ಮಾರುಕಟ್ಟೆಗಳ ಸೌಕರ್ಯ,ಆದಾಯ ಸಂಗ್ರಹಕ್ಕೆ ಒತ್ತು
ಹಂತ-ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಆಡಳಿತಾಧಿಕಾರಿ ನಿರ್ದೇಶನ | ಬಾಡಿಗೆ ನಿಗದಿ ಕಗ್ಗಂಟಿನಿಂದ ಪಾಲಿಕೆಗೆ ವಾರ್ಷಿಕ 55 ಕೋಟಿ ರೂ. ನಷ್ಟ
Team Udayavani, Feb 23, 2021, 11:36 AM IST
ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಹಾಗೂ ಮಳಿಗೆಗಳ ಬಾಡಿಗೆ ವಿಚಾರದಲ್ಲಿ ಇರುವ ಗೊಂದಲವನ್ನು ಸರಿಪಡಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತ ಅವರು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪಾಲಿಕೆಯ 2021-22ನೇ ಸಾಲಿನ ಬಜೆಟ್ ಮಂಡನೆಗೆ ಪಾಲಿಕೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಹಂತದಲ್ಲಿ ಬಿಬಿಎಂಪಿಯ ವಿವಿಧ ಇಲಾಖೆಗಳ ಆದಾಯ ಮೂಲಗಳು ಹಾಗೂ ಆರ್ಥಿಕ ಸೋರಿಕೆ ತಡೆ ಸೇರಿದಂತೆ ಹಲವು ವಿಚಾರಗಳು ಚರ್ಚೆ ಆಗಿವೆ. ಈ ಸಂದರ್ಭದಲ್ಲಿ ನಗರದ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಆದ್ಯತೆ ನೀಡುವುದು ಹಾಗೂ ಮಾರುಕಟ್ಟೆಗಳ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡುವ ಸಂಬಂಧ ಇರುವ ಗೊಂದಲಗಳನ್ನು ಹಂತ- ಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ನಗರದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಒಟ್ಟು 117 ಮಾರುಕಟ್ಟೆಗಳಿದ್ದು, ಇದರಲ್ಲಿ ಒಟ್ಟು 5886 ಮಳಿಗೆಗಳಿವೆ. ಕೆಲವು ನಿರ್ದಿಷ್ಟ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡುವ ವಿಚಾರವಾಗಿ ಗೊಂದಲಗಳು ಸೃಷ್ಟಿ ಆಗಿದ್ದು, ಕೆಲವು ವ್ಯಾಪಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ.
ಪಾಲಿಕೆಗೆ ವಾರ್ಷಿಕ 55 ಕೋಟಿ ರೂ. ನಷ್ಟ: ಮಾರುಕಟ್ಟೆಗಳ
ಬಾಡಿಗೆ ನಿಗದಿ ಮಾಡುವ ವಿಚಾರದಲ್ಲಿ ಈ ಹಿಂದೆ ಕೌನ್ಸಿಲ್‌ನಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಪಾಲಿಕೆಗೆ ವಾರ್ಷಿಕವಾಗಿ ಅಂದಾಜು 20ರಿಂದ 25 ಕೋಟಿ ರೂ. ಆದಾಯ ಬರುತ್ತಿದೆ. ಬಾಡಿಗೆ ಹೆಚ್ಚಳ ನಿರ್ಣಯವನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ ಹಾಗೂ ಬಾಡಿಗೆ ನಿಗದಿ ಮಾಡುವುದಕ್ಕೆ ನಿರ್ದಿಷ್ಟ ನಿರ್ಣಯ ತೆಗೆದುಕೊಳ್ಳದೆ ಇರುವುದು ಸೇರಿದಂತೆ ಪಾಲಿಕೆಗೆ ವಾರ್ಷಿಕಅಂದಾಜು 50ರಿಂದ 55 ಕೋಟಿ ರೂ. ಆದಾಯ ಸೋರಿಕೆ ಆಗುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರ ಕಂಡುಕೊಳ್ಳಲು ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೌನ್ಸಿಲ್ ನಿರ್ಣಯಗಳಲ್ಲಿ ಗೊಂದಲ: ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಈ ಹಿಂದೆ ತೆಗೆದುಕೊಳ್ಳಲಾಗಿದ್ದ ನಿರ್ಣಯಗಳು ಹಾಗೂ ಅದರ ಅನುಷ್ಠಾನದಲ್ಲಿ ಗೊಂದಲ ಇರುವುದು ಸಹ ಸಮಸ್ಯೆಗೆ ಕಾರಣವಾಗಿದೆ. ನಿರ್ದಿಷ್ಟ ವರ್ಷದಿಂದ ಪೂರ್ವ ಅನ್ವಯವಾಗುವಂತೆ ಬಡ್ಡಿ ಮತ್ತು ಅಸಲು ಸೇರಿಸಿ ಬಾಡಿಗೆ ಪಾವತಿ ಮಾಡುವ ಪಾಲಿಕೆ ತೆಗೆದುಕೊಂಡಿದ್ದ ನಿರ್ಣಯವನ್ನು ಪ್ರಶ್ನೆ ಮಾಡಿ 114ಕ್ಕೂ ಹೆಚ್ಚು ಮಳಿಗೆಗಳ ವ್ಯಾಪಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಒಮ್ಮೆಗೆ ಮಳಿಗೆ ಬಾಡಿಗೆ ಮೂರು ಪಟ್ಟು ಹೆಚ್ಚಾಗುತ್ತದೆ. ಇದರಿಂದ ನಮಗೆ ಹೊರೆಯಾಗುತ್ತದೆ ಎನ್ನುವುದು ಮಳಿಗೆಗಳ ವ್ಯಾಪಾರಿಗಳ ವಾದವಾಗಿದೆ. ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಲು ಸೂಚನೆ: ಮಾರುಕಟ್ಟೆಗಳ ಮಳಿಗೆಗಳಿಂದ ಆದಾಯ ಬರುವ ಹಾಗೂ ಸಮಸ್ಯೆ ಆಗಿರುವ ಮಳಿಗೆಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗಗಳಾಗಿ ಮಾಡಿಕೊಂಡು ಪಾಲಿಕೆಗೆ ಹೆಚ್ಚು ಆದಾಯ ಬರುವ ಮಾರುಕಟ್ಟೆಗಳ ಪ್ರಕರಣಗಳು ಆದ್ಯತೆ ಮೇಲೆ ಪರಿಹರಿಸಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿಗೂ ಪೂರಕವಾಗಿ ಯೋಜನೆ ರೂಪಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಮಾರುಕಟ್ಟೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆದಾಯ ಬಾಡಿಗೆ ಗೊಂದಲ ಪರಿಹಾರಕ್ಕೆ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. – ತುಳಸಿ ಮದ್ದಿನೇನಿ. ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು).
ಪಾಲಿಕೆಯಿಂದ ಮಾರುಕಟ್ಟೆಗಳ ಸುಧಾರಣೆ ಹಾಗೂ ಸಮಸ್ಯೆ ಪರಿಹಾರಕ್ಕೆ ಒಲವು ತೋರಿಸಿರುವುದು ಸ್ವಾಗತಾರ್ಹ. ಮಾತುಕತೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ನಾವು ಸಿದ್ಧವಾಗಿದ್ದೇವೆ. – ದಿವಾಕರ್, ಕೆ.ಆರ್. ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ.
-ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…
Actor Darshan: ಬೇರೆ ಅವರನ್ನು ನಿಂದಿಸಬೇಡಿ.. ದರ್ಶನ್ ಅಭಿಮಾನಿಗಳಿಗೆ ʼಡಿ ಕಂಪನಿʼ ಮನವಿ
Kota: ಸಂಚಾರಿ ಕಮ್ಮಾರಸಾಲೆ; ಇಡೀ ಕುಟುಂಬವೇ ಭಾಗಿ!
Himachal: ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಅವಘಡ: ವಿದೇಶಿ ಪ್ಯಾರಾಗ್ಲೈಡರ್ ಮೃ*ತ್ಯು
Actor Darshan: ‘ದಾಸʼನ ಜಾಮೀನಿಗೆ ಶ್ಯೂರಿಟಿ ನೀಡಲು ಮುಂದೆ ಬಂದ ಆ ನಟ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.