ಇನ್ಫಿ ಮೂರ್ತಿಗೆ 1800 ಟೆಕ್ಕಿಗಳ ಇಮೇಲ್! ಇನ್ಫೋಸಿಸ್ ಅಸಮಾಧಾನ
Team Udayavani, Feb 11, 2017, 3:45 AM IST
ಬೆಂಗಳೂರು: ಇನ್ಫೋಸಿಸ್‌ನ ಸಿಇಒ ವಿಶಾಲ್ ಸಿಕ್ಕಾ ಅವರಿಗೆ ವೇತನ ಹೆಚ್ಚಳ ಮತ್ತು ನಿರ್ಗಮಿತ ಇಬ್ಬರು ಉನ್ನತಾಧಿಕಾರಿಗಳಿಗೆ ನೀಡಿರುವ ಪರಿಹಾರ ಕುರಿತ ಪತ್ರ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಆಡಳಿತ ಮಂಡಳಿಯ ಈ ನಿರ್ಧಾರದಿಂದ ಅಸಮಾಧಾನಗೊಂಡ 1,800 ಸಹೋದ್ಯೋಗಿಗಳು ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ಇಮೇಲ್ ರವಾನಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಜತೆ ಅನಿಸಿಕೆ ತೋಡಿಕೊಂಡಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, “ನನಗೆ ಇನ್ಫೋಸಿಸ್ ಆಡಳಿತ ಮಂಡಳಿಯ ನಿರ್ಧಾರಗಳನ್ನು ಕೇಳಿ ಸಂಕಟವಾಗುತ್ತಿದೆ. ಇದು ಕೇವಲ ಸಿಕ್ಕಾ ವಿಚಾರ ಮಾತ್ರವಲ್ಲ. ಆಡಳಿತ ಮಂಡಳಿಯ ಗುಣಮಟ್ಟದ ವಿಚಾರವೂ ಹೌದು. ಮಂಡಳಿ ಈ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದೆ. ಇವೆಲ್ಲ ಬೆಳವಣಿಗೆ ಕುರಿತು ನನಗೆ 1800 ಇಮೇಲ್‌ಗಳು ಬಂದಿವೆ’ ಎಂದು ಹೇಳಿದ್ದಾರೆ.
ಸಿಕ್ಕಾಗೆ ಇನ್ಫಿ ಪ್ರಶಂಸೆ: “ಸಿಇಒ ವಿಶಾಲ್ ಸಿಕ್ಕಾ ಜೊತೆಗಿನ ನನ್ನ ಸಂಬಂಧ ಚೆನ್ನಾಗಿಯೇ ಇದೆ. ಸಿಕ್ಕಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನನ್ನ ಅಸಮಾಧಾನ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧವೇ ಹೊರತು ಸಿಕ್ಕಾ ಮೇಲಲ್ಲ’ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಪರೋಕ್ಷವಾಗಿ ಅವರು ಕಾರ್ಯದರ್ಶಿ ಶೇಷಸಾಯಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅತ್ತ ಆರ್. ಶೇಷಸಾಯಿ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಮಾಜಿ ಉದ್ಯೋಗಿಗಳಾದ ಮೋಹನದಾಸ್ ಪೈ ಮತ್ತು ವಿ. ಬಾಲಕೃಷ್ಣನ್ ಆಗ್ರಹಿಸಿರುವುದೂ ಇನ್ಫಿ ಹೇಳಿಕೆಗೆ ಪೂರಕವೇ ಆಗಿದೆ.
30 ತಿಂಗಳ ಪರಿಹಾರ ಏಕೆ?: “ಸಂಸ್ಥೆಯ ಕಾನೂನು ಘಟಕದ ಮುಖ್ಯಸ್ಥರಾಗಿದ್ದ ಡೇವಿಡ್ ಕೆನಡಿ ಇನ್ಫೋಸಿಸ್ ತೊರೆದಾಗ ಅವರಿಗೆ ನೀಡಿದ್ದು ಕೇವಲ 12 ತಿಂಗಳ ಪರಿಹಾರವಷ್ಟೇ. ಉಳಿದಂತೆ ಬೇರೆ ಉದ್ಯೋಗಿಗಳಿಗೆ 3 ತಿಂಗಳು ಪರಿಹಾರ ನೀಡಲಾಗುತ್ತದೆ. ಇದು ಕಂಪನಿಯ ನಿಯಮ. ಆದರೆ, ಸಿಎಫ್ಒ ಹುದ್ದೆ ತೊರೆದಾಗ ರಾಜೀವ್ ಬನ್ಸಾಲಿ ಅವರಿಗೆ 30 ತಿಂಗಳ ಪರಿಹಾರ ನೀಡಲಾಗಿದೆ. ಅಂದರೆ, ಸಾಮಾನ್ಯ ಉದ್ಯೋಗಿಗಿಂತ 10 ಪಟ್ಟು ಹೆಚ್ಚು. ಇದರ ಉದ್ದೇಶವಾದರೂ ಏನು?’ ಎಂದು ಆಡಳಿತ ಮಂಡಳಿಗೆ ಮೂರ್ತಿ ಪ್ರಶ್ನಿಸಿದ್ದಾರೆ.
