ಖಾಕಿ ಕಾವಲಲ್ಲಿ ಸರಸ್ವತಿ ವಿಗ್ರಹ ಸ್ಥಾಪನೆ
Team Udayavani, Aug 27, 2019, 3:08 AM IST
ಬೆಂಗಳೂರು: ಆರು ತಿಂಗಳಿಂದ ಸದ್ದು ಮಾಡುತಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸರಸ್ವತಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ಸೋಮವಾರ ಮುಂಜಾನೆ 5.45ಕ್ಕೆ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು. ಸರಸ್ವತಿ ವಿಗ್ರಹ ಪ್ರತಿಷ್ಠಾಪನೆಗೆ ವಿದ್ಯಾರ್ಥಿಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದ ಕಾರಣ ವಿವಿ ಮುಂಭಾಗ 70ಕ್ಕೂ ಹೆಚ್ಚು ಪೊಲೀಸರ ಕಾವಲಿನಲ್ಲಿ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಪೂಜೆ ನೆರವೇರಿಸಿ ಸರಸ್ವತಿ ವಿಗ್ರಹ ಪ್ರತಿಷ್ಠಾಪಿಸಿದರು.
ವಿಗ್ರಹ ಪ್ರತಿಷ್ಠಾಪನೆಗೆ ಎಂಟು ಲಕ್ಷ ರೂ. ಖರ್ಚಾಗಿದ್ದು, ಪೂರ್ಣ ವೆಚ್ಚವನ್ನು ಕುಲಪತಿ ಪ್ರೊ.ವೇಣುಗೋಪಾಲ್ ವೈಯಕ್ತಿಕವಾಗಿ ಭರಿಸಿದ್ದಾರೆ. ವಿಗ್ರಹಕ್ಕೆ ಎರಡೂವರೆ ಲಕ್ಷ ನೀಡಲಾಗಿದ್ದು, ವಿಗ್ರಹ ಪ್ರತಿಷ್ಠಾಪನಾ ಪೀಠ ಮತ್ತು ಗಾಜಿನ ಕವಚಕ್ಕೆ ಐದೂವರೆ ಲಕ್ಷ ಖರ್ಚಾಗಿದೆ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜು, ಕೆಲ ಹಿರಿಯ ಪ್ರಾದ್ಯಾಪಕರು ಭಾಗವಹಿಸಿದ್ದರು.
ಏನಿದು ವಿಗ್ರಹ ವಿವಾದ?: ಬೆಂಗಳೂರು ವಿವಿ ಕೇಂದ್ರ ಕಚೇರಿ ಮುಂಭಾಗ ಈ ಹಿಂದೆ ಪ್ರತಿಷ್ಠಾಪಿಸಿದ್ದ ಸರಸ್ವತಿ ವಿಗ್ರಹದ ಕೈ ಮುರಿದಿತ್ತು. ಕಾರಣ, ಸಿಂಡಿಕೇಟ್ ಸಭೆಯ ಗಮನಕ್ಕೆ ತಾರದೆ ಕುಲಪತಿಗಳು ವಿಗ್ರಹವನ್ನು ತೆರವುಗೊಳಿಸಿದ್ದರು. ನಂತರ ಅವರದ್ದೇ ಸ್ವಂತ ಹಣದಿಂದ ವಿಗ್ರಹ ಪ್ರತಿಷ್ಠಾಪಿಸಲು ಮುಂದಾದ ವಿಷಯ ತಿಳಿದ ವಿದ್ಯಾರ್ಥಿಗಳು,ಹಿರಿಯ ಪ್ರಾಧ್ಯಾಪಕರಾದ ಬಿ.ಸಿ.ಮೈಲಾರಪ್ಪ ಮತ್ತು ಟಿ.ಎಚ್.ಮೂರ್ತಿ ನೇತೃತ್ವದಲ್ಲಿ ಸರಸ್ವತಿ ವಿಗ್ರಹವಿದ್ದ ಪೀಠದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದರು ಎನ್ನಲಾಗಿತ್ತು.
