ಉದ್ಯಾನ, ಮೈದಾನದಲ್ಲಿ ಕ್ಯಾಂಟೀನ್ ಬೇಡ
Team Udayavani, Jul 11, 2017, 11:20 AM IST
ಬೆಂಗಳೂರು: ಬಿಬಿಎಂಪಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳಗಳ ಕುರಿತು ವಿವಾದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ವ್ಯಾಪ್ತಿಯ ಆಟದ ಮೈದಾನಗಳು ಹಾಗೂ ಉದ್ಯಾನ ಜಾಗದಲ್ಲಿ “ಇಂದಿರಾ ಕ್ಯಾಂಟಿನ್’ ನಿರ್ಮಿಸದಂತೆ ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಆಟದ ಮೈದಾನ ಮತ್ತು ಉದ್ಯಾನವನದ ಜಾಗಗಳನ್ನು ಹೊರತುಪಡಿಸಿ ಬೇರೆ ಕಡೆ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ಗುರುತಿಸಬೇಕು. ತಕ್ಷಣವೇ ಈ ಕುರಿತು ಕ್ರಮ ಕೈಗೊಂಡು ನಿಗದಿತ ಅವಧಿಯೊಳಗೆ ಕ್ಯಾಂಟೀನ್ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳನ್ನು ಮುಗಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಗರದ ಹಲವಾರು ವಾರ್ಡ್‌ಗಳಲ್ಲಿ ಅಧಿಕಾರಿಗಳು ಕ್ಯಾಂಟಿನ್ ನಿರ್ಮಾಣಕ್ಕಾಗಿ ಉದ್ಯಾನ ಹಾಗೂ ಆಟದ ಮೈದಾನದ ಜಾಗವನ್ನು ಗುರುತಿಸಿದ್ದಾರೆ. ಆದರೆ, ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಖಾಲಿ ಜಾಗಗಳ ಸಂರಕ್ಷಣೆ ಹಾಗೂ ನಿಯಂತ್ರಣ ನಿಯಮಗಳು 1985ರ ಪ್ರಕಾರ ಈ ಸ್ಥಳಗಳಲ್ಲಿ ಯಾವುದೇ ಕಟ್ಟಡ ನಿರ್ಮಿಸುವುದು ಕಾನೂನು ಬಾಹಿರ. ಹೀಗಾಗಿ ಕಟ್ಟಡ ನಿರ್ಮಾಣವನ್ನು ತಡೆಯಬೇಕು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಇತ್ತೀಚೆಗೆ ಆಯುಕ್ತರಿಗೆ ಪತ್ರ ಬರೆದಿದ್ದರು.
ನಿಯಮಾವಳಿಗಳ ಪ್ರಕಾರ 5 ಎಕರೆಗಿಂತ ಹೆಚ್ಚು ಜಾಗವಿರುವ ಸ್ಥಳಗಳಲ್ಲಿ ಮಾತ್ರ ಸಣ್ಣ ಪ್ರಮಾಣದ ಕಟ್ಟಡ ನಿರ್ಮಿಸಲು ಅವಕಾಶವಿದೆ. ಆದರೆ, ಸಣ್ಣಪುಟ್ಟ ಮೈದಾನ ಹಾಗೂ ಉದ್ಯಾನಗಳಲ್ಲಿ ಕ್ಯಾಂಟಿನ್ ನಿರ್ಮಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದರೆ, ಸಾರ್ವಜನಿಕರ ಕೋಟ್ಯಂತರ ತೆರಿಗೆ ಹಣ ನಷ್ಟವಾಗಲಿದೆ ಎಂದು ದೂರಿದ್ದರು.
ಈ ಮಧ್ಯೆ ಹಲವು ವಾರ್ಡ್‌ಗಳಲ್ಲಿ ಉದ್ಯಾನ, ಆಟದ ಮೈದಾನ ಹಾಗೂ ವಸತಿ ಪ್ರದೇಶಗಳಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳೀಯರಿಂದ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಅದರ ಹಿನ್ನೆಲೆಯಲ್ಲಿ ಆಯುಕ್ತರು ಇಂತಹ ಸ್ಥಳಗಳಲ್ಲಿ ಕ್ಯಾಂಟಿನ್ ನಿರ್ಮಿಸದಂತೆ ಹಾಗೂ ಕ್ಯಾಂಟಿನ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಉದ್ದೇಶದ ಚಟುವಟಿಕೆಗಳನ್ನು ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಆದರೀಗ ವಸತಿ ಪ್ರದೇಶಗಳಲ್ಲಿ ಪಾಲಿಕೆಯಿಂದಲೇ ಹೇಗೆ ಇಂದಿರಾ ಕ್ಯಾಂಟಿನ್ ಆರಂಭಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನಗರದ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ 60 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಆದರೆ, ಅಲ್ಪಾವಧಿ ಟೆಂಡರ್ ಸಹ ಕರೆಯದೆ ನೇರವಾಗಿ ಗುತ್ತಿಗೆ ನೀಡಲಾಗಿದೆ. ಇದರೊಂದಿಗೆ ತೆರಿಗೆ ಪಾವತಿಸದೆ 4ಜಿ ಅಡಿಯಲ್ಲಿ ವಿನಾಯಿತಿ ಸಹ ಪಡೆದುಕೊಳ್ಳಲಾಗಿದೆ ಎಂದು ದೂರಿದರು.
