ಗಲಭೆ ಸುತ್ತ ಅನುಮಾನದ ಹುತ್ತ
ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿಯಲ್ಲಿ ತನಿಖೆ, ಸಂಶಯ, ಶಂಕೆ, ಆರೋಪ-ಪ್ರತ್ಯಾರೋಪ
Team Udayavani, Aug 24, 2020, 11:41 AM IST
ಕೆ.ಜಿ.ಹಳ್ಳಿ- ಡಿ.ಜೆ.ಹಳ್ಳಿಯಲ್ಲಿ ಬೆಂಕಿ ಬಿದ್ದ ಮನೆಗಳಲ್ಲಿ ನೋವು ಇನ್ನೂ ಆರಿಲ್ಲ. ಬೆಂಕಿ ಹಚ್ಚಿ ಗಲಭೆ ಸೃಷ್ಟಿಸಿದವರ ಮನೆಗಳಲ್ಲಿ ಆತಂಕ ದೂರವಾಗಿಲ್ಲ. ಪುಂಡರ ಮಾತು ಕೇಳಿ ಗಲಭೆಯಲ್ಲಿ ಪಾಲ್ಗೊಂಡ ಯುವಕರು ಮನೆ, ಮಡದಿಯಿಂದ ದೂರ. ಅರ್ಧಂಬರ್ಧ ಸುಟ್ಟು ಕರಕಲಾಗಿರುವ ಶಾಸಕರ ನಿವಾಸ- ಆಪ್ತರ ಮನೆ, ಗೋಡೆ, ವಾಹನಗಳು ಗಲಭೆ ಭೀಕರತೆ ಮೂಕ ಸಾಕ್ಷ್ಯ ಹೇಳುತ್ತಿವೆ… ಇದರ ಮಧ್ಯೆ ಪೊಲೀಸರ ಕಣ್ಗಾವಲು ಜತೆ ಜತೆಗೆ ಜನ ಜೀವನ, ವ್ಯಾಪಾರ ವಹಿವಾಟು, ಸಹಜ ಸ್ಥಿತಿಗೆ ಮರಳುತ್ತಿದೆ. ಎರಡು ವಾರಗಳ ಹಿಂದೆ ತೀವ್ರ ಗಲಭೆ ಉಂಟಾಗಿ ಬೂದಿಮುಚ್ಚಿದ ಕೆಂಡದಂತಿದ್ದು, ಗಲಭೆಯ ಒಳ ಹೊರ ಚಿತ್ರಣ ಇಂದಿನ ಸುದ್ದಿ ಸುತ್ತಾಟದಲ್ಲಿ..
ದೇವರ ಜೀವನಹಳ್ಳಿ, ಕಾಡುಗೊಂಡನಹಳ್ಳಿ ಎಂಬ ಎರಡು ಪ್ರದೇಶಗಳು ಭಿನ್ನ ಸ್ವರೂಪದ ಮೂಲಕ ಗುರುತಿಸಿಕೊಂಡಿವೆ. ಅನಕ್ಷರತೆ, ಬಡತನದ ಜತೆಗೆ ಆರ್ಥಿಕವಾಗಿ ಹಿಂದುಳಿದವರೇ ಪ್ರಧಾನವಾಗಿರುವ ಈ ಪ್ರದೇಶಗಳಲ್ಲಿ ನಿರ್ದಿಷ್ಟ ಕೋಮಿನ ಜನ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದರೂ ಕಳೆದ ಎರಡು ದಶಕಗಳಿಂದ ಈ ಭಾಗದಲ್ಲಿ ತೀವ್ರತರವಾದ ಗಲಭೆ, ದೊಂಬಿ ನಡೆದಿರಲಿಲ್ಲ. ಆದರೆ, ಶಾಸಕರ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಅವಹೇಳನಕಾರಿ ಫೋಸ್ಟ್ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಬರೋಬ್ಬರಿ 22 ವರ್ಷಗಳ ಬಳಿಕ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಿಂಸಾತ್ಮಕ ಗಲಭೆಗೆ ಸಾಕ್ಷಿಯಾಗಿದೆ. ಗಲಭೆ ಸೃಷ್ಟಿಸಿದವರು ಸರತಿ ಸಾಲಿನಲ್ಲಿ ಜೈಲು ಸೇರುತ್ತಿದ್ದಾರೆ. ಅವರ ಕುಟುಂಬಸ್ಥರು ಕಣ್ಣೀರುಡುತ್ತಿದ್ದಾರೆ.
ಮತ್ತೂಂದೆಡೆ ಗಲಭೆಯಿಂದ ಇಡೀ ವ್ಯವಸ್ಥೆಯೇ ಮೂರ್ನಾಲ್ಕು ದಿನ ಸ್ತಬ್ಧಗೊಂಡಿತ್ತು. ವ್ಯಾಪಾರ- ವಹಿವಾಟು ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಣಾಮ ಕೋಟ್ಯಂತರ ರೂ.ಗಳ ನಷ್ಟ ಕೂಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅವುಗಳ ನಡುವೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಪಡೆಗಳ ಕಣ್ಗಾವಲು, ಭದ್ರತೆಯಿಂದ ಸಹಜ ಸ್ಥಿತಿಗೆ ಮರಳುತ್ತಿದೆ.
ರಾಜಕಾರಣ ಹಿಡಿತದ ಒಳಗುಟ್ಟು!: ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈ ಮೊದಲು ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಮತ್ತೆ ಶಾಸಕರಾಗಿ ಭಾರೀ ಅಂತರದಿಂದ ಜಯಗಳಿಸಿದ್ದರು. ಅಂದಿನಿಂದ ಕೆಲ ಮೂಲ ಕಾಂಗ್ರೆಸಿಗರು ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಶಾಸಕರ ವಿರುದ್ಧ ಹಗೆ ಸಾಧಿಸುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ಶಾಸಕರ ಸಂಬಂಧಿ ನವೀನ್ ಸಾಮಾಜಿಕ ಜಾಲತಾಣದಲ್ಲಿ ಅವಳಹೇನಾಕಾರಿ ಸಂದೇಶ ಪೋಸ್ಟ್ ಮಾಡಿದ್ದ. ಮತ್ತೂಂದೆಡೆ ಗಲಭೆ ಕುರಿತ ಪೊಲೀಸರ ತನಿಖೆಯ ಅಂಶಗಳನ್ನು ಅವಲೋಕಿಸಿದಾಗ ಗಲಭೆ ಹಿಂದೆ ಸ್ಥಳೀಯ ರಾಜಕಾರಣದ ಹಿಡಿತವಿತ್ತೇ ಎಂಬ ಅನುಮಾನ ದಟ್ಟವಾಗಿದೆ. ಇದಕ್ಕೆ ಇಂಬು ನೀಡುವಂತೆ ಸ್ಥಳೀಯ ಜೆಡಿಎಸ್ ಮುಖಂಡ ವಾಜೀದ್ ಪಾಷಾ ಮತ್ತು ಎಸ್ ಡಿಪಿಐನ ಮುಜಾಮೀಲ್ ಪಾಷಾ ಸೇರಿ ಕೆಲವರು ಸಂಚು ರೂಪಿಸಿರುವುದು ಕಂಡು ಬಂತು. ಅಲ್ಲದೆ, ಮಾಜಿ ಮೇಯರ್ ಕಾಂಗ್ರೆಸ್‌ನ ಸಂಪತ್ ರಾಜ್, ಪಾಲಿಕೆ ಸದಸ್ಯ ಜಾಕಿರ್ ಸೇರಿದಂತೆ ಇಬ್ಬರು ಮಹಿಳಾ ಪಾಲಿಕೆ ಸದಸ್ಯೆಯರ ಪತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆಯೇ ಇಡೀ ಗಲಭೆಗೆ ಸ್ಫೋಟಕ ತಿರುವು ಸಿಕ್ಕಿದ್ದು, ಇದೊಂದು ರಾಜಕೀಯ ಪ್ರೇರಿತ ಗಲಭೆ ಎಂಬುದು ಪೊಲೀಸರಿಗೆ ದೃಢವಾಗಿತ್ತು. ಅಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಶಂಕಿತ ಭಯೋತ್ಪಾದಕರು ಸಹಕಾರ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು.
