ಧರ್ಮಗಳ ನಡುವೆ ಕಂದಕ ಬೇಡ: ಸಿಎಂ
Team Udayavani, Jan 19, 2017, 12:10 PM IST
ಬೆಂಗಳೂರು: ಜಾತಿ -ಧರ್ಮಗಳಿಗೆ ಒತ್ತು ನೀಡದೆ, ಮನುಷ್ಯತ್ವಕ್ಕೆ ಆದ್ಯತೆ ನೀಡಬೇಕು. ಧರ್ಮ, ಬದುಕಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಬೇಕು. ಧರ್ಮ-ಧರ್ಮಗಳ ನಡುವೆ ಕಂದಕ ಬೇಡ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟುಹಬ್ಬದಂದೇ ಅವರ ವಿಚಾರಗಳನ್ನು ತಿರುಚುವ ಪ್ರಯತ್ನ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ರಾಜ್ಯಮಟ್ಟದ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವೇಕಾನಂದರು ಕೇವಲ 30 ವರ್ಷ ಬದುಕಿದ್ದರೂ ಅವರು ತಳೆದ ನಿರ್ಧಾರಗಳು ಇಂದಿಗೂ ಪ್ರಸ್ತುತವಾಗಿ ಪದೇ ಪದೇ ಎಲ್ಲರನ್ನೂ ಎಚ್ಚರಿಸುತ್ತಿದೆ. ಧರ್ಮ-ಧರ್ಮಗಳ ನಡುವೆ ಕಂದಕ ಬೇಡ ಎಂದು ಹೇಳಿದ್ದ ಅವರ ವಿಚಾರಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ತಿರುಚುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ವಿ.ದೇಶ ಪಾಂಡೆ, ಕೆ.ಜೆ. ಜಾರ್ಜ್, ಆರ್.ರೋಷನ್ ಬೇಗ್, ಉಮಾಶ್ರೀ, ಯು.ಟಿ.ಖಾದರ್, ಉನ್ನತ ಶಿಕ್ಷಣ ಸಚಿವ
ಬಸವರಾಜ ರಾಯರೆಡ್ಡಿ, ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ಆತ್ಮಜ್ಞಾನಾನಂದ, ಮೇಯರ್ ಜಿ.ಪದ್ಮಾ ವತಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಹರಿದು ಬಂದ ಜನಸಾಗರ: ಅದ್ಧೂರಿಯಾಗಿ ನಡೆದ ಕಾರ್ಯಕ್ರಮ ಯುವ ಮನಸ್ಸುಗಳನ್ನು ಸೆಳೆಯಿತು. ರಾಜ್ಯದ 177 ತಾಲೂಕು, ಬೆಂಗಳೂರು ನಗರದ ಎಲ್ಲಾ ವಿದ್ಯಾಲಯಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಆಗಮಿಸಿ ಸಮಾರಂಭಕ್ಕೆ ಕಳೆ ತಂದರು. ಕಾರ್ಯಕ್ರಮದಲ್ಲಿ ವಿವೇಕಾನಂದರ ಆದರ್ಶಗಳನ್ನು ಬಿಂಬಿಸುವಂತಹ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.
ಭಾರತೀಯ ಸೇನೆಯ ವಾಹನಗಳ ಕಾರ್ಯವೈಖರಿಯ ಸಲಕರಣೆಗಳ ಬಗ್ಗೆ ವಿವರ ನೀಡುವ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಅದನ್ನು ನೋಡಲು ವಿದ್ಯಾರ್ಥಿ ಸಮೂಹ ಮುಗಿಬಿದ್ದಿತ್ತು. ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಕೆಲ ಕಾಲ ವಾಹನ ಸವಾರರು ಪರದಾಡಬೇಕಾಯಿತು.