ವೈದ್ಯರ ಪ್ರತಿಭಟನೆ ನ್ಯಾಯ ಸಿಕ್ಕಿದ್ದು ಯಾರಿಗೆ
Team Udayavani, Nov 11, 2019, 10:14 AM IST
ನಾಲ್ಕು ತಿಂಗಳ ಹಿಂದೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದು ದೃಷ್ಟಿ ಕಳೆದುಕೊಂಡವರಿಗೆ ನ್ಯಾಯ ಕೊಡಿಸಲು ಕರವೇ ಪ್ರತಿಭಟನೆಗಿಳಿದಿತ್ತು. ಆದರೆ ಪ್ರಕರಣ ಬೇರೆಯದೇ ತಿರುವು ಪಡೆಯಿತು. ಕರವೇಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮೆಡಿಕಲ್ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು. ಹಲ್ಲೆ ಆರೋಪಿಗಳ ಬಂಧನ ಜತೆಗೆ ವೈದ್ಯರ ರಕ್ಷಣೆಗಾಗಿಯೇ ಹತ್ತಾರು ಬೇಡಿಕೆ ಇಟ್ಟು ಒಂದು ವಾರ ಆಗ್ರಹಿಸಿದರು. ಬೇಡಿಕೆಗೆ ಅಂತಿಮವಾಗಿ ಸರ್ಕಾರದಿಂದ ಆಶ್ವಾಸನೆ ಸಿಕ್ಕಿತು. ಈ ಹಿನ್ನೆಲೆ ವೈದ್ಯರ ಬೇಡಿಕೆಗಳು, ಸದ್ಯದ ವೈದ್ಯರ ಮೇಲಿನ ಹಲ್ಲೆ ತಡೆಗೆ ಇರುವ ಕಾನೂನುಗಳೇನು, ಬದಲಾಗಬೇಕಿರುವುದೇನು, ಈ ಹಿಂದಿನ ವೈದ್ಯರ ಹಲ್ಲೆ ಪ್ರಕರಣಗಳ ಅಂಕಿ ಸಂಖ್ಯೆ ಕುರಿತು ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…
ಪ್ರಕರಣದ ಕೇಂದ್ರ ಬಿಂದು ಇವರು. ಆದರೆ, ಇವರನ್ನು ಬಿಟ್ಟು ಎಲ್ಲವೂ ಚರ್ಚೆಯಾಯಿತು. ಕಣ್ಣು ಕಳೆದುಕೊಂಡವರ ನೋವಿನಿಂದ ಪ್ರಕರಣ ಆರಂಭವಾಗುತ್ತದೆ. ಏಕಾಏಕಿ ವೈದ್ಯರ ಹಲ್ಲೆ ಆರೋಪದಿಂದ ಪ್ರತಿಭಟನೆ ರೂಪು ತಾಳುತ್ತದೆ. ವೈದ್ಯರ ಹಲ್ಲೆ ಖಂಡಿಸಿ ಒಂದು ವಾರ ಪ್ರತಿಭಟನೆಯೂ ನಡೆಯುತ್ತದೆ. ಈ ಪ್ರತಿಭಟನೆ ತೀವ್ರಸ್ವರೂಪ ಪಡೆದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಮುಚ್ಚುವ ಮಟ್ಟಕ್ಕೂ ತಲುಪುತ್ತದೆ. ಈ ವೈದ್ಯರ ಪ್ರತಿಭಟನೆ ಕಾವಲ್ಲಿ ಕಣ್ಣು ಕಳೆದುಕೊಂಡವರು ಪಕ್ಕಕ್ಕೆ ಸರಿಯುತ್ತಾರೆ. ಜೀವನವನ್ನೆ ಕತ್ತಲಾಗಿಸಿಕೊಂಡು ದಾರಿ ಕಾಣದೆ ನಿಂತ ಅವರ ಬದುಕಿಗೊಂದು ಸಿಗಬೇಕಿದ್ದ ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಈ ಪ್ರಕರಣದಿಂದ ಅಂತಿಮವಾಗಿ ಎಲ್ಲರಿಗೂ ಕಾಡಿದ ಪ್ರಶ್ನೆ “ನ್ಯಾಯ ಸಿಕ್ಕಿದ್ದು ಯಾರಿಗೆ’?
