ಮನೆಯಲ್ಲೇ ಡ್ರಗ್ಸ್ ತಯಾರಿಸಿ ವಿದೇಶಕ್ಕೆ ಪೂರೈಕೆ
ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ನೈಜೀರಿಯಾ ಪ್ರಜೆ ಬಂಧನ: 2 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ
Team Udayavani, Sep 17, 2021, 3:37 PM IST
ಬೆಂಗಳೂರು: ನಗರ ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಆನ್‌ಲೈನ್, ಯುಟ್ಯೂಬ್ ಗಳನ್ನು ವೀಕ್ಷಿಸಿ ಮನೆಯಲ್ಲೇ ಸಿಂಥೆ ಟಿಕ್ ಡ್ರಗ್ಸ್ ಗಳನ್ನು ತಯಾರು ಮಾಡಿ, ಶೂಗಳ ಮೂಲಕ ವಿದೇಶಗಳಿಗೆ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ
ನೈಜೀರಿಯಾ ಮೂಲದ ಡೇವಿಡ್ ಜಾನ್(32) ಬಂಧಿತ. ಆತನಿಂದ ಎರಡು ಕೋಟಿ ರೂ. ಮೌಲ್ಯದ 4 ಕೆ.ಜಿ. ಎಂಡಿಎಂಎ ಮಾತ್ರೆಗಳು, ಅವುಗಳನ್ನು ತಯಾರು ಮಾಡಲು ಬೇಕಾದ ರಾಸಾಯನಿಕ ವಸ್ತುಗಳು, ಸಿಲಿಂಡರ್ ಗಳು, ಹಿಟಿಂಗ್ ಮೆಟಲ್, ಬ್ರ್ಯಾಡೆಂಡ್ ಶೂಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾ ಗಿದೆ. ಮತ್ತೊಬ್ಬ ವಿದೇಶಿ ಪ್ರಜೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2018ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿರುವ ಡೇವಿಡ್ ಜಾನ್, ಎಂಟು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಚಾಮುಂಡಿ ಲೇಔಟ್‌ನಲ್ಲಿ ಬಾಡಿಗೆ ಮನೆ ಪಡೆದು ತನ್ನ ಸ್ನೇಹಿತರ ಜತೆ ವಾಸವಾಗಿದ್ದ. ಈ ಮಧ್ಯೆ ವಿದೇಶದಲ್ಲಿರುವ ತನ್ನ ಪೆಡ್ಲರ್‌ಗಳ ಸಲಹೆ ಮೇರೆಗೆ ಆರೋಪಿ ಮನೆಯಲ್ಲೇ ಮಾದಕ ವಸ್ತು ಎಂಡಿಎಂಎ ತಯಾರು ಮಾಡಲು ಮುಂದಾಗಿದ್ದು, ಸ್ನೇಹಿತರ ಜತೆ ಸೇರಿ ಕೊಂಡು ಮಾದಕ ವಸ್ತು ತಯಾರು ಮಾಡಿ ಬೆಂಗಳೂರು, ನೆರೆ ರಾಜ್ಯ, ದೇಶ-ವಿದೇಶಗಳಿಗೆ ಕೋರಿಯರ್‌ಗಳ ಮೂಲಕ ಪೂರೈಕೆ ಮಾಡುತ್ತಿದ್ದ.
ಈ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಕೆ.ಸಿ.ಗೌತಮ್, ಇನ್‌ಸ್ಪೆಕ್ಟರ್ ವಿರೂಪಾಕ್ಷ ಸ್ವಾಮಿ, ಪಿಎಸ್‌ಐ ಪ್ರೇಮ್ ಕುಮಾರ್ ನೇತೃತ್ವದ ತಂಡ ಬುಧವಾರ ರಾತ್ರಿ ಆತನ ಮನೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಚಿಕ್ಕಮಗಳೂರು: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ
ಮನೆಯೇ ಡ್ರಗ್ಸ್ ತಯಾರು ಕಾರ್ಖಾನೆ: 2018ರಲ್ಲಿ ಡೇವಿಡ್ ಭಾರತಕ್ಕೆ ಬಂದು ಸಹೋದರನೊಂದಿಗೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ. ಫೆಬ್ರವರಿಯಲ್ಲಿ ನಗರಕ್ಕೆ ಬಂದು ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದಲ್ಲಿ ಬೆಟ್ಟದಾಸನಪುರದ ಚಾಮುಂಡಿ ಲೇಔಟ್‌ನಲ್ಲಿ ವೃದ್ಧ ದಂಪತಿಗೆ ತಾನು ವಿದ್ಯಾರ್ಥಿಯಾಗಿದ್ದು, ನಗರದ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಬಾಡಿಗೆ ಮನೆ ಪಡೆದಿದ್ದ. ಅಲ್ಲದೆ, ಹೆಚ್ಚಿನ ಬಾಡಿಗೆ ಹಣ ನೀಡುವುದಾಗಿ ಹೇಳಿ ಮಾಸಿಕ 10 ಸಾವಿರ ರೂ. ಬಾಡಿಗೆ ನೀಡುತ್ತಿದ್ದ. ಎರಡು ಬೆಡ್ ರೂಂ ಮನೆಯಲ್ಲಿ ಒಂದು ಕೊಠಡಿಯಲ್ಲಿ ಆರೋಪಿ ಹಾಗೂ ಆತನ ಸ್ನೇಹಿತ ಮಲಗುತ್ತಿದ್ದರು. ಮತ್ತೊಂದು ಕೊಠಡಿಯಲ್ಲಿ ಪ್ರಯೋಗಾಲಯ ಇಟ್ಟುಕೊಂಡು ಮಾದಕ ವಸ್ತು ತಯಾರಿಸುತ್ತಿದ್ದರು. ಡೇವಿಡ್ ಜಾನ್ ಮಾದಕ ವಸ್ತು ಉತ್ಪಾದನೆಗೆ ಬೇಕಾದ ರಾಸಾಯನಿಕ ವಸ್ತುಗಳನ್ನು ನಗರದ ವಿವಿಧ ಸ್ಟೋರ್‌ಗಳಲ್ಲಿ ಖರೀದಿಸಿ ತರುತ್ತಿದ್ದ. ಬಳಿಕ ತನ್ನ ಸ್ನೇಹಿತನ ಜತೆ ಸೇರಿ ಮಾದಕ ವಸ್ತುಗಳನ್ನು ತಯಾರು ಮಾಡಿ, ಶೂಗಳಲ್ಲಿ ತುಂಬಿ ನ್ಯೂಜಿಲ್ಯಾಂಡ್ ಮತ್ತು ಇತರೆ ದೇಶಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಿದರು.
ಪೊಲೀಸರ ದಿಕ್ಕು ತಪ್ಪಿಸಲು ಹೊರವಲಯದಲ್ಲಿ ಮನೆ: ಕೆಲ ದಿನಗಳಿಂದ ಹೆಣ್ಣೂರು, ರಾಮಮೂರ್ತಿ ನಗರ, ಬಾಣಸವಾಡಿ ಸೇರಿ ಪೂರ್ವ ವಿಭಾಗದ ವಿದೇಶಿ ಪ್ರಜೆಗಳ ಮನೆ ಮೇಲೆ ಪೊಲೀಸರು ಪದೇ ಪದೆ ದಾಳಿ ಮಾಡುತ್ತಿದ್ದರು. ಮಾದಕ ವಸ್ತು ಮಾರಾಟ, ಸರಬರಾಜು ಮಾಡುವವರ ಬಂಧಿಸಿದ್ದರು. ಅದನ್ನು ಗಮನಿಸಿದ ಆರೋಪಿ ಪೊಲೀಸರ ದಿಕ್ಕು ತಪ್ಪಿಸಲು ಎಲೆಕ್ಟ್ರಾ ನಿಕ್ ಸಿಟಿಯ ಬೆಟ್ಟದಾಸನಪುರದ ಚಾಮುಂಡಿ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಯುಟ್ಯೂಬ್ ನೋಡಿ ದಂಧೆ