ಇದರಿಂದ ವಿಶ್ವವಿದ್ಯಾಲಯದಲ್ಲಿ ಕೆಲ ದಿನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ, ಸರ್ಕಾರ ಮಧ್ಯ ಪ್ರವೇಶಿಸಿ ಉನ್ನತ ಶಿಕ್ಷಣ ಪರಿಷತ್ ಮೂಲಕ, ಮೂಲ ವಿಗ್ರಹಗಳನ್ನು ಹೊರತುಪಡಿಸಿ ಬೇರಾವುದೇ ವಿಗ್ರಹಗಳನ್ನು ವಿವಿ ಆವರಣದಲ್ಲಿ ಪ್ರತಿಷ್ಠಾಪಿಸಲು ಅವಕಾಶ ನೀಡದಂತೆ ರಾಜ್ಯದ ಎಲ್ಲಾ ವಿವಿಗಳಿಗೆ ನಿರ್ದೇಶನ ನೀಡಲಾಗಿತ್ತು.
ನಂತರ ನಡೆದ ಸಿಂಡಿಕೇಟ್ ಸಭೆಯಲ್ಲಿ ರಾಜ್ಯಪಾಲರ ನಿರ್ದೇಶಿತ ಸಿಂಡಿಕೇಟ್ ಸದಸ್ಯ ಬಿ.ಶಿವಣ್ಣ ನೇತೃತ್ವದಲ್ಲಿ ಬುದ್ಧ ಹಾಗೂ ಸರಸ್ವತಿ ಎರಡೂ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಈ ಹಿಂದೆ ಸರಸ್ವತಿ ವಿಗ್ರಹವಿದ್ದ ಮೂಲ ಸ್ಥಳದಲ್ಲಿ ಹೊಸ ಸರಸ್ವತಿ ವಿಗ್ರಹವನ್ನೇ ಪ್ರತಿಸಾuಪಿಸಿ, ಬುದ್ಧನ ಪ್ರತಿಮೆಗೆ ಸೂಕ್ತ ಜಾಗ ಕಲ್ಪಿಸುವ ಭರವಸೆ ನೀಡಿದ್ದರು.
ಬುದ್ಧ ಪ್ರತಿಮೆ ಎಲ್ಲಿದೆ?: ಆರು ತಿಂಗಳ ಹಿಂದೆ ಸರಸ್ವತಿ ವಿಗ್ರಹವಿದ್ದ ಸ್ಥಳ ಖಾಲಿಯಾಗುತಿದ್ದಂತೆ ಅಲ್ಲಿ ಕೂರಿಸಿದ ಬುದ್ಧನ ಪ್ರತಿಮೆ ಕೆಳ ಮಹಡಿಯಲ್ಲಿ ಧೂಳು ಹಿಡಿಯುತಿದೆ. ವಿವಿ ಆವರಣದಲ್ಲಿ ಹಾಲಿ ನಿರ್ಮಾಣವಾಗುತ್ತಿರುವ ಬುದ್ಧ ಧ್ಯಾನ ಕೇಂದ್ರದಲ್ಲಿ ಅದನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಧ್ಯಾನ ಮಂದಿರದ ನಿರ್ಮಾಣ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳಲಿದೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.
ಗೊಂದಲ ಸೃಷ್ಟಿ?: ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ವಿವಾದದ ಕೇಂದ್ರ ಬಿಂದುವಾಗಿದ್ದ ಬೆಂಗಳೂರು ವಿಶವಿದ್ಯಾಲಯ ದೂರ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸಿ.ಮೈಲಾರಪ್ಪಗೆ ಸದ್ದಿಲ್ಲದೆ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆಯ ಉಸ್ತವಾರಿ ವಹಿಸಿರುವುದು ತಲ್ಲಣ ಮೂಡಿಸಿತ್ತು. ಆರು ತಿಂಗಳ ಹಿಂದೆ ಇದೇ ಮೈಲಾರಪ್ಪ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿವಿ ಆಡಳಿತ ಕಚೇರಿ ಎದುರು ಬುದ್ಧನ ವಿಗ್ರಹ ಪ್ರತಿಷ್ಠಾಪನೆಗೆ ಕಾರಣವಾಗಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಯಾವುದೇ ಗೊಂದಲವಿಲ್ಲದೆ ಸಿಬ್ಬಂದಿ ಸಹಕಾರದಿಂದ ಸರಸ್ವತಿ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ. ಬುದ್ಧನ ಪ್ರತಿಮೆಯನ್ನು ಬುದ್ಧ ಧ್ಯಾನ ಕೇಂದ್ರದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಯುತ್ತಿದೆ. ಉನ್ನತ ಶಿಕ್ಷಣ ಪರಿಷತ್ ಆದೇಶದಂತೆ ಮೂಲ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ.
-ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ ಕುಲಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