ಎಲೆಕ್ಟ್ರಿಕ್ ವೆಹಿಕಲ್ ತೆರಿಗೆ ತಗ್ಗಿದರೆ ಸಾಕೇ…? !
ಸುದ್ದಿ ಸುತ್ತಾಟ
Team Udayavani, Aug 5, 2019, 3:10 AM IST
ನಗರದಲ್ಲಿ ದಿನಕ್ಕೆ 1,500-1,700 ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಒಟ್ಟಾರೆ ಎರಡು ಕೋಟಿ ವಾಹನಗಳ ಪೈಕಿ ಬೆಂಗಳೂರಿನಲ್ಲೇ 80 ಲಕ್ಷ ಇವೆ. ಇವು ಒಮ್ಮೆಲೆ ರಸ್ತೆಗಿಳಿದಿರೆ, ಟನ್‌ಗಟ್ಟಲೆ ಹೊಗೆ ಹೊರಹೊಮ್ಮುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಅವುಗಳಿಗೆ ರಸ್ತೆ ತೆರಿಗೆ ವಿನಾಯ್ತಿ ನೀಡಿತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ “ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ’ಯನ್ನೇ ಜಾರಿ ಮಾಡಿತು. ಆದರೂ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಜನ ಆಸಕ್ತಿ ತೋರಿಸುತ್ತಿಲ್ಲ.
ಕೇಂದ್ರ ಸರ್ಕಾರ ಈಗ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಚಾರ್ಜಿಂಗ್ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿ ಕೂಡ ಶೇ. 18ರಿಂದ 5ಕ್ಕೆ ಸೀಮಿತಗೊಳಿಸಿದೆ. ಈಗಲಾದರೂ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಕಾಣಬಹುದೇ? ತೆರಿಗೆ ಇಳಿಸಿದರೆ ಸಾಕೇ? ಇರುವ ಅಡತಡೆಗಳಾದರೂ ಏನು? ಇಷ್ಟೊಂದು ನಿರಾಸಕ್ತಿ ಯಾಕೆ? ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟ…
ನಿತ್ಯ ನಗರದಲ್ಲಿ ನೂರಾರು ವಾಹನಗಳ ನೋಂದಣಿಯಾದರೂ ಆ ಪೈಕಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಬೆರಳೆಣಿಕೆಯಷ್ಟು ಮಾತ್ರ. ಲಕ್ಷಗಟ್ಟಲೆ ವಾಹನಗಳಿದ್ದರೂ ಅದರಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಮೂರಂಕಿಯನ್ನೂ ದಾಟಿಲ್ಲ. ಅಷ್ಟೇ ಯಾಕೆ, ಕಳೆದ ಐದಾರು ವರ್ಷಗಳಿಂದ ಸ್ವತಃ ಬಿಎಂಟಿಸಿಗೆ ಒಂದೇ ಒಂದು ಎಲೆಕ್ಟ್ರಿಕ್ ಬಸ್ ಅನ್ನು ರಸ್ತೆಗಿಳಿಸಲು ಗಮನಹರಿಸಿಲ್ಲ.
ಈ ನಿರಾಸಕ್ತಿಗೆ ಸಕಾರಣವೂ ಇದೆ. ಕ್ಷಣಾರ್ಧದಲ್ಲಿ ಟ್ಯಾಂಕ್ ಭರ್ತಿ ಮಾಡಿಕೊಂಡು ರುಂಯ್ಯ್ ಎಂದು ಜಿಗಿಯುವ ವಾಹನಗಳು ಮುಂದೆ, ಗಂಟೆಗಟ್ಟಲೆ ಚಾರ್ಜಿಂಗ್‌ಗೆ ಇಟ್ಟು ರಸ್ತೆಗಿಳಿಸುವ ಎಲೆಕ್ಟ್ರಿಕ್ ವಾಹನಗಳು ಸಹಜವಾಗಿಯೇ ಮಂಕಾಗುತ್ತವೆ. ಅಲ್ಲದೆ, ಪೆಟ್ರೋಲ್-ಡೀಸೆಲ್ ಆಧಾರಿತ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳು ದುಬಾರಿ. ಚಾರ್ಜಿಂಗ್ ಸ್ಟೇಷನ್, ಸರ್ವಿಸ್ ಪಾಯಿಂಟ್‌ಗಳನ್ನು ಹುಡುಕಿಕೊಂಡು ಹೋಗಬೇಕು. ಹಾಗಾಗಿ ತೆರಿಗೆ ಪ್ರಮಾಣ ತಗ್ಗಿಸಿದರೆ ಸಾಲದು, ಮತ್ತೂಂದೆಡೆ ಸಾಮಾನ್ಯ ವಾಹನಗಳ ಬೆಲೆ ಕೂಡ ಹೆಚ್ಚಳ ಆಗಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮ ಅಭಿಪ್ರಾಯಪಡುತ್ತಾರೆ.