ಉಗ್ರ ಲಿಂಕ್?: ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಎಸ್ ಡಿಪಿಐನ ಸಮೀವುದ್ದೀನ್‌ಗೆ ಬಾಂಗ್ಲಾದೇಶ ಮೂಲಕ ಅಲ್ -ಹಿಂದ್ ಉಗ್ರ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ ಕುರಿತ ಮಾಹಿತಿಯೂ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ. ಜತೆಗೆ, ಕೆಲ ವರ್ಷಗಳ ಹಿಂದೆ ಶಿವಾಜಿನಗರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳ ಜತೆಗೂ ಸಂಪರ್ಕವಿದ್ದ ವಿಚಾರ ಬಯಲಾಗಿದೆ. ಮತ್ತೂಂದೆಡೆ ಕೆಲ ವರ್ಷಗಳ ಹಿಂದೆ ನಡೆದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಜತೆ ಸಂಪರ್ಕ ಹೊಂದಿದ್ದ ಮೊಹಮ್ಮದ್ ಜೈದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈ ಅಂಶಗಳು ಆರೋಪಿ ಸಮೀವುದ್ದೀನ್ ಮತ್ತು ಜೈಸ್ ಸೇರಿ ಹಲವರು ಡಿ.ಜೆ. ಹಳ್ಳಿ ಹಾಗೂ ಕೆ.ಜಿ.ಹಳ್ಳಿಗಳನ್ನು ಉಗ್ರ ಚಟುವಟಿಕೆಗಳ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿದ್ದರೇ ಎಂಬುದರ ಅನುಮಾನ ಹುಟ್ಟಿಕೊಂಡಿದ್ದು, ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಸಮೀವುದ್ದೀನ್ ಪತ್ನಿ ಫಾತೀಮಾ ನಡೆಸುತ್ತಿರುವ ನಾರಿ ಎಂಬ ಸ್ವಯಂ ಸೇವಾಸಂಸ್ಥೆಗೆ ವಿದೇಶದಿಂದ ಹಣ ಬರುತ್ತಿದ್ದು, ಈ ಹಣ ವನ್ನು ಗಲಭೆಗೆ ಬಳಸಲಾಗಿದ್ದು, ಸಿಸಿಬಿ ಅವರು ಈ ಆಯಾಮ ದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಮತ್ತೂಂದೆಡೆ ಅದಕ್ಕೆ ಆಕ್ಷೇಪಿಸಿದ ಫಾತೀಮಾ, “ಸಂಸ್ಥೆಗೂ ಸಮೀವುದ್ದೀನ್ ಗೂ ಸಂಬಂಧವಿಲ್ಲ. ಕಾರ್ಯಕ್ರಮದ ವೆಚ್ಚವನ್ನು ಸಂಬಂಧಕರು, ಸ್ನೇಹಿತರೆ ಭರಿಸುತ್ತಿದ್ದಾರೆ’ ಎಂದು ಸಮಜಾಯಿಷಿ ನೀಡಿದ್ದರು. ಆದರೂ, ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ.
ಎಂಟು ತಂಡಗಳಾಗಿ ಕೃತ್ಯ : ಆ.11ರಂದು ನಡೆದ ಗಲಭೆಗೆ ಎರಡು ತಿಂಗಳ ಸಂಚು ರೂಪಿಸಲಾಗಿತ್ತು. ಜೆಡಿಎಸ್ ಮುಖಂಡ ವಾಜೀದ್ ಪಾಷಾ ಎರಡು ತಿಂಗಳ ಹಿಂದೆ ಶಾಸಕರು ನಾಪತ್ತೆಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಈ ಸಂಬಂಧ ಶಾಸಕರು ಡಿ.ಜೆ.ಹಳ್ಳಿ ಠಾಣೆಯಲ್ಲಿ ದೂರು ನೀಡಲು ತೆರಳಿದ್ದರು. ಆದರೆ, ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು. ಅಂದಿನಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಎಲ್ಲರೂ ಶಾಸಕರ ಸಂಬಂಧಿ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡುತ್ತಿದ್ದಂತೆ ವಾಜೀದ್ ಪಾಷಾ, ಮುಜಾಮೀಲ್ ಪಾಷಾ ಸೇರಿ ಹತ್ತಾರು ಮಂದಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು. ಡಿ.