ಬಿಜೆಪಿ ವೈಫಲ್ಯ ಜನರಿಗೆ ತಲುಪಿಸಲು ಕಾರ್ಯಕ್ರಮ
Team Udayavani, Jul 15, 2018, 6:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸೀಮಿತ ಅಧಿಕಾರ ಪಡೆದಿರುವ ಕಾಂಗ್ರೆಸ್ ಅತೃಪ್ತ ನಾಯಕರಿಗೆ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಈಶ್ವರ್ ಖಂಡ್ರೆಗೆ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಿದ್ದು, ಪ್ರಾದೇಶಿಕತೆ ಮತ್ತು ಜಾತಿ ಪ್ರಾತಿನಿಧ್ಯ ನೀಡುವ ಮೂಲಕ ಸಮಾಧಾನ ಪಡಿಸುವ ಕೆಲಸ ಮಾಡಿದೆ. ಅನಿರೀಕ್ಷಿತವಾಗಿ ಒಲಿದು ಬಂದ ಕಾರ್ಯಾಧ್ಯಕ್ಷ ಹುದ್ದೆ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಸಜ್ಜಾಗಿರುವ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ತಮ್ಮ ಮುಂದಿನ ಕಾರ್ಯತಂತ್ರದ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.
ಕಾರ್ಯಾಧ್ಯಕ್ಷ ಹುದ್ದೆ ನಿರೀಕ್ಷಿತವಾಗಿತ್ತಾ?
ಚಿಕ್ಕಂದಿನಿಂದಲೂ ನಮ್ಮ ತಂದೆಯ ಹೋರಾಟ ನೋಡಿಕೊಂಡು ಬಂದಿದ್ದೇನೆ. ಸೇವಾದಳ ಸೇರಿ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ರಾಜಕೀಯಕ್ಕೆ ಬಂದವನು. ನಮ್ಮ ಭಾಗದ ಅಭಿವೃದ್ಧಿ ಮಾಡಬೇಕೆಂಬ ಕಾರಣದಿಂದ ರಾಜಕಾರಣದಲ್ಲಿದ್ದೇನೆ.
ನೀವು ಸಚಿವ ಸ್ಥಾನದ ಆಕಾಂಕ್ಷಿ, ನಿಮ್ಮನ್ನು ಸಮಾಧಾನ ಪಡಿಸಲು ಈ ಹುದ್ದೆ ಕೊಡಲಾಗಿದೆಯಾ?
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ನಿಜ. ಯಾವುದೇ ಹುದ್ದೆ ಹಿಂದೆ ಬಿದ್ದಿಲ್ಲ. ಕಾರ್ಯಾಧ್ಯಕ್ಷ ಹುದ್ದೆ ಒಳ್ಳೆಯ ಅವಕಾಶ. ಇದು ಯಾರನ್ನೋ ಸಮಾಧಾನ ಪಡಿಸುವ ಹುದ್ದೆಯಲ್ಲ.
ಪಕ್ಷವನ್ನು ಯಾವ ರೀತಿ ಸಂಘಟಿಸಿ, ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸುವಿರಿ?
ಸಾಮಾಜಿಕ ಜಾಲ ತಾಣ, ಯುವ ಘಟಕ ಚುರುಕುಗೊಳಿಸುವುದು. ಮಹಿಳಾ ಘಟಕ ಕ್ರಿಯಾಶೀಲಗೊಳಿಸುವ ಮೂಲಕ ಬೂತ್‌ಮಟ್ಟದಿಂದ ರಾಜ್ಯಮಟ್ಟದವರೆಗೂ ಕಾಂಗ್ರೆಸ್ ಸಾಧನೆ ಹಾಗೂ ಬಿಜೆಪಿ ವೈಫಲ್ಯ ತಲುಪಿಸಲು ಕಾರ್ಯಕ್ರಮ ಹಾಕಿಕೊಂಡು ಲೋಕಸಭೆ ಚುನಾವಣೆ ಯಾವಾಗ ಬಂದರೂ ಎದುರಿಸಲು ಸಿದ್ಧರಾಗುತ್ತೇವೆ.
ನೀವು ಸಮ್ಮಿಶ್ರ ಸರ್ಕಾರದ ಭಾಗವಾಗಿ ಪಕ್ಷ ಸಂಘಟಿಸುವುದು ಸವಾಲಾಗಿದೆಯಾ?
ನಮ್ಮ ಮುಂದೆ ಅನೇಕ ಸವಾಲುಗಳಿವೆ. ಕೇಂದ್ರ ಪೂರ್ವಾಗ್ರಹ ಪೀಡಿತ ವಿಚಾರ ಇಟ್ಟುಕೊಂಡು ಜಾತ್ಯತೀತ ವ್ಯವಸ್ಥೆ ಹಾಳು ಮಾಡಿದೆ. ಪ್ರಜಾಪ್ರಭುತ್ವ ಉಳಿಸಬೇಕಾದರೆ, ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ.
