ಚುನಾವಣೆ ಬಂತು ನೀರ್ ತಂತು!
Team Udayavani, Apr 11, 2018, 12:14 PM IST
ಬೆಂಗಳೂರು: ಒಂದೆಡೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಜನಪ್ರತಿನಿಧಿಗಳ ನೀರಿನ ಟ್ಯಾಂಕರ್ ಬರುವುದು ನಿಂತು ಕುಡಿಯುವ ನೀರಿಗೆ ಬರ ಎದುರಾಗಿದ್ದರೆ, ಇನ್ನೊಂದೆಡೆ, ನಗರದ ಪಶ್ಚಿಮ ವಲಯದಲ್ಲಿ ಚಿತ್ರಣ ಕೊಂಚ ಬೇರೆಯೇ ಇದೆ. ಬೇಸಿಗೆ ಬಂದರೆ ನೀರಿಗೆ ಬರ ಎದುರಾಗಲಿದೆ ಎಂಬ ಜನರ ಆತಂಕ ಜನರ ಮರೆಯಾಗಿ, ನಿರಾಳರಾಗಿದ್ದಾರೆ. ಇದಕ್ಕೆ ಕಾರಣ ವಿಧಾನಸಭಾ ಚುನಾವಣೆ!
ಈ ಮೊದಲು ದಾರದಂತೆ ಬರುತ್ತಿದ್ದ ಕಾವೇರಿ ನೀರು, ಈಗ ರಭಸವಾಗಿ ಚಿಮ್ಮುತ್ತಿದೆ. ನೀರಿನ ಕೊರತೆ ಆಗಬಹುದಾದ ಕಡೆಗಳಲ್ಲಿ ಬೋರ್‌ವೆಲ್ ಕೊರೆಯಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳೂ ಸಿದ್ಧವಾಗಿವೆ. ಮೇ ಅಂತ್ಯದವರೆಗೂ (ಚುನಾವಣೆ ಹಿನ್ನೆಲೆ) ಈ ಸ್ಥಿತಿಯಲ್ಲಿ ವ್ಯತ್ಯಾಸ ಆಗದು ಎಂಬ ವಿರ್ಶವಾಸ ಜನರದ್ದು. ಹಾಗಾಗಿ, “ಬೇಸಿಗೆ ಭಯ’ ದೂರಾಗಿದೆ. ಹೌದು, ಸಾಮಾನ್ಯವಾಗಿ ಪ್ರತಿ ಬೇಸಿಗೆಯಲ್ಲಿ ಎದುರಾಗುವ ನೀರಿನ ಬರದ ಆತಂಕವನ್ನು ಚುನಾವಣೆ ಕಾವು ದೂರ ಮಾಡಿದೆ.
ಕಳೆದ ಹತ್ತು ದಿನಗಳಲ್ಲಿ ಈ ವಲಯದ ನೀರು ಪೂರೈಕೆ ವೈಖರಿ ಬದಲಾಗಿದೆ ಎಂದು ದಕ್ಷಿಣ ವಲಯದ ಗೋವಿಂದರಾಜನಗರ ವಾರ್ಡ್ ನಿವಾಸಿಗಳು ಹೇಳುತ್ತಾರೆ. “ವಾರದಿಂದೀಚೆಗೆ ನೀರಿನ ಪೂರೈಕೆ ಚಿತ್ರಣವೇ ಬದಲಾಗಿದೆ. ಈ ಮೊದಲೂ ಎಂದಿನಂತೆ ವಾಲ್ ತಿರುಗಿಸಿ ಬರುತ್ತಿದ್ದೆವು. ಆದರೆ, ಬೈಗುಳಗಳು ತಪ್ಪುತ್ತಿರಲಿಲ್ಲ. ಹತ್ತು ದಿನಗಳಿಂದ ಬೈಗುಳಗಳು ತಪ್ಪಿವೆ. ಯಾಕೆ ಅಂತಾ ನೀವೇ ಊಹಿಸಿ’ ಎನ್ನುತ್ತಲೇ ವಿಜಯನಗರದ ವಾಲ್‌ವುನ್ ಒಬ್ಬರು ನೀರಿನ ಸ್ಥಿತಿಗತಿಯನ್ನು ಸೂಚ್ಯವಾಗಿ ಬಿಡಿಸಿಟ್ಟರು.