ವಿವಿಧ ಇಲಾಖೆಯಿಂದ 78 ಕಡೆ ಸ್ಥಳ
ನಗರದ ಎಲ್ಲ ಭಾಗಗಳಲ್ಲಿ ಕ್ಯಾಂಟಿನ್‌ಗೆ ಜಾಗ ದೊರೆಯದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ 78 ಕಡೆ ಸ್ಥಳ ಪಡೆಯಲಾಗಿದ್ದು, ನಗರ ಜಿಲ್ಲಾಡಳಿತದಿಂದಲೇ 23 ಕಡೆ ನಿವೇಶನ ನೀಡಲಾಗಿದೆ. ಉಳಿದಂತೆ ಬಿಡಿಎ 16, ಬಿಎಂಟಿಸಿ 5, ಜಲಮಂಡಳಿ 5, ಬಿಎಂಆರ್‌ಸಿಎಲ್ 4, ಕರ್ನಾಟಕ ಗೃಹ ಮಂಡಳಿ 3, ಆರೋಗ್ಯ ಇಲಾಖೆ 3, ಅರಣ್ಯ 3, ಶಿಕ್ಷಣ 2, ಹಿಂದೂ ಧಾರ್ಮಿಕ ದತ್ತಿ ಇಲಾಖೆ 2, ಕೆಪಿಟಿಸಿಎಲ್ 2, ಎಚ್‌ಎಎಲ್, ಕೃಷಿ ಮಾರುಕಟ್ಟೆ, ಕೊಳಚೆ ನಿರ್ಮೂಲನೆ ಮಂಡಳಿ, ಮಹಾಬೋಧಿ ಸೊಸೈಟಿ, ಲೋಕೋಪಯೋಗಿ, ಕೃಷಿ ಇಲಾಖೆ, ಕೆಎಸ್‌ಎಸ್‌ಐಡಿಸಿ, ಪಶು ಸಂಗೋಪನೆ ಇಲಾಖೆಯಿಂದ ತಲಾ ಒಂದು ಕಡೆ ಸ್ಥಳ ಪಡೆಯಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಯ್ದೆಯಲ್ಲೇನಿದೆ?
ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಖಾಲಿ ಜಾಗಗಳ ಸಂರಕ್ಷಣೆ ಹಾಗೂ ನಿಯಂತ್ರಣ ನಿಯಮಗಳು 1985ರಂತೆ 5 ಎಕರೆಗಿಂತ ಕಡಿಮೆಯಿರುವ ಉದ್ಯಾನ ಹಾಗೂ ಮೈದಾನಗಳಲ್ಲಿ ಶೌಚಾಲಯ ಸಂಕೀರ್ಣದಂತಹ ಅತ್ಯಗತ್ಯ ಮೂಲ ಸೌಕರ್ಯ ಕಟ್ಟಡಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ.
ಉದ್ಯಾನ ಹಾಗೂ ಆಟದ ಮೈದಾನದ ಜಾಗದಲ್ಲಿ ಕ್ಯಾಂಟಿನ್ ನಿರ್ಮಿಸದಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ನಿಗದಿತ ವಾರ್ಡ್‌ನಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ದೊರೆಯದಿದ್ದರೆ, ಆ ವಾರ್ಡ್‌ಗೆ ಸಮೀಪವಿರುವ ವಾರ್ಡ್‌ನಲ್ಲಿ ಜಾಗ ಗುರುತಿಸುವಂತೆ ನಿರ್ದೇಶನ ನೀಡಲಾಗಿದೆ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಇಂದಿರಾ ಕ್ಯಾಂಟಿನ್ ಯೋಜನೆ ಜಾರಿಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ಸಾರ್ವಜನಿಕರಿಂದ ಯೋಜನೆಗೆ ವಿರೋಧ ವ್ಯಕ್ತವಾಗಿಲ್ಲ. ಪ್ರತಿಪಕ್ಷ ಬಿಜೆಪಿಯೇ ಅನಗತ್ಯವಾಗಿ ಅಡ್ಡಿಪಡಿಸುವ ಮೂಲಕ ಜನರಿಗೆ ಅನುಕೂಲವಾಗುವ ಯೋಜನೆಯಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ.
-ಜಿ. ಪದ್ಮಾವತಿ, ಪಾಲಿಕೆ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.