ಆನ್‌ಲೈನ್ ಮತ್ತು ಯುಟ್ಯೂಬ್ ನೋಡಿ ಜಾನ್ ಮಾದಕ ವಸ್ತು ತಯಾರು ಮಾಡುವುದನ್ನು ಕರ ಗತ ಮಾಡಿಕೊಂಡಿದ್ದ ಎಂಬುದು ತನಿ ಖೆಯಲ್ಲಿ ಬೆಳಕಿಗೆ ಬಂದಿದೆ. ಎಂಡಿಎಂಎ ತಯಾರು ಮಾಡಲು ಬೇಕಾದ ವಸ್ತುಗಳನ್ನು ನಗರದ ಕೆಲ ರಾಸಾಯನಿಕ ವಸ್ತು ಗಳ ಮಾರಾಟ ಮಳಿಗೆಗಳು ಮತ್ತು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಇಷ್ಟೇ ಪ್ರಮಾಣದಲ್ಲಿ ಬೇರೆಸಬೇಕೆಂದು ಯುಟ್ಯೂಬ್ ನೋಡಿ ಆರೋಪಿ ಡ್ರಗ್ಸ್ ತಯಾರು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ಸಿಕ್ಕಿ
ಬಿದ್ದಿದ್ದು ಹೇಗೆ?
ಕಳೆದ ವಾರ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯಾ ಪ್ರಜೆಯೊಬ್ಬನ್ನು ಬಂಧಿಸಿ 2 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು. ಆತನ ಮೊಬೈಲ್ ಪರಿಶೀಲನೆ ವೇಳೆ, ವಾಟ್ಸ್‌ಆ್ಯಪ್ ನಲ್ಲಿ ವಿಡಿ ಯೊವೊಂದು ಬಂದಿದ್ದು,ನೈಜೀರಿಯಾ ಪ್ರಜೆಯೊಬ್ಬ ಮಾದಕ ವಸ್ತು ತಯಾರು ಮಾಡುವ ಮೂರು ನಿಮಿಷದ ವಿಡಿ ಯೊವನ್ನು ಕಳುಹಿಸಿದ್ದು, ದರ ಕೂಡ ನಿಗದಿ ಮಾಡಿದ್ದ. ಆತನ ಬಗ್ಗೆ ಪ್ರಶ್ನಿಸಿದಾಗ ಡೇವಿಡ್ ಜಾನ್ ಎಂದು ಆರೋಪಿ ಬಾಯಿ ಬಿಟ್ಟಿದ್ದ. ಬಳಿಕ ಆ ಮೊಬೈಲ್ ನಂಬರ್ ಶೋಧಿಸಿದಾಗ ಎಲೆಕ್ಟ್ರಾನಿಕ್ ಸಿಟಿ ಎಂಬುದು ಪತ್ತೆ ಹಚ್ಚಿ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿ ದರು.
ಶೂ ಸೋಲ್‌ನಲ್ಲಿ ಡ್ರಗ್ಸ್ ಸರಬರಾಜು
ಡೇವಿಡ್ ಜಾನ್ ಸುಮಾರು ಮೂರು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಯಾರಿಗೂ ಅನುಮಾನ ಬಾರ ದಂತೆ ಬ್ರ್ಯಾಡೆಂಡ್ ಶೂಗಳ ಸೋಲ್‌ನ ಒಳಭಾಗದಲ್ಲಿ ಸುಮಾರು 500 ಗ್ರಾಂನಷ್ಟು ಮಾದಕ ವಸ್ತು ತುಂಬಿ ಕೋರಿಯರ್, ಪೋಸ್ಟ್ ಮೂಲಕ ನ್ಯೂಜಿ ಲ್ಯಾಂಡ್, ಇತರೆ ದೇಶ ಗಳು, ರಾಜ್ಯಗಳು, ಬೆಂಗಳೂರಿನ ಕೆಲವೆಡೆ ಸರಬರಾಜು ಮಾಡುತ್ತಿದ್ದ. ಗ್ರಾಹಕರು ನೀಡಿದ ಹಣವನ್ನು ದೆಹಲಿಯಲ್ಲಿರುವ ಸಹೋದರನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.