ನಿವೃತ್ತಿ ನಂತರ ಸೌಲಭ್ಯಗಳಿಗೂ ಬರ
Team Udayavani, Jul 16, 2018, 12:42 PM IST
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಈಗ ನೌಕರರಿಗೆ ನಿವೃತ್ತಿ ನಂತರದ ಸೌಲಭ್ಯಗಳನ್ನು ನೀಡಲಿಕ್ಕೂ “ಬರ’! ಕಳೆದ ಒಂದೂವರೆ ವರ್ಷದಲ್ಲಿ ನಿವೃತ್ತರಾದ ಬಿಎಂಟಿಸಿಯ ಒಬ್ಬನೇ ಒಬ್ಬ ನೌಕರರಿಗೆ ಇದುವರೆಗೆ ಉಪಧನ (ಗ್ರಾಚ್ಯುಟಿ), ಭವಿಷ್ಯ ನಿಧಿ, ನಗದೀಕರಣ ಸೇರಿದಂತೆ ಬಹುತೇಕ ಸೌಲಭ್ಯಗಳನ್ನು ಬಾಕಿ ಉಳಿಸಿಕೊಂಡಿದೆ. ಇದಕ್ಕಾಗಿ ನಿತ್ಯ ನಿವೃತ್ತ ನೌಕರರು ನಿಗಮಗಳಿಗೆ ಅಲೆದಾಡುವಂತಾಗಿದೆ.
ಇದಕ್ಕೆ ಕಾರಣ- ಬಿಎಂಟಿಸಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು. ನಿಗಮದ ಮೇಲೆ ಡೀಸೆಲ್ ಮತ್ತು ಅದರ ಮೇಲಿನ ಸೆಸ್, ಕಾರ್ಯಾಚರಣೆ, ರಿಯಾಯ್ತಿ ಪಾಸು ಸೇರಿದಂತೆ ಎಲ್ಲ ಕಡೆಯಿಂದಲೂ ನಷ್ಟ ಅನುಭವಿಸುತ್ತಿದ್ದು, ಇದು ಎಷ್ಟರಮಟ್ಟಿಗೆ ಹೊರೆಯಾಗಿದೆ ಎಂದರೆ, ನೌಕರರಿಗೆ ನಿವೃತ್ತಿ ನಂತರದ ಸವಲತ್ತುಗಳನ್ನು ನೀಡಲಿಕ್ಕೂ ಹಣ ಇಲ್ಲವಾಗಿದೆ. 2017ರ ಜನವರಿಯಿಂದ 2018ರ ಮೇವರೆಗೆ ನಿವೃತ್ತರಾದವರ ಗ್ರಾಚ್ಯುಟಿ ಮತ್ತು ಭವಿಷ್ಯನಿಧಿಯನ್ನು ಬಾಕಿ ಉಳಿಸಿಕೊಂಡಿದೆ. ಅದರ ಮೊತ್ತ ಅಂದಾಜು 75 ಕೋಟಿ ರೂ. ಆಗಿದೆ.
ತಿಂಗಳಿಗೆ 25-30 ಜನ ನಿವೃತ್ತಿ?: ಪ್ರತಿ ತಿಂಗಳು ಸರಾಸರಿ 25ರಿಂದ 30 ಮಂದಿ ನೌಕರರಿಗೆ ನಿವೃತ್ತರಾಗುತ್ತಾರೆ. ಒಬ್ಬರಿಗೆ ಸರಾಸರಿ 8ರಿಂದ 10 ಲಕ್ಷ ರೂ. ಪಾವತಿಸಬೇಕಾಗುತ್ತದೆ. ತಿಂಗಳಿಗೆ 3-4 ಕೋಟಿ ರೂ. ಈ ನಿವೃತ್ತಿ ನಂತರದ ಸೌಲಭ್ಯಗಳಿಗೆ ಹೋಗುತ್ತದೆ. ಏಪ್ರಿಲ್ -ಮೇನಲ್ಲಿ ನಿವೃತ್ತಿ ಆಗುವವರ ಸಂಖ್ಯೆ ಹೆಚ್ಚು ಇರುವುದರಿಂದ ಆ ಎರಡು ತಿಂಗಳು ಈ ಮೊತ್ತ ತಲಾ 20 ಕೋಟಿವರೆಗೂ ಆಗುತ್ತದೆ. ಸಾಮಾನ್ಯವಾಗಿ ಇದರಲ್ಲಿ ಚಾಲಕರು- ನಿರ್ವಾಹಕರೇ ಇರುತ್ತಾರೆ ಎಂದು ಹೆಸರು ಹೇಳಲಿ ಚ್ಛಿಸದ ನಿಗಮದ ಲೆಕ್ಕಪತ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಗಳಿಕೆ ರಜೆ ನಗದೀಕರಣವೂ ಇಲ್ಲ!: ಅಷ್ಟೇ ಅಲ್ಲ, 2016ನೇ ಸಾಲಿನ ಗಳಿಕೆ ರಜೆಯ ನಗದೀಕರಣ ಕೂಡ ಬಾಕಿ ಇದ್ದು, ಇದರ ಮೊತ್ತ 12 ಕೋಟಿ ರೂ. ಆಗಿದೆ. ಕೆಲ ನೌಕರ ರಿಗೆ 200-230 ಗಳಿಕೆ ರಜೆಗಳಿವೆ.ಅದೆಲ್ಲವೂ ನಗದೀಕರಣ ಮಾಡಬೇಕಾಗಿದೆ. ರಜೆಯನ್ನು ಉಳಿಸಿಕೊಂಡಿದ್ದರೆ, ಅದನ್ನು