- ಯಾರಬ್ ನಗರ ನಿವಾಸಿ ಖೀಜರ್ (60) 40 ವರ್ಷಗಳಿಂದ ಟೈಲರ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಎರಡೂ ಕಣ್ಣುಗಳಿಗೆ ಸಾಕಷ್ಟು ಹಾನಿಯಾಗಿದ್ದು, “ಇಂದು ಸೂಜಿಗೆ ದಾರ ಪೋಣಿಸಲು ಆಗುತ್ತಿಲ್ಲ ಮುಂದಿನ ಜೀವನ ಹೇಗೆ?’ ಎನ್ನುತ್ತಿದ್ದಾರೆ.
- ದೊಡ್ಡಬಳ್ಳಾಪುರ ರಾಜಣ್ಣ (60) ಗಾರೆ ಕೆಲಸ ಮಾಡುತ್ತಿದ್ದರು. ಶಸ್ತ್ರಚಿಕಿತ್ಸೆಯಿಂದ ಎಡಗಣ್ಣು ಹೋಗಿದ್ದು, ಬಲಗಣ್ಣು ಕೂಡ ದೃಷ್ಟಿ ಹೋಗುವ ಸಾಧ್ಯತೆ ಇದೆ. “ಪತ್ನಿ ಮತ್ತು ನಾನು ಮಾತ್ರ ಮನೆಯಲ್ಲಿದ್ದೇವೆ. ಈಗ ಕೆಲಸ ಮಾಡಲು ಆಗುತ್ತಿಲ್ಲ. ನಮಗೇನು ಪರಿಹಾರ, ನಮ್ಮ ನೋಡಿಕೊಳ್ಳುವವರು ಯಾರು?’ ಎಂಬ ಮಾತುಗಳನ್ನಾಡುತ್ತಾರೆ.
- ಕಾಟನ್‌ಪೇಟೆ ನಿವಾಸಿ ಶಾರದಮ್ಮ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಕೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಂತರ ಎಡಗಣ್ಣಿನ ದೃಷ್ಟಿ ಸಂಪೂರ್ಣ ಹೋಗಿದೆ. ಸದ್ಯ ಕಣ್ಣಿಗೆ ಹಾಕಿರುವ ಹೊಲಿಗೆ ತೆಗೆಯದ ವೈದ್ಯರು ಹೆಚ್ಚಿನ ಚಿಕಿತ್ಸೆ ಕೇಳಿದರೆ ಡ್ರಾಪ್ ಕೊಟ್ಟುಹಾಕಿಕೊಳ್ಳಿ ಎಂದು ವಾಪಸ್ ಕಳಿಸುತ್ತಿದ್ದಾರೆ. ತೀವ್ರ ನೋವಿನಿಂದ ಕೆಲಸ ಮಾಡಲು ಆಗದೇ ನಿತ್ಯ ಕಷ್ಟದ ಜೀವನ ನಡೆಸುತ್ತಿದ್ದಾರೆ.
- ಆನೆಪಾಳ್ಯ ನಿವಾಸಿ ಮಿರ್ಜಾ ಅಜರ್ ಅಲಿ (67) ಆಟೋ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಲೈಸೆನ್ಸ್ ಅವಧಿ ಮುಗಿಯುತ್ತಿತ್ತು ಅದರ ನವೀಕರಣಕ್ಕೂ ಮುಂಚೆ ಮಿಂಟೋ ಆಸ್ಪತ್ರೆಗೆ ಕಣ್ಣಿನ ಚಿಕಿತ್ಸೆಗಾಗಿ ಬಂದು ಶಸ್ತ್ರಚಿಕಿತ್ಸೆಗೊಳಗಾಗಿ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಆನಂತರ ಖಾಸಗಿ ಆಸ್ಪತ್ರೆಯಲ್ಲಿ 80 ಸಾವಿರ ರೂ. ಖರ್ಚು ಮಾಡಿ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿದರೂ ಕಣ್ಣು ಮರಳಿಲ್ಲ. ಸದ್ಯ ಕಾರು ಚಲಾಯಿಸಲು ಆಗುತ್ತಿಲ್ಲ ಮುಂದಿನ ಜೀವನದ ಚಿಂತೆಯಲ್ಲಿದ್ದಾರೆ.
