ಟಿಪ್ಪು ಜಯಂತಿ ಬೇಡವೇ ಬೇಡ
Team Udayavani, Nov 5, 2018, 6:00 AM IST
ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ಆಚರಿಸಿಯೇ ತೀರುವುದಾಗಿ ಪ್ರಕಟಿಸಿರುವ ಬೆನ್ನಲ್ಲೇ ಪರ- ವಿರೋಧದ ಚರ್ಚೆ ಶುರುವಾಗಿದೆ. ಟಿಪ್ಪು ಜಯಂತಿ ವಿರುದ್ಧ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆಯನ್ನೂ ನೀಡಿದೆ.
ಟಿಪ್ಪು ಜಯಂತಿ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತ ಕುಮಾರ್ ಹೆಗಡೆ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಗೃಹ ಸಚಿವರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಯಾರೇ ವಿರೋಧ ವ್ಯಕ್ತಪಡಿಸಿದರೂ ಪ್ರತಿ ವರ್ಷದಂತೆ ಈ ವರ್ಷವೂ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ ಎಂದು ಹೇಳಿದ್ದಾರೆ. ಜತೆಗೆ ಟಿಪ್ಪು ಜಯಂತಿ ವಿರುದ್ಧ ಪ್ರಜಾಪ್ರಭುತ್ವದ ಇತಿಮಿತಿಯಲ್ಲೇ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಣೆಯನ್ನು ತೀವ್ರವಾಗಿ ಖಂಡಿಸಿರುವ ಅನಂತ ಕುಮಾರ ಹೆಗಡೆ ಅವರು ಕಳೆದ ವರ್ಷದಂತೆ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದಂತೆ ಹೆಸರು ಮುದ್ರಣ ಮಾಡಬೇಡಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ಆರಂಭದಿಂದಲೂ ಸಾರ್ವಜನಿಕರು ಹಾಗೂ ನಾಡಿನ ವಿಚಾರವಾದಿಗಳು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕನ್ನಡ ವಿರೋಧಿ ಹಾಗೂ ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಅಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿರೋಧ ಹಾಗೂ ಪ್ರತಿಭಟನೆ ನಡೆದು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಒಬ್ಬ ಸಮಾಜಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿ ಆಚರಿಸಲು ಹೊರಟಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಕನ್ನಡ ವಿರೋಧಿ
ಟಿಪ್ಪು ಕನ್ನಡ ವಿರೋಧಿ. ಮದಕರಿ ನಾಯಕ, ಒನಕೆ ಓಬವ್ವ, ಕೊಡವರು, ಕ್ರೈಸ್ತರ ಮೇಲೆ ದಬ್ಟಾಳಿಕೆ ನಡೆಸಿದ ಮತೀಯವಾದಿ. ಮೈಸೂರು ಸೇರಿದಂತೆ ಇತರೆ ಪ್ರದೇಶಗಳ ಹೆಸರುಗಳನ್ನೇ ಬದಲಾಯಿಸಿದ್ದ. ಆತ ಜನಾನುರಾಗಿ ರಾಜನಲ್ಲ. ಅಂತಹ ಆಕ್ರಮಣಕಾರಿಯ ಜಯಂತಿ ಅಗತ್ಯವೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನಮಗೆ ಸಂತ ಶಿಶುನಾಳ ಷರೀಫರು, ಮಿರ್ಜಾ ಇಸ್ಮಾಯಿಲ್ ಅಂತವರ ಜಯಂತಿ ಆಚರಿಸಿದರೆ ನಾವೂ ಪಾಲ್ಗೊಳ್ಳುತ್ತೇವೆ. ಆದರೆ, ಮತಾಂಧನ ಜಯಂತಿಗೆ ನಮ್ಮ ವಿರೋಧವಿದ್ದು ಪ್ರಜಾಪ್ರಭುತ್ವದ ಇತಿಮಿತಿಯಲ್ಲೇ ಹೋರಾಟ ರೂಪಿಸಲಾಗುವುದು. ಕಾಂಗ್ರೆಸ್ ಇಂತಹ ಮತೀಯ ವ್ಯಕ್ತಿಯ ವೈಭವೀಕರಣದಿಂದ ತನ್ನ ಜನಬೆಂಬಲ ಕಳೆದುಕೊಳ್ಳುತ್ತಿದೆ. ಇನ್ನೊಂದೆಡೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸುವಾಗ ದೇವೇಗೌಡರು, ಕುಮಾರಸ್ವಾಮಿಯವರು ಸರ್ಕಾರದ ವತಿಯಿಂದ ಆಚರಣೆ ಅಗತ್ಯವಿರಲಿಲ್ಲ ಎಂದು ಹೇಳಿದ್ದರು. ಈಗ ಸರ್ಕಾರದ ವತಿಯಿಂದಲೇ ಆಚರಿಸುತ್ತಿರುವುದು ಎಷ್ಟು ಸರಿ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕ್ರಮ
ಬಿಜೆಪಿಯವರು ಅನಗತ್ಯವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಯಾರೇ ವಿರೋಧ ತೋರಿದರೂ ಈ ವರ್ಷವೂ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ಶಿಷ್ಟಾಚಾರದ ಪ್ರಕಾರ ಕೇಂದ್ರ ಸಚಿವರ ಹೆಸರು ಹಾಕಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದ ಮೂರ್ತಿ ಅವರ ಬಗ್ಗೆ ಅಪಾರ ಗೌರವವಿದೆ. ಪ್ರತಿಯೊಬ್ಬರಿಗೂ ವಾಕ್‌ಸ್ವಾತಂತ್ರ್ಯವಿದ್ದು, ಅದರಂತೆ ಅವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಟಿಪ್ಪು ಜಯಂತಿ ಆಚರಣೆ ವಿಚಾರ ಹಿಂದೆಯೇ ತೀರ್ಮಾನವಾಗಿದ್ದು, ಅದರಂತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯು ಟಿಪ್ಪು ಜಯಂತಿ ವಿಚಾರವಿಟ್ಟುಕೊಂಡು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಸಹಿಸುವುದಿಲ್ಲ. ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಸೋಮವಾರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗುವುದು. ಕೆಎಸ್‌ಆರ್‌ಪಿ ಹಾಗೂ ಸಿಎಆರ್ ಪಡೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಒಬ್ಬ ಸಮಾಜಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿ ಆಚರಿಸಲು ಹೊರಟಿರುವುದು ನಿಜಕ್ಕೂ ಖಂಡನೀಯ. ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ
ಶಿಷ್ಟಾಚಾರದ ಪ್ರಕಾರ ಕೇಂದ್ರ ಸಚಿವರ ಹೆಸರು ಹಾಕಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ.
– ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.