ಶೀಘ್ರ ರಸ್ತೆಗಿಳಿಯಲಿವೆ ವಿದ್ಯುತ್ ಚಾಲಿತ ಬಸ್‌ಗಳು
Team Udayavani, Sep 15, 2017, 11:49 AM IST
ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ವಿದ್ಯುತ್ ಚಾಲಿತ ಬಸ್ ಸೇರ್ಪಡೆ ಬಗ್ಗೆ ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಎಚ್.ಎಂ .ರೇವಣ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡೀಸೆಲ್ ಬೆಲೆ ಪದೇ ಪದೇ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ.
ಅದನ್ನು ತಡೆಗಟ್ಟಲು ಹಂತ ಹಂತವಾಗಿ ಎಲೆಕ್ಟ್ರಾನಿಕ್ ಬಸ್‌ಗಳನ್ನು ಸಂಚಾರಕ್ಕೆ ಬಿಡುವ ಬಗ್ಗೆ ಚರ್ಚೆ ನಡೆದಿದೆ. ವಿದ್ಯುತ್ ಚಾಲಿತ ಬಸ್‌ಗಳ ಸೇರ್ಪಡೆ ಸಂಬಂಧ ಈ ತಿಂಗಳ 19 ರಂದು ಕೇಂದ್ರ ಸರ್ಕಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಭೆ ಕರೆದಿದೆ. ಅಂದಿನ ಸಭೆಯಲ್ಲಿ ಸಾಧಕ-ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು,’ ಎಂದರು.
“ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಾರಿಗೆ ಸಂಸ್ಥೆ ಕೆಲಸ ಮಾಡುತ್ತಿದೆ. ಹೀಗಾಗಿಯೇ ಸಾರಿಗೆ ಸಂಸ್ಥೆಗೆ 209 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ,’ ಎಂದು ಹೇಳಿದರು.
“ಡಿಸೆಂಬರ್ ಅಂತ್ಯದೊಳಗೆ ಬಿಎಂಟಿಸಿ ಸೇರಿದಂತೆ ಮೂರು ಸಾವಿರ ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಬಿಎಂಟಿಸಿಗೆ ಬುಧವಾರವಷ್ಟೇ 23 ವೋಲ್ವೋ ಬಸ್ ಸೇರ್ಪಡೆ ಮಾಡಲಾಗಿದ್ದು ಇನ್ನೂ 107 ಬಸ್‌ಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ,’ ಎಂದು ತಿಳಿಸಿದರು.
“ನಗರದಲ್ಲಿ 60 ಲಕ್ಷ ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ದಟ್ಟಣೆ ಉಂಟಾಗಿದೆ. ಹೀಗಾಗಿ, ವರ್ತುಲ ರಸ್ತೆಯಲ್ಲಿ ಹೆಚ್ಚು ವಾಹನ ಸಂಚಾರಕ್ಕೆ ಒತ್ತು ಕೊಡಲಾಗುವುದು,’ ಎಂದು ಹೇಳಿದರು. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಅಂತರ್‌ನಿಗಮ ವರ್ಗಾವಣೆಗೆ ಚಾಲನೆ ನೀಡಿದ್ದು, ಈಗಾಗಲೇ ಸಿ ಮತ್ತು ಡಿ ಸಿಬ್ಬಂದಿಗಳ ವರ್ಗಾವಣೆ ಮಾಡಲಾಗಿದೆ. ಅಧಿಕಾರಿ ಹಂತದ ವರ್ಗಾವಣೆ ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಹೊಸ ವಿಭಾಗ ಆರಂಭಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ನಾಲ್ಕು ನಿಗಮಗಳಿಗೆ 7337 ಹೊಸ ಬಸ್ ಸೇರ್ಪಡೆ ಮಾಡಲಾಗಿದೆ. 25 ಸಾವಿರ ಕ್ಕೂ ಹೆಚ್ಚು ನೌಕರ-ಸಿಬ್ಬಂದಿಯನ್ನು ಹೊಸದಾಗಿ ನೇಮಕಾಗಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನಗರ ಪ್ರದಕ್ಷಿಣೆ ಕೈಗೊಂಡ ಸಂದರ್ಭದಲ್ಲಿ ಬಸ್ ಕೈಕೊಟ್ಟ ಬಗ್ಗೆ ಪ್ರತಿಕ್ರಿಯಿಸಿದರು.
ಬಿಎಂಟಿಸಿ ಬಸ್‌ಗಳು ಆಗ್ಗಾಗ್ಗೆ ಕೈ ಕೊಡುತ್ತಿದ್ದು , ತಾಂತ್ರಿಕ ತೊಂದರೆಯಾ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂಬ ಬಗ್ಗೆ ಅಧಿಕಾರಿಗಳಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬಿಎಂಟಿಸಿ ಡಿಪೋಗಳಲ್ಲಿ ಬಸ್‌ಗಳನ್ನು ನೀಡಲು ಚಾಲಕ ಹಾಗೂ ನಿರ್ವಾಹಕರಿಂದ ಹಣ ಕೇಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹಾಗೂ ಶಾಸಕ ಗೋಪಾಲ ಪೂಜಾರಿ, ಉಪಾಧ್ಯಕ್ಷ ಬಸವರಾಜ ಪುಳ್ಯ, ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.