ಸಹೋದ್ಯೋಗಿಗಳ ಬೇಸರ: “ಸಾಕಷ್ಟು ಹಿರಿಯ, ಮಧ್ಯಮ ಮತ್ತು ಕಿರಿಯ ಉದ್ಯೋಗಿಗಳು ಇದಕ್ಕೆ ಬೇಸರ ಸೂಚಿಸಿದ್ದಾರೆ. ಇನ್ಫೋಸಿಸ್ ತೊರೆದ ಹಲವು ಮಂದಿ ನಮ್ಮೊಡನೆ ಹಗಲಿರುಳು ಶ್ರಮಿಸಿ ಸಂಸ್ಥೆಯನ್ನು ಕಟ್ಟಿದ್ದಾರೆ. ಅವರೆಲ್ಲರ ಮುಂದೆ ಕಂಪನಿಯ ಮೌಲ್ಯ ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಹೇಳಿದ್ದಾರೆ.
ಶೇಷಸಾಯಿ ರಾಜೀನಾಮೆಗೆ ಹೆಚ್ಚಿದ ಬಾಹ್ಯ ಒತ್ತಡ
ಇನ್ಫೋಸಿಸ್‌ನ ಮಾಜಿ ಹಣಕಾಸು ಅಧಿಕಾರಿ ವಿ. ಬಾಲಕೃಷ್ಣನ್ ಸಂಸ್ಥೆಯಲ್ಲಿನ ಭಿನ್ನಮತಕ್ಕೆ ಧ್ವನಿ ಸೇರಿಸಿದ್ದು, ಕಾರ್ಯದರ್ಶಿ ಸ್ಥಾನಕ್ಕೆ ಶೇಷಸಾಯಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. “ಮುಖ್ಯ ಷೇರುದಾರರು- ಆಡಳಿತ ಮಂಡಳಿ ನಡುವಿನ ಸಂಪರ್ಕ ಮುರಿದು ಬಿದ್ದಿದೆ. ಆಡಳಿತ ಮಂಡಳಿ ಪುನರ್‌ರಚನೆಗೊಳ್ಳಬೇಕು. ಒಳ್ಳೆಯ ಮಾರ್ಗದರ್ಶನ ಸಿಗುವಂತಾಗಬೇಕು’ ಎಂದಿದ್ದಾರೆ.
ಇನ್ಫೋಸಿಸ್‌ನಿಂದ ಸಿಕ್ಕಾಗೆ ಸಿಗ್ತಿರೋದು 117 ಕೋಟಿ ರೂ.!
2016ರಲ್ಲಿ ಸಿಇಒ ವಿಶಾಲ್ ಸಿಕ್ಕಾ ಪಡೆಯುತ್ತಿದ್ದ ಸಂಭಾವನೆ 47.35 ಕೋಟಿ ರೂಪಾಯಿ. ವೇತನ ಹೆಚ್ಚಳದಿಂದ ವಿಶಾಲ್ ಸಿಕ್ಕಾ ಈಗ ವಾರ್ಷಿಕವಾಗಿ 73.56 ಕೋಟಿ ರೂ. ಪಡೆಯುತ್ತಿದ್ದಾರೆ. ಹೀಗೆ 26 ಕೋಟಿ ಏರಿಕೆ ಕಂಡಿರುವುದು ಮೂಲ ಸಂಭಾವನೆ ಹೆಚ್ಚಳ (6.68 ಕೋಟಿ ರೂ.), ಮಾರ್ಪಾಡಾದ ಮೊತ್ತದಿಂದ (20 ಕೋಟಿ ರೂ.) ಮಾತ್ರ. ಆದರೆ, ಸಿಕ್ಕಾ ಅವರು ಇನ್ಫೋಸಿಸ್‌ನಿಂದ ಪಡೆಯುತ್ತಿರುವ ಒಟ್ಟು ಮೊತ್ತ 73 ಕೋಟಿ ರೂಪಾಯಿಗೂ ಅಧಿಕ! ನಿರ್ಬಂಧಿತ ಸ್ಟಾಕ್ ಘಟಕದಿಂದ (ಆರ್‌ಎಸ್‌ಯು) ಅವರಿಗೆ 13.37 ಕೋಟಿ ರೂ., ಇತರೆ ಸ್ಟಾಕ್ ಘಟಕಗಳಿಂದ 33.34 ಕೋಟಿ ರೂ. ಆದಾಯವಿದೆ. ಹಾಗೆ ನೋಡಿದರೆ ಇವೆಲ್ಲ ಸೇರಿ 117 ಕೋಟಿ ರೂ. ಪ್ಯಾಕೇಜ್ ಅನ್ನು ಸಿಕ್ಕಾ ಪಡೆಯುತ್ತಿದ್ದಾರೆ!
