ಒತ್ತುವರಿ: 12 ಮಂದಿಗೆ ಸಜೆ
Team Udayavani, Feb 7, 2019, 6:21 AM IST
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮದಲ್ಲಿ 43 ಎಕರೆಗೂ ಹೆಚ್ಚು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದ 12 ಮಂದಿ ಒತ್ತುವರಿದಾರರಿಗೆ ಒಂದು ವರ್ಷ ಜೈಲು ಹಾಗೂ ತಲಾ ಐದು ಸಾವಿರ ರೂ ದಂಡ ವಿಧಿಸಿ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.
ಬಸವಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿದ್ದ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದ 12 ಮಂದಿ ಒತ್ತುವರಿದಾರರ ವಿರುದ್ಧ ಹಳಿಯಾಳ ತಹಶೀಲ್ದಾರ್ ವಿಶೇಷ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದರು. ಪ್ರಕರಣಗಳ ವಿಚಾರಣೆ ನಡೆಸಿದ ಭೂ ಕಬಳಿಕೆ ವಿಶೇಷ ನ್ಯಾಯಾಲಯ, ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ಹಾಗೂ ಪ್ರಾಸಿಕ್ಯೂಶನ್ ವಾದ ಪುರಸ್ಕರಿಸಿ 12 ಮಂದಿ ಭೂ ಒತ್ತುವರಿದಾರ ಆರೋಪಿಗಳಿಗೆ 1 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾದ ಆರ್.ಎಚ್ ರದ್ದಿ ಹಾಗೂ ಕಂದಾಯ ಸದಸ್ಯರಾದ ನಿರಂಜನ್ ಅವರಿದ್ದ ಪೀಠ ಆದೇಶ ನೀಡಿದೆ. ಜತೆಗೆ ಒತ್ತುವರಿ ಭೂಮಿಯನ್ನು ತೆರವುಗೊಳಿಸುವ ಸಂಬಂಧ ಕ್ರಮ ವಹಿಸುವಂತೆ ಹಳಿಯಾಳ ತಹಶೀಲ್ದಾರ್‌ಗೆ ನಿರ್ದೇಶಿಸಿದೆ. ಹನ್ನೊಂದು ಪ್ರತ್ಯೇಕ ಪ್ರಕರಣಗಳಲ್ಲಿ ಸರ್ಕಾರಿ ಅಭಿಯೋಜಕರಾಗಿ ಶೈಲಜಾ ಕೃಷ್ಣಾನಾಯಕ್ ವಾದ ಮಂಡಿಸಿದ್ದರು.
ಬಸವಳ್ಳಿ ಗ್ರಾಮದಲ್ಲಿ ನಡೆದಿದ್ದ ಭೂ ಒತ್ತುವರಿಗೆ ಸಂಬಂಧಿಸಿದಂತೆ ತಹಶೀಲ್ದಾರರು ದಾಖಲಿಸಿದ್ದ 12 ಪ್ರತ್ಯೇಕ ಭೂ ಒತ್ತುವರಿ ಪ್ರಕರಣಗಳಲ್ಲಿ, ಚಂದ್ರಕಾಂತ ನಾರಾಯಣ ಬಣದುರ್ಕಾರ, ಬಸವೆಣ್ಣಪ್ಪ ಪರಸಪ್ಪ ಹುಣಸಿಕಟ್ಟಿ, ಬಾಬು ಯಲ್ಲಪ್ಪ ದೊಡ್ಮನಿ ಗಂಗಾರಾಮು ಅಪ್ಪಯ್ಯ ಕರ್ಲಕೊಪ್ಪ, ಪುಂಡ್ಲೀಕ್ ಹೂವಣ್ಣ ಮಿರಾಶಿ, ಗೋವಿಂದ ಹೂವಣ್ಣ ರಾಚೋಟ್ಕರ್,ದುಂಡಯ್ಯ ಶೇಖರಯ್ಯ ಹಿರೇಮಠ, ಪಾರ್ವತಿ ಬಸವೆಣ್ಣಪ್ಪ ಕಾಟೆನ್ನವರ್, ಕೃಷ್ಣ ವಿಠuಲ ಮಿರಾಶಿ, ಪುಂಡಲೀಕ ಗಂಗಪ್ಪ ಖಾನಾಪುರಕರ, ಹನುಮಂತ ಗಂಗಪ್ಪ ಖಾನಾಪುರಕರ, ಪುಂಡಲೀಕ ಬಸವಂತ ಖಂಡೇಕರ ಎಂಬುವವರಿಗೆ ಒಂದು ವರ್ಷ ಜೈಲು ಹಾಗೂ ತಲಾ 5 ಸಾವಿರ ಜೈಲುಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕಿ ಶೈಲಜಾ ಕೃಷ್ಣಾನಾಯಕ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.