ಕಸ ವಿಲೇವಾರಿ ಸಮಸ್ಯೆ ಮತ್ತೆ ಉಲ್ಬಣ?
Team Udayavani, Aug 1, 2019, 3:10 AM IST
ಬೆಂಗಳೂರು: ನಗರದಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿದ್ದು, ಪ್ರತಿ ವಾರ್ಡ್‌ನಿಂದ ನಿತ್ಯ ಸಂಸ್ಕರಣ ಘಟಕಗಳಿಗೆ ರವಾನೆಯಾಗುತ್ತಿದ್ದ ಎರಡು ಲೋಡ್‌ಗಳಷ್ಟು ಕಸವನ್ನು ಒಂದು ಲೋಡ್‌ಗೆ ಸೀಮಿತಗೊಳಿಸಲಾಗಿದೆ.
ಪ್ರಸ್ತುತ ಬೆಳ್ಳಳ್ಳಿಯ ಡಂಪಿಂಗ್ ಯಾರ್ಡ್‌ಗೆ ಕಸ ರವಾನೆಯಾಗುತ್ತಿದ್ದು, ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವಷ್ಟು ಕಸ ಅಲ್ಲಿ ತುಂಬಿಸಲು ಆಗುತ್ತಿಲ್ಲ. ಒಂದು ವಾರದ ಹಿಂದೆ ಬೆಳ್ಳಳ್ಳಿ ಸುತ್ತಮುತ್ತ ಮಳೆಯಾಗಿರುವ ಕಾರಣ ಕ್ವಾರಿಯ ಒಳಭಾಗಕ್ಕೆ ಕಾಂಪ್ಯಾಕ್ಟರ್‌ಗಳು ಹೋಗಲು ಆಗುತಿಲ್ಲ. ಅಲ್ಲದೆ ಬೆಳ್ಳಳ್ಳಿ ಕ್ವಾರಿಯು ಕಸದಿಂದ ತುಂಬಿದೆ. ಇನ್ನೂ ಹೆಚ್ಚಿನ ತ್ಯಾಜ ಅಲ್ಲಿ ಸುರಿಯಲು ಸ್ಥಳೀಯರು ತೀವ್ರವಾಗಿ ವಿರೋಧಿಸುತಿದ್ದಾರೆ. ಹಾಗಾಗಿ ಕಳೆದ ಒಂದು ವಾರದಿಂದ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಷ್ಟವಾಗುತ್ತಿದೆ.
ಮಿಟಗಾನಹಳ್ಳಿಯಲ್ಲಿ ಬದಲಿ ಜಾಗ ಗುರುತಿಸಿದ್ದರೂ ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ, ನಗರದ ಬಹುತೇಕ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ತಲೆ ಎತ್ತಿವೆ. ಕಳೆದೊಂದು ವಾರದಿಂದ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದ್ದು, ವಾರ್ಡ್‌ಗಳಲ್ಲಿ ಮತ್ತೆ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೇ ಮುಂದುವರಿದರೆ ನೂತನ ಬಿಜೆಪಿ ಸರ್ಕಾರಕ್ಕೆ ತಲೆನೋವಾಗುವ ಸಾಧ್ಯತೆಯೂ ಇದೆ.
ಕಸದ ಸಮಸ್ಯೆ ಎಲ್ಲೆಲ್ಲಿ ಹೆಚ್ಚು?: ನಗರದ ಕೆ.ಆರ್.ಮಾರುಕಟ್ಟೆ, ನಾಯಂಡಹಳ್ಳಿ ಹೊರ ವರ್ತುಲ ರಸ್ತೆ, ಗಾಂಧಿನಗರ, ಕೋರಮಂಗಲ, ಸದಾಶಿವನಗರ, ಡಾಲರ್ಸ್ ಕಾಲೋನಿ, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಶಿವಾಜಿನಗರ, ಜಯನಗರ, ವಿಜಯನಗರ, ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಕಸ ವಿಲೆವಾರಿ ಸಮರ್ಪಕವಾಗಿ ಆಗುತ್ತಿಲ್ಲ.
ಮೂರು ದಿನಗಳಿಂದೀಚೆಗೆ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಬ್ಲಾಕ್ ಸ್ಪಾಟ್‌ಗಳಿಂದ ಬರುತ್ತಿರುವ ದುರ್ವಾಸನೆಯಿಂದ ಸ್ಥಳೀಯರು ಕಂಗಾಲಾಗಿದ್ದಾರೆ. ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯರಿಗೆ ದೂರು ನೀಡಿದರೂ ಪ್ರಯೋಜನ ಆಗುತಿಲ್ಲ ಎಂದು ನಾಯಂಡಹಳ್ಳಿ ನಿವಾಸಿ ಶ್ರೀನಿವಾಸ್ ಹೇಳುತ್ತಾರೆ.