ಜೆ. ಹಳ್ಳಿ ಠಾಣೆಯಲ್ಲಿ ನವೀನ್ ವಿರುದ್ಧ ದೂರು ನೀಡಲು ಆಗಮಿಸುವ ಮೊದಲೇ ಎಂಟು ತಂಡ ರಚಿಸಿಕೊಂಡಿದ್ದರು. ಆರೋಪಿಗಳು, ಮುಖಂಡರ ಒಂದು ತಂಡ ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ನೀಡುವುದು. ಒಂದು ವೇಳೆ ಪೊಲೀಸರು ತಮ್ಮ ಬೇಡಿಕೆಗೆ ಒಪ್ಪದಿದ್ದರೆ ಕೂಡಲೇ ಗಲಭೆ ಸೃಷಿcಸಲು ಸಿದ್ಧತೆ ನಡೆಸಿದ್ದರು. ಅದೇ ಮಾದರಿಯಲ್ಲಿ 80 ಮಂದಿಯ ಒಂದು ತಂಡ ನಾಲ್ಕು ಬಾರಿ ಶಾಸಕರ ಮನೆ ಮೇಲೆ ದಾಳಿ ನಡೆಸಿತ್ತು. ಮತ್ತೂಂದು ತಂಡ ನವೀನ್ ಮೇಲೆ ದಾಳಿ ನಡೆಸಿತ್ತು. ಮೂರನೇ ತಂಡ ಮುನೇಗೌಡ ಹಾಗೂ ಇತರೆ ಮನೆಗಳ ಮೇಲೆ ದಾಳಿ ನಡೆಸಿತ್ತು. ನಾಲ್ಕು ಮತ್ತು ಐದನೇ ತಂಡ ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿತ್ತು. 6ನೇ ಮತ್ತು 7ನೇ ತಂಡ ಠಾಣೆಗಳ ಮುಂಭಾಗ ನಿಂತಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರೆ, ಎಂಟನೇ ತಂಡ ಶಾಸಕರು ಹಾಗೂ ಎರಡು ಠಾಣೆಗಳ ವ್ಯಾಪ್ತಿಯ ರಸ್ತೆ ಗಳಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಧ್ವಂಸ ಮಾಡಿತ್ತು. ಈ ಎಲ್ಲ ತಂಡ ಗಳು ಪೊಲೀಸರ ದಿಕ್ಕು ತಪ್ಪಿಸಲು ಒಂದೇ ಸಮಯದಲ್ಲಿ ದಾಳಿ ನಡೆಸಿವೆ.
450 ಮಂದಿ ಬಂಧನ: 15 ಕೋಟಿ ನಷ್ಟ? : ಪ್ರಕರಣ ಸಂಬಂಧ 73 ಎಫ್ಐಆರ್ ದಾಖಲು ಮಾಡಲಾಗಿದ್ದು, 450ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರು ಶಂಕಿತರು, ಇಬ್ಬರು ಸ್ಥಳೀಯ ಪಕ್ಷದ ಮುಖಂಡರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಎಂಬುದು ಗೊತ್ತಾಗಿದೆ. ಶಾಸಕರು, ನವೀನ್ ಮತ್ತು ಅವರ ಆಪ್ತರ ಮನೆಗಳು ಸೇರಿ ವಾಹನಗಳು ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಈ ಎಲ್ಲದರ ನಷ್ಟವನ್ನು ಬರೋಬ್ಬರಿ 15 ಕೋಟಿ ರೂ. ಅಧಿಕ ಎಂದು ಅಂದಾಜಿಸಲಾಗಿದೆ.
ರಾಜಕೀಯ ಲಾಭದ ಲೆಕ್ಕಾಚಾರ : ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೆ ನಾಂದಿ ಹಾಡಿದೆ. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಗಲಭೆ ನಡೆದಿದ್ದರೂ, ಅಲ್ಪಸಂಖ್ಯಾತ ಸಮುದಾಯ ದವರು ಗಲಭೆ ನಡೆಸಿದ್ದಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನವರು ತಮ್ಮದೇ ಪಕ್ಷದ ದಲಿತ ಸಮುದಾಯದ ಶಾಸಕ ಅಖಂಡ ಶ್ರೀನಿವಾಸ್ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂದು ಬಿಜೆಪಿ ಆರೋಪ ಮಾಡುವ ಮೂಲಕ ರಾಜಕೀಯ ದಾಳ ಉರುಳಿಸಿದೆ. ಗಲಭೆ ನಡೆದ ಆರಂಭದಲ್ಲಿ ಎಸ್‌ಡಿಪಿಐ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿದ್ದ ಬಿಜೆಪಿ ಆ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿತು. ಬಿಜೆಪಿಯವರ ಆರೋಪಕ್ಕೆ ಕಾಂಗ್ರೆಸ್ ಕೂಡ ಎಸ್‌ಡಿಪಿಐಯನ್ನು ನಿಷೇಧಿಸಲಿ ಎಂದು ಒತ್ತಾಯ ಮಾಡಲು ಆರಂಭಿಸಿದ್ದರಿಂದ ಸರ್ಕಾರ ಗೊಂದಲಕ್ಕೆ ಸಿಲುಕಿದಂತಾಗಿ, ನೇರವಾಗಿ ಕಾಂಗ್ರೆಸ್ ಕೈವಾಡದ ಬಗ್ಗೆಯೇ ಬಿಜೆಪಿ ನಾಯಕರು ಆರೋಪಿಸಲು ಶುರು ಮಾಡಿದರು. ಅಲ್ಲದೇ ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ವಿಶೇಷವಾಗಿ ನಗರದ ಕಾರ್ಪೊರೇಟರ್‌ಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿರುವುದರಿಂದ ಈ ಗಲಭೆ ರಾಜ್ಯಕೀಯ ಲಾಭ ನಷ್ಟದ ಲೆಕ್ಕಾಚಾರಕ್ಕೆ ತಿರುಗಿದಂತಾಗಿದೆ.