– ಇದು ಮಿಂಟೋ ಆಸ್ಪತ್ರೆಯಲ್ಲಿ ಜುಲೈ 9ರಂದು ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಔಷಧ ವ್ಯತ್ಯಯದಿಂದ ಕಣ್ಣು ಕಳೆದುಕೊಂಡ ಕೆಲವರ ಮಾತು. ಇದೇ ರೀತಿ 20ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಹಾನಿಯಾಗಿದೆ. ಈ ಪೈಕಿ ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಎಂಟು ಮಂದಿ ಒಂದು ಕಣ್ಣು ಕಳೆದುಕೊಂಡಿದ್ದಾರೆ. ಬಹುತೇಕರು ವಯಸ್ಸಾದವರೇ ಆಗಿದ್ದು, ಬಡತನ ಜತೆಯಲ್ಲಿಯೇ ಇದೆ. ಕಣ್ಣು ಕಳೆದುಕೊಂಡ ನಂತರ ಇವರುಗಳ ಬದುಕು ಮೂರಾಬಟ್ಟೆಯಾಗಿದೆ. vಕಣ್ಣು ಕಳೆದುಕೊಂಡವರಿಗೆ ಸರ್ಕಾರ ಮೂರು ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಹಣದಿಂದ ಅವರ ಬದುಕಿಗೆ ದಾರಿಯಾಗುತ್ತದೆಯೇ? ಸರ್ಕಾರ ನೀಡುವ ಮೂರು ಲಕ್ಷ ರೂ. ಮುಂದಿನ ಜೀವನಕ್ಕೆ ಸಾಕಾಗಲಿದೆಯೇ? ಮುಂದಿನ ಚಿಕಿತ್ಸೆಯ ಜವಾಬ್ದಾರಿ ಯಾರು ನಿಭಾಯಿಸುತ್ತಾರೆ? ಕಣ್ಣು ಇಲ್ಲದೆ ಜೀವನ ಹೇಗೆ ಸಾಗಿಸಬೇಕು? ಸರ್ಕಾರಿ ಆಸ್ಪತ್ರೆಗಳನ್ನು ಜನರು ಎಷ್ಟರ ಮಟ್ಟಿಗೆ ನಂಬಬೇಕು? ಎಂಬೆಲ್ಲಾ ಪ್ರಶ್ನೆಗಳು ಇವರನ್ನು ಕಾಡಲಾರಂಭಿಸಿವೆ.
ಹೊರಗಡೆ ಚಿಕಿತ್ಸೆಗೆ ಲಕ್ಷ ಖರ್ಚಾಗಿದೆ: ಮಿಂಟೋ ಶಸ್ತ್ರ ಚಿಕಿತ್ಸೆ ನಂತರ ಕಣ್ಣು ಹಾನಿ ಮಾಡಿಕೊಂಡವರ ಪೈಕಿ ಬಹುತೇಕರು ಇತರೆ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆದಿದ್ದಾರೆ. “ಕಣ್ಣು ಮರಳ ಬಹುದು ಎಂಬ ಆಸೆಯಿಂದ ಲಕ್ಷ ರೂ. ವರೆಗೂ ಖರ್ಚು ಮಾಡಿದ್ದಾರೆ. ಹಣ ಖರ್ಚಾಗಿದೆಯೇ ಹೊರತು ದೃಷ್ಟಿ ಮರಳಿಲ್ಲ. ಸರ್ಕಾರ ನೀಡುವ ಪರಿಹಾರ ಇಷ್ಟು ದಿನ ನಾವು ಮಾಡಿದ ಆಸ್ಪತ್ರೆ ಖರ್ಚಿಗೆ ಸಾಕಾಗುತ್ತದೆ. ಇನ್ನು ನಮ್ಮ ಜೀವನಕ್ಕೇನು ಮಾಡಬೇಕು’ ಎನ್ನುತ್ತಾರೆ ಕಣ್ಣು ಕಳೆದುಕೊಂಡ ಹಲವರು.