ಬ್ಯಾಟರಿ ಶ್ಯಾಪ್ ಪರಿಕಲ್ಪನೆ: ನಗರದ ವಾಯುಮಾಲಿನ್ಯ ನಿಯಂತ್ರಣಕ್ಕೆ ತರಲು ಮತ್ತು ಜಾಗತಿಕ ಮಟ್ಟದಲ್ಲಿ ಎದುರಾಗುತ್ತಿರುವ ಇಂದನ ಕೊರತೆ ಎದುರಿಸಲು ಎಲೆಕ್ಟ್ರಿಕ್ ವಾಹನ ಪರಿಹಾರ. ಇದರಲ್ಲಿ ಎರಡು ಮಾತಿಲ್ಲ. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆರಿಗೆ ಪ್ರಮಾಣ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಇದರೊಟ್ಟಿಗೆ ಪೂರಕ ಮೂಲಸೌಕರ್ಯಗಳ ಅಭಿವೃದ್ಧಿಯೂ ಆಗಬೇಕು. ಉದಾಹರಣೆಗೆ ಬ್ಯಾಟರಿ ಶಾಪ್‌ಗ್ಳನ್ನು ತೆರೆಯಬೇಕು. ಅಲ್ಲಿ ಈ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ಬದಲಾಯಿಸುವ ವ್ಯವಸ್ಥೆ ಇರಬೇಕು. ಇದಲ್ಲದೆ, ಅಲ್ಪಾವಧಿಯಲ್ಲೇ ಚಾರ್ಜ್ ಆಗುವಂತಹ ಬ್ಯಾಟರಿ ಮತ್ತಿತರ ತಂತ್ರಜ್ಞಾನಗಳ ಆವಿಷ್ಕಾರಗಳು ಆಗಬೇಕು. ಆ ಮೂಲಕ ಬ್ಯಾಟರಿಗಳಿಗಾಗಿ ಚೀನಾ ಅವಲಂಬನೆ ಕಡಿಮೆ ಆಗಬೇಕು. ಆಗ ಎಲೆಕ್ಟ್ರಿಕ್ ವಾಹನಗಳತ್ತ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಇನ್ನು ಡೀಸೆಲ್-ಪೆಟ್ರೋಲ್ ಆಧಾರಿತ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳ ಮಾಡೆಲ್‌ಗಳು ತುಂಬಾ ಕಡಿಮೆ. ತಯಾರಿಕಾ ಕಂಪನಿಗಳು ಕೂಡ ಅಷ್ಟಕ್ಕಷ್ಟೇ. ಈ ನಿಟ್ಟಿನಲ್ಲಿ ಗ್ರಾಹಕರ ಮುಂದೆ ಆಯ್ಕೆಗಳಿಲ್ಲ. ಇನ್ನು ಪ್ರತಿ 2-3 ವರ್ಷಕ್ಕೊಮ್ಮೆ ಬ್ಯಾಟರಿಗಳನ್ನು ಬದಲಾಯಿಸಬೇಕು. ಎಲೆಕ್ಟ್ರಿಕ್ ವಾಹನಗಳಿಗೆ ಬಳಸುವ ಲೀಥಿಯಂ ಬ್ಯಾಟರಿಗಳು ಒಂದು ಲಕ್ಷಕ್ಕಿಂತ ಹೆಚ್ಚು ದುಬಾರಿ. ಆಗ, ಗ್ರಾಹಕರಿಗೆ ಇವು ಹೊರೆಯಾಗಿ ಪರಿಣಮಿಸುತ್ತವೆ. ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಬೇಕು ಎಂದೂ ಅವರು ಹೇಳುತ್ತಾರೆ.
