ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ
Team Udayavani, Nov 17, 2018, 12:43 PM IST
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಬಾಡಿಗೆಗೆ ಪಡೆಯಲಾಗುವ ವಾಹನಗಳಲ್ಲಿ ಶೇ.50ರಷ್ಟು ವಿದ್ಯುತ್ ಚಾಲಿತ ವಾಹನಗಳನ್ನೇ ಪಡೆಯಲು ತೀರ್ಮಾನಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧ ಆವರಣದಲ್ಲಿ ಬೆಸ್ಕಾಂ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜ್ ಮಾಡುವ ಘಟಕ (ಚಾರ್ಜಿಂಗ್ ಸ್ಟೇಷನ್) ಉದ್ಘಾಟಿಸಿ ಮಾತನಾಡಿದ ಅವರು, ಇನ್ಮುಂದೆ ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳ ವಾಹನ ಖರೀದಿಸುವಾಗಲೂ ವಿದ್ಯುತ್ ಚಾಲಿತ ವಾಹನಗಳಿಗೆ ಒತ್ತು ನೀಡಲಾಗುವುದು. ಒಟ್ಟಾರೆ ವಾಹನಗಳ ಪ್ರಮಾಣದಲ್ಲಿ ಶೇ.50 ರಷ್ಟು ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಚಾಲಿತ ವಾಹನ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆರಿಗೆ ವಿನಾಯ್ತಿ ಸೇರಿದಂತೆ ಹಲವು ರಿಯಾಯಿತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ .ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರು ಹಾಗೂ ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ಪ್ರಾರಂಭಿಸುವವರಿಗೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ವಿದ್ಯುತ್ ವಾಹನ ಕ್ಷೇತ್ರದ ಅಭಿವೃದ್ಧಿಗಾಗಿ ಲಭ್ಯವಾಗುವ ಸೌಲಭ್ಯಗಳ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗಾಗಿ ಕಾರ್ಯನೀತಿ ರೂಪಿಸಿದ್ದು ಹೂಡಿಕೆಗೂ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯುತ್ ವಾಹನ ಮತ್ತು ಶಕ್ತಿ ಶೇಖರಣೆ ನೀತಿ-2017 ಜಾರಿಗೊಳಿಸಿದೆ. ಈ ನೀತಿಯಡಿ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು/ಸಿಬ್ಬಂದಿ ಪ್ರಸ್ತುತ ಬಳಸಲಾಗುತ್ತಿರುವ ಡೀಸೆಲ್/ಪೆಟ್ರೋಲ್ ವಾಹನಗಳಲ್ಲಿ ಶೆ.50 ರಷ್ಟು ವಿದ್ಯುತ್ ವಾಹನಗಳಾಗಿ ಏಪ್ರಿಲ್ 2019ರ ಒಳಗೆ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಬೆಸ್ಕಾಂ ಈಗಾಗಲೇ ಐದು ವಾಹನಗಳನ್ನು ವಿದ್ಯುತ್ ಚಾಲಿತಕ್ಕೆ ಪರಿವರ್ತನೆ ಮಾಡಿ ಪ್ರಯೋಗಿಕ ಬಳಕೆ ಮಾಡುತ್ತಿದೆ. ಬೆಸ್ಕಾಂ ಕಚೇರಿ ಬಳಿ ಚಾರ್ಜರ್ ಕೇಂದ್ರ ಸಹ ಸ್ಥಾಪಿಸಿ ಪ್ರಾರಂಭಿಕವಾಗಿ ಉಚಿತವಾಗಿ ಚಾರ್ಜಿಂಗ್ ಮಾಡಿಕೊಡಲಾಗುತ್ತಿದೆ ಎಂದರು. ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ವೆಚ್ಚ ಕಡಿಮೆ ಹಾಗೂ ಮಾಲಿನ್ಯ ರಹಿತ ವಾತಾವರಣಕ್ಕೆ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಸೂಕ್ತ. ಒಂದು ಬಾರಿ ಚಾರ್ಜ್ ಆದರೆ 120 ಕಿ.ಮೀ. ವರೆಗೂ ವಾಹನ ಸಂಚರಿಸಲಿದ್ದು ಸಾರ್ವಜನಿಕರು ವಿದ್ಯುತ್ ಚಾಲಿತ ವಾಹನ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ವಿಧಾನಸೌಧ-ವಿಕಾಸಸೌಧ ಆವರಣ ಕೇಂದ್ರ: ವಿಧಾನಸೌಧ-ವಿಕಾಸಸೌಧ ಆವರಣಗಳಲ್ಲಿ ತಲಾ 01 ಡಿ.ಸಿ. ಮತ್ತು 02 ಎ.ಸಿ. ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಡಿ.ಸಿ.ಚಾರ್ಜಿಂಗ್ ಕೇಂದ್ರವು ಮಧ್ಯಮ ವೇಗದ ಚಾರ್ಜಿಂಗ್ ಕೇಂದ್ರವಾಗಿದ್ದು 15 ಕಿಲೋ ವ್ಯಾಟ್ ವ್ಯಾಟರಿ ವಾಹನಗಳನ್ನು (ಕಾರು) 90 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಎ.ಸಿ.ಚಾರ್ಜಿಂಗ್ ಕೇಂದ್ರ ಮಂದಗತಿಯ ಚಾರ್ಜಿಂಗ್ ಕೇಂದ್ರವಾಗಿದ್ದು 15 ಕಿಲೋ ವ್ಯಾಟ್ ವ್ಯಾಟರಿ ವಾಹನವನ್ನು 6 ರಿಂದ 7 ಗಂಟೆಗಳಲ್ಲಿ ಸಂಪೂರ್ಣವಾಗಿ ಜಾರ್ಜ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ದ್ವಿಚಕ್ರ ವಾಹನಗಳನ್ನು 1 ರಿಂದ 2 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಸದ್ಯಕ್ಕೆ ಚಾರ್ಜಿಂಗ್ ಉಚಿತ. ಮುಂದಿನ ದಿನಗಳಲ್ಲಿ ದರ ನಿಗದಿಯಾಗಲಿದೆ. ವಿದ್ಯುತ್ ವಾಹನಗಳನ್ನು ರೀ ಚಾರ್ಜ್ ಮಾಡಲು ಅಗತ್ಯವಾದ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದೆ.
ವಿದ್ಯುತ್‌ತ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ಪ್ರತಿ ಯೂನಿಟ್ ದರ 4.85 ರೂ. ನಿಗದಿಪಡಿಸಿದೆ. ಬೆಂಗಳೂರು ನಗರದಲ್ಲಿ 97 ಸ್ಥಳಗಳಲ್ಲಿ ಹಾಗೂ ಬೆಂಗಳೂರು-ಮೈಸೂರು, ಬೆಂಗಳೂರು-ಚೆನ್ನೈ ಹೆದ್ದಾರಿಗಳಲ್ಲಿ 24 ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.