯವರು ಹಾಗೂ ಆಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಬಿಹಾರದವರು ಇದ್ದಾರೆ. ಉದ್ಯೋಗ ಅರಸಿ ಬಂದ ಬಡಕುಟುಂಬಗಳ ಸುಮಾರು 5 ಸಾವಿರ ಜನ ಕಳೆದ 5 ರಿಂದ 10 ವರ್ಷಗಳಿಂದ ಈ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ತರಾತುರಿಯಲ್ಲಿ ನೋಟಿಸ್ ನೀಡಿ ಬಲವಂತದಿಂದ ತೆರವು ಕಾರ್ಯಾಚರಣೆ ನಡೆಸಿ ಜೋಪಡಿಗಳನ್ನು ನೆಲಸಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಎಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಮನವಿ: ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 151ರ ಮಂತ್ರಿ ಇಸ್ಪಾನ್ ಅಪಾರ್ಟ್‌ಮೆಂಟ್ ಬಳಿಯ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ, ಬೆಳ್ಳಂದೂರು ಪ್ರದೇಶಗಳಲ್ಲಿನ ಜೋಪಡಿಗಳನ್ನು ತೆರವುಗೊಳಿಸದಂತೆ ಬಿಬಿಎಂಪಿ, ಪೊಲೀಸರಿಗೆ ನಿರ್ದೇಶನ ನಿಡಬೇಕು. ತೆರವುಗೊಳಿಸಲು ಬಿಬಿಎಂಪಿ ಹಾಗೂ ಪೊಲೀಸರು ನೀಡಿದ ನೋಟಿಸ್‌ಗಳನ್ನು ರದ್ದುಪಡಿಸಬೇಕು. ಮಾರತ್ತಹಳ್ಳಿ ಠಾಣಾ ಇನ್ಸ್‌ಪೆಕ್ಟರ್ ಹಾಗೂ ಬಿಬಿಎಂಪಿ ಸಹಾಯಕ ಎಕ್ಸಿಕ್ಯೂಟಿನ್ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.