ಆರ್‌ಟಿಒಯಿಂದ ವಿನಾಯ್ತಿ: ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ, ರಸ್ತೆ ತೆರಿಗೆಯಲ್ಲಿ ಸಂಪೂರ್ಣ ವಿನಾಯ್ತಿ ನೀಡುವುದಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ತಿಳಿಸಿದೆ. ಇನ್ನು ಎಲೆಕ್ಟ್ರಿಕ್ ಬಸ್‌ಗಳ ಗಾತ್ರ ದೊಡ್ಡದು. ಇದರಿಂದ ಕಿರಿದಾದ ರಸ್ತೆ ಮತ್ತು ತಿರುವುಗಳಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಹಾಗಾಗಿ, ಬೆಂಗಳೂರಿನಂಥ ನಗರಕ್ಕೆ ಸರಿಹೊಂದುವಂತಹ ಬಸ್‌ಗಳನ್ನು ರಸ್ತೆಗಿಳಿಸಿದರೆ ಉತ್ತಮ ಎಂದು ಆರ್‌ಟಿಒ ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಮಾಲ್‌ಗಳಲ್ಲಿ ಚಾರ್ಜಿಂಗ್ ಸ್ಟೇಶನ್ ಕಡ್ಡಾಯ: ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆಯಿಂದ ನಗರದಲ್ಲಿರುವ ಎಲ್ಲಾ ಶಾಪಿಂಗ್ ಮಾಲ್‌ಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಯುನಿಟ್‌ಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆಯೇ ಬಿಬಿಎಂಪಿ ಇದನ್ನು ಅನುಷ್ಠಾನಕ್ಕೆ ತರಲು ನಿಗಾ ವಹಿಸಬೇಕಿತ್ತು. ಆದರೆ, ಈವರೆಗೆ ಎಲ್ಲಾ ಮಾಲ್‌ಗಳಲ್ಲಿ ಈ ಕೆಲಸ ಆಗಿಲ್ಲ. ಮಾಲ್‌ಗಳ ಪಾರ್ಕಿಂಗ್‌ನಲ್ಲಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ನಗರವಾಸಿಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಬಹುದು ಎಂಬ ಆಲೋಚನೆಯಿಂದ ಈ ಯೋಜನೆ ಜಾರಿಗೊಳಿಸಲು ಸೂಚನೆ ನೀಡಲಾಗಿತ್ತು.
ಉತ್ತೇಜನ ನೀಡುವಲ್ಲಿ ವಿಫಲ: ಸಹಜವಾಗಿ ಯಾವುದೇ ಉತ್ಪನ್ನ ಜನಪ್ರಿಯತೆ ಗಳಿಸಬೇಕಾದರೆ ಬಳಕೆದಾರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ಹಲವಾರು ಪ್ರಾಯೋಗಿಕ ಯೋಜನೆಗಳನ್ನು ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ನಗರದಲ್ಲಿ ಪರಿಚಯಿಸಬೇಕು. ಅವುಗಳ ಸಾಧಕಬಾಧಕಗಳನ್ನು ಚರ್ಚಿಸಿ ಬಳಿಕ ಗ್ರಾಹಕರನ್ನು ಸಂಪರ್ಕಿಸುವ ಕೆಲಸ ಆಗಬೇಕಿದೆ.