ಬದುಕು ಕತ್ತಲಾಗಿಸಿ ದುಡ್ಡು ಕೊಟ್ಟರೇನು ಬಂತು?: ಕಣ್ಣು ಕಳೆದುಕೊಂಡವರಲ್ಲಿ ಬಹುತೇಕರು ತಾವೇ ದುಡಿದು ಜೀವನ ಸಾಗಿಸುತ್ತಿದ್ದವರು. ಸದ್ಯ ಇಲ್ಲದೇ ಇದ್ದ ಕೆಲಸವು ಮಾಡಲಾಗುತ್ತಿಲ್ಲ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಚಿಕ್ಕ ಪುಟ್ಟ ಕೆಲಸಗಳಿಗೂ ಮತ್ತೂಬ್ಬರನ್ನು ಆಶ್ರಯಿಸಬೇಕಿದೆ. ಕಣ್ಣಿನ ಚಿಕಿತ್ಸೆಗೆಂದು ಒಬ್ಬನೇ ಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ಶಸ್ತ್ರ ಚಿಕಿತ್ಸೆಯ ಬಳಿಕ ಕಣ್ಣಿಗೆ ಹಾನಿ ಬಳಿಕ, ಹತ್ತಾರು ಆಸ್ಪತ್ರೆ ಸುತ್ತಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಇಂದು ಶೌಚಾಲಯಕ್ಕೆ ಹೋಗಿಬರಲು ಒಬ್ಬರ ಸಹಾಯ ಬೇಕಾಗಿದೆ ಎಂದು ನೋವಿನಿಂದ ಹೇಳುತ್ತಾರೆ ಕಣ್ಣುಕಳೆದುಕೊಂಡ ರಾಜಣ್ಣ.
ಪರಿಹಾರ ನೀಡಲಾಗುತ್ತಿದೆ: ಘೋಷಣೆಯಂತೆ ಕಣ್ಣುಕಳೆದುಕೊಂಡವರಿಗೆ ಸರ್ಕಾದಿಂದ ಮೂರು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಸದ್ಯ ಒಬ್ಬರಿಗೆ ಹಣ ಸಂದಾಯವಾಗಿದ್ದು, ಉಳಿದವರಿಗೆ ದಾಖಲಾತಿ ಒದಗಿಸುವಂತೆ ತಿಳಿಸಿದ್ದೇವೆ. ಮುಂದೆ ಔಷಧ ಕಂಪನಿಯಿಂದ ಪರಿಹಾರ ಹಣ ವಸೂಲಿ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಕಾನೂನು ಏನಿದೆ? : 2009ರಲ್ಲಿ ರಾಜ್ಯದಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ಸಂಸ್ಥೆಗಳ ಮೇಲಿನ ಹಲ್ಲೆ ಕುರಿತು ಪ್ರತ್ಯೇಕ ಕಾಯ್ದೆ ಜಾರಿಗೊಳಿಸಿದೆ. ಇತರ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ವರೆಗೂ ದಂಡ ವಿಧಿಸಬಹುದು. ಜತೆಗೆ ಹಾನಿ ಮಾಡಿದವ ಆಸ್ತಿ ಮೂರುಪಟ್ಟು ದಂಡವನ್ನು ಹಾನಿ ಮಾಡಿರುವ ವ್ಯಕ್ತಿಯೇ ನೀಡಬೇಕಿದೆ.