ಅಲ್ಲದೇ ಕಾಂಗ್ರೆಸ್‌ನಲ್ಲಿ ವಲಸಿಗರು ಹಾಗೂ ಮೂಲ ಕಾಂಗ್ರೆಸ್ ನಡುವಿನ ಒಳ ಜಗಳದಿಂದ ಈ ಘಟನೆ ಸಂಭವಿಸಿದೆ ಎನ್ನುವುದನ್ನೇ ಬಿಜೆಪಿ ಬಲವಾಗಿ ಪ್ರತಿಪಾದಿಸುವ ಪ್ರಯತ್ನ ನಡೆಸಿದ್ದು, ಇದು ಕಾಂಗ್ರೆಸ್‌ನಲ್ಲಿ ಗೊಂದಲಕ್ಕೂ ಕಾರಣವಾಗಿದೆ. ಈ ಮಧ್ಯೆ, ಪ್ರಕರಣದಲ್ಲಿ ಸರ್ಕಾರ ಪೊಲೀಸ್ ಕಮಿಷನರ್ ಅವರನ್ನು ಬಳಸಿಕೊಂಡು ಅಮಾಯಕರ ಮೇಲೆ ಆರೋಪ ಹೊರಿಸಿ ಅವರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂಬುದಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದ್ದು, ಇದು ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಎಂಬ ವಾದ ಬಿಜೆಪಿಯಿಂದ ವ್ಯಕ್ತವಾಗುತ್ತಿದೆ. ಎರಡೂ ಪಕ್ಷಗಳ ಆರೋಪ ಪ್ರತ್ಯಾ ರೋಪಗಳ ನಡುವೆ ಅಲ್ಪ ಸಂಖ್ಯಾತ ಸಮು ದಾಯದವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳುವ ಮೂಲಕ ಈ ಕ್ಷೇತ್ರದಲ್ಲಿ ಭವಿಷ್ಯದ ರಾಜಕೀಯ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡೇ ಎಲ್ಲ ಪಕ್ಷಗಳೂ ನಡೆದುಕೊಳ್ಳುತ್ತಿವೆ ಎಂಬ ಮಾತುಗಳಿಗೆ ಪುಷ್ಟಿ ನೀಡು ವಂತಿವೆ. ಈಗಾಗಲೇ ಸರ್ಕಾರ ಗಲಭೆಯ ತನಿಖೆಯನ್ನು ಮ್ಯಾಜಿಸ್ಟ್ರೇಟ್ ಮೂಲಕ ಮಾಡಿಸುತ್ತಿದ್ದು, ಕಾಂಗ್ರೆಸ್ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದೆ. ಆದರೆ, ಸರ್ಕಾರ ಅದನ್ನು ಒಪ್ಪುತ್ತಿಲ್ಲ. ಈ ಗಲಭೆ ಮುಂಬರುವ ಬಿಬಿಎಂಪಿ ಚುನಾವಣಾ ವಿಷಯವಾಗುವ ಎಲ್ಲ ಸಾಧ್ಯತೆಗಳು ಇವೆ.
– ಮಂಜುನಾಥ ಲಘುಮೇನಹಳ್ಳಿ/ ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.