ಕೈ ಶಾಸಕರಿಗೆ ರೆಸಾರ್ಟ್ ಸೆರೆ;ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ
Team Udayavani, Jul 30, 2017, 6:00 AM IST
ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ದೂರದ ಗುಜರಾತ್‌ನಿಂದ ಬೆಂಗಳೂರಿಗೆ ಕರೆತರಲಾಗಿರುವ ಅಲ್ಲಿನ ಕಾಂಗ್ರೆಸ್ ಶಾಸಕರು ರೆಸಾರ್ಟ್ “ಬಂಧನ’ದಲ್ಲಿದ್ದಾರೆ. ಬಿಡದಿ ಸಮೀಪದ ಈಗಲ್‌ಟನ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಇವರನ್ನು ಪೊಲೀಸರ ಜತೆಗೆ ಕಾಂಗ್ರೆಸ್ ಮುಖಂಡರ ನಿಗಾ ಪಡೆ ಕಾವಲು ಕಾಯುತ್ತಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿ ಅವರು ಶಾಸಕರ ಆತಿಥ್ಯದ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.ಈ ಶಾಸಕರಿಗೆ ಹೊರಜಗತ್ತಿನ ಜತೆ ಸಂಪರ್ಕ ಸಾಧಿಸದಂತೆ, ರೆಸಾರ್ಟ್‌ನಲ್ಲಿ ಸ್ಥಿರ ದೂರವಾಣಿಗೆ ಕತ್ತರಿ ಹಾಕಿ, ಮೊಬೈಲ್‌ಗಳನ್ನೂ ಕಸಿದುಕೊಳ್ಳಲಾಗಿದೆ. ಶನಿವಾರ ಇಡೀ ದಿನ ಶಾಸಕರು ಜಾಲಿ ಮೂಡ್‌ನಲ್ಲಿದ್ದು ಈಜು, ಕ್ರೀಡೆ ನಂತರ ವಿಶ್ರಾಂತಿಗೆ ಮೊರೆ ಹೋದರು. ಕೆಲವರು ಗುಜರಾತಿ ಚಾನೆಲ್ ವೀಕ್ಷಣೆಯಲ್ಲಿ ಕಾಲ ಕಳೆದರು.
ಬೆಳಗ್ಗೆ ತಿಂಡಿಗೆ ಇಡ್ಲಿ, ವಡೆ, ಸಾಂಬಾರ್, ಪೊಂಗಲ್, ದೋಸೆ, ಪೂರಿ-ಬಾಜಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಊಟಕ್ಕೆ ಡೋಕ್ಲಾ ಸೇರಿ ಗುಜರಾತಿ ಶೈಲಿಯ ಊಟ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಶಾಸಕರಿಗಾಗಿ ಮನರಂಜನಾ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು.
ಈಗಾಗಲೇ ಆಪರೇಶನ್ ಕಮಲಕ್ಕೆ ಸಿಲುಕಿ 6 ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವಾರು ರಾಜೀನಾಮೆ ನೀಡಬಹುದು ಎಂಬ ಭಯದಿಂದ 44 ಕೈ ಶಾಸಕರನ್ನು ಬೆಂಗಳೂರಿಗೆ ಶುಕ್ರವಾರ ರಾತ್ರೋರಾತ್ರಿ ಕಳುಹಿಸಲಾಗಿದೆ. ಹೀಗಾಗಿ ಆ.8 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆವರೆಗೂ ಇವರೆಲ್ಲಾ ರಾಜ್ಯದಲ್ಲೇ ಇರಲಿದ್ದಾರೆ ಎನ್ನಲಾಗಿದೆ.
ಶುಕ್ರವಾರ ರಾತ್ರಿಯೇ 44 ಶಾಸಕರು ನಗರಕ್ಕೆ ರಾತ್ರಿ ಆಗಮಿಸಿದರಾದರೂ ಕೆಲವರು ವೈಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿನ ಬೇರೆಡೆ ಉಳಿದುಕೊಂಡರು. 37 ಶಾಸಕರು ಹಾಗೂ ಗುಜರಾತ್ ಕಾಂಗ್ರೆಸ್ ಘಟಕದ ಮುಖಂಡರು ಸೇರಿ 50 ಮಂದಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮತ್ತೆ ಮೂವರು ಶನಿವಾರ ತಡ ರಾತ್ರಿ ತಂಡದ ಜತೆಗೂಡಿದರು.