ಶಾಲಾ ಬಸ್‌ಗಳಾಗಿ ಎಲೆಕ್ಟ್ರಿಕ್ ವಾಹನ: ನಗರದಲ್ಲಿ ನಿತ್ಯ ಸಾವಿರಾರು ಶಾಲಾ ವಾಹನಗಳು ಸಂಚರಿಸುತ್ತವೆ. ಕೊನೆಪಕ್ಷ ಅಲ್ಲಿಯಾದರೂ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯಲು ಮತ್ತು ಮನೆಗಳಿಗೆ ಬಿಡಲು ಸಾವಿರಾರು ವಾಹನಗಳ ಬಳಕೆ ಆಗುತ್ತದೆ. ಇವುಗಳ ವೇಗಮಿತಿಯೂ ಕಡಿಮೆ ಇರುತ್ತದೆ. ವಿದ್ಯಾರ್ಥಿಗಳನ್ನು ನಿಗದಿತ ಸ್ಥಳಕ್ಕೆ ತಲುಪಿಸಿದ ನಂತರ ಅವು ಒಂದೇ ಕಡೆ ಗಂಟೆಗಟ್ಟಲೆ ನಿಲುಗಡೆ ಆಗಿರುತ್ತವೆ. ಅಂತಹ ಕಡೆ ಚಾರ್ಜಿಂಗ್ ಮಾಡಲೂ ಸುಲಭವಾಗುತ್ತದೆ. ಸ್ಥಳಾವಕಾಶವೂ ಇರುತ್ತದೆ. ಹಾಗಾಗಿ, ಸಬ್ಸಿಡಿ ದರದಲ್ಲಿ ಶಾಲೆಗಳಿಗೆ ನೀಡಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲು ಸಾಕಷ್ಟು ಅವಕಾಶ ಇದೆ ಎಂಬುದು ತಜ್ಞರ ಅಭಿಮತ
ಬಿಎಂಟಿಸಿಗೆ ಲಾಭ ಅಷ್ಟಕ್ಕಷ್ಟೇ: ಬಿಎಂಟಿಸಿಯು ಹವಾನಿಯಂತ್ರಿತವೂ ಸೇರಿ ಸುಮಾರು ನೂರು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಉದ್ದೇಶಿಸಿದೆ. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಆದರೆ, ಇದರಲ್ಲಿ ಸಂಸ್ಥೆಗೆ ಗಮನಾರ್ಹ ಪ್ರಮಾಣದಲ್ಲೇನೂ ಉಳಿತಾಯ ಆಗುವುದಿಲ್ಲ ಎನ್ನಲಾಗಿದೆ. ಕಳೆದ ಬಾರಿ ಕೇಂದ್ರ ಸರ್ಕಾರದ “ಫೇಮ್-1′ (ಫಾಸ್ಟರ್ ಅಡಾಪ್ಟೆಶನ್ ಆ್ಯಂಡ್ ಮೆನುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಆ್ಯಂಡ್ ಎಲೆಕ್ಟ್ರಿಕ್ ವೆಹಿಕಲ್) ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಶೇ. 50 ವಿನಾಯ್ತಿ ಸಿಗುತಿತ್ತು. ಈಗಿರುವ ಫೇಮ್-2 ಯೋಜನೆ ಅಡಿ ವಿನಾಯ್ತಿ ಮೊತ್ತವನ್ನು ಗರಿಷ್ಠ 50 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇದರಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವಂತಿಲ್ಲ. ಕೇವಲ ಗುತ್ತಿಗೆ ಪಡೆಯಲು ಅವಕಾಶವಿದೆ. ಹಾಗಾಗಿ, ಈ ತೆರಿಗೆ ವಿನಾಯ್ತಿಯಿಂದ ಸದ್ಯಕ್ಕಂತೂ ಸಂಸ್ಥೆಗೆ ಲಾಭವಿಲ್ಲ. ಚಾರ್ಜಿಂಗ್ ಪಾಯಿಂಟ್‌ಗಳ ನಿರ್ಮಾಣದಲ್ಲಿ ಮಾತ್ರ ತಕ್ಕಮಟ್ಟಿಗೆ ಉಳಿತಾಯ ಆಗಬಹುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಖಾಸಗಿ ಟೆಂಡರ್ ಮೂಲಕ ಸ್ಟೇಷನ್ ನಿರ್ಮಾಣ: ನಗರದಲ್ಲಿ ಹೆಚ್ಚಿನ ಚಾರ್ಜಿಂಗ್ ಸ್ಟೇಷನ್‌ಗಳು ನಿರ್ಮಾಣ ಅಗತ್ಯ. ಪೆಟ್ರೋಲ್ ಬಂಕ್‌ಗಳಿರುವಂತೆಯೇ ಚಾರ್ಜಿಂಗ್ ಪಾಯಿಂಗ್‌ಗಳನ್ನೂ ತೆರೆಯಬೇಕು. ಕೇವಲ ಮೋಟಾರು ವಾಹನಗಳ ತಯಾರಿಕಾ ಕಂಪನಿಗಳಿಂದ ಇದು ಅಸಾಧ್ಯ. ಖಾಸಗಿ ಟೆಂಡರ್ ನೀಡಿ, ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಬೇಕು. ಇದಕ್ಕೂ ಮುನ್ನ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾದ ವೇಳೆಯಲ್ಲಿ ಹೆಚ್ಚಿನ ವಿದ್ಯುತ್ ಅವಶ್ಯಕತೆ ಎದುರಾಗುತ್ತದೆ. ಅಗತ್ಯದಷ್ಟು ವಿದ್ಯುತ್ ಪೂರೈಸಲು ಸರ್ಕಾರ ಕೂಡ ಸಿದ್ಧವಾಗಬೇಕು. ಇದಕ್ಕಾಗಿ ಹೆಚ್ಚಿನ ಸೋಲಾರ್ ಪಾರ್ಕ್‌ಗಳನ್ನು ನಿರ್ಮಿಸುವುದು ಅಗತ್ಯವಿದೆ. ಇಲ್ಲವಾದರೆ, ಶಾಖೋತ್ಪನ್ನ ಘಟಕಗಳು ಕೂಡ ಭವಿಷ್ಯದಲ್ಲಿ ಪರಿಸರಕ್ಕೆ ತೊಡಕಾಗಬಹುದು.
ಬೆಂಗಳೂರಿನಂತಹ ನಗರಗಳಿಗೆ “ಶೇರ್ಡ್ ಎಲೆಕ್ಟ್ರಿಕ್ ಮೊಬಿಲಿಟಿ’ ಭವಿಷ್ಯದ ಸಾರಿಗೆ ವ್ಯವಸ್ಥೆ ಆಗಿದೆ. ಆದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಶೇರ್ಡ್ ಮೊಬಿಲಿಟಿಯನ್ನೂ ಉತ್ತೇಜಿಸಬೇಕು. ಆಗ, ವಾಯುಮಾಲಿನ್ಯದ ತಗ್ಗಿಸುವುದರ ಜತೆಗೆ ಸಂಚಾರದಟ್ಟಣೆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
-ಪ್ರೊ.ಆಶಿಶ್ ವರ್ಮ, ಐಐಎಸ್ಸಿ ವಿಜ್ಞಾನಿ
1.30 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಪ್ರತಿ ವರ್ಷ 6 ಮಿಲಿಯನ್ ಟನ್ ವಾಯುಮಾಲಿನ್ಯವಾಗುತ್ತಿದೆ. ಇದರಿಂದಾಗಿ ಬೆಂಗಳೂರು ವಾಸಕ್ಕೆ ಯೋಗ್ಯವಲ್ಲದ ನಗರ ಎಂದು ಘೋಷಿಸುವ ದಿನಗಳು ದೂರವಿಲ್ಲ. ನಗರ ಈಗಾಗಲೇ ಶೇ. 60ರಿಂದ 70 ಕಾಂಕ್ರೀಟ್‌ನಿಂದ ತುಂಬಿದೆ. ಈ ಕೂಡಲೆ ಸರ್ಕಾರಗಳು ಮಾಲಿನ್ಯ ನಿಯಂತ್ರಣ ಮಾಡುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಎಸ್‌ಟಿ, ರಸ್ತೆ ತೆರಿಗೆ ವಿನಾಯ್ತಿಯಂತಹ ಕ್ರಮಗಳು ಸ್ವಾಗತಾರ್ಹ.
-ಸುರೇಶ್ ಹೆಬ್ಳೀಕರ್, ಪರಿಸರ ತಜ್ಞ
* ಲೋಕೇಶ್ ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.