ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಧೂಳಿನ ಕಿರಿಕಿರಿ
Team Udayavani, Mar 8, 2019, 6:00 AM IST
ಬೆಂಗಳೂರು: ನಿತ್ಯ ನರಕದಂತಿರುವ ಸಂಚಾರ ದಟ್ಟಣೆಯೊಂದಿಗೆ ಸೆಣಸಾಡಿ ಸೋತಿರುವ ಇಲ್ಲಿನ ಜನರೀಗ ಅದರೊಂದಿಗೆ ರಾಜಿಯಾಗಿದ್ದಾರೆ. ಆದರೆ, ದಟ್ಟಣೆಯ ಜತೆಗೆ ತಟ್ಟನೆ ಮೂಗೊಳಗೆ ನುಸುಳುವ ಧೂಳು ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಅಕ್ಷರಶಃ ಜನರು ಕಂಗಾಲಾಗಿದ್ದಾರೆ.
ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮಾಸ್ಕ್ ಧರಿಸದೆ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ವತಿಯಿಂದ ಒಮ್ಮೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಪರಿಣಾಮ ಭಾರಿ ಪ್ರಮಾಣದಲ್ಲಿ ಧೂಳು ಸೃಷ್ಟಿಯಾಗುತ್ತಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಪಾಲಿಕೆ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡರೆ, ಬಿಎಂಆರ್‌ಸಿಎಲ್ ಬನ್ನೇರುಘಟ್ಟ ರಸ್ತೆಯಲ್ಲಿ ನಮ್ಮ ಮೆಟ್ರೊ ಯೋಜನೆ ಜಾರಿಗೊಳಿಸುತ್ತಿದೆ. ಪರಿಣಾಮ ರಸ್ತೆ ಬದಿ ಹಾಗೂ ರಸ್ತೆ ವಿಭಜಕದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಸುರಿಯಲಾಗಿದೆ. ರಸ್ತೆಬದಿಯಲ್ಲಿ ವಾಹನಗಳು ಸಂಚಾರಿಸಿದಾಗ ರಸ್ತೆಗಳು ಧೂಳು ಮಯವಾಗುತ್ತಿವೆ.
ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಕಾಮಗಾರಿಗಳಿಂದಾಗಿ ರಾಜ್ಯ ಹೆದ್ದಾರಿಯ ರಸ್ತೆಗಳು ಮಣ್ಣಿನ ರಸ್ತೆಗಳಾಗಿವೆ. ಕೆಲವೆಡೆ ಡಾಂಬರೀಕರಣಕ್ಕಾಗಿ ಜಲ್ಲಿ ಹಾಕಲಾಗಿದೆಯಾದರೂ, ಕಾಮಗಾರಿ ಪೂರ್ಣಗೊಳಿಸದ ಪರಿಣಾಮ ವಾಹನಗಳ ಚಕ್ರಗಳಿಗೆ ಜಲ್ಲಿ ಕಲ್ಲುಗಳು ಸಿಡಿಯುತ್ತಿವೆ. ಆದರೆ, ಇದರಿಂದಾಗಿ ಈವರೆಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂಬುದು ಬೀದಿಬದಿ ವ್ಯಾಪಾರಿಯೊಬ್ಬರು ಹೇಳಿದರು.
ಕಾಡುತ್ತಿವೆ ರಸ್ತೆಗುಂಡಿಗಳು: ನಮ್ಮ ಮೆಟ್ರೋ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಡೇರಿ ವೃತ್ತದಿಂದ ರಾಯಲ್ ಮೀನಾಕ್ಷಿ ಮಾಲ್‌ವರೆಗಿನ ಸಮಾರು 8 ಕಿ.ಮೀ. ರಸ್ತೆಯ ಬಹುತೇಕ ಭಾರಿ ಗಾತ್ರದ ಗುಂಡಿಗಳಿದ್ದು, ಅಪಾಯದ ನಡುವೆ ಸವಾರರು ಸಂಚರಿಸುವಂತಾಗಿದೆ. ಕೆಲವೆಡೆ ಡಾಂಬರೀಕರಣ ಮಾಡಲಾಗಿದೆಯಾದರೂ, ರಸ್ತೆ ತಗ್ಗು-ದಿಣ್ಣೆಯಂತಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕೇಬಲ್‌ಗಳ ಆತಂಕ: ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿಗಾಗಿ ರಸ್ತೆಯಲ್ಲಿರುವ ಒಎಫ್ಸಿ ಕೇಬಲ್‌ಗಳು ಹಾಗೂ ಬೆಸ್ಕಾಂನ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ ವಿದ್ಯುತ್ ತಂತಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ. ಆದರೆ, ರಸ್ತೆಯಲ್ಲಿದ್ದ ಒಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಿರುವ ಮೆಟ್ರೊ ಸಿಬ್ಬಂದಿ ಕೇಬಲ್‌ಗಳನ್ನು ರಸ್ತೆಯಲ್ಲಿಯೇ ಬಿಟ್ಟಿದ್ದು, ದ್ವಿಚಕ್ರ ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ.
