ಶಿಕ್ಷಣದಲ್ಲಿ ತಾರತಮ್ಯ ಮಾಡ್ಬೇಡಿ
Team Udayavani, Oct 14, 2017, 10:53 AM IST
ಬೆಂಗಳೂರು: “ನಮ್ಮ ಶಾಲೆಯಲ್ಲಿ ಕಂಪ್ಯೂಟರ್, ಚಿತ್ರಕಲೆಗೆ ಶಿಕ್ಷಕರಿಲ್ಲ, ಹಾಸ್ಟೆಲ್‌ನಲ್ಲಿ ಮೆನು ಹಾಕಿದಂತೆ ಊಟ ಕೊಡುತ್ತಿಲ್ಲ. ಬಂದಿರುವ ಆಹಾರ ಪದಾರ್ಥವನ್ನು ನಮ್ಮ ಎದುರಲ್ಲೇ ಬೇರೆಯವರು ಕೊಂಡೊಯ್ಯುತ್ತಿದ್ದಾರೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಂತೆ ನಮಗೂ ಮೀಸಲಾತಿ ನೀಡಿ. ಖಾಸಗಿ ಶಾಲೆಯಲ್ಲಿ ಶುಲ್ಕ ಕೊಟ್ಟು ಓದುತ್ತಿರುವುದರಿಂದಲೇ ಸರ್ಕಾರದ ಬಿಸಿಯೂಟ ನೀಡುತ್ತಿಲ್ಲವೇ?’
ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಶುಕ್ರವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಮಕ್ಕಳ ಸಂವಾದದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಗೆ ಸರ್ಕಾರಿ-ಖಾಸಗಿ ಶಾಲಾ ಮಕ್ಕಳು ಕೇಳಿದ ಪ್ರಶ್ನೆಗಳಿವು. ಎಲ್ಲಾ ಪ್ರಶ್ನೆಗಳನ್ನು ಆಲಿಸಿದ ಸಚಿವರು, ಬೋಧನೆ ರೂಪದಲ್ಲೇ ಉತ್ತರ ನೀಡಿದರು. ಆದರೆ, ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳ ಸಮಸ್ಯೆ ಆಲಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವರೇ ಬಂದಿರಲಿಲ್ಲ.
ಪುಸ್ತಕದ ಗುಣಮಟ್ಟ ಚೆನ್ನಾಗಿಲ್ಲ: ಪುಸ್ತಕದ ಗುಣಮಟ್ಟ ಚೆನ್ನಾಗಿಲ್ಲ ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸಚಿವ ಸೇಠ್,
ಪ್ರಸಕ್ತ ವರ್ಷದಿಂದ ಅಂತರ್ಜಾಲದ ಮೂಲಕ ಪುಸ್ತಕ ಪೂರೈಸುವ ವ್ಯವಸ್ಥೆ ಮಾಡಿದ್ದೇವೆ. ಮೊರಾರ್ಜಿ ದೇಸಾಯಿ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೂ ಶೀಘ್ರ ಪುಸ್ತಕ ಪೂರೈಸಲಿದ್ದೇವೆಂದರು. ಕೆಲವೊಂದು ಶಾಲೆಗಳಲ್ಲಿ ಕಂಪ್ಯೂಟರ್ ಇದೆ. ಆದರೆ, ಟೀಚರ್ ಇಲ್ಲ ಎಂದು ದಾವಣಗೆರೆ ಜಿಲ್ಲಾ ವಿದ್ಯಾರ್ಥಿನಿ ಆಗ್ರಹಿಸಿದರು. ಶಿಕ್ಷಣ ಸಚಿವರು ಪ್ರತಿಕ್ರಿಯಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಶಿಕ್ಷಣವನ್ನು ಒಂದು ವಿಷಯವಾಗಿ ಪರಿಚಯಿಸಲು ಚಿಂತಿಸಲಾಗಿದೆ. ಕಂಪ್ಯೂಟರ್ ಪೂರೈಕೆ , ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಪ್ರತಿ ಶಾಲೆಯಲ್ಲೂ ಪುಸ್ತಕ ಕೋಶ ತೆರೆಯಲಿದ್ದೇವೆ ಎಂಬ ಭರವಸೆ ನೀಡಿದರು.