ಕೇಂದ್ರ ಸರ್ಕಾರರಿಂದ ಹೊಸ ಕಾಯ್ದೆ: ದೇಶಾದ್ಯಂತ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಇಲಾಖೆ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್ ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ಸಿದ್ಧಪಡೆಸಿದೆ. ಇದರಡಿಯಲ್ಲಿ ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವಬಹುದು. ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲಾಗುತ್ತಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.
ದಶಕದಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು 263: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆದಿವೆ. 2010ರಿಂದ 2019ರ (ಜನವರಿ ಅಂತ್ಯಕ್ಕೆ) ಅವಧಿಯಲ್ಲಿ 263 ಮಂದಿ ವೈದ್ಯರು ಹಲ್ಲೆಗೆ ಒಳಗಾಗಿದ್ದಾರೆ. ಇದರಲ್ಲಿ ರಾಜಧಾನಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಮೂರು ವರ್ಷದಲ್ಲಿ 23ಕ್ಕೂ ಹೆಚ್ಚು ವೈದ್ಯರ ಮೇಲೆ ಹಲ್ಲೆಯಾಗಿದೆ. ಅದೇ ರೀತಿ, ಮಂಗಳೂರಿನಲ್ಲಿ 12, ಶಿವಮೊಗ್ಗದಲ್ಲಿ 10, ದಾವಣಗೆರೆಯಲ್ಲಿ 7, ಹಾಸನದಲ್ಲಿ 6, ಚಿಕ್ಕಮಗಳೂರಿನಲ್ಲಿ 5 ಪ್ರಕರಣ ವರದಿಯಾಗಿವೆ. ಪ್ರಾಥಮಿಕ ಹಾಗೂ ತಾಲೂಕು ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿಲ್ಲ.
2009ರಲ್ಲಿ ರಾಜ್ಯದ ವೈದ್ಯರ ಮೇಲಿನ ಹಲ್ಲೆ ಕುರಿತ ಕಾಯ್ದೆ ಜಾರಿಯಾದ ವೇಳೆ ಜಾಮೀನು ರಹಿತ ಮೂರು ವರ್ಷ ಜೈಲು ಶಿಕ್ಷೆ ಇತ್ತು. ಬಳಿಕ ಜಾಮೀನು ರಹಿತ ಶಿಕ್ಷೆ ಪ್ರಮಾಣವನ್ನು ಏಳು ವರ್ಷಕ್ಕೆ ಹೆಚ್ಚಿಸಲಾಯಿತು. ಆದರೆ ಕಾಯ್ದೆ ತಿದ್ದುಪಡಿಗೆ ಯಾವ ಸರ್ಕಾರವೂ ಮುಂದಾಗಲಿಲ್ಲ. ವೈದ್ಯರ ಮೇಲಿನ ಹಲ್ಲೆಗೆ ಏಳು ವರ್ಷದ ಜಾಮೀನು ರಹಿತ ಶಿಕ್ಷೆ ಜಾರಿಯಾಗಬೇಕು. -ಎಸ್.ಶ್ರೀನಿವಾಸ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ
ಕಾಯ್ದೆ ತಿದ್ದು ಪಡಿಗಿಂತಲೂ ಇರುವ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಹಲ್ಲೆಗೆ ಶಿಕ್ಷೆ ಏನಿದೆ ಎಂಬ ಕುರಿತು ಜನರಿಗೆ ಮಾಹಿತಿ ನೀಡಬೇಕು. ಹಲ್ಲೆಯಾದಾಗ ವೈದ್ಯರು ಪೊಲೀಸ್ ಠಾಣೆಗೆ ದೂರು ನೀಡಿ, ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. -ಕೆ.ವಿ.ಧನಂಜಯ, ಸುಪ್ರಿಂ ಕೋರ್ಟ್ ವಕೀಲ
-ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.