ನಗದು ರೂಪದಲ್ಲಿ ನೌಕರರಿಗೆ ನೀಡಬೇಕಾಗುತ್ತದೆ. ಗರಿಷ್ಠ 300 ದಿನ ಗಳಿಕೆ ರಜೆ ಉಳಿಸಿಕೊಳ್ಳಲು ಅವಕಾಶ ಇದೆ. ಈ ಹಿಂದಿನ ವರ್ಷಗಳಲ್ಲೂ ಹೀಗೆ ಬಾಕಿ ಉಳಿಸಿಕೊಂಡ ಉದಾಹರಣೆ ಇದೆ. ಆದರೆ, ಈ ಬಾರಿ ಎಂದಿಗಿಂತ ಹೆಚ್ಚು ಸಂಕಷ್ಟವನ್ನು ನಿಗಮ ಎದುರಿಸುತ್ತಿದೆ. ಸರ್ಕಾರ ನೂರು ಕೋಟಿ ರೂ. ಸಹಾಯಧನ ಘೋಷಿಸಿದ್ದರೂ, ಆ ಹಣ ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಸಂಸ್ಥೆಯು 260 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 217 ಕೋಟಿ ರೂ. ನಷ್ಟ ಅನುಭವಿಸಿದ್ದು, ಪ್ರಸ್ತುತ ತಿಂಗಳು ಸುಮಾರು 30 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಈ ಮಧ್ಯೆ ಡೀಸೆಲ್ ಮೇಲಿನ ಸೆಸ್ ಪ್ರಮಾಣ ಹೆಚ್ಚಿಸಿರುವುದರಿಂದ ಸಹಜವಾಗಿಯೇ ಆರ್ಥಿಕ ಹೊರೆ ಹಿಗ್ಗಿದೆ.
ಇದರಿಂದ ಹೊರಬರಲು ಸರ್ಕಾರದ ಅನುದಾನದ ಎದುರುನೋಡುತ್ತಿದ್ದೇವೆ. ಸಂಸ್ಥೆಗೆ ಬರುವ ಒಟ್ಟಾರೆ ಆದಾಯದಲ್ಲಿ ಶೇ. 54ರಷ್ಟು ಸಿಬ್ಬಂದಿ ವೇತನ ಮತ್ತಿತರ ಸೌಲಭ್ಯಗಳಿಗೆ ಖರ್ಚಾಗುತ್ತದೆ ಎಂದು ನಿಗಮದ ಮತ್ತೂಬ್ಬ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದರು.
ಗ್ರಾಚ್ಯುಟಿ ಮತ್ತು ಪಿಎಫ್ ಗ್ರಾಚ್ಯುಟಿ ಎಂದರೆ ಸಂಸ್ಥೆಯ ಯಾವೊಬ್ಬ ನೌಕರ ಒಂದು ವರ್ಷ ಕೆಲಸ ಮಾಡಿದರೆ, ಅದಕ್ಕೆ ಪ್ರತಿಯಾಗಿ ಒಂದು ತಿಂಗಳ ಮೂಲವೇತನದಷ್ಟು ಮೊತ್ತವನ್ನು ಆ ನೌಕರನ ಖಾತೆಗೆ ಜಮೆ ಮಾಡಲಾಗುತ್ತದೆ. ಉದಾಹರಣೆಗೆ ಆ ನೌಕರನ ಮೂಲ ವೇತನ 1 ಸಾವಿರ ಇದ್ದು, 30 ವರ್ಷ ಸೇವೆ ಸಲ್ಲಿಸಿದರೆ, ನಿವೃತ್ತಿ ಆಗುವಾಗ 30 ಸಾವಿರ ರೂ. ದೊರೆಯುತ್ತದೆ. ಅದೇ ರೀತಿ, ಭವಿಷ್ಯ ನಿಧಿಯು ಮೂಲ ವೇತನಕ್ಕೆ ಶೇ.12ರಷ್ಟು ಆಗಿರುತ್ತದೆ. ನೌಕರನ ವೇತನದಲ್ಲಿ ಪ್ರತಿ ತಿಂಗಳು ಶೇ.12ರಷ್ಟು ವೇತನ ಭವಿಷ್ಯನಿಧಿಗೆ ಹೋದರೆ, ಇದಕ್ಕೆ ಪ್ರತಿಯಾಗಿ ಇಷ್ಟೇ ಮೊತ್ತ ಸಂಸ್ಥೆಯಿಂದಲೂ ಜಮೆ ಆಗುತ್ತದೆ.
ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.