ಸರಕಾರಿ ಸೇವೆಗೆ ಖಾಲಿ ಹುದ್ದೆಗಳೇ ಅಡ್ಡಿ:ಶಿಕ್ಷಣ ಇಲಾಖೆ ಮುಂಚೂಣಿಯಲ್ಲಿ
Team Udayavani, Apr 23, 2017, 3:45 AM IST
ಬೆಂಗಳೂರು: ರಾಜ್ಯದಲ್ಲಿ ಸದ್ಯ ಪಾಠ ಮಾಡಲು ಮೇಷ್ಟ್ರಿಲ್ಲ, ಮಾತ್ರೆ ಕೊಡಲು ವೈದ್ಯರಿಲ್ಲ, ರಕ್ಷಣೆ ಕೊಡಲು ಪೊಲೀಸರೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ಎಲ್ಲ “ಇಲ್ಲ’ಗಳಿಗೆ ರಾಜ್ಯ ಸರಕಾರ ನಿಯಮಿತವಾಗಿ ನೇಮಕ ಮಾಡಿಕೊಳ್ಳದೇ ಇರುವುದೇ ಕಾರಣ ಎಂಬುದೂ ಬಹಿರಂಗವಾಗಿದೆ.
ರಾಜ್ಯದ 6 ಕೋಟಿ ಜನರಿಗೆ ಸರಕಾರಿ ಸೇವೆ ಒದಗಿಸುವ ಸಂಬಂಧ ಸೃಜನೆಯಾಗಿರುವ ಉದ್ಯೋಗಗಳ ಸಂಖ್ಯೆ ಬರೋಬ್ಬರಿ 7.61 ಲಕ್ಷ. ಆದರೆ ಇದರಲ್ಲಿ 2.49 ಲಕ್ಷ ಹುದ್ದೆಗಳು ಭರ್ತಿಯಾಗದೇ ಇನ್ನೂ ಖಾಲಿ ಉಳಿದಿವೆ. ಅಂದರೆ, ಈಗ ಸರಕಾರಿ ಸೇವೆಯಲ್ಲಿರುವ ಒಟ್ಟು ನೌಕರರ ಸಂಖ್ಯೆ 5.13 ಲಕ್ಷ ಮಾತ್ರ.
ಅತಿ ಹೆಚ್ಚು ಉದ್ಯೋಗಗಳು ಖಾಲಿ ಇರುವುದು ಶಿಕ್ಷಣ ಕ್ಷೇತ್ರದಲ್ಲಿ. ಇಲ್ಲಿ 71 ಸಾವಿರ ಉದ್ಯೋಗಗಳು ಖಾಲಿ ಉಳಿದಿವೆ. ಇನ್ನು ರಾಜ್ಯದ ಜನರ ಆರೋಗ್ಯ ಕಾಪಾಡುವ ವೈದ್ಯರ ಸಂಖ್ಯೆಯೂ ತುಂಬಾ ಕಡಿಮೆ ಇದೆ. ಈ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಖಾಲಿ ಇರುವ ವೈದ್ಯರ ಸಂಖ್ಯೆ 32 ಸಾವಿರ. ಇದಕ್ಕಿಂತ ಮಿಗಿಲಾಗಿ, ಜನರಿಗೆ ರಕ್ಷಣೆ ಕೊಡುವ ಪೊಲೀಸ್ ಇಲಾಖೆಯಲ್ಲೂ 19 ಸಾವಿರ ಉದ್ಯೋಗಗಳು ಭರ್ತಿಯಾಗದೇ ಹಾಗೆಯೇ ಉಳಿದಿವೆ. ಪೊಲೀಸ್ ಇಲಾಖೆಯ ಈ ಕೊರತೆ ಕಂಡೇ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕರ್ನಾಟಕ ಸಹಿತ 6 ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದು!
ಕೊರತೆಯಾದರೆ ನಷ್ಟ ಜನಕ್ಕೇ
ಶಾಸಕಾಂಗ ಏನೇ ಕಾಯ್ದೆ, ಶಾಸನ ರಚಿಸಿದರೂ ಅದನ್ನು ಕಾರ್ಯಗತಗೊಳಿಸುವುದು ಕಾರ್ಯಾಂಗವೇ. ಇಲ್ಲಿ ಯಾವುದೇ ಕಾರಣಕ್ಕೂ ಕೊರತೆಗೆ ಆಸ್ಪದ ಇರಲೇಬಾರದು. ಒಂದೊಮ್ಮೆ ಇಲ್ಲೇ ಸಿಬಂದಿ ಕೊರತೆ ಸೃಷ್ಟಿಯಾದರೆ, ರಾಜ್ಯದ ಆಡಳಿತ ಯಂತ್ರ ಆಮೆಗತಿಗೆ ಬರುತ್ತದೆ. ಜನರಿಗೆ ಇಂದು ಸಿಗಬೇಕಾದ ಸರಕಾರಿ ಸೌಲಭ್ಯ ಮುಂದೆಂದೋ ಸಿಗುವ ಅಥವಾ ಅವು ಸಿಗದೇ ಹೋಗುವ ಸಂದರ್ಭಗಳೂ ಎದುರಾಗುತ್ತವೆ.