ಜೆಡಿಎಸ್ ಜತೆ ಸೀಟು ಹೊಂದಾಣಿಕೆಗೆ ಕಾಂಗ್ರೆಸ್‌ನಲ್ಲಿ ವಿರೋಧವಿದೆಯಲ್ಲ?
ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಅನಿವಾರ್ಯತೆಯಿದೆ. ಕೆಲವು ಕ್ಷೇತ್ರಗಳಲ್ಲಿ ಈ ಸಮಸ್ಯೆ ಉದ್ಭವ ಆಗುತ್ತದೆ. ಹೊಂದಾಣಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು ಎನ್ನುವ ಆತಂಕ ಕೆಲ ನಾಯಕರಲ್ಲಿದೆ. ದಕ್ಷಿಣ ಕರ್ನಾಟಕದ ನಾಯಕರನ್ನು ಕರೆದು ಲೋಕಸಭೆ ಚುನಾವಣೆಯಲ್ಲೂ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಸಂಕಲ್ಪವಿದೆ.
ಉಕ ಭಾಗಕ್ಕೆ ಅನ್ಯಾವಾಗಿದೆ ಎಂಬ ಆರೋಪ ಕೇಳಿ ಬಂದಿದೆಯಲ್ಲ?
ಸಮ್ಮಿಶ್ರ ಸರ್ಕಾರದಲ್ಲಿ ಮಿತಿಗಳನ್ನು ನೋಡಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ಕಡಿಮೆ ಸಿಕ್ಕಿದೆ ಎನ್ನುವ ಭಾವನೆಯಿದೆ. ಇಲ್ಲ ಎಂದು ನಾನು ಹೇಳುವುದಿಲ್ಲ. ಈ ವಿಚಾರ ವರಿಷ್ಠರ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸುವ ಕೆಲಸ ಆಗಲಿದೆ. ಯಾವ ಭಾಗಕ್ಕೆ ಅನ್ಯಾಯವಾಗಿದೆ. ಅಂತಹ ಭಾಗಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ವೀರಶೈವ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂಬ ಆರೋಪವಿದೆ?
ಲಿಂಗಾಯತ, ಮಾದಿಗ, ಬಂಜಾರ ಸಮುದಾಯಗಳಿಗೆ ಯೋಗ್ಯ ಪ್ರಾತಿನಿಧ್ಯ ಸಿಕ್ಕಿಲ್ಲವೆಂಬ ಭಾವನೆಯಿದೆ. ನನಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದು ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಲ್ಲವೇ?
ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮದ ಹೋರಾಟ ಮಾಡಿದ್ದಕ್ಕೆ ಈ ಸರ್ಕಾರದಲ್ಲಿ ಹೊರಗಿಡಲಾಗಿದೆ ಎಂಬ ಆರೋಪ ಇದೆಯಲ್ಲ?
ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೀರಶೈವ ಲಿಂಗಾಯತ ಎರಡೂ ಒಂದೇ. ಅಂಗೈಯಲ್ಲಿ ಲಿಂಗ ಪೂಜೆ ಮಾಡುವವರೆಲ್ಲರೂ ವೀರಶೈವ ಲಿಂಗಾಯತರು. ಕೆಲವು ವಿಷಯಗಳಲ್ಲಿ ವಿಚಾರ ಬೇಧ ಇರಬಹುದು. ಸಾಮಾನ್ಯ ಜನರು ಗುರು ಪೀಠಗಳಿಗೂ ನಡೆದುಕೊಳ್ಳುತ್ತಾರೆ. ಅಖೀಲ ಭಾರತ ವೀರಶೈವ ಮಹಾಸಭೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದೆ.
ಲಿಂಗಾಯತ ಪ್ರತ್ಯೇಕ ಹೋರಾಟ ಕಾಂಗ್ರೆಸ್ ಸೋಲಿಗೆ ಕಾರಣವೆಂಬ ಮಾತು ಕೇಳಿ ಬಂದಿದೆಯಲ್ಲ?
ಈ ವಿಷಯದ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುವುದಿಲ್ಲ. ಯಾರು ವಿಷಯ ತಜ್ಞರಿದ್ದಾರೆ ಅವರು ಇದರ ಬಗ್ಗೆ ಮಾಹಿತಿ ಕಲೆ ಹಾಕಿ ಹೇಳಬೇಕು.
ನಿಮಗೆ ಹಾಗೆ ಅನಿಸಿದೆಯಾ?
ನಮಗೆ ಏಕೆ ಸೋಲಾಯಿತೆಂದು ಅಧ್ಯಯನ ಮಾಡುತ್ತಿದ್ದೇನೆ. ಬಿಜೆಪಿಯವರು ನಮ್ಮ ಸಮಾಜ ಒಡೆಯಬೇಕೆಂದು ಹೊರಟಿಲ್ಲ. ನಮ್ಮ ಸಮಾಜದವರೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆ ಇಟ್ಟಾಗ ಸರ್ಕಾರ ಅದನ್ನು ಮಾನ್ಯತೆ ಮಾಡಿದೆ. ಇಲ್ಲಿ ಯಾರಿಗಾದರೂ ನೋವಾಗಿದೆ ಎಂದರೆ ಅದಕ್ಕೆ ನಾವೇ ಕಾರಣರು ಎಂದು ತಿಳಿದುಕೊಳ್ಳಬೇಕು. ಈಗಲಾದರೂ ಒಗ್ಗೂಡಿಕೊಂಡು ಹೋಗುವ ಕೆಲಸ ಮಾಡಬೇಕು.
