ಚೇತರಿಕೆಯತ್ತ ಸಿದ್ಧಗಂಗಾ ಶ್ರೀ
Team Udayavani, Jan 27, 2018, 6:00 AM IST
ಬೆಂಗಳೂರು: ಶತಾಯುಷಿ, ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿಕೊಂಡ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ದಿಢೀರ್ ಅನಾರೋಗ್ಯ ಕಾಣಿಸಿದ ಹಿನ್ನೆಲೆಯಲ್ಲಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶ್ರೀಗಳು ಚೇತರಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜೆ ಮುಗಿಸಿದ ನಂತರ ಶ್ರೀಗಳಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಕೂಡಲೇ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಗತ್ಯ ಪರೀಕ್ಷೆ ನಡೆಸಿ, ಬಳಿಕ ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬರಲಾಯಿತು. ಈಗ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಸಂಪೂರ್ಣ ಗುಣಮುಖರಾದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಶನಿವಾರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುವುದು. ಭಾನುವಾರ ಅಥವಾ ಸೋಮವಾರ ಆಸ್ಪತ್ರೆಯಿಂದ ಡಿಸಾcರ್ಜ್ ಮಾಡುವ ಸಾಧ್ಯತೆಯಿದೆ. ಮಠದಲ್ಲೂ ಶ್ರೀಗಳ ಆರೋಗ್ಯ ತಪಾಸಣೆಗಾಗಿ ವ್ಯವಸ್ಥೆ ಮಾಡಲಾಗಿದೆ.
ಸಿದ್ದರಾಮಯ್ಯ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಎಂ.ಕೃಷ್ಣಪ್ಪ, ನಿವೃತ್ತ ಡಿಜಿಪಿ ಶಂಕರ ಬಿದರಿ, ಕೂಡಲ ಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ, ಮೇಯರ್ ಸಂಪತ್‌ರಾಜ್ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಗೆ ಧಾವಿಸಿ ಶ್ರೀಗಳ ಆರೋಗ್ಯ ವಿಚಾರಿಸಿದರು.
ಶ್ರೀಗಳ ಆಶೀರ್ವಾದವೇ ಶ್ರೀರಕ್ಷೆ:
ಶಸ್ತ್ರ ಚಿಕಿತ್ಸೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ವೆಂಕಟರಮಣ, ಶ್ರೀಗಳಿಗೆ ಡಾ.ರವೀಂದ್ರ ನೇತೃತ್ವದ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಶ್ರೀಗಳು ಈಗ ಕ್ಷೇಮವಾಗಿದ್ದು ಮಾತನಾಡುತ್ತಿದ್ದಾರೆ ಎಂದರು.
ಶ್ರೀಗಳ ದೇಹದಲ್ಲಿ ಎಂಟು ಸ್ಟೆಂಟ್‌ಗಳಿದ್ದು, ಇಂದು ಸಹ ಮೂರು ಸ್ಟೆಂಟ್ ಅಳವಡಿಸಲಾಗಿದೆ. ಶ್ರೀಗಳ ಆಶೀರ್ವಾದದಿಂದಲೇ ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದೇವೆ. ಪಿತ್ತನಾಳದಲ್ಲಿ ಬ್ಲಾಕೇಜ್ ತೆರವುಗೊಳಿಸಲಾಗಿದೆ. ಪಿತ್ತನಾಳ ಬ್ಲಾಕ್ ಆಗಿದ್ದರಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು. ನ್ಯೂಮೋನಿಯಾದಿಂದ ಶ್ರೀಗಳು ಬಳಲುತ್ತಿದ್ದು ಶ್ರೀಗಳಿಗೆ ರಕ್ತದ ಒತ್ತಡ ಸಹ ಕಡಿಮೆಯಿದೆ. ಹೀಗಾಗಿ, ಅನೆಸ್ತೇಷಿಯಾ ಕೊಡಲು ಕಷ್ಟವಾಗಿತ್ತು. ಇದೀಗ ಸ್ಟೆಂಟ್ ಅಳವಡಿಕೆಯಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು.