ಸಿಂಗಾಪುರ ಪ್ರವಾಸದಲ್ಲಿದ್ದ ಡಿ.ಕೆ.ಶಿವಕುಮಾರ್ ವಿಷಯ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಶನಿವಾರ ರಾತ್ರಿ ಬೆಂಗಳೂರಿಗೆ ವಾಪಸ್ಸಾದರು. ಆಗಸ್ಟ್ 7 ರವೆರೆಗೆ ಗುಜರಾತ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಹೊಣೆಗಾರಿಕೆ ಡಿ.ಕೆ.ಶಿವಕುಮಾರ್ ಅವರದ್ದು ಎಂದು ಹೇಳಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ
ಗುಜರಾತ್ ಶಾಸಕರು ಉಳಿದುಕೊಂಡಿರುವ ಈಗಲ್‌ಟನ್ ರೆಸಾರ್ಟ್‌ನಲ್ಲಿ ಒಂದು ಭಾಗದ ಎಲ್ಲ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹೀಗಾಗಿ, ರೆಸಾರ್ಟ್‌ಗೆ ಬಂದ ಇತರೆ ಅತಿಥಿಗಳಿಗೆ ಬೇರೆ ಕಡೆ ಅವಕಾಶ ಕಲ್ಪಿಸಲಾಗಿತ್ತು. ಮಾಧ್ಯಮದವರಿಗೆ ರೆಸಾರ್ಟ್ ಒಳಗೆ ನಿಷೇಧ ಹೇರಲಾಗಿತ್ತು. ಬಿಗಿ ಪೊಲೀಸ್ ಪಹರೆ ಇದ್ದ ಕಾರಣ ಸುತ್ತಮುತ್ತಲ ಗ್ರಾಮಸ್ಥರು ರೆಸಾರ್ಟ್‌ನತ್ತ ಮುಂದೆ ಜಮಾಯಿಸಿದ್ದರು. ಕನಕಪುರ, ರಾಮನಗರ, ಮಾಗಡಿ, ಚೆನ್ನಪಟ್ಟಣದ ಕಾಂಗ್ರೆಸ್ ಮುಖಂಡರ ದಂಡೇ ರೆಸಾರ್ಟ್ ಬಳಿ ನೆರೆದಿತ್ತು. ಆದರೆ, ಆಯ್ದ ಮುಖಂಡರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗಿತ್ತು. ಉಳಿದವರು ಕುತೂಹಲಕ್ಕಾಗಿ ಒಳಗಿದ್ದವರ ಜತೆ ಮೊಬೈಲ್ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಮೊಬೈಲ್ ಕೊಡಿ ಎಂದರು
ಗುಜರಾತ್‌ನಿಂದ ಬಂದಿರುವ ಶಾಸಕರ ಪೈಕಿ ಮೂವರು ತಮ್ಮ ಕ್ಷೇತ್ರಗಳಿಗೆ ವಾಪಸ್ ಹೋಗಬೇಕು ಎಂದು ಪಟ್ಟು ಹಿಡಿದಿದ್ದು, ರೆಸಾರ್ಟ್ ವ್ಯವಸ್ಥಾಪಕರ ಜತೆ ವಾಗ್ವಾದವೂ ನಡೆಯಿತು. ಅವರ ಮೊಬೈಲ್ ಫೋನ್ ಕಸಿದು ಇಟ್ಟುಕೊಂಡಿದ್ದು ಕೋಪಕ್ಕೆ ಕಾರಣ ಎಂದು ಹೇಳಲಾಗಿದೆ. ಮೊಬೈಲ್ ಹಾಗೂ ದೂರವಾಣಿ ಮೂಲಕ ತಮ್ಮ ಕುಟುಂಬ ಹಾಗೂ ಕ್ಷೇತ್ರದವರ ಜತೆ ನಿರಂತರ ಸಂಪರ್ಕದಲ್ಲಿರಬಹುದು ಎಂದು ಹೇಳಿ ಶಾಸಕರನ್ನು ಕರೆದುಕೊಂಡು ಬರಲಾಗಿತ್ತು. ಆದರೆ, ಇಲ್ಲಿಗೆ ಬಂದ ನಂತರ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಕೊಠಡಿಗಳಲ್ಲಿದ್ದ ಸ್ಥಿರ ದೂರವಾಣಿ ಸಂಪರ್ಕ ಸಹ ಕಡಿತ ಮಾಡಲಾಗಿದೆ. ಇದರಿಂದ ಕುಪಿತರಾದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಅಲ್ಲಿಗೆ ಹೋಗಬೇಕು ಎಂದು ಪಟ್ಟು ಹಿಡಿದರು. ಕಂಕ್ರೇಜ್ ಶಾಸಕ ಖನಪುರ ಧಾರ್ಶಿಭಾಯ್ ಲಖಾಭಾಯ್, ಫಾಲನ್‌ಪುರ್ ಶಾಸಕ ಪಟೇಲ್ ಮಹೇಶ್‌ಕುಮಾರ್, ಹಾಗೂ ದೀಸಾ ಶಾಸಕ ರಬರಿ ಗೋವಾಭಾಯ್ ಅವರು ವಾಪಸ್ ಹೋಗುವ ಸಂಬಂಧ ತಮ್ಮ ಉಸ್ತುವಾರಿ ವಹಿಸಿರುವ ಗುಜರಾತ್‌ನ ಕಾಂಗ್ರೆಸ್ ಮುಖಂಡ ನರೇಶ್ ರಾವಲ್ ಜತೆ ವಾಗ್ವಾದಕ್ಕೆ ಇಳಿದರು ಎಂದು ಮೂಲಗಳು ತಿಳಿಸಿವೆ. ಆದರೆ, ಶಾಸಕರ ಆತಿಥ್ಯದ ಉಸ್ತುವಾರಿ ವಹಿಸಿದ ಡಿ.ಕೆ.ಸುರೇಶ್, ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದರು.
ಶಿಫ್ಟ್
ಗುಜರಾತ್‌ನಲ್ಲಿ ಆಗಸ್ಟ್ 8 ರಂದು ಚುನಾವಣೆ ನಿಗದಿಯಾಗಿದ್ದು, ಆಗಸ್ಟ್ 7 ರವರೆಗೆ ಶಾಸಕರನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳಲು ಸೂಚಿಸಲಾಗಿದೆ. ಹೀಗಾಗಿ, ಒಂದೆರಡು ದಿನ ರೆಸಾರ್ಟ್‌ನಲ್ಲಿ ಉಳಿಸಿ ನಂತರ ಮಡಿಕೇರಿ ಸೇರಿದಂತೆ ರಾಜ್ಯದ ಪ್ರವಾಸಿ ಕ್ಷೇತ್ರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯಲಾಗುವುದು ಎಂದು ಹೇಳಲಾಗಿದೆ.
ಗುಜರಾತ್‌ನಲ್ಲಿ ಪ್ರಜಾಪ್ರಭುತ್ವ ಉಳಿಸಲು ಯತ್ನ: ಡಿ.ಕೆ.ಸುರೇಶ್
ಗುಜರಾತ್‌ನಲ್ಲಿ ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ಕಾಂಗ್ರೆಸ್ ಶಾಸಕರು ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಈಗಲ್‌ಟನ್ ರೆಸಾರ್ಟ್ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಇಚ್ಚೆ ಪಟ್ಟು ಬಂದಿದ್ದಾರೆ. ಅವರು ಎಲ್ಲಿಗೆ ಪ್ರವಾಸ ಹೋಗಬೇಕು ಎಂದು ಹೇಳುತ್ತಾರೋ ಅಲ್ಲಿಗೆ ಕರೆದೊಯ್ಯಲಾಗುವುದು ಎಂದು ಹೇಳಿದರು.
ರಾಜ್ಯಕ್ಕೆ ಬಂದಿರುವ ಅತಿಥಿಗಳನ್ನು ಸತ್ಕರಿಸುವುದು ನಮ್ಮ ಕರ್ತವ್ಯ. ಅವರು ಇಲ್ಲಿಗೆ ಪ್ರವಾಸ ಬಂದಿದ್ದಾರೆ ಅಷ್ಟೆ, ಧಾರ್ಮಿಕ ಹಾಗೂ ಪ್ರವಾಸ ಕ್ಷೇತ್ರಗಳನ್ನು ನೋಡಲು ಬಂದಿದ್ದಾರೆ. ಗುಜರಾತ್‌ನ ನಮ್ಮ ಪಕ್ಷದ ಎಲ್ಲ ಶಾಸಕರು ಇದ್ದಾರೆ, ಯಾರೂ ನಾಪತ್ತೆ ಆಗಿಲ್ಲ. ಇಡೀ ದಿನ ವಿಶ್ರಾಂತಿ ಪಡೆದಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ರೆಸಾರ್ಟ್‌ನಲ್ಲಿ ಶಾಸಕರು ಉಳಿದುಕೊಂಡಿರುವುದನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಆ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಬಂದಿರುವ ಅತಿಥಿಗಳನ್ನು ಸತ್ಕರಿಸುವುದು ನಮ್ಮ ಕರ್ತವ್ಯ. ಅವರು ಇಲ್ಲಿಗೆ ಪ್ರವಾಸ ಬಂದಿದ್ದಾರೆ ಅಷ್ಟೆ, ಧಾರ್ಮಿಕ ಹಾಗೂ ಪ್ರವಾಸ ಕ್ಷೇತ್ರಗಳನ್ನು ನೋಡಲು ಬಂದಿದ್ದಾರೆ. ಗುಜರಾತ್‌ನ ನಮ್ಮ ಪಕ್ಷದ ಎಲ್ಲ ಶಾಸಕರು ಇದ್ದಾರೆ, ಯಾರೂ ನಾಪತ್ತೆ ಆಗಿಲ್ಲ.
– ಡಿ.ಕೆ. ಸುರೇಶ್, ಸಂಸದ
ಗುಜರಾತ್‌ನಿಂದ ರಾಜ್ಯಸಭೆಗೆ ಅಹ್ಮದ್ ಪಟೇಲ್ ಗೆಲುವು ಸಾಧ್ಯವೇ ಇಲ್ಲ. ಅದರ ತೀರ್ಮಾನ ಮೊದಲೇ ಆಗಿತ್ತು. ಮೋದಿಯವರ ಸಾಧನೆ ನೋಡಿ ಕಾಂಗ್ರೆಸ್ ಶಾಸಕರು ಸ್ವಯಂ ಪ್ರೇರಿತವಾಗಿ ಬಿಜೆಪಿಗೆ ಬರುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಹೆದರಿದ್ದು, ರೆಸಾರ್ಟ್ ರಾಜಕಾರಣ ಆರಂಭಿಸಿದೆ.
– ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಭೀತಿಯಿಂದ ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.
ಗುಜರಾತ್‌ನ ಕಾಂಗ್ರೆಸ್ ಶಾಸಕರಿಗೆ ಜನಪರ ಕಾಳಜಿ ಇದ್ದಿದ್ದರೆ ಚಂಡ ಮಾರುತದಿಂದ ತತ್ತರ ಗೊಂಡಿರುವ ಗುಜರಾತ್ ಜನರ ಸೇವೆಗೆ ಧಾವಿಸಬೇಕಾಗಿತ್ತು. ಆದರೆ, ಅವರು ರೆಸಾರ್ಟ್ ರಾಜಕಾರಣ ಆರಂಭಿಸುವ ಮೂಲಕ ತಮ್ಮ ಸ್ಥಿತಿ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಬರದ ಬಗ್ಗೆ ಗಮನಿಸುವುದನ್ನು ಬಿಟ್ಟು ರೆಸಾರ್ಟ್ ರಾಜಕಾರಣದಲ್ಲಿ ತೊಡಗಿರುವುದು ಬಹಳ ನೋವಿನ ಸಂಗತಿ.
– ಅನಂತ್ ಕುಮಾರ್, ಕೇಂದ್ರ ಸಚಿವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.