ಡ್ರಗ್ಸ್ ಪ್ರಕರಣ : ಹೆಡ್ ಕಾನ್‌ಸ್ಟೇಬಲ್ ಬಂಧನ
ಆರೋಪಿಗಳಾದ ದರ್ಶನ್ ಲಮಾಣಿ, ತಂಡಕ್ಕೆ ತಾಂತ್ರಿಕ ನೆರವು ನೀಡಿದ ಆರೋಪದ ಮೇಲೆ ಪ್ರಭಾಕರ್ ಸೆರೆ
Team Udayavani, Nov 21, 2020, 11:54 AM IST
ಬೆಂಗಳೂರು: ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ ಮತ್ತು ತಂಡಕ್ಕೆ ತಾಂತ್ರಿಕ ನೆರವು ನೀಡಿದ ಆರೋಪದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಪ್ರಭಾಕರ್ ಅವರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಸುನೀಶ್ ಹೆಗ್ಡೆ, ಹೇಮಂತ್ ಮುದ್ದಪ್ಪ ಹಾಗೂ ಇತರೆ ಆರೋಪಿಗಳು ಕೋರಿಕೆ ಮೇರೆಗೆ ಲೋಕೇಷನ್, ಸಿಡಿಆರ್ ಹಾಗೂ ಇತರೆ ತಾಂತ್ರಿಕ ಸಹಾಯವನ್ನು ಪ್ರಭಾಕರ್ ಮಾಡುತ್ತಿದ್ದರು. ಸುಮಾರು ಒಂದೂವರೆ ವರ್ಷಗಳಿಂದ ಈ ರೀತಿಯ ಕರ್ತವ್ಯಲೋಪ ಎಸಗುತ್ತಿದ್ದರು. ಅಲ್ಲದೆ, ಕೆಲ ಪರಿಚಯಸ್ಥ ಸಾರ್ವಜನಿಕರಿಂದಲೂ ಹಣ ಪಡೆದು ಸಹಾಯ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಠಾಣೆಯಲ್ಲಿಯೇ ಸಹಾಯ: ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಆರೋಪದಲ್ಲಿ ಬಂಧನವಾಗಿರುವ ಸುನೀಶ್ ಹೆಗ್ಡೆ, ಹೇಮಂತ್ ಹಾಗೂ ಇತರೆ ಆರೋಪಿಗಳಿಗೆ ಡ್ರಗ್ಸ್ ಬೇಕೆಂದು ಕರೆ ಮಾಡುತ್ತಿದ್ದ ಗ್ರಾಹಕರು ಅಥವಾ ಇತರರು ಕರೆ ಮಾಡಿದಾಗ ಅವರು ನಿಜವಾದ ಗ್ರಾಹಕರೇ ಅಥವಾ ಬೇರೆ ವ್ಯಕ್ತಿಗಳೇ? ಅವರು ಎಲ್ಲಿದ್ದಾರೆ? ಎಂಬುದನ್ನು ಪ್ರಭಾಕರ್ ಖಚಿತ ಪಡಿಸಿ ಆರೋಪಿಗಳಿಗೆ ಹೇಳುತ್ತಿದ್ದರು. ಈ ಎಲ್ಲ ಕೃತ್ಯವನ್ನು ಪ್ರಭಾಕರ್ ಠಾಣೆಯಿಂದಲೇ ನಿರ್ವಹಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆರೋಪಿಗಳಿಗೆ ನಿರಂತರ ನೆರವು: ಸುನೀಶ್ ಹೆಗ್ಡೆ, ಪ್ರಸಿದ್ ಶೆಟ್ಟಿ ಅಪಾರ್ಟ್‌ಮೆಂಟ್‌ಗಳು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲೇ ಇವೆ. ಈ ಹಿಂದೆ ಆರೋಪಿಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಮತ್ತು ಪ್ರಭಾಕರ್ ನಡುವೆ ಪರಿಚಯವಾಗಿದೆ. ಆಗ ಪ್ರಭಾಕರ್ ಕೌಶಲ್ಯತೆ ಬಗ್ಗೆ ಅರಿತ ಆರೋಪಿಗಳು, ನಿರಂತರವಾಗಿ ಅವರಿಂದ ನೆರವು ಪಡೆದು ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಲೋಕೇಷನ್ 2 ಸಾವಿರ, ಸಿಡಿಆರ್‌ಗೆ 10 ಸಾವಿರ: ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿದ್ದ ಪ್ರಭಾಕರ್‌ಗೆ ಇಲಾಖೆ ಮಾತ್ರವಲ್ಲದೆ, ಸಾರ್ವಜನಿಕರು, ಡ್ರಗ್ಸ್ ಡೀಲರ್‌ಗಳಿಂದಲೂ ಭಾರೀ ಬೇಡಿಕೆ ಇತ್ತು. ಕೆಲದಿನಗಳ ಹಿಂದೆ ಪ್ರಭಾಕರ್ ಅವರನ್ನು ಅಮಾನತುಗೊಳಿಸಿ ಮೊಬೈಲ್ ವಶಕ್ಕೆ ಪಡೆದುಕೊಂಡಾಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕೆಲವು ವ್ಯಕ್ತಿಗಳಿಗೆ ಸಹಾಯ ಮಾಡಿದ ಮಾಹಿತಿಯನ್ನು ಡಿಲೀಟ್ ಮಾಡಿದ್ದಾರೆ.
ಇನ್ನಷ್ಟು ಮಂದಿಗೆ ಸಹಾಯ ಮಾಡಿರುವ ಕುರಿತು ಅವರ ಮೊಬೈಲ್‌ನಲ್ಲಿಯೇ ದಾಖಲೆಗಳು ಸಿಕ್ಕಿವೆ. ಈ ಪ್ರಕಾರ ಡ್ರಗ್ಸ್ ಆರೋಪಿಗಳು ಮಾತ್ರವಲ್ಲದೆ, ನೂರಾರು ಮಂದಿಗೆ ನೆರವು ನೀಡಿದ್ದಾರೆ ಎಂಬುದು ಸಾಬೀತಾಗಿದೆ. ಮತ್ತೂಂದೆಡೆ ತನ್ನ ಅಕ್ರಮ ಕಾರ್ಯಕ್ಕೆ ಭಾರೀ ಬೇಡಿಕೆ ಇದ್ದರಿಂದ ಹೀಗಾಗಿ ಆರೋಪಿಗಳ ಕೋರಿಗೆ ಮೇರೆಗೆ ನೀಡುತ್ತಿದ್ದ ಪ್ರತಿ ಲೋಕೇಷನ್‌ಗೆ ಎರಡು ಸಾವಿರ ರೂ., ಸಿಡಿಆರ್‌ಗೆ 10 ಸಾವಿರ ರೂ. ಅನ್ನು ಪ್ರಭಾಕರ್ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಎಚ್ಚೆತ್ತುಕೊಳ್ಳದ ಪ್ರಭಾಕರ್: ಹೆಡ್ ಕಾನ್ ಸ್ಟೇಬಲ್ ಪ್ರಭಾಕರ್ ಸುಮಾರು ಎರಡು ವರ್ಷಗಳಿಂದ ಈ ರೀತಿಯ ಕರ್ತವ್ಯಲೋಪ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ. ಒಂದು ವರ್ಷದ ಹಿಂದೆಯೇ ಈ ರೀತಿಯ ಅವ್ಯವಹಾರ ಕುರಿತ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳು ಸುಮಾರು ಭಾರಿ ಎಚ್ಚರಿಕೆ ನೀಡಿದ್ದಾರೆ. ಅಮಾನತು ಮಾರುವುದಾಗಿಯೂ ಕೇಳಿದ್ದರು. ಆದರೂ ಪ್ರಭಾಕರ್ ಎಚ್ಚೆತುಕೊಳ್ಳದೆ ದಂಧೆಗೆ ನೆರವಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉತ್ತಮ ಕಾರ್ಯವೈಖರಿ : 3-4 ವರ್ಷಗಳ ಹಿಂದೆ ಪ್ರಭಾಕರ್ ಅವರನ್ನು ದೆಹಲಿಯಲ್ಲಿ ಆಯೋಜಿಸಿದ್ದ ಪೊಲೀಸ್ ತಾಂತ್ರಿಕ ಮತ್ತು ತಂತ್ರ ಜ್ಞಾನ ತರಬೇತಿಗೆಕಳುಹಿಸಲಾಗಿತ್ತು. ಸುಮಾರು ಒಂದೆ ರಡು ತಿಂಗಳ ತರಬೇತಿ ಪಡೆದು ಬಂದ ಬಳಿಕ ಪ್ರಭಾಕರ್ ತಾಂತ್ರಿಕವಾಗಿ ಬಲಿಷ್ಠರಾಗಿದ್ದರು. ಜತೆಗೆ ತಮ್ಮ ಕೆಲಸಕ್ಕೆ ನೆರವಾಗುವ ಐದಾರು ಸಾಫ್ಟ್ ವೇರ್ ಗಳನ್ನು ವೈಯಕ್ತಿಕವಾಗಿ ಖರೀದಿಸಿದ್ದಾರೆ. ಹೀಗಾಗಿ ಇಲಾಖೆಯಲ್ಲಿ ಅವರಿಗೆ ಬೇಡಿಕೆ ಇತ್ತು. ಸಿಸಿಬಿ ಸೇರಿ ನಗರ ಪೊಲೀಸ್ ವಿಭಾಗದಲ್ಲಿ ತಾಂತ್ರಿಕವಾಗಿ ಪತ್ತೆಯಾದ ಬಹಳಷ್ಟು ಪ್ರಕರಣಗಳನ್ನು ಪ್ರಭಾಕರ್ ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ. ಇತ್ತೀಚೆಗೆ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಶ್ರೀಗಂಧ ಮರಕಳವು, ಮಗು ಪತ್ತೆ, ಮನೆಕಳಲು ಸೇರಿ ಸಾಕಷ್ಟು ಪ್ರಕರಣಗಳ ಆರೋಪಿಗಳ ಪತ್ತೆಗೆ ಪ್ರಭಾಕರ್ ತಾಂತ್ರಿಕ ನೆರವು ನೀಡಿದ್ದಾರೆ. ಅಲ್ಲದೆ, ಸಿಸಿಬಿ ಕೆಲವೊಂದು ಪ್ರಕರಣಗಳಿಗೂ ಪ್ರಭಾಕರ್ ತಾಂತ್ರಿಕವಾಗಿ ಸಹಾಯ ಮಾಡಿದ್ದರಿಂದ ಆರೋಪಿಗಳ ಪತ್ತೆ ಹಚ್ಚಲಾಯಿತು ಎಂದು ಮೂಲಗಳು ತಿಳಿಸಿವೆ.
ಅಪಾರ್ಟ್‌ಮೆಂಟ್ ಖರೀದಿ : ಇತ್ತೀಚೆಗೆ ಪ್ರಭಾಕರ್ ಯಲಹಂಕದಲ್ಲಿ ಹೊಸ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಮಾರಾಟ ದಂಧೆ ಪ್ರಕರಣದಲ್ಲಿ ಮಾಜಿಸಚಿವ ರುದ್ರಪ್ಪ ಲಮಾಣಿಪುತ್ರ ದರ್ಶನ್ ಲಮಾಣಿಸೇರಿ ಎಂಟು ಮಂದಿಯನ್ನು ಸಿಸಿಬಿ ಮತ್ತು ದಕ್ಷಿಣ ವಿಭಾಗ ಪೊಲೀಸರು ಗೋವಾದಲ್ಲಿ ಬಂಧಿಸಿದ್ದರು. ಈ ಆರೋಪಿಗಳಿಗೆ ಪ್ರಭಾಕರ್ ನೆರವು ನೀಡಿದ್ದರು. ಈ ಸಂಬಂಧ ಕೆಲ ದಿನಗಳ ಹಿಂದೆ ಆರೋಪಿ ಹೆಡ್‌ಕಾನ್ ಸ್ಟೇಬಲ್‌ನನ್ನು ಅಮಾನತು ಮಾಡಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.