ಪಾದಚಾರಿ ರಸ್ತೆಯೇ ಇಲ್ಲ: ಡೇರಿ ವೃತ್ತದಿಂದ ರಾಯಲ್ ಮೀನಾಕ್ಷಿ ಮಾಲ್‌ವರೆಗೆ ರಸ್ತೆಯಲ್ಲಿ ಪಾದಚಾರಿಗಳಿಗೆ ತೊಂದರೆಯಾಗಿದೆ. ಸುಮಾರು 8 ಕಿ.ಮೀ. ಉದ್ದದ ಪೈಕಿ ಸುಮಾರು 6 ಕಿ.ಮೀ.ನಷ್ಟು ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ಇಲ್ಲದಂತಾಗಿದೆ. ರಸ್ತೆ ಅಗಲೀಕರಣಕ್ಕಾಗಿ ಹಿಂದೆ ಇದ್ದಂತಹ ಪಾದಚಾರಿ ಮಾರ್ಗ ತೆರವುಗೊಳಿಸಿರುವುದರಿಂದ ಪಾದಚಾರಿಗಳು ವಾಹನಗಳ ಜತೆಗೆ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಉಳಿದಂತೆ ಮೀನಾಕ್ಷಿ ಮಾಲ್‌ನಿಂದ ಡೇರಿ ವೃತ್ತದ ರಸ್ತೆಯಲ್ಲಿ ಪಾದಚಾರಿ ಮಾರ್ಗವಿದ್ದರೂ ಬಹುಪಾಲು ಭಾಗ ದ್ವಿಚಕ್ರ ವಾಹನ ಸವಾರರಿಗೆ ಬಳಕೆಯಾಗುತ್ತಿದೆ.
ದಟ್ಟಣೆ ಹೆಚ್ಚಿಸಿವೆ “ಯು ಟರ್ನ್’ಗಳು!: ಡೇರಿ ವೃತ್ತದಿಂದ ರಾಯಲ್ ಮೀನಾಕ್ಷಿ ಮಾಲ್‌ವರೆಗಿನ 8 ಕಿ.ಮೀ. ರಸ್ತೆಯಲ್ಲಿ 15 ಕಡೆಗಳಲ್ಲಿ “ಯು ಟರ್ನ್’ಗಳನ್ನು ಮಾಡಲಾಗಿದೆ. ಯು ಟರ್ನ್ಗಳ ವಿಸ್ತೀರ್ಣ ಕಿರಿದಾಗಿರುವುದರಿಂದ ಭಾರಿ ವಾಹನಗಳು ತಿರುವು ಪಡೆಯಲು ಸಮಯ ಹಿಡಿಯುತ್ತಿದ್ದು, ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಿದೆ.
ನೀರು ಹಾಕಿ ಧೂಳು ಕಡಿಮೆ ಮಾಡಲಿ: ಬನ್ನೇರುಘಟ್ಟದಲ್ಲಿ ಹಲವಾರು ವರ್ಷಗಳಿಂದಲೂ ಸಂಚಾರ ದಟ್ಟಣೆ ಸಮಸ್ಯೆಯಿದೆ. ಮೆಟ್ರೋ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯಿಂದ ದಟ್ಟಣೆ ಹೆಚ್ಚಿದೆ. ಆದರೆ, ಸಮಸ್ಯೆಯಾಗಿರುವುದು ಧೂಳು. ಎರಡು ಸಂಸ್ಥೆಗಳ ಕಾಮಗಾರಿಯಿಂದ ವಿಪರೀತ ಧೂಳು ಸೃಷ್ಟಿಯಾಗುತ್ತಿದ್ದು, ಮಾಸ್ಕ್ ಇಲ್ಲದೆ ಸಂಚರಿಸದಂತಹ ಪರಿಸ್ಥಿತಿಯಿದೆ. ಹೀಗಾಗಿ ಕಾಮಗಾರಿ ನಡೆಸುವವರು ಮಣ್ಣಿನ ರಸ್ತೆಯಿರುವ ಕಡೆಗಳಲ್ಲಿ ನಿತ್ಯ ನೀರು ಹಾಕುವ ಮೂಲಕ ಧೂಳಿನ ಪ್ರಮಾಣ ಕಡಿಮೆ ಮಾಡಲು ಮುಂದಾಗಬೇಕು ಬೈಕ್ ಸವಾರ ಶ್ಯಾಮ್ ಸಲಹೆ ನೀಡಿದ್ದಾರೆ.
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.