ಬೆಂ.ವಿವಿ ಪ್ರತಿಮೆಗಳ ಪ್ರತಿಷ್ಠಾಪನೆ ಕಗ್ಗಂಟು
Team Udayavani, May 8, 2019, 3:06 AM IST
ಬೆಂಗಳೂರು: ಸರಸ್ವತಿ ಪ್ರತಿಮೆ ಜಾಗದಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಬೆಂಗಳೂರು ವಿವಿ ಕೆಲ ಪ್ರಾಧ್ಯಾಪಕ ವರ್ಗ ಹಾಗೂ ಆಡಳಿತ ಮಂಡಳಿ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ವಿವಾದದ ಸ್ವರೂಪ ಪಡೆದಿದೆ.
ಸರಸ್ವತಿ ಪ್ರತಿಮೆ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದು, ಸರಸ್ವತಿ ಪ್ರತಿಮೆ ಅಕ್ಕ ಪಕ್ಕದಲ್ಲಿ ಬುದ್ಧ ಹಾಗೂ ಬಸವಣ್ಣನ ಪ್ರತಿಮೆಯೂ ಪ್ರತಿಷ್ಠಾಪನೆ ಮಾಡಬೇಕು ಎಂಬ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆದಿದೆ.
ಸರಸ್ವತಿ ಪ್ರತಿಮೆಯ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದಕ್ಕೆ ವಿವಿ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳ ವಲಯದಲ್ಲಿ ಪರ ವಿರೋಧದ ಚರ್ಚೆ ಆರಂಭವಾಗಿದೆ. ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದು ತಪ್ಪಲ್ಲ ಎಂದು ಒಂದು ವರ್ಗ ವಾದಿಸಿದರೆ , ಸರಸ್ವತಿ ಪ್ರತಿಮೆ ಮೊದಲಿನ ಜಾಗದಲ್ಲೇ ಇರಬೇಕು ಎಂದು ಇನ್ನೊಂದು ವರ್ಗ ಪಟ್ಟು ಹಿಡಿದಿದೆ.
ಸೋಮವಾರ ನಡೆದಿದ್ದ ತುರ್ತು ಸಿಂಡಿಕೇಟ್ ಸಭೆಯಲ್ಲಿ ಸರಸ್ವತಿ ಪ್ರತಿಮೆಯನ್ನು ಮೊದಲಿದ್ದ ಜಾಗದಲ್ಲೇ ಪ್ರತಿಷ್ಠಾಪಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅಲ್ಲದೆ, ಬುದ್ಧನ ಪ್ರತಿಮೆಯ ಪ್ರತಿಷ್ಠಾಪನೆಗೆ ಜಾಗ ಗುರುತಿಸಲು ಸಿಂಡಿಕೇಟ್ ಉಪಸಮಿತಿ ಕೂಡ ರಚನೆ ಮಾಡಲಾಗಿತ್ತು.
ಸಿಂಡಿಕೇಟ್ ಉಪಸಮಿತಿ ಮಂಗಳವಾರ ಸಭೆ ಸೇರಿ, ಸರಸ್ವತಿ ಪ್ರತಿಮೆಯ ಒಂದು ಪಕ್ಕದಲ್ಲಿ ಬುದ್ಧನ ಪ್ರತಿಮೆ ಹಾಗೂ ಇನ್ನೊಂದು ಪಕ್ಕದಲ್ಲಿ ಬಸವಣ್ಣನ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದು ವರದಿ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದು ಯಾರು ಎಂಬುದು ಬೆಂವಿವಿ ಆಡಳಿತ ಮಂಡಳಿಯವರಿಗೆಲ್ಲರಿಗೂ ತಿಳಿದಿದೆ. ಸಿಸಿ ಕ್ಯಾಮೆರಾದ ದೃಶ್ಯಾವಳಿಗಳು ವಿವಿಯ ಬಳಿ ಇದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸರಸ್ವತಿ ಪ್ರತಿಮೆಯನ್ನು ಅಲ್ಲೇ ಪಕ್ಕದಲ್ಲಿ ಪ್ರತಿಷ್ಠಾಪಿಸಿ, ಆದರೆ, ಬುದ್ಧನ ಪ್ರತಿಮೆ ತೆಗೆಯಕೂಡದು ಎಂಬ ತಾಕೀತು ಕೂಡ ಹಾಕುತ್ತಿದ್ದಾರೆ ಮತ್ತು ಈ ವಿಚಾರದಲ್ಲಿ ಬೆಂವಿವಿ ತನ್ನ ಸಿಂಡಿಕೇಟ್ ನಿರ್ಣಯಕ್ಕೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ ಎಂದು ಹೇಳಲಾಗಿದೆ.