ಹಿಂದಿನ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬ ಶಿಫಾರಸು ಮಾಡಿದೆ. ನೀವು ಒಪ್ಪುತ್ತೀರಾ?
ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅದಕ್ಕೆ ಕಟಿಬದ್ಧನಾಗಿದ್ದೇನೆ.
ರಾಹುಲ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಎಲ್ಲೂ ಗೆಲುವು ಸಿಗುವುದಿಲ್ಲ ಎಂಬ ಮಾತಿದೆ?
ಪಂಜಾಬ್‌ನಲ್ಲಿ ಗೆದ್ದಿದ್ದೇವೆ. ಹಿಂದೆ ರಾಜ್ಯದಲ್ಲಿ 122 ಸ್ಥಾನ ಗೆದ್ದಿದ್ದೇವೆ. ಗುಜರಾತ್‌ನಲ್ಲಿ ಬಿಜೆಪಿ ಎಲ್ಲ ಶಕ್ತಿ ಪ್ರಯೋಗಿಸಿದರೂ ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ.
ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ನೀಡುತ್ತ ಹೋದರೆ, ಕಾಂಗ್ರೆಸ್ ಭವಿಷ್ಯ ಏನು?
ದೇಶದ, ಸಮಾಜದ ಹಿತ ದೃಷ್ಟಿಯಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು.
ಪ್ರತಿಪಕ್ಷದಲ್ಲಿ ಇದ್ದು ಹೋರಾಟ ಮಾಡಬಹುದಿತ್ತಲ್ಲಾ?
ಈಗ ಕೇಂದ್ರದಲ್ಲಿ 150 ಅಧಿಕಾರಿಗಳು ಮಾತ್ರ ಸರ್ಕಾರ ನಿಯಂತ್ರಿಸುತ್ತಿದ್ದಾರೆ. ಕೇಂದ್ರ ಸಚಿವರಿಗೂ ಮಾನ್ಯತೆಯಿಲ್ಲ. ಒಬ್ಬರೇ ಸರ್ವಾಧಿಕಾರ ನಡೆಸುತ್ತಿದ್ದಾರೆ. ಅದನ್ನು ಹೊರಗಿಡಲು ಜಾತ್ಯತೀತ ಶಕ್ತಿಗಳ ಜತೆ ಕೈ ಜೋಡಿಸುವ ಅನಿವಾರ್ಯತೆಯಿದೆ.
ಪಕ್ಷದಲ್ಲಿ ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ. ಅವರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೀರಾ ?
ಯಾವ ಹಿರಿಯ ನಾಯಕರೂ ಮುನಿಸಿಕೊಂಡಿಲ್ಲ. ಎಲ್ಲ ಹಿರಿಯರ ಜತೆ ಉತ್ತಮ ಸಂಪರ್ಕವಿದೆ. ಮತ್ತೆ ರಾಜ್ಯವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡುವ ವಿಶ್ವಾಸವಿದೆ.
ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಏಕೆ ಮತ ಹಾಕಬೇಕು?
ನಾವು ದೇಶದಲ್ಲಿ ಗೌರವದಿಂದ ತಲೆ ಎತ್ತಿ ನಡೆಯುತ್ತಿದ್ದೇವೆ ಎಂದರೆ ಕಾಂಗ್ರೆಸ್ ಕಾರಣ. ಆರ್‌ಟಿಐ, ಆರ್‌ಟಿಇ, ಆಹಾರ ಭದ್ರತೆ ಕಾಯ್ದೆ ಎಲ್ಲವನ್ನೂ ಕಾಂಗ್ರೆಸ್ ತಂದಿದೆ. ಇಷ್ಟೊಂದು ಅಭಿವೃದ್ಧಿ ಮಾಡಿದ್ದು ಇವತ್ತು ಬಂದವರು ಮಾಡಿದ್ದಾರಾ? ಅಭಿವೃದ್ಧಿ ಮಾತನಾಡೋರು ಮೇಲಿಂದ ಬಿದ್ದಿದ್ದಾರಾ? ಸಂಸ್ಕೃತಿಯ ಬಗ್ಗೆ ಮಾತನಾಡುವವರು ಅಡ್ವಾಣಿಯನ್ನು ಹೇಗೆ ನೋಡುತ್ತಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಿದೆ. ಹೀಗಾಗಿ ಶಾಂತಿ, ಸಮಾನತೆ, ಸಹೋದರತ್ವ, ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಕಾಂಗ್ರೆಸ್ ಅನಿವಾರ್ಯತೆಯಿದೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.