ನಿಯಮಿತ ನೇಮಕ ವ್ಯವಸ್ಥೆಯೇ ಇಲ್ಲ
ರಾಜ್ಯದಲ್ಲಿ ಈ ಪ್ರಮಾಣದ ಹುದ್ದೆಗಳು ಖಾಲಿ ಉಳಿಯುವುದಕ್ಕೆ ಕಾರಣ ನಿಯಮಿತ ನೇಮಕ ವ್ಯವಸ್ಥೆ ಇಲ್ಲದೇ ಇರುವುದು. ಕೇಂದ್ರ ಸರಕಾರವಾದರೆ, ಕೇಂದ್ರ ಲೋಕಸೇವಾ ಆಯೋಗದ ಮೂಲಕ ಪ್ರತಿ ವರ್ಷವೂ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಆದರೆ ರಾಜ್ಯದಲ್ಲಿ ಅಂಥ ವ್ಯವಸ್ಥೆ ಇಲ್ಲವೇ ಇಲ್ಲ. ಕಳೆದ ಒಂದೂವರೆ ದಶಕಗಳಿಂದ ರಾಜ್ಯದಲ್ಲಿ ನೇಮಕಾತಿಯೂ ಸರಿಯಾಗಿ ಆಗುತ್ತಿಲ್ಲ. 2000-2004ರ ಅವಧಿಯಲ್ಲಂತೂ ನೇಮಕಾತಿ ಪ್ರಕ್ರಿಯೆಯೇ ನಿಂತುಹೋಗಿತ್ತು.
ಯಾವುದೇ ಸರಕಾರ ಮಂಜೂರಾದ ಎಲ್ಲ ಹುದ್ದೆಗಳನ್ನು, ಎಲ್ಲ ಕಾಲದಲ್ಲೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಯಮಿತವಾಗಿ ನೇಮಕ ಪ್ರಕ್ರಿಯೆ ಕೈಗೊಳ್ಳುವ ಮೂಲಕ ಭರ್ತಿಯಾದ ಮತ್ತು ಖಾಲಿಯಿರುವ ಹುದ್ದೆಗಳ ಅಂತರ ತಗ್ಗಿಸಬಹುದು. ಶೇ. 10ರಿಂದ 15ರಷ್ಟು ಹುದ್ದೆ ಖಾಲಿಯಿದ್ದರೂ ಕೆಲವು ಕಾಲ ಪರಿಸ್ಥಿತಿ ನಿಭಾಯಿಸಬಹುದು. ಆದರೆ ಶೇ. 30ರಷ್ಟು ಮಿತಿ ಮೀರಿದರೆ ಆಡಳಿತ ಯಂತ್ರ ಸುಗಮವಾಗಿ ಸಾಗದು ಎಂದು ನಿವೃತ್ತ ಐಎಎಸ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ವಿವಿಧ ಇಲಾಖೆಗಳಲ್ಲಿ ಕೆಳಹಂತದ ಆಯ್ದ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ 15,000ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
2.49 ಲಕ್ಷ ಹುದ್ದೆ ಖಾಲಿ
ರಾಜ್ಯದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಬಗ್ಗೆ ಸರಕಾರ ಗಮನಹರಿಸದೇ, ಕಾರ್ಯಾಂಗ ಸೊರಗಿರುವುದನ್ನು ಕಾಣಬಹುದು. ಪ್ರಸಕ್ತ ಖಾಲಿ ಇರುವ ಉದ್ಯೋಗಗಳ ಸಂಖ್ಯೆ 2.49 ಲಕ್ಷ. ಅಂದರೆ ಒಟ್ಟಾರೆ ಉದ್ಯೋಗಗಳಿಗೆ ಹೋಲಿಕೆ ಮಾಡಿದರೆ ಶೇ. 32ರಷ್ಟು ಕೊರತೆ ಇದೆ. ಇನ್ನು ಒಂದೂಕಾಲು ವರ್ಷದಲ್ಲಿ ಇನ್ನೂ 14,300 ಮಂದಿ ನಿವೃತ್ತರಾಗಲಿದ್ದಾರೆ. ಅಲ್ಲಿಗೆ ಸಿಬಂದಿ ಕೊರತೆ ಸಮಸ್ಯೆ ಇನ್ನಷ್ಟು ಉಲ್ಬಣವಾಗುವ ಸನ್ನಿವೇಶ ಸೃಷ್ಟಿಯಾಗಲಿದೆ.
ಖಾಲಿ ಅಂಕಿ ಅಂಶ
ಒಟ್ಟಾರೆ ಸರಕಾರಿ ಹುದ್ದೆಗಳ ಸಂಖ್ಯೆ 7.61 ಲಕ್ಷ
ಸದ್ಯ ಭರ್ತಿ ಅಗಿರುವ ಹುದ್ದೆಗಳ ಸಂಖ್ಯೆ 5.13 ಲಕ್ಷ
ಖಾಲಿ ಇರುವ ಹುದ್ದೆಗಳ ಸಂಖ್ಯೆ 2.49 ಲಕ್ಷ
ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಹುದ್ದೆ 71 ಸಾವಿರ
ಬೇಕಾಗಿ ರುವ ವೈದ್ಯರ ಸಂಖ್ಯೆ 32 ಸಾವಿರ
ಖಾಲಿ ಇರುವ ಪೊಲೀಸ್ ಹುದ್ದೆಗಳ ಸಂಖ್ಯೆ 19 ಸಾವಿರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.