ವಿಶ್ರಾಂತಿ ಅಗತ್ಯ: ವೈದ್ಯರ ಹೇಳಿಕೆ
ಶ್ರೀಗಳಿಗೆ ಗುರುವಾರ ರಾತ್ರಿ ಏಕಾಏಕಿ ರಕ್ತದ ಒತ್ತಡ ಕಡಿಮೆಯಾಗಿತ್ತು. ಕಫ ಮತ್ತು ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ರಕ್ತದ ಒತ್ತಡ ಕೊಂಚ ಕಡಿಮೆ ಇದ್ದ ಕಾರಣ ತಕ್ಷಣ ಯಾವುದೇ ಚಿಕಿತ್ಸೆ ನೀಡಲಾಗಲಿಲ್ಲ. ಆಸ್ಪತ್ರೆ ವೈದ್ಯರು ಸಂಪೂರ್ಣ ತಪಾಸಣೆ ನಡೆಸಿದ ನಂತರ ಶ್ರೀಗಳ ಪಿತ್ತನಾಳದಲ್ಲಿ ಸೋಂಕು ಇರುವುದು ಪತ್ತೆ ಹಚ್ಚಲಾಯಿತು. ಮಧ್ಯಾಹ್ನದವರೆಗೆ ಶ್ರೀಗಳ ರಕ್ತದೊತ್ತಡ ಏರಿಕೆ ಗಮನಿಸಿ ಡಾ.ರವೀಂದ್ರ ಅವರ ತಂಡ ಪಿತ್ತನಾಳದ ಬ್ಲಾಕ್ ಸರಿಪಡಿಸಿತು. ಶ್ರೀಗಳಿಗೆ ಮೂರ್‍ನಾಲ್ಕು ದಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಆತಂಕ, ಈಗ ನಿರಾಳ
ಮಠದಲ್ಲಿ ಶ್ರೀಗಳಿಗೆ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ಮಠದ ಆವರಣದಿಂದ ನೇರವಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಗ್ಗೆ ವೈದ್ಯರು ದೃಢಪಡಿಸಿದ ನಂತರ ಭಕ್ತ ಸಮೂಹ ನಿರಾಳವಾಯಿತು.
ಆಸ್ಪತ್ರೆಯಲ್ಲೇ ಪೂಜೆ
ಸ್ಟೆಂಟ್ ಅಳವಡಿಕೆ ನಂತರ ಶ್ರೀಗಳು ಸಂಧ್ಯಾಕಾಲದ ಶಿವಪೂಜೆಯನ್ನು ಆಸ್ಪತ್ರೆಯ ವಾರ್ಡ್‌ನಲ್ಲಿಯೇ ನೆರವೇರಿಸಿದರು. ಶನಿವಾರ ಮುಂಜಾನೆ ವೈದ್ಯಕೀಯ ತಪಾಸಣೆ ನಂತರ ಶಿವಪೂಜೆಗೆ ಆಸ್ಪತ್ರೆ ವಾರ್ಡ್‌ನಲ್ಲೇ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಕೋಟ್ಯಂತರ ಜನರ ಹಾರೈಕೆ ಫಲಿಸಿದೆ. ಶ್ರೀಗಳು ಕ್ಷೇಮವಾಗಿದ್ದಾರೆ. ನಾಳೆ ಶ್ರೀಗಳ ಆರೋಗ್ಯ ಸ್ಥಿತಿ ಯಥಾಸ್ಥಿತಿಯಲ್ಲಿರಲಿದೆ. ಮೂರ್‍ನಾಲ್ಕು ದಿನಗಳಲ್ಲಿ ಮಠಕ್ಕೆ ತೆರಳಲಿದ್ದಾರೆ. ಅದುವರೆಗೂ ಸಾರ್ವಜನಿಕರು ಶಾಂತಿ ಕಾಪಾಡಬೇಕು.
– ಬಿ.ಎಸ್.ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ.
ಶ್ರೀಗಳ ಜತೆ ನಾನೇ ನೇರವಾಗಿ ಮಾತನಾಡಿದ್ದೇನೆ. ಆರೋಗ್ಯದಿಂದ ಇದ್ದಾರೆ. ನನ್ನ ಬಳಿ ಮೂರು ಬಾರಿ ಪ್ರಸಾದ ಸ್ವೀಕರಿಸಿದಿರಾ? ಎಂದು ಕೇಳಿದರು. ಅವರು ಬೇಗ ಗುಣಮುಖರಾಗಲಿ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.