ಸದ್ಯ ಮಿಟಗಾನಹಳ್ಳಿಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಮುಗಿಯುತಿದ್ದಂತೆ ಕಸ ವಿಲೇವಾರಿ ಸುಲಭವಾಗಲಿದೆ. ಅಲ್ಲಿಯ ತನಕ ಸದ್ಯ ಎದುರಾಗಿರುವ ಕಸದ ಸಮಸ್ಯೆ ನಿರ್ವಹಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗುವುದು ಎಂದು ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ಘಟಕಗಳ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳುತ್ತಾರೆ.
ಗುತ್ತಿಗೆದಾರರು ಏನಂತಾರೆ?: ಬೆಳ್ಳಳ್ಳಿ ಕ್ವಾರಿಗೆ ಸುರಿಯ್ತುತಿರುವ ಕಸದ ಪೈಕಿ ಕಾರ್ಪೊರೇಟ್ ಕಂಪನಿ, ರಿಯಲ್ ಎಸ್ಟೇಟ್ ಕಂಪನಿಗಳ ಕಟ್ಟಡ ತ್ಯಾಜ್ಯ, ವಾಣಿಜ್ಯ ಮಳಿಗೆಗಳ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ಆದ್ಯತೆ ಮೇರೆಗೆ ಅಲ್ಲಿನ ಕಸ ವಿಲೇವಾರಿ ಮಾಡುತಿದ್ದು, ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ಕಾಂಪ್ಯಾಕ್ಟರ್‌ಗಳಲ್ಲೇ ಕೊಳೆಯುವಂತಾಗಿದೆ. ನಗರದಲ್ಲಿ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗುತ್ತಿಗೆದಾರ ಬಾಲಸುಬ್ರಮಣ್ಯ ತಿಳಿಸುತ್ತಾರೆ.
ನಿತ್ಯ 4500 ಟನ್ ಕಸ ಸಂಗ್ರಹ: ಪ್ರತಿನಿತ್ಯ ಬೆಂಗಳೂರಿನಲ್ಲಿ 4500 ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡಲು ಬಿಬಿಎಂಪಿ ಹೊರವಲಯಗಳಲ್ಲಿ 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರೆದಿದೆ. ಕನ್ನಹಳ್ಳಿ, ಸೀಗೆಹಳ್ಳಿ, ಚಿಕ್ಕನಾಗಮಂಗಲ, ಸುಬ್ಬರಾಯನಪಾಳ್ಯ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು ಮತ್ತು ದೊಡ್ಡಬಳ್ಳಾಪುರದಲ್ಲಿ ಈ ತ್ಯಾಜ್ಯ ಸಂಸ್ಕರಣಾ ಘಟಕಗಳು ನಿರ್ಮಾಣವಾಗಿವೆ.
ದಿನವೊಂದಕ್ಕೆ ಪ್ರತಿ ಘಟಕದಲ್ಲಿ 100ರಿಂದ 150 ಟನ್ ಕಸ ವಿಲೇವಾರಿ ಆಗುತ್ತಿದೆ. ಈ ಪೈಕಿ 2000-2500ಟನ್ ಬೆಳ್ಳಳ್ಳಿ ಕ್ವಾರಿಯ ಹಳ್ಳಗಳಿಗೆ ತುಂಬಲಾಗು¤ತಿದೆ. 1000-1500 ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದ್ದು, ಇದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ಎಂದು ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ.
ಕಸ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆ. ಹೊಸ ಡಂಪಿಂಗ್ ಯಾರ್ಡ್ ನಿರ್ವಹಣೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಸದ ಸಮಸ್ಯೆ ಎದುರಾಗಿರಬಹುದು. ಈವರೆಗೆ ಯಾವುದೇ ದೂರು ಬಂದಿಲ್ಲ.
-ಎನ್.ಮಂಜುನಾಥ ಪ್ರಸಾದ್, ಪಾಲಿಕೆ ಆಯುಕ್ತ
ಈಗಾಗಲೇ ಕಸದ ಸಮಸ್ಯೆ ಬಗೆಹರಿಸಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮೂರು ದಿನಗಳ ಒಳಗೆ ಮಿಟಗಾನಹಳ್ಳಿ ಡಂಪಿಂಗ್ ಯಾರ್ಡ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನಗರದ ಎಲ್ಲಾ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ತೆರವು ಮಾಡಲಾಗುವುದು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್
ಒಂದು ವಾರದಿಂದ ಕಸ ವಿಲೇವಾರಿಯಾಗದೆ ಕೆ.ಆರ್ ಮಾರುಕಟ್ಟೆ ಆವರಣದಲ್ಲಿ ಕಸ ರಾಶಿ ಬಿದ್ದಿದ್ದು, ಕೆಟ್ಟ ವಾಸನೆ ಆವರಿಸಿದೆ. ಕಸದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆಂತಕ ಎದುರಾಗಿದೆ.
-ಮುರುಗೇಶ್, ತರಕಾರಿ ವ್ಯಾಪಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.