ಸಿಕ್ಕಾಗೆ “ಒಪನ್’ ಬೆಂಬಲ
ಇನ್ಫೋಸಿಸ್‌ನ ಮೂರನೇ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಒಪನ್‌ಹೀಮರ್ ಫಂಡ್ಸ್ ಈಗ ಸಿಇಒ ವಿಶಾಲ್ ಸಿಕ್ಕಾ ಪರ ಬ್ಯಾಟಿಂಗ್ ಮಾಡಿದೆ. “ಇನ್ಫೋಸಿಸ್‌ನಲ್ಲಿ ಬಹಳ ಕಾಲದಿಂದ ನಾವು ಹೂಡಿಕೆ ಮಾಡಿದ್ದೇವೆ. ನಮ್ಮೆಲ್ಲ ಬೆಂಬಲ ಡಾ. ವಿಶಾಲ್ ಸಿಕ್ಕಾ ಅವರ ವ್ಯವಸ್ಥಾಪಕ ತಂಡಕ್ಕಿದೆ. ಸಿಕ್ಕಾ ದೂರದೃಷ್ಟಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸುವವರು. ಈ ಕಿರು ಅವಧಿಯಲ್ಲೇ ಕಂಪನಿಯ ಅಭ್ಯುದಯಕ್ಕೆ ಅವರ ಕೊಡುಗೆ ಅಪಾರ’ ಎಂದು ಫಂಡ್ಸ್‌ನ ಪೋರ್ಟ್‌ಫೋಲಿಯೋ ಮ್ಯಾನೇಜರ್ ಜಸ್ಟೀನ್ ಲೆವರೆನ್l ಅವರು ಇನ್ಫೋಸಿಸ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ. ಇನ್ಫೋಸಿಸ್‌ನಲ್ಲಿ ಒಪನ್‌ಹೀಮರ್ ಫಂಡ್ಸ್ ಶೇ.2.7ರಷ್ಟು ಹೂಡಿಕೆ ಮಾಡಿದೆ. ಇದರ ಮೌಲ್ಯ 6 ಸಾವಿರ ಕೋಟಿ ರೂಪಾಯಿ!
ಮೂರ್ತಿ ಹೇಳಿಕೆ…
1.ಆಡಳಿತ ಮಂಡಳಿಯ ಈ ನೀತಿಯನ್ನು ಖಂಡಿಸಿ ಹಲವು ಹೂಡಿಕೆದಾರರು ನನಗೆ ಪತ್ರ ಬರೆದಿದ್ದಾರೆ. ಸಂಸ್ಥೆ ತೊರೆದ ಮತ್ತು ಹಾಲಿ ಸಹೋದ್ಯೋಗಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ.
2. 1995ರಲ್ಲಿ ನಾವು ದ್ವಿತೀಯ ದರ್ಜೆ ಮಾರುಕಟ್ಟೆಯಲ್ಲಿ ಹೂಡಿ, ನಷ್ಟ ಅನುಭವಿಸಿದ್ದೆವು. ಇದರ ತಪ್ಪನ್ನು ಅರಿತು ಎಜಿಎಂ ಮೂಲಕ ನಮ್ಮ ಷೇರುದಾರರ ಬಳಿ ಕ್ಷಮೆ ಕೋರಿದೆವು. ಇನ್ನೊಮ್ಮೆ ಇಂಥ ಪ್ರಮಾದ ಆಗುವುದಿಲ್ಲ ಎಂದಿದ್ದೆವು. ಅದು ಇನ್ಫೋಸಿಸ್‌ನ ಬದ್ಧತೆ. ಆ ಬದ್ಧತೆ ಮುಂದುವರಿಯಬೇಕು.
3. ಸಂಸ್ಥೆ ತೊರೆದವರಿಗೆ ಪರಿಹಾರ ನೀಡಲು ವಿಶೇಷ ಕಮಿಟಿಯೇ ಇದೆ. ಕಮಿಟಿ ಸದಸ್ಯರು ಮಂಡಳಿಯ ಎದುರು ಚರ್ಚಿಸಿದ ನಂತರವೇ ಪರಿಹಾರ ಧನ ನೀಡಲು ಮುಂದಾಗಬೇಕು. ಸಂಭಾವನೆ ಮತ್ತು ನಾಮನಿರ್ದೇಶಕ ಕಮಿಟಿಯೇ ಮತ್ತು ಆಡಳಿತ ಮಂಡಳಿ ಇವೆಲ್ಲ ಬೆಳವಣಿಗೆಗೆ ಹೊಣೆ. ಅವರಿಗೆ ಇದರ ಪ್ರಾಯಶ್ಚಿತ್ತವಾಗಬೇಕು.
4. ಈಗಷ್ಟೇ ಕೆಲಸಕ್ಕೆ ಸೇರಿದ ಇನ್ಫೋಸಿಸ್ ಉದ್ಯೋಗಿಗಿಂತ 2000 ಪಟ್ಟು ಸಿಇಒ ಸಂಭಾವನೆ ಪಡೆಯುತ್ತಿದ್ದಾರೆ. ಈ ಅಂತರವನ್ನೂ ಆಡಳಿತ ಮಂಡಳಿ ಗಮನಿಸುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.