ತಾರತಮ್ಯ ಮಾಡಬೇಡಿ: ವಿದ್ಯಾರ್ಥಿ ವೇತನ ಹಾಗೂ ಮೀಸಲಾತಿಯನ್ನು ಪರಿಶಿಷ್ಟ ಜಾತಿ- ಪಂಗಡದ ವಿದ್ಯಾರ್ಥಿಗಳಿಗೆ ಕೊಡುವುದಕ್ಕೆ ವಿರೋಧವಿಲ್ಲ. ಆದರೆ, ತಾರತಮ್ಯ ಮಾಡಬೇಡಿ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿಕೊಂಡಳು. ಸಚಿವ ಸೇಠ್ ಉತ್ತರಿಸಿ, ಸಂವಿಧಾನದಲ್ಲಿ ಸೂಚಿಸಿರುವಂತೆ ಮೀಸಲಾತಿ ನೀಡುತ್ತಿದ್ದೇವೆ. ಮುಂದಿನ ವರ್ಷದಿಂದ ಶಾಲೆಗಳಲ್ಲೇ ಬಸ್‌ಪಾಸ್ ವಿತರಣೆಗೆ ಮಾತುಕತೆ ನಡೆಸಲಾಗುತ್ತದೆ. ಮಲೆ ನಾಡಿನ ಶಾಲಾ ಮಕ್ಕಳ ಸಾರಿಗೆ ವ್ಯವಸ್ಥೆಗೂ ಚಿಂತನೆ ನಡೆಸುತ್ತಿದ್ದೇವೆ ಎಂದರು.
ಸೌಲಭ್ಯ ಒದಗಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿ ಮಾತನಾಡಿ, ಮೊರಾರ್ಜಿ ಶಾಲೆಗಳಿಗೆ ಪಠ್ಯಪುಸ್ತಕ, ಸಾಕ್ಸ್, ಶೂ, ಸಮವಸ್ತ್ರ ಇನ್ನೂ ಬಂದಿಲ್ಲ. ವಸತಿಯಲ್ಲಿ ಬೆಡ್ ಸರಿಯಲ್ಲ. ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲ. ಹಾಸ್ಟೆಲ್‌ನ ಆಹಾರ ಪದಾರ್ಥವನ್ನು ನಮ್ಮ ಕಣ್ಣೆದುರೇ ಬೇರೆಯವರು ಕೊಂಡೊಯ್ಯುತ್ತಾರೆ ಎಂದು ಸಮಸ್ಯೆಯನ್ನು ಬಿಚ್ಚಿಟ್ಟರು. ಇದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವರು, ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೂ ಮಾತುಕತೆ ನಡೆಸಲಾಗುತ್ತದೆ. ಅಗತ್ಯ ಸೌಲಭ್ಯವನ್ನು ಶೀಘ್ರವೇ ಒದಗಿಸಲಾಗುವುದು ಎಂದು ಹೇಳಿದರು.
ಒಎಂಆರ್ ಶೀಟ್ ಬೇಡ ಬೆಂಗಳೂರು ಉತ್ತರ ಜಿಲ್ಲೆಯ ಸೂಫಿಯಾ ಬಾನು, ಐದರಿಂದ ಒಂಬತ್ತನೇ ತರಗತಿಯವರಿಗೆ ಒಎಂಆರ್ ಶೀಟ್‌ನಲ್ಲಿ ಪರೀಕ್ಷೆ ಬರೆಸುತ್ತಿದ್ದಾರೆ. ಇದರಿಂದ ನಮ್ಮ ಬರವಣಿಗೆ ಕೌಶಲ್ಯತೆ ಹಾಳಾಗುತ್ತಿದೆ ಎಂದಳು. ಮಕ್ಕಳ ಕೌಶಲ್ಯತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಲಿಕೆ, ಬರವಣಿಗೆ ಹಾಗೂ ಬೋಧನೆಯೇ ನಮ್ಮ ಪ್ರಮುಖ ಆಯ್ಕೆ ಎಂದು ಸಚಿವರು ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣೆಯಾಗಿ ಎಲ್ಲರಿಗೂ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾರ್ಯ ನಿರ್ವಹಿಸುತ್ತಿದೆ.
ಕೃಪಾ ಆಳ್ವಾ,ಅಧ್ಯಕ್ಷೆ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ
ನವ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳೇ ರಾಯಭಾರಿಗಳು. ನಾವು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ. ವಿದ್ಯಾರ್ಥಿಗಳ ಕಲ್ಯಾಣಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಊಟದ ಜತೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯಾವ ಚಿಂತನೆಯೂ ಸದ್ಯಕ್ಕೆ ಇಲ್ಲ.
ತನ್ವೀರ್ ಸೇಠ್, ಶಿಕ್ಷಣ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.