ಬುದ್ಧನ ಪ್ರತಿಮೆ ಎಲ್ಲಿಂದ ಬಂತು?: ಬುದ್ಧನ ಪ್ರತಿಮೆ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಪೀಠದ ಮುಂಭಾಗದಲ್ಲಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿ, ಬುದ್ಧವಿಹಾರ ನಿರ್ಮಿಸಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿತ್ತು. ಅದಕ್ಕಾಗಿ ಬುದ್ಧನ ಕಲ್ಲಿನ ಪ್ರತಿಮೆಯನ್ನು ಕೆತ್ತಿಡಲಾಗಿತ್ತು.
ಆದರೆ, ವಿವಿಯ ತಾಂತ್ರಿಕ ಕಾರಣಗಳಿಂದಾಗಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿರಲಿಲ್ಲ. ಇದೇ ಸಮಯನ್ನು ಬಳಸಿಕೊಂಡು ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿಕೊಂಡು ಸರಸ್ವತಿ ಪ್ರತಿಮೆ ಇದ್ದ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ.
ವಿವಾದ ಹೇಗಾಯ್ತು?: ಬುದ್ಧನ ವಿಗ್ರಹ ಪ್ರತಿಷ್ಠಾಪಿಸಲು ಪ್ರತ್ಯೇಕ ಸ್ಥಳ ಈಗಾಗಲೇ ನಿರ್ಧರಿಸಿದ್ದರೂ, ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಅದನ್ನು ಏಕಾಏಕಿ ತಂದಿಟ್ಟು, ವಿವಾದ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಅಲ್ಲದೆ, ಸರಸ್ವತಿ ಪ್ರತಿಮೆಗೂ ಬುದ್ಧನ ಪ್ರತಿಮೆಗೂ ಸಂಬಂಧವೇ ಇಲ್ಲ.
ಬೆಂವಿವಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಇದೆ. ಗಾಂಧಿ ಅಧ್ಯಯನ ಪೀಠದಲ್ಲಿ ಗಾಂಧೀಜಿಯವರ ಪ್ರತಿಮೆ ಇದೆ. ಆಯಾ ವಿಭಾಗಕ್ಕೆ ಸಂಬಂಧಿಸಿದ ಜಾಗದಲ್ಲಿ ಪ್ರತಿಮೆ ಸ್ಥಾಪಿಸುವುದು ತಪ್ಪಲ್ಲ.
ಆದರೆ, ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಬುದ್ಧನ ಪ್ರತಿಮೆ ಇಟ್ಟು ಅದನ್ನು ತೆಗೆಯಬಾರದು ಎಂದು ಆಡಳಿತ ಮಂಡಳಿಗೆ ತಾಕೀತು ಮಾಡುವುದು ನೋಡಿದರೆ, ಇಡೀ ಪ್ರಕರಣದ ಹಿಂದೆ ಯಾರೋ ಪ್ರಭಾವಿಗಳಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿ ಕೇಳಿದ್ದೇನೆ – ಎಂ.ಬಿ.ಪಾಟೀಲ್: ಬೆಂಗಳೂರು ವಿವಿ ಆವರಣದಲ್ಲಿ ಸರಸ್ವತಿ ಮೂರ್ತಿ ತೆರವು ಮಾಡಿ ಬುದ್ಧ ಪ್ರತಿಮೆ ಸ್ಥಾಪನೆ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿರುವ ವಿವಾದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಯಾವುದೇ ಮೂರ್ತಿ ತೆಗೆದು ಬೇರೆ ಮೂರ್ತಿ ಸ್ಥಾಪನೆ ಮಾಡುವುದು ಸರಿಯಲ್ಲ. ಸರಸ್ವತಿ, ಬುದ್ಧ ಎಲ್ಲರ ಮೇಲೂ ಗೌರವವಿದೆ ಎಂದು ಹೇಳಿದರು. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಲ್ಲಿ ಯಾವುದೇ ವಿವಾದಕ್ಕೆ ಅವಕಾಶ ಮಾಡಿಕೊಡಬಾರದು. ಎಂದು ಸೂಚನೆ ನೀಡಲಾಗಿದೆ ಎಂದರು.
“ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ತಮ್ಮ ಕಚೇರಿ ಮುಂಭಾಗ ಭದ್ರತೆ ಒದಗಿಸುವಂತೆ ಕೋರಿದ್ದು ಸ್ಥಳೀಯ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ’
-ರವಿ ಡಿ ಚೆನ್ನಣ್ಣವರ್, ಡಿಸಿಪಿ, ಪಶ್ಚಿಮ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.