“ಕಳೆದ ಬೇಸಿಗೆಯಲ್ಲಿ ತುಂಬಾ ಸಮಸ್ಯೆ ಇತ್ತು. ಆದರೆ, ಈ ಸಲ ಅಂತಹ ಸಮಸ್ಯೆ ಉದ್ಭವಿಸದು ಎಂಬ ಭರವಸೆ ಇದೆ. ಯಾಕೆಂದರೆ ಬೇಸಿಗೆ ಶುರುವಾಗಿದ್ದರೂ ಎರಡು ದಿನಕ್ಕೊಮ್ಮೆ ತಪ್ಪದೇ ಕಾವೇರಿ ನೀರು ಬರುತ್ತಿದೆ. ಒಮ್ಮೆಯೂ ವ್ಯತ್ಯಯ ಆಗಿಲ್ಲ. ಈ ನೀರನ್ನೇ ಹಿಡಿದಿಟ್ಟರೆ ನಮಗೆ ಸಾಕಷ್ಟಾಗುತ್ತದೆ,’ ಎಂದು ಗೋವಿಂದರಾಜನಗರ ವಾರ್ಡ್‌ನ ಕೊಳಚೆಪ್ರದೇಶದ ನಿವಾಸಿ ನಸ್ರಿನ್ ತಾಜ್ ತಿಳಿಸುತ್ತಾರೆ.
ಸಮಸ್ಯೆ ಆಗದು- ಅಧಿಕಾರಿ: 44 ವಾರ್ಡ್‌ಗಳನ್ನು ಹೊಂದಿರುವ ಪಶ್ಚಿಮ ವಲಯದಲ್ಲಿ ಅಂದಾಜು 21 ಲಕ್ಷ ಜನಸಂಖ್ಯೆ ಇದೆ. ಬಹುತೇಕ ಎಲ್ಲೆಡೆ ಕಾವೇರಿ ಮತ್ತು ಕೊಳವೆಬಾವಿಗಳೇ ನೀರಿನ ಮೂಲ. ಸಾಮಾನ್ಯವಾಗಿ ಹಾಹಾಕಾರ ಕೇಳಿಬರುವುದು ಗೋವಿಂದರಾಜನಗರ ವಾರ್ಡ್ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ, ಅಲ್ಲಿಯೂ ಈಬಾರಿ ಅಗತ್ಯ ಕ್ರಿಯಾಯೋಜನೆಗಳನ್ನು ರೂಪಿಸಿ, ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ
ಎಂದು ಬಿಬಿಎಂಪಿ ಪಶ್ಚಿಮ ವಲಯದ ಉನ್ನತ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಬೆಂಗಳೂರು ಬಹುಭಾಗ ಕಾವೇರಿ ನೀರನ್ನು ಅವಲಂಬಿಸಿದೆ. ಇದಕ್ಕೆ ಪೂರಕವಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಮರ್ಪಕ ನೀರು ಸಂಗ್ರಹವಾಗಿದೆ. ಜತೆಗೆ ಈ ಬಾರಿ ಅವಧಿಗಿಂತ ಮುಂಚಿತವಾಗಿಯೇ ಮಳೆ ಶುವಾಗಿದೆ. ಹೀಗಾಗಿ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ.
ಸಮಸ್ಯೆ ಇತ್ತು; ಆದರೆ ಈಗಿಲ್ಲ: “ಕುಡಿಯುವ ಉದ್ದೇಶಕ್ಕೆ ಕಾವೇರಿ ನೀರು ಸಿಗುತ್ತಿತ್ತು. ಬಳಸಲು ಸಾಕಾಗುವಷ್ಟು ನೀರು ಪೂರೈಕೆ ಆಗುತ್ತಿರಲಿಲ್ಲ. ಇದನ್ನು ನೀಗಿಸಲು ಕೊರತೆ ಇರುವ ಕಡೆಗಳಲ್ಲಿ ಪಾಲಿಕೆ ಅಥವಾ ಜಲಮಂಡಳಿಯವರು ಕೊಳವೆಬಾವಿ ಕೊರೆಸುತ್ತಿದ್ದಾರೆ. ನಮ್ಮ ಏರಿಯಾ (ಗೋವಿಂದರಾಜ ಸ್ವಾಮಿ ತುಳಜಮ್ಮ ದೇವಸ್ಥಾನ ಬಳಿ)ದಲ್ಲೂ ಬಳಸುವ ನೀರಿಗಾಗಿ ಕೊಳವೆಬಾವಿ ಕೊರೆಯಲಾಗಿದೆ,’ ಎಂದು ಸ್ಥಳೀಯ ನಿವಾಸಿ ಪರಮೇಶಿ ಹೇಳಿದರು.
ಕೊಳಾಯಿ ಸಂಪರ್ಕವಿದೆ; ಆದ್ರೆ ನೀರಿಲ್ಲ!: ಗೋವಿಂದರಾಜನಗರ ವಾರ್ಡ್‌ನ ಬಡಾವಣೆಗಳಲ್ಲಿ ನೀರಿಗೆ ತೊಂದರೆಯಿಲ್ಲ. ಆದರೆ ಕೊಳೆಗೇರಿಯಲ್ಲಿ ಹನಿ ನೀರಿಗೂ ಪರದಾಟವಿದೆ. ಕೊಳವೆಬಾವಿ ನೀರು ಪೂರೈಕೆಗಾಗಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಅದರಲ್ಲಿಂದ ಇದುವರೆಗೆ ಒಂದೇ ಒಂದು ಹನಿ ನೀರು ಬಂದಿಲ್ಲ. ಈ ಸ್ಲಂನಲ್ಲಿ ಸುಮಾರು 300 ಮನೆಗಳಿವೆ.
ನಾಲ್ಕು ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಿಸುವಾಗ ಕೊಳವೆಬಾವಿ ನೀರಿನ ಸಂಪರ್ಕಗಳನ್ನು ಮುಚ್ಚಲಾಯಿತು. ನಂತರ ತಲಾ ಎರಡು ಮನೆಗಳಿಗೆ ಒಂದರಂತೆ ಹೊಸ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಇದುವರೆಗೆ ನೀರು ಬಂದಿಲ್ಲ ಎಂದು ಸ್ಥಳೀಯರು ದೂರಿದರು. ಅಲ್ಲದೆ, ಎರಡು ದಿನಗಳಿಗೊಮ್ಮೆ ರಾತ್ರಿ ನೀರು ಪೂರೈಸುತ್ತಿದ್ದು, ನೀರು ಹಿಡಯಲು ಜಾಗರಣೆ ಮಾಡಬೇಕು. ಆದರೆ, ಇದು ಅನಿವರ್ಯ ಎಂದು ಕೆಲವರು ಅಲವತ್ತುಕೊಂಡರು.
ನೀರಿನ ಪ್ರಾಬ್ಲಿಂ ನಮಗೆ ತಿಳಿಸಿ: ನಿಮ್ಮ ಏರಿಯಾದಲ್ಲೂ ನೀರಿಗೆ ಬರವೇ? ಜಲಮಂಡಳಿ ಕೊಳಾಯಿಗಳಲ್ಲಿ ನೀರು ಬರುತ್ತಿಲ್ಲವೇ? ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದೀರಾ? ಟ್ಯಾಂಕರ್‌ನವರು ಸುಲಿಗೆ ಮಾಡುತ್ತಿದ್ದಾರಾ? ನಿಮ್ಮ ಉತ್ತರ ಹೌದು ಎಂದಾಗಿದ್ದರೆ ಕೂಡಲೇ ನಿಮ್ಮೇರಿಯಾದಲ್ಲಿನ ನೀರಿನ ಸಮಸ್ಯೆ ಕುರಿತು “ಉದಯವಾಣಿ’ ವಾಟ್ಸ್‌ಆ್ಯಪ್ ಸಂಖ್ಯೆಗೆ ಚಿತ್ರ ಸಹಿತ ಮಾಹಿತಿ ಕಳಿಸಿ.
ವಾಟ್ಸ್‌ಆ್ಯಪ್ ಸಂಖ್ಯೆ: 88611 96369
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.