ಡಿಡಿ ರೋಶಿನಿ ವಾಹಿನಿಗೆ ಚಾಲನೆ
Team Udayavani, Dec 7, 2018, 12:18 PM IST
ಬೆಂಗಳೂರು: ಬಿಬಿಎಂಪಿ ಶಾಲೆ, ಕಾಲೇಜು ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ದಿಂದ ದೂರದರ್ಶನದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ “ಡಿಡಿ ರೋಶಿನಿ’ ಕಲಿಕಾ ವಾಹಿನಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚಾಲನೆ ನೀಡಿದರು.
ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳು ಬಿಬಿಎಂಪಿ ರೋಶಿನಿ ಹೆಸರಿನಡಿ ಪಾಲಿಕೆಯ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ಅದರ ಭಾಗವಾಗಿ “ಕಲಿಕೆಗೆ ಮಿತಿಯಿಲ್ಲ’ ಎಂಬ ಘೋಷವಾಕ್ಯದಡಿ ಡಿಡಿ ರೋಶಿನಿ ವಾಹಿನಿ ಜಾರಿಗೊಳಿಸಲಾಗಿದೆ. ಅದರಂತೆ ಪಾಲಿಕೆಯ 156 ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ಸ್ಯಾಟಲೈಟ್ ಶಿಕ್ಷಣ ದೊರೆಯಲಿದ್ದು, ಮಕ್ಕಳು ಮನೆಯಲ್ಲಿ ಕುಳಿತೇ ಶಾಲೆಯಲ್ಲಿ ನಡೆಯುವ ಪಾಠ, ಪರೀಕ್ಷೆ ಸಿದ್ಧತೆಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಡಿಡಿ ರೋಶಿನಿ ವಾಹಿನಿಯು ಬಿಬಿಎಂಪಿ ಶಾಲಾ ಮಕ್ಕಳು, ಶಿಕ್ಷಕರ ವೀಕ್ಷಣೆಗೆ ಸೀಮಿತವಾಗಿದೆ. ಪ್ರತಿಯೊಂದು ಶಾಲೆಯಲ್ಲಿ ಅಳವಡಿಸಿರುವ ಸ್ಮಾರ್ಟ್ ಟಿವಿ, ಮಕ್ಕಳು ಹಾಗೂ ಶಿಕ್ಷಕರಿಗೆ ಉಚಿತವಾಗಿ ನೀಡುವ ಟ್ಯಾಬ್‌ನಲ್ಲಿ ಮಾತ್ರ ವಾಹಿನಿ ಪ್ರಸಾರ ವಾಗುವಂತೆ ತಂತ್ರಾಂಶ ಸಿದ್ಧಪಡಿಸಲಾಗಿದೆ. ಇದರಿಂದಾಗಿ ಶಾಲೆಗೆ ಅನಿವಾರ್ಯ ಕಾರಣಗಳಿಂದ ಬರಲಾಗದ ಮಕ್ಕಳು, ಟ್ಯಾಬ್ ಮೂಲಕ ಪಾಠ ಕೇಳಬಹುದು.
ಡಿಡಿ ರೋಶಿನಿ ಚಾನೆಲ್‌ನಲ್ಲಿ ಮೂರು ರೀತಿಯ ಪಠ್ಯದ ಮಾಹಿತಿ ಪ್ರಸಾರವಾಗಲಿದೆ. ಬೆಳಗ್ಗೆ 6ರಿಂದ 10ವರೆಗೆ ಪರೀಕ್ಷಾ ಪೂರ್ವ ಸಿದ್ಧತಾ ಪಠ್ಯ, ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಿತ್ಯದ ಪಾಠ ಹಾಗೂ ಸಂಜೆ 5ರಿಂದ ರಾತ್ರಿ 10ರವರೆಗೆ ಹಿಂದಿನ ತರಗತಿಗಳ ಮರುಪ್ರಸಾರ ಮಾಡಲಾಗುತ್ತದೆ. ನಿತ್ಯ 18 ಗಂಟೆಗಳ ಕಾಲ ವಾಹಿನಿ ಮಕ್ಕಳ ಕಲಿಕೆಗೆ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಏಪ್ರಿಲ್ ವೇಳೆಗೆ 12 ವಾಹಿನಿಗಳು: ಪ್ರಾರಂಭಿಕ ಹಂತ ದಲ್ಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಾಹಿನಿಗೆ ಚಾಲನೆ ನೀಡಲಾಗಿದೆ. ಏಪ್ರಿಲ್ ವೇಳೆಗೆ 1ರಿಂದ 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಪ್ರತ್ಯೇಕ ವಾಹಿನಿಗಳನ್ನು ದೂರದರ್ಶನದ ಸಹಭಾಗಿತ್ವದಲ್ಲಿ ಪರಿಚಯಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಅದರಂತೆ ವಾಹಿನಿ ಪ್ರಸಾರಕ್ಕಾಗಿ ದೂರದರ್ಶನಕ್ಕೆ ಗಂಟೆಗೆ 2 ಸಾವಿರ ರೂ.ಗಳಂತೆ ದಿನವೊಂದಕ್ಕೆ 36 ಸಾವಿರ ರೂ. ನೀಡಲಾಗುತ್ತಿದೆ. ವಾಹಿನಿಯ ಮೂಲಕ ಮಕ್ಕಳಿಗೆ ಪಠ್ಯ ಕಲಿಸಲು ಒಟ್ಟು 5 ವರ್ಷಕ್ಕೆ 100 ಕೋಟಿ ರೂ. ವೆಚ್ಚ ಮಾಡಲು ಯೋಜನೆ ರೂಪಿಸಲಾಗಿದೆ.
ವಿದೇಶಗಳಿಂದಲೂ ಪಾಠ: ಬಿಬಿಎಂಪಿ ಶಾಲಾ- ಕಾಲೇಜು ಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶ ದಿಂದ ಬಿಬಿಎಂಪಿ ಶಿಕ್ಷಕರೊಂದಿಗೆ, ವಿದೇಶಗಳ ನುರಿತ ಶಿಕ್ಷಕರಿಂದಲೂ ವಾಹಿನಿ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತದೆ. ಪಾಲಿಕೆಯ ಶಾಲೆಗಳಲ್ಲಿ ಅಳವಡಿಸುವಂತಹ 64 ಇಂಚಿನ ಸ್ಮಾರ್ಟ್ ಟಿವಿ ಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.
ಉಪಾಹಾರವಿಲ್ಲದೆ ಬಳಲಿದ ವಿದ್ಯಾರ್ಥಿಗಳು ಡಿಡಿ ರೋಶಿನಿ ವಾಹಿನಿ ಚಾಲನೆ ಕಾರ್ಯಕ್ರಮಕ್ಕೆ ನಗರದ ವಿವಿಧ ಶಾಲೆಗಳಿಂದ ಕರೆತರಲಾಗಿದ್ದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12 ಗಂಟೆಯಾದರೂ ಬೆಳಗಿನ ಉಪಾಹಾರ ಕೊಡಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸುಸ್ತಾಗಿದ್ದರು. ಬೆಳಗಿನ ತಿಂಡಿಯನ್ನು ಕಾರ್ಯಕ್ರಮದಲ್ಲಿ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿತ್ತು. ನಿಗದಿಯಂತೆ ಕಾರ್ಯಕ್ರಮ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಒಂದು ಗಂಟೆ ತಡವಾಗಿ ಬಂದ ಕಾರಣ ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಗೆ ಬೆಳಗಿನ ತಿಂಡಿ ಸೇವಿಸಿದರು.
ರಾಜ್ಯಾದ್ಯಂತ ಸೌಲಭ್ಯ ಜಾರಿಗೆ ಚಿಂತನೆ ಪಾಲಿಕೆಯ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗ ದೊರೆಯುತ್ತಿರುವ ಸೌಲಭ್ಯಗಳು ರಾಜ್ಯದ ಎಲ್ಲ ಬಡ ಮಕ್ಕಳಿಗೂ ದೊರೆಯಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಡಿಡಿ ರೋಶಿನಿ ವಾಹಿನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆ ಶಾಲೆಗಳ ಮಕ್ಕಳಿಗೆ ಅತ್ಯುತ್ತಮ ಸೌಲಭ್ಯಗಳು ದೊರೆಯುತ್ತಿವೆ. ಇದೇ ಮಾದರಿಯ ಸೌಲಭ್ಯಗಳು ರಾಜ್ಯದ ಉಳಿದ ಭಾಗಗಳ ಮಕ್ಕಳಿಗೂ ಸಿಕ್ಕರೆ, ಅವರೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಹೀಗಾಗಿ ರಾಜ್ಯಾ ದ್ಯಂತ ಇಂತಹ ಯೊಜನೆಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಬುದ್ಧಿವಂತರಾಗಿದ್ದಾರೆ. ಆದರೆ, ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಜತೆಗೆ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಅವೆಲ್ಲವುಗಳಿಗೆ ಶೀಘ್ರವೇ ಪರಿಹಾರ ದೊರೆಯಲಿದೆ ಎಂದು ಭರವಸೆ ನೀಡಿದರು.
ಬಿಬಿಎಂಪಿ ಶಾಲೆ, ಕಾಲೇಜು ಮಕ್ಕಳಿಗೆ 21ನೇ ಶತಮಾನದ ಶಿಕ್ಷಣ ನೀಡಲು ಮುಂದಾಗಿರುವ ಮೈಕ್ರೋಸಾಫ್ಟ್ ಸಂಸ್ಥೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಿಗೂ ಯೋಜನೆಯನ್ನು ವಿಸ್ತರಿಸಿದರೆ, ರಾಜ್ಯದ ಎಲ್ಲ ಬಡ ಮಕ್ಕಳೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೆಹಲಿ ದೂರದರ್ಶನ ಕೇಂದ್ರದ ಮಹಾನಿರ್ದೇಶಕಿ ಸುಪ್ರಿಯಾ ಸಾಹು, ಟೆಕ್ ಅವಂತ್ ಗಾರ್ಡ್ ಮುಖ್ಯಸ್ಥ ಅಲಿ ಸೇಠ್…, